ADVERTISEMENT

‘ಪಾರ್ಕ್‌’ನಲ್ಲಿ ಪರಿಸರ ಪಾಠ

ಪ್ರಜಾವಾಣಿ ವಿಶೇಷ
Published 27 ಮೇ 2023, 5:19 IST
Last Updated 27 ಮೇ 2023, 5:19 IST
   

ಆನೇಕಲ್‌ ಶಿವಣ್ಣ

ಬನ್ನೇರುಘಟ್ಟ ಜೈವಿಕ ಉದ್ಯಾನ ವೀಕ್ಷಣೆಗೆ ಸಾರ್ವಜನಿಕ ಸಾರಿಗೆಯಲ್ಲಿ ಬರುವವರಿಗೆ ಚಿಟ್ಟೆ ಪಾರ್ಕ್‌ಗೆ ಉಚಿತ ಪ್ರವೇಶ. ಚಿಟ್ಟೆ ಪಾರ್ಕ್ ವೀಕ್ಷಿಸಿ ಬರುವ ಪ್ರವಾಸಿಗರಿಗೆ ಗಿಡ ನೆಡುವ ಅವಕಾಶ. ಸ್ಥಳದಲ್ಲೇ ಪರಿಸರ ಸಂರಕ್ಷಣೆಯ ಸಂಕಲ್ಪ...!

ಜೂನ್ 5, ವಿಶ್ವ ಪರಿಸರ ದಿನದ ಅಂಗವಾಗಿ ಬನ್ನೇರುಘಟ್ಟ ಜೈವಿಕ  ಉದ್ಯಾನದಲ್ಲಿ ಪ್ರವಾಸಿಗರಿಗಾಗಿ ತಿಂಗಳ ಕಾಲ ಕೈಗೊಂಡಿರುವ ‘ಪರಿಸರ ಮಾಸಾಚರಣೆಯ ಜಾಗೃತಿ’ ಕಾರ್ಯಕ್ರಮಗಳಿವು.

ADVERTISEMENT

ಮಾಸಾಚರಣೆಯ ಭಾಗವಾಗಿ ಮೇ ತಿಂಗಳಲ್ಲಿ ಪ್ರತಿ ಸೋಮವಾರ ಜೈವಿಕ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಇಂಥ ವಿಶಿಷ್ಟ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಮೂರ್ನಾಲ್ಕು ಸೋಮವಾರಗಳಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆದಿವೆ. ಆ ದಿನಗಳಲ್ಲಿ ಉದ್ಯಾನಕ್ಕೆ ಭೇಟಿ ನೀಡಿದ ಪ್ರವಾಸಿಗರೆಲ್ಲರೂ ಬಹಳ ಉತ್ಸಾಹದಿಂದ ಚಿಟ್ಟೆ ಪಾರ್ಕ್ ವೀಕ್ಷಿಸಿ, ಗಿಡಗಳನ್ನು ನೆಟ್ಟು, ‘ಪರಿಸರ ಸಂರಕ್ಷಣೆ ನಮ್ಮ ಹೊಣೆ‘ ಎಂದು ಪ್ರತಿಜ್ಞೆ ಮಾಡಿ, ಸಹಿಯನ್ನೂ ಹಾಕಿದ್ದಾರೆ. ಈಗ ಮೇ 29 ಮತ್ತು ಜೂನ್ 5 ರಂದು ಪ್ರವಾಸಿಗರಿಗೆ ಇದೇ ರೀತಿಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. 

ಸಹಿ ಅಭಿಯಾನ

ಮಾಸಾಚರಣೆಯ ಕಾರ್ಯಕ್ರಮದ ಉದ್ದೇಶ ಪ್ರವಾಸಿಗರಿಗೆ ಪರಿಸರ ಜಾಗೃತಿ ಮೂಡಿಸುವುದು ಎನ್ನುತ್ತಾರೆ ಉದ್ಯಾನದ ಅಧಿಕಾರಿಗಳು. ‘ಪ್ರವಾಸಿಗರು ಸಾರ್ವಜನಿಕ ಸಾರಿಗೆಯಲ್ಲಿ ಉದ್ಯಾನ ವೀಕ್ಷಣೆಗೆ ಬರುವುದರಿಂದ ಇಂಧನ ಉಳಿತಾಯವಾಗುತ್ತದೆ ಮತ್ತು ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಬಹುದು. ಈ ಮೂಲಕ ಪರಿಸರ ರಕ್ಷಣೆಗೆ ಅಳಿಲು ಸೇವೆ ಸಲ್ಲಿಸುವ ಉದ್ದೇಶ ನಮ್ಮದು’ ಎಂದು ಹೇಳುತ್ತಾರೆ ಉದ್ಯಾನದ ಪರಿಸರ ಶಿಕ್ಷಣಾಧಿಕಾರಿ ಅಮಲಾ.

ಸಾರ್ವಜನಿಕ ವಾಹನದ ಪ್ರಯಾಣದ ಅಗತ್ಯವನ್ನು ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಅಂದು ಜೈವಿಕ ಜೈವಿಕ ಉದ್ಯಾನವನ್ನು ಸುತ್ತಾಡಿ ಬರುವ ಪ್ರವಾಸಿಗರಿಗೆ, ನಿರ್ಗಮನ ದ್ವಾರದಲ್ಲೇ ಯಾವ ರೀತಿ ಪರಿಸರ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳುತ್ತಾರೆಂಬ ಸಂಕಲ್ಪ ಮಾಡಿಸಿ, ಗೋಡೆಯ ಮೇಲೆ ಸಹಿ ಹಾಕುವ ಕಾರ್ಯಕ್ರಮವನ್ನೂ ರೂಪಿಸಲಾಗಿದೆ.

‘ಪರಿಸರ ದಿನ’ ಮಾಸಾಚರಣೆ ಕೇವಲ ಪ್ರವಾಸಿಗರಿಗಷ್ಟೇ ಅಲ್ಲ, ಜೈವಿಕ ಉದ್ಯಾನದ ಸಿಬ್ಬಂದಿಗೆ ಪಾರ್ಕ್‌ ಆವರಣದ ಸ್ವಚ್ಛತೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ರಹಿತ ಪ್ರದೇಶವಾಗಿರುವ ಉದ್ಯಾನದ ಆವರಣದಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ಪರಿಸರ ಸಂರಕ್ಷಣೆಯ ಜಾಗೃತಿಯ ಜೊತೆಗೆ ಪ್ರಾಣಿಗಳ ಬಗ್ಗೆ ಕಾಳಜಿ ಮೂಡಿಸಲು ಉದ್ಯಾನದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಆಯೋಜಸುತ್ತಿದೆ.

ಇತ್ತೀಚೆಗೆ ಬನ್ನೇರುಘಟ್ಟ ಉದ್ಯಾನವು ಹಸಿರಿನ ಜೀವಕಳೆಯಿಂದ ತುಂಬಿದೆ. ಸಫಾರಿ, ಚಿಟ್ಟೆ ಪಾರ್ಕ್, ಹುಲಿ ಸಿಂಹಗಳ ಸಫಾರಿ, ಮೃಗಾಲಯದಲ್ಲಿ ಮಾಸ್ಟರ್ ಪ್ಲಾನ್‌ನಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮೃಗಾಲಯದಲ್ಲಿ ಸುತ್ತಾಡಲು ಬಗ್ಗಿಗಳ(ವಾಹನ) ವ್ಯವಸ್ಥೆ ಮಾಡಲಾಗಿದೆ. ದೋಣಿ ವಿಹಾರ, ಅಪರೂಪದ ಬಿಳಿ ಹುಲಿ, ಜಿರಾಫೆ, ನವಿಲು,  ಜಿಂಕೆ, ಕಾಡೆಮ್ಮೆ,  ಆನೆಗಳ ಕುಟುಂಬವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಹಸಿರಿನ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ್ನು ನೋಡುವುದು ಹಬ್ಬವಾಗಿದೆ.

ಪರಿಸರ ದಿನ ಮಾಸಾಚರಣೆಯಲ್ಲಿ ನೀವು ಪಾಲ್ಗೊಳ್ಳಬಹುದು. ಪರಿಸರ ಸಂರಕ್ಷಣೆ ಅರಿವು ಮೂಡಿಸಿಕೊಳ್ಳಬಹುದು. ಮಕ್ಕಳ ಮನದಲ್ಲಿ ಪರಿಸರ ಜಾಗೃತಿಯ ಬೀಜ ಬಿತ್ತಬಹುದು. ಹಾಗಾದರೆ, ಬನ್ನೇರುಘಟ್ಟ ಜೈವಿಕ ಉದ್ಯಾನ ನೋಡಲು ಹೊರಡುತ್ತೀರಲ್ಲವಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.