‘ಜೇನ್ ಇದ್ರೆ ಮನುಷ್ಯರೂ ಇರ್ತಾರೆ ಸ್ವಾಮಿ. ಅದ್ ಇಲ್ದೆ ಇದ್ರೆ ಭೂಮಿ ಮ್ಯಾಲ್ ಏನ್ ಇರ್ತದ್ರ? ಹಂಗಾಗ್ ಅವು ಕಷ್ಟದಾಗಿದ್ರೆ ನಂಗ್ ಸುಮ್ನಿರೂಕ್ ಆಗುದಿಲ್ರ. ಅದ್ ಬಿಲ್ಡಿಂಗಾದ್ರೂ ಸೈ, ಟವರಾದ್ರೂ ಸೈ, ಅಲ್ಲಿಂದ್ ತೆಗ್ದ್ ಕಾಡೀಗ್ ಬಿಡೂದೇಯ....’ ಹೀಗೆ ಜೇನು ಹುಳುಗಳ ಬಗ್ಗೆ ಅಪರಿಮಿತ ಪ್ರೀತಿಯ ಮಾತುಗಳನ್ನು ಆಡುತ್ತಾ ಯಲ್ಲಾಪುರದ ರಾಮಾ ಮರಾಠಿ ಸೇತುವೆಯೊಂದರ ಕೆಳಗೆ ಜೋಲುತ್ತಿದ್ದ ಹೆಜ್ಜೇನು ಗೂಡನ್ನು ನಿರಾಯಾಸವಾಗಿ ತಮ್ಮ ಬಲೆಯ ಚೀಲಕ್ಕಿಳಿಸಿದರು.
ನಿಧಾನಕ್ಕೆ ಅದನ್ನು ವಾಹನಕ್ಕೇರಿಸಿ ಬೇಡ್ತಿ ಕೊಳ್ಳದ ಅರಣ್ಯದ ಹಾದಿಯಲ್ಲಿ ಸಾಗುತ್ತ ಮಾತು ಮುಂದುವರಿಸಿದರು. ‘ಹಿಂದೆಲ್ಲ ಹಿಂಗಿದ್ ವಾತಾವರಣ ಇಲ್ಲಾಗಿತ್ರ. ಈಗೊಂದ್ ಇಪ್ಪತ್ ವರ್ಷಾತು. ಜೇನ್ ಕಂಡ್ರೆ ವಿಷ ಹಾಕೂದು, ಕರೆಂಟ್ ಕೊಡೂರು, ಬೆಂಕಿ ಹಚ್ಚುದು ಹೆಚ್ಚದೆ. ಹಂಗಿದ್ ಘಟನೆ ಆದಾಗೆಲ್ಲ, ನಮಗೆ ನಾವೇ ವಿಷ ಹಾಕ್ಕಂಡಾಂಗೆ, ಬೆಂಕಿ ಇಟ್ಕಂಡಾಂಗೆ ಕಾಣ್ತದೆ’ ಅನ್ನುತ್ತ ತಾವು ಚೀಲದಲ್ಲಿ ತುಂಬಿ ತಂದಿದ್ದ ಜೇನು ಕುಟುಂಬವನ್ನು ನಿಧಾನಕ್ಕೆ ದಟ್ಟಾರಣ್ಯದಲ್ಲಿ ಬಿಟ್ಟು ವಾಪಸ್ ಊರಿನತ್ತ ಹೊರಟರು. ಅವರಾಡಿದ ಮಾತು ಕಾಡು–ನಾಡಿಗೆ ಜೇನಿನ ಮಹತ್ವವನ್ನು ಸಾರುವಂತಿತ್ತು.
ಯಲ್ಲಾಪುರ ಮುದ್ದಿನಗದ್ದೆಯ ರಾಮಾ ಮರಾಠಿ ಅವರು ಜೇನು ನೊಣಗಳಿಗೆ ಸುರಕ್ಷಿತವಲ್ಲದ ದೊಡ್ಡ ಮರಗಳು, ಕಲ್ಲುಬಂಡೆ, ಸೇತುವೆಗಳು, ಆಣೆಕಟ್ಟೆಗಳು, ಎತ್ತರದ ಜಲ ಸಂಗ್ರಹಾಲಯಗಳು, ದೊಡ್ಡ ಮಹಡಿ ಮನೆಗಳು, ಕಚೇರಿಗಳ ಮೇಲೆ ಕಟ್ಟಿದ ಹೆಜ್ಜೇನು ಗೂಡುಗಳನ್ನು ಜತನದಿಂದ ತೆಗೆದು ಸಂರಕ್ಷಿಸುವ ಕಾರ್ಯವನ್ನು ಹಲವು ವರ್ಷಗಳಿಂದ ಮಾಡಿ ಸೈ ಎನಿಸಿಕೊಂಡಿದ್ದಾರೆ. ನಾಲ್ಕು ದಶಕಗಳಿಂದ ಜೇನು ದುಂಬಿಗಳನ್ನು ನಂಬಿ ಬದುಕುತ್ತಿರುವ ಇವರು, ಹೆಜ್ಜೇನಿನ ಗೂಡನ್ನು ಹುಳುಗಳಿಗೆ ಯಾವುದೇ ತೊಂದರೆ ಆಗದಂತೆ ಕಿತ್ತು ಚೀಲದಲ್ಲಿ ತುಂಬಿ ಹಗ್ಗದ ಸಹಾಯದಿಂದ ಇಳಿಸಿ, ವಾಹನದ ಮೂಲಕ ಅರಣ್ಯಕ್ಕೆ ತಂದು ಬಿಡುವ ಕೆಲಸವನ್ನು ತಮ್ಮ ಜೊತೆಗಾರರ ಜೊತೆ ಮಾಡುತ್ತಿದ್ದಾರೆ. ಇದು ಸ್ವಚ್ಛ ಪರಿಸರದಲ್ಲಿ ಹೆಜ್ಜೇನು ಸಂತತಿ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತಿದೆ. ತಮ್ಮದೇ ಆದ ವಿಶಿಷ್ಟ ಆಕಾರದ ಬಲೆಯ ಚೀಲ, ದಿರಿಸು ತೊಟ್ಟು ಜೇನು ರಕ್ಷಣೆ ಸೇವೆ ಮಾಡುತ್ತಿದ್ದಾರೆ.
‘ಅನಿವಾರ್ಯ ಕಾರಣಗಳಿಂದ ಹೆಜ್ಜೇನು ಪೇಟೆ ಪಟ್ಟಣಗಳ ಇಮಾರತ್ತಿನ ಮೇಲೆ ಗೂಡು ಕಟ್ಟುತ್ತದೆ. ಅಲ್ಲಿ ಅವು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಜೊತೆಗೆ ನಗರದ ಅಶುದ್ಧ ವಾತಾವರಣ ಜೇನಿನ ಸಂತಾನಾಭಿವೃದ್ಧಿ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಜೇನು ಸಂತತಿ ವಿನಾಶದತ್ತ ಸಾಗುತ್ತಿದೆ. ಇದನ್ನು ತಪ್ಪಿಸುವ ಅಗತ್ಯವಿದೆ’ ಎನ್ನುತ್ತಾರೆ ಅವರು. ‘ಯಾವ ಕಾರಣಕ್ಕೂ ಹೆಜ್ಜೇನಿಗೆ ಔಷಧ ಹೊಡೆಯುವುದಾಗಲೀ, ಬೆಂಕಿ ಹಾಕುವುದಾಗಲೀ ಮಾಡಬಾರದು. ಕಾಡಿನಲ್ಲಿರಲಿ, ನಾಡಿನಲ್ಲಿರಲಿ, ವೈಜ್ಞಾನಿಕ ಕೊಯ್ಲು ಮುಖಾಂತರವಷ್ಟೆ ಹೆಜ್ಜೇನಿನ ಮರಿಭಾಗವನ್ನು ಬಿಟ್ಟು ತುಪ್ಪದ ಭಾಗ ಮಾತ್ರ ತೆಗೆಯಬೇಕು. ಈ ರೀತಿ ಹೆಜ್ಜೇನು ಕೊಯ್ಲು ಮಾಡುವುದರಿಂದ ಅವುಗಳ ಸಂತತಿ ವೃದ್ಧಿಸುತ್ತ ಹೋಗುತ್ತದೆ’ ಎಂಬುದು ಅವರ ಅನುಭವದ ಮಾತು.
ಈವರೆಗೆ ಶಿರಸಿ, ಹಳಿಯಾಳ, ಅಳ್ನಾವರ, ಬೆಳಗಲ್ ಪೇಟೆ, ಹಾವೇರಿ, ತಿಳುವಳ್ಳಿ, ಬಂಕಾಪುರ, ಹರಿಹರ, ನವಲಗುಂದ, ನರಗುಂದ, ಹಂಸಭಾವಿ, ಹಾನಗಲ್, ಮುಂಡಗೊಡ, ಧಾರವಾಡ, ಗದಗ, ರಾಣೆಬೆನ್ನೂರು, ಕಿರವತ್ತಿ, ಅಂಕೋಲಾ, ಗೋಕರ್ಣ, ಕಾರವಾರ ಸೇರಿ ಹೊರ ರಾಜ್ಯಗಳಲ್ಲಿಯೂ ಮೊಬೈಲ್ ಟವರ್ ಹಾಗೂ ಬೃಹತ್ ಕಟ್ಟಡಗಳಲ್ಲಿ ಕಟ್ಟಿರುವ ಹೆಜ್ಜೇನು ಗೂಡುಗಳನ್ನು ಸಂರಕ್ಷಿಸುವ ಕಾಯಕ ಮಾಡಿದ್ದಾರೆ. 30 ಸಾವಿರಕ್ಕೂ ಮಿಕ್ಕಿ ಜೇನುಗೂಡುಗಳನ್ನು ಸುರಕ್ಷಿತ ಪ್ರದೇಶಕ್ಕೆ ತಲುಪಿಸಿದ್ದಾರೆ. ಆದರೆ ಇದನ್ನು ಅವರು ಕೂಲಿಯಂತೆ ಮಾಡದೆ ಸೇವೆಯಂತೆ ಮಾಡುತ್ತಿದ್ದಾರೆ.
ಇವರು ಕೇವಲ ಹೆಜ್ಜೇನು ಸಂರಕ್ಷಣೆಗಷ್ಟೇ ಸೀಮಿತಗೊಂಡಿಲ್ಲ. ಜೇನು ಕೃಷಿಯಲ್ಲಿ ಕೂಡ ಪಳಗಿದ್ದಾರೆ. ಹೆಜ್ಜೇನು ಜೇನು ತುಪ್ಪ ತೆಗೆಯುವ ಪೂರ್ವ ಗಣಪತಿ ಸ್ಮರಣೆ ಮಾಡಿ, ಮಕರಂದ ಲಭಿಸಿದ ನಂತರ ಜೇನುಮರಿಗಳಿಗೆ ತುಪ್ಪ ಉಣಿಸುವ ಮೂಲಕ ಮುಕ್ತಾಯ ಮಾಡುತ್ತಾರೆ. ತುಡವಿ, ಕೋಲುಜೇನುಗಳ ಬೇಟೆಗೆ ವಿಭಿನ್ನ ಸಂಪ್ರದಾಯ ಅನುಸರಿಸುವ ಇವರು, ಮಿಸರಿ ಜೇನು ತೆಗೆಯುವಾಗ ಹೆಚ್ಚಿನ ಶಿಸ್ತಿಲ್ಲದೆ ಸಾಗುತ್ತಾರೆ. ‘ಹೆಜ್ಜೇನು ಕುಟುಂಬದಿಂದ ವರ್ಷಕ್ಕೆ ನಾಲ್ಕು ಬಾರಿ ಮಕರಂದ ಪಡೆಯಬಹುದು. ಆದರೆ ಅತಿಯಾಸೆಯಿಂದ ಸಂಪೂರ್ಣ ಜೇನುತುಪ್ಪ ತೆಗೆಯಬಾರದು. ಅಲ್ಲಿನ ದುಂಬಿಗಳಿಗೂ ಮಕರಂದ ಉಳಿಸಿದರೆ ಮುಂದಿನ ಬಾರಿ ಮತ್ತಷ್ಟು ಫಲ ಲಭಿಸುತ್ತದೆ’ ಎಂಬ ಅನುಭವ ಹಂಚಿಕೊಳ್ಳುತ್ತಾರೆ ರಾಮಾ ಮರಾಠಿ.
ಏಳು ವರ್ಷಕ್ಕೊಮ್ಮೆ ಗುರಗಿ ಗಿಡಗಳು ಹೂ ಬಿಟ್ಟಾಗ ಜೇನುಗಳಿಗೆ ಹಬ್ಬದ ಸಂಭ್ರಮ. ಇದಲ್ಲದೆ ಮತ್ತಿ, ನಂದಿ, ಕಣಗಲ, ಮೇ ಫ್ಲವರ್, ನೇರಳೆ ಹೂಗಳಿಂದಲೂ ದುಂಬಿಗಳು ಮಕರಂದ ತಯಾರಿಸುತ್ತವೆ. ವಿಶೇಷ ಎಂದರೆ ಅಮಲು ತರಿಸುವ ತಾರಿ ಹೂ ಹಾಗೂ ವಿಷಕಾರಿ ಕಾಸರಕ ಹೂಗಳ ಮಕರಂದದಿಂದ ತಯಾರಾಗುವ ಮಧು ವಿಷಕಾರಿಯಲ್ಲ. ಬೆಡಸಲೆ ಹೂಗಳಿಂದ ತಯಾರಾದ ತುಪ್ಪ ಸದಾ ತಂಪಾಗಿರುತ್ತದೆ. ಜೇನುಗೂಡು ನಿರ್ಮಿಸಿ 15 ದಿನಗಳ ಒಳಗೆ ತುಪ್ಪ ತೆಗೆದರೆ ಆ ಕುಟುಂಬದ ಸಂತತಿ ನಾಶವಾಗುತ್ತದೆ. ಕನಿಷ್ಠ ಒಂದು ತಿಂಗಳ ನಂತರ ತುಪ್ಪ ತೆಗೆಯುವುದು ಉತ್ತಮ. ಶುದ್ಧ ಜೇನು ತುಪ್ಪ ತಿನ್ನುವಾಗ ನಗಬಾರದು, ಮಾತು ಮಿತಿಯಲ್ಲಿರಬೇಕು. ಜೇನಿದ್ದರೆ ಮಾತ್ರ ಕಾಡಲ್ಲಿ ಬೀಜ ಬಿದ್ದು ಸಸಿ ಆಗೋದು. ಹೆಜ್ಜೇನಿನ ಆಯುಸ್ಸು ಒಂದು ವರ್ಷ. ಮೊದಲೆಲ್ಲ ಒಂದು ಹೆಜ್ಜೇನು ಕುಟುಂಬದಿಂದ 70 ಕೆಜಿವರೆಗೆ ತುಪ್ಪ ಲಭಿಸುತ್ತಿತ್ತು. ಈಗ 30-40 ಕೆ.ಜಿವರೆಗೆ ಮಾತ್ರ ಲಭಿಸುತ್ತದೆ... ಹೀಗೆ ಹಲವಾರು ವಿಷಯಗಳನ್ನು ಅವರು ಪಾಂಡಿತ್ಯಪೂರ್ಣವಾಗಿ ಹೇಳುತ್ತಾ ಸಾಗಿದರು. ತಮಗೆ ಲಭಿಸಿದ ಜೇನುತುಪ್ಪದ ಬಹುತೇಕ ಭಾಗವನ್ನು ಅನಾರೋಗ್ಯ ಪೀಡಿತರಿಗೆ ದಾನ ನೀಡುವಾಗಲೂ ಪರೋಪಕಾರಿ ಜೇನಿನೆಡೆ ಇವರದ್ದು ಧನ್ಯತೆಯ ಭಾವ.
ಇವರ ಜೇನು ಸಂರಕ್ಷಣೆ ಕಾಯಕ ಗಮನಿಸಿ ನ್ಯಾಶನಲ್ ಬೀ ಬೋರ್ಡ್, ರಾಜ್ಯಮಟ್ಟದ ಜೇನು ಕೃಷಿ ಕಾರ್ಯಾಗಾರ, ಧಾರವಾಡ ಕೃಷಿ ಮೇಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವರ್ಣವಲ್ಲೀ ಕೃಷಿ ಜಯಂತಿ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ ಸೇರಿದಂತೆ ಹಲವೆಡೆ ಪ್ರಶಸ್ತಿ, ಪುರಸ್ಕಾರ, ಗೌರವಗಳು ಒಲಿದುಬಂದಿವೆ.
9591806525 ನಂಬರ್‌ಗೆ ಕರೆ ಮಾಡಿ, ಅವರ ಮನೆಗೆ ತೆರಳಿದರೆ ಅವರ ಸಾಧನೆ ಕಣ್ಣಾರೆ ಕಾಣಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.