ಜಗತ್ತಿನ ವನ್ಯಜೀವಿಗಳು ಹಾಗೂ ಸಸ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 3ರಂದು 'ವಿಶ್ವ ವನ್ಯಜೀವಿ ದಿನ' ಆಚರಿಸಲಾಗುತ್ತಿದೆ.
2013ರ ಡಿಸೆಂಬರ್ 20ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್‌ಜಿಎ) 68ನೇ ಅಧಿವೇಶನದಲ್ಲಿ ವಿಶ್ವ ವನ್ಯಜೀವಿ ದಿನದ ಆಚರಣೆಯ ಬಗ್ಗೆ ಘೋಷಿಸಲಾಯಿತು.
ವನ್ಯಜೀವಿಗಳು, ಸಸ್ಯ ಸಂಪತ್ತಿನ ಸಂರಕ್ಷಣೆ ಮತ್ತು ಅದರಿಂದಾಗಿ ಜನರಿಗೆ ಆಗುವ ಅನುಕೂಲಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಪ್ರಯತ್ನವನ್ನು ಹಲವು ಕಾರ್ಯಕ್ರಮಗಳ ಮೂಲಕ ನಡೆಸಲಾಗುತ್ತಿದೆ. ವನ್ಯಜೀವಿಗಳ ಮೇಲೆ ಮನುಷ್ಯರ ಅಟ್ಟಹಾಸ, ಸಸ್ಯ ಪ್ರಭೇದಗಳು ಇಳಿಮುಖವಾಗಲು ಕಾರಣವಾಗುತ್ತಿರುವುದರಿಂದ ಆರ್ಥಿಕವಾಗಿ, ಪರಿಸರದ ಮೇಲೆ ಹಾಗೂ ಸಾಮಾಜಿಕವಾಗಿ ಪರಿಣಾಮ ಆಗುವುದರ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ.
2022ರ ವಿಶ್ವ ವನ್ಯಜೀವಿ ದಿನದ ವಿಷಯ: 'ಪರಿಸರ ವ್ಯವಸ್ಥೆ ಪುನಶ್ಚೇತನಗೊಳಿಸಲು ಪ್ರಮುಖ ಪ್ರಭೇದಗಳನ್ನು ಸುರಕ್ಷಿತ ಸ್ಥಿತಿಗೆ ತರುವುದು '
ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳು ಮತ್ತು ಸಸ್ಯ ರಾಶಿಯ ಪ್ರಭೇದಗಳ ಸಂರಕ್ಷಣೆಗೆ ಗಮನಹರಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಪ್ರಾಣಿ ಸಂಕುಲ ಮತ್ತು ಸಸ್ಯ ಸಂಪತ್ತಿನ ರಕ್ಷಣೆಗೆ ಅಗತ್ಯವಿರುವ ಪರಿಹಾರವನ್ನು ಅನುಷ್ಠಾನಗೊಳಿಸುವ ಕುರಿತು ಚರ್ಚೆಗೆ ನಾಂದಿ ಹಾಡಲಿದೆ.
ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟದ (ಐಯುಸಿಎನ್) ಪ್ರಕಾರ, ವನ್ಯ ಪ್ರಾಣಿ ಸಂಕುಲ ಮತ್ತು ಸಸ್ಯಗಳ ಸುಮಾರು 8,400 ಪ್ರಭೇದಗಳು ತೀವ್ರ ಅಪಾಯದ ಸ್ಥಿತಿಯಲ್ಲಿವೆ. 30,000ಕ್ಕೂ ಹೆಚ್ಚು ಪ್ರಭೇದಗಳು ಅಳಿವಿನ ಅಂಚಿನಲ್ಲಿರುವುದಾಗಿ ಗುರುತಿಸಲಾಗಿದೆ. ಸುಮಾರು 10 ಲಕ್ಷ ಪ್ರಭೇದಗಳಿಗೆ ನಾಶವಾಗುವ ಅಪಾಯ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.