‘ಅಲ್ಲಲ್ಲಿ ಸಾಧಾರಣದಿಂದ ಚದುರಿದಂತೆ ಮಳೆಯಾಗಲಿದೆ’ ಎಂಬಂತಹ ಹವಾಮುನ್ಸೂಚನೆ ಕಿವಿಯ ಮೇಲೆ ಬೀಳುವ ಈ ಹೊತ್ತಲ್ಲಿ ಮಾಯಾವಿ ಗಾಳಿಯ ವೇಗ ಹಾಗೂ ಅದು ಒಡ್ಡುವ ಪಾರಿಸರಿಕ ಬದಲಾವಣೆಯನ್ನು ಗುರುತಿಸುವ ವಿಜ್ಞಾನದಲ್ಲಿ ಏನೇನೆಲ್ಲ ಆಗಿದೆ ಎನ್ನುವುದನ್ನು ಲವಿಲವಿಕೆಯಿಂದ ನಿರೂಪಿಸುತ್ತಿದೆ ಈ ಲೇಖನ.
ಹವಾಮುನ್ಸೂಚನೆಯ ಮಾತು ಬಂದಾಗಲೆಲ್ಲ ಆರ್.ಕೆ. ಲಕ್ಷ್ಮಣ್ ಅವರದೊಂದು ಕಾರ್ಟೂನ್ ನೆನಪಾಗುತ್ತದೆ: ಬಾನುಲಿ ಕೇಂದ್ರದಲ್ಲಿ ಮೈಕ್ ಎದುರು ಒಬ್ಬಾತ ‘ಅಲ್ಲಲ್ಲಿ ಮೋಡ ಕವಿದ ವಾತಾವರಣ, ಒಣ ಹವೆ ಮುಂದುವರೆಯುತ್ತದೆ’ ಎಂದು ಹವಾಮಾನ ವರದಿಯನ್ನು ಓದುತ್ತಿದ್ದಾನೆ. ಆದರೆ ಕಿಟಕಿಯಲ್ಲಿ ಜಡಿಮಳೆ ಕಾಣುತ್ತಿದ್ದು, ವಾರ್ತೆ ಓದುತ್ತಿದ್ದವನೇ ಮೊಣಕಾಲು ನೀರಲ್ಲಿ ನಿಂತಿದ್ದಾನೆ.
ಗಾಳಿಮಳೆಯ ಮುನ್ಸೂಚನೆ ಹೇಳುವವರನ್ನು ಎಲ್ಲರೂ ಲೇವಡಿ ಮಾಡುತ್ತಲೇ ಬಂದಿದ್ದಾರೆ. ಚಾರ್ಲ್ಸ್ ಡಾರ್ವಿನ್‌ನನ್ನು ಹೊತ್ತು ಅರ್ಧ ಪ್ರಪಂಚ ಸುತ್ತಾಡಿದ ಎಚ್‌ಎಮ್‌ಎಸ್ ಬೀಗಲ್ ಹಡಗಿನ ಕ್ಯಾಪ್ಟನ್ ಆಗಿದ್ದ ರಾಬರ್ಟ್ ಫಿಝ್ರಾಯ್ ಹೆಸರನ್ನು ನಾವು ಕೇಳಿದ್ದೇವೆ. ಐದು ವರ್ಷ ಹಡಗಿನಲ್ಲೇ ಸುತ್ತಾಡಿ ಹಿಂದಿರುಗಿದ ನಂತರ ಆತ ಇಂಗ್ಲೆಂಡಿನ (ಜಗತ್ತಿನ) ಮೊದಲ ಹವಾಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸುತ್ತಾನೆ. ಸಮುದ್ರದಂಚಿಗೆ ನೂರಾರು ಬ್ಯಾರೊಮೀಟರ್‌ಗಳನ್ನು ಸ್ಥಾಪಿಸಿ, ಕೆಲ ಮಟ್ಟಿಗೆ ಸರಿಯಾಗಿಯೇ ಮುನ್ಸೂಚನೆ ನೀಡುತ್ತಿರುತ್ತಾನೆ. ಮೀನುಗಾರರ ವಿಶ್ವಾಸ ಗಳಿಸುತ್ತಾನೆ. ಆದರೂ ಆತ ಆಗಾಗ ನೀಡುತ್ತಿದ್ದ ತಪ್ಪು ಮುನ್ಸೂಚನೆಗಳ ಬಗ್ಗೆ ಅರಮನೆಯ ಅಧಿಕಾರಿಗಳು ಮತ್ತು ಸುದ್ದಿಗಾರರು ಅದೆಷ್ಟು ಕಿಚಾಯಿಸುತ್ತಿದ್ದರೆಂದರೆ, ಖಿನ್ನನಾಗಿ ತನ್ನ 59ನೇ ವಯಸ್ಸಿನಲ್ಲಿ (1865) ರೇಝರ್ ಬ್ಲೇಡ್‌ನಿಂದ ಕುತ್ತಿಗೆಯನ್ನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಒಂದೊಂದು ಏಟಿಗೂ ಸಾವಿರಾರು ಜನರನ್ನು ಕೊಲ್ಲಬಲ್ಲ ಭೂಕಂಪನ, ಸುನಾಮಿ, ಜ್ವಾಲಾಮುಖಿಗಳಂಥ ದೈತ್ಯಪ್ರಕೋಪಗಳ ಪೈಕಿ ಎಲ್ಲಕ್ಕಿಂತ ಪ್ರಚಂಡವಾದದ್ದು ಇದೇ ಗಾಳೀರಾಯ. ಏಕೆಂದರೆ ಇದು ಇಡೀ ಭೂಮಿಯನ್ನು ಆವರಿಸಿದ್ದೂ ಅಲ್ಲದೆ ಸದಾ ಚಲಿಸುತ್ತ, ಹಗಲೂ ರಾತ್ರಿ ಎಲ್ಲೋ ಯಾರಿಗೋ ಶಾಪವಾಗಿಯೋ ಮತ್ತೆಲ್ಲೋ ಮತ್ಯಾರಿಗೋ ವರವಾಗುತ್ತಲೋ ರೌಂಡ್ ಹಾಕುತ್ತಿರುತ್ತದೆ. ಇದರ ಚಲನೆಯನ್ನು ಅರ್ಥಮಾಡಿಕೊಳ್ಳಲು ಅನಾದಿ ಕಾಲದಿಂದಲೂ ಎಷ್ಟೊಂದು ಮಂದಿ ತಿಣುಕಿದ್ದಾರೆ. ಪ್ರತಿ ಹುಣ್ಣಿಮೆ, ಅಮಾವಾಸ್ಯೆಯಂದು ಸಮುದ್ರ ಉಕ್ಕೇರುವುದನ್ನು ಕಂಡು ಗ್ರಹ-ನಕ್ಷತ್ರಗಳೇ ಗಾಳಿಯನ್ನು ಅಟ್ಟಾಡಿಸುತ್ತಿವೆ ಎಂದು ಅದರ ಲೆಕ್ಕಾಚಾರ ಇಟ್ಟವರೇನು; ಚಂದ್ರ ಸೂರ್ಯರ ಚಲನೆಯ ಹಿಂದೆತಾರಾಪುಂಜಗಳ ಕೈವಾಡ ಇದೆಯೆಂದು ಗ್ರಹಿಸಿ ನಕ್ಷತ್ರಗಳ ನಕಾಶೆ ಬರೆದವರೇನು; ಕುಜ-ಶನಿ-ಗುರು-ಕೇತು-ರಾಹುಗಳೂ ಅಷ್ಟೇ ಮುಖ್ಯವೆಂದು ಅವುಗಳನ್ನೂ ಸೇರಿಸಿ ಪಂಚಾಂಗವನ್ನು ಸೃಷ್ಟಿಸಿದವರೇನು. ಒಬ್ಬಿಬ್ಬರು ದೇವರುಗಳಿಂದ ಇದರ ನಿಯಂತ್ರಣ ಸಾಧ್ಯವಿಲ್ಲವೆಂದು ಒಂದೊಂದು ದಿಕ್ಕಿಗೆ ಒಬ್ಬೊಬ್ಬರಂತೆ ಅಷ್ಟ ದಿಕ್ಪಾಲಕರನ್ನು ಕಲ್ಪಿಸಿಕೊಂಡು ಶಾಂತಿಮಂತ್ರಗಳನ್ನ ರಚಿಸಿದ್ದೇನು; ಮೇಘನಾದ, ಘಟೋತ್ಕಚರಂಥ ಪ್ರಚಂಡ ಮಾಯಾವಿಗಳ ಕತೆ ಕಟ್ಟಿ ಆಕಾಶದ ಭೀಭತ್ಸ ಚಿತ್ರಣ ಕೊಟ್ಟಿದ್ದೇನು....
ಪವನವಿಜ್ಞಾನದ ಹನುಮಲಂಘನ
ʼಮಾಯಾವಿʼ ಎಂಬ ಪದಕ್ಕೆ ವ್ಯಕ್ತರೂಪವನ್ನು ಕೊಡುವುದಾದರೆ ಈ ಗಾಳೀರಾಯನಷ್ಟು ಸೂಕ್ತ ಬೇರೆ ಯಾರೂ ಇಲ್ಲ. ಮಂಜು, ಮಳೆ, ಗುಡುಗು, ಸಿಡಿಲು, ಹಿಮಪಾತ, ಕುಳಿರ್ಗಾಳಿ, ಜಂಝಾವಾತ, ದೂಳುಮಾರುತ, ಚಂಡಮಾರುತ ಒಂದೊಂದಕ್ಕೂ ಒಂದೊಂದು ಲಕ್ಷಣ. ಸದಾ ಹಿಮದಲ್ಲೇ ಬದುಕುವ ಎಸ್ಕಿಮೊಗಳ ನಿಘಂಟಿನಲ್ಲಿ ಹಿಮಪಾತಕ್ಕೆ ಸಂಬಂಧಿಸಿದ 80ಕ್ಕೂ ಹೆಚ್ಚು ಪದಗಳಿವೆಯಂತೆ. ಅವರ ಬದುಕಿಗೆ ಅವೆಲ್ಲವೂ ಮುಖ್ಯ (ಮುಷ್ಟಿಗಾತ್ರದ ಹೃದಯದ ಕೆಲಸವನ್ನು ವಿವರಿಸಲು ಕಾರ್ಡಿಯಾಲಜಿಸ್ಟ್‌ಗಳ ನಿಘಂಟಿನಲ್ಲಿ ನೂರೆಂಟು ಪದಗಳಿವೆ ತಾನೆ?). ವಿಜ್ಞಾನಿಗಳು ಈ ನಭೋವೈಚಿತ್ರ್ಯವನ್ನು ಅರ್ಥಮಾಡಿಕೊಳ್ಳಲು ಏನೆಲ್ಲ ತಿಣುಕಿದ್ದಾರೆ. ಏನೆಲ್ಲ ಬಗೆಯ ಸರಕು ಸಾಧನಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ. ಟೆಲಿಗ್ರಾಫ್ ಬಂತೋ ʼಅಹಾ, ನೂರು ಕಿಲೋಮೀಟರ್ ಆಚಿನ ಈಗಿನ ಹವಾಮಾನ ಗೊತ್ತಾದರೆ ಇಲ್ಲಿನ ನಾಳಿನ ಹವಾಮಾನ ಗೊತ್ತಾದಂತೆʼ ಎಂದರು. ಗಾಳಿಯ ವೇಗ ಅಳೆಯುವ ಸಾಧನ, ಮಳೆ ಅಳೆಯುವ ಸಾಧನಗಳು ಬಂದವು. ವಾಯುಭಾರ, ತೇವಾಂಶ, ಉಷ್ಣಾಂಶಗಳನ್ನು ಅಳೆಯುವ ಸಾಧನ, ವಾಯುವಿನ ಎತ್ತರ ಅಳೆಯುವ ಉಪಕರಣ- ಒಂದೊಂದು ಬಂದಾಗಲೂ ಇಂಚಿಂಚಾಗಿ ಹವಾಗುಣದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವತ್ತ ಹೊಸಹೊಸ ಹೆಜ್ಜೆಗುರುತು ಮೂಡಿದವು. ಹೀಲಿಯಂ ಬಲೂನುಗಳು, ವಿಮಾನಗಳು ಬಂದಮೇಲೆ, ಅದರ ಬೆನ್ನಿಗೇ ವಿಶ್ವಯುದ್ಧ ಬಂದಾಗಲಂತೂ ಪವನವಿಜ್ಞಾನಕ್ಕೂ ಹನುಮಲಂಘನ ಸಿಕ್ಕಿಬಿಟ್ಟಿತು. ಈಗೇನು, ರಾಕೆಟ್ಟು, ರಡಾರ್, ಉಪಗ್ರಹ, ಸೂಪರ್ ಕಂಪ್ಯೂಟರ್ ಎಲ್ಲ ಬಂದಿವೆ.
ಆದರೂ ಈ ಮಾಯಾವಿ ಎಲ್ಲರ ಆಟ ಆಡಿಸುತ್ತಿದೆ. ಕಾರಣ ಏನು ಅನ್ನೋದಕ್ಕೆ ಸರಳ ಉದಾಹರಣೆ ಇಲ್ಲಿದೆ: ಮಧುಗಿರಿ ತಾಲ್ಲೂಕಿನ ದಬ್ಬೇಹಳ್ಳಿಯಲ್ಲಿ ಇಂದು ಸಂಜೆ ಮಳೆ ಬರುತ್ತದೊ ಇಲ್ಲವೊ ನೋಡುವುದಾದರೆ: ಅಲ್ಲಿಯ ನೆಲದ ತಾಪಮಾನ, ತೇವಾಂಶ, ಗಾಳಿಯ ವೇಗ, ಅದು ಸಾಗಿ ಬರುವ ಐವತ್ತು ಕಿಲೊಮೀಟರ್ ದೂರದವರೆಗಿನ ನೆಲದ ಏರಿಳಿತ, ಅಲ್ಲಿನ ಗಿಡ–ಮರ, ಕೆರೆ–ತೊರೆಗಳ ತಾಪಮಾನ, ಗಾಳಿಯ ತೇವಾಂಶ ಇವಿಷ್ಟೂ ಗೊತ್ತಿರಬೇಕು (ಅಂದರೆ ಅಲ್ಲಲ್ಲಿ ಅವನ್ನೆಲ್ಲ ಅಳೆಯುವ ಸಾಧನಗಳನ್ನು ಇಟ್ಟಿರಬೇಕು. ಅವೆಲ್ಲವೂ ದಿನವೂ ವರದಿಯನ್ನು ಹವಾಮಾನ ಇಲಾಖೆಗೆ ಕಳಿಸುತ್ತಿರಬೇಕು). ಅಷ್ಟಿದ್ದರೆ ಸಾಲದು! ಅಲ್ಲಿಂದ 300 ಕಿಲೊಮೀಟರ್ ಆಚಿನ ಅರಬ್ಬೀ ಸಮುದ್ರದ ಉಷ್ಣಾಂಶ, ಅಲ್ಲಿ ಕುಣಿದು ಹೋದ ಬಿಪೊರ್‌ಜಾಯ್ ಚಂಡಮಾರುತದ ಉಳಿಕೆ ವೇಗ, ಅದಕ್ಕೆ ಕಾರಣವಾದ ಶಾಂತ ಸಾಗರದ ಉಷ್ಣಪ್ರವಾಹದ ಪ್ರಮಾಣ, ಅದಕ್ಕೆ ಕಾರಣವಾದ ʼಎಲ್ ನಿನ್ಯೊʼ ಪರಿಣಾಮ -ಇವಿಷ್ಟೂ ಗೊತ್ತಿರಬೇಕು. ಈ ಮಧ್ಯೆ ಚಿಲಿ ದೇಶದಲ್ಲಿ, ಅಮೆಝಾನ್ ಕಾಡಿನಲ್ಲಿ ಲಕ್ಷಗಟ್ಟಲೆ ಎಕರೆಯಲ್ಲಿ ಬೆಂಕಿ ಧಗಧಗಿಸುತ್ತಿದೆ. ಅದರದ್ದೂ ಪರಿಣಾಮನ್ನು ದಬ್ಬೇಹಳ್ಳಿಯ ಲೆಕ್ಕಕ್ಕೇ ಸೇರಿಸಬೇಕು. ಸುಲಭವೆ?
ಹೀಗೆ ಇಡೀ ಕರ್ನಾಟಕದ ಎಲ್ಲ 6022 ಗ್ರಾಮ ಪಂಚಾಯತ್‌ಗಳ ಅಥವಾ ಇಡೀ ದೇಶದ ಎರಡೂವರೆ ಲಕ್ಷ ಗ್ರಾಮ ಪಂಚಾಯಿತಿಗಳ ಹವಾಮುನ್ಸೂಚನೆಯನ್ನು ನಿಖರವಾಗಿ ಹೇಳುವುದಾದರೆ ಎಷ್ಟು ಬಗೆಯ ಡೇಟಾ ಬೇಕಾದೀತು, ಈಗ ಊಹಿಸಿ. ಅವೆಲ್ಲವೂ ಗಂಟೆಗಂಟೆಗೂ ಬದಲಾಗುತ್ತಿರುತ್ತವೆ. ಪುಣೆಯಲ್ಲಿರುವ ಸೂಪರ್ ಕಂಪ್ಯೂಟರ್ ಪ್ರತಿ ಸೆಕೆಂಡ್‌ಗೆ 18 ಲಕ್ಷ ಲೆಕ್ಕಾಚಾರ ಮಾಡುತ್ತಿದ್ದರೂ ಭಾರತೀಯ ಹವಾಮಾನ ಇಲಾಖೆ (ಐಎಮ್‌ಡಿ) ಪ್ರತಿ 12 ಗಂಟೆಗೊಮ್ಮೆ ಅದೂ ಜಿಲ್ಲಾಮಟ್ಟದ ಮುನ್ಸೂಚನೆಯನ್ನು ಮಾತ್ರ ಕೊಡಲು ಸಾಧ್ಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಲಗುಣವನ್ನು ಅಳೆಯಬಲ್ಲ ಸಾಧನಗಳೂ ಇಲ್ಲವಾದ್ದರಿಂದ ಬರೀ ಆಕಾಶದ ವಿದ್ಯಮಾನಗಳನ್ನಷ್ಟೆ ನೋಡುತ್ತ ಆ ಸೂಪರ್ ಕಂಪ್ಯೂಟರು ಕಣಿ ಹೇಳಬೇಕು. ಆರ್.ಕೆ. ಲಕ್ಷ್ಮಣ್ ಕಾರ್ಟೂನ್ ನೆನಪಿಸಿಕೊಂಡು ನಕ್ಕುಬಿಡಿ.
ಕರ್ನಾಟಕದ ತಂತ್ರಜ್ಞರೇನೊ ಇಸ್ರೊ ನೆರವಿನಿಂದ ಪ್ರತಿ ಮೂರು ಗಂಟೆಗಳಿಗೊಮ್ಮೆ ಪಂಚಾಯತ್ ಮಟ್ಟದ ʻಸದ್ಯಸೂಚನೆʼಯನ್ನು (ಮುನ್ಸೂಚನೆ ಅಲ್ಲ) ಕೊಡುತ್ತಿದ್ದಾರೆ. ಅಂದರೆ, ನಿಮ್ಮೂರಿನ ಸುತ್ತಮುತ್ತ ಈಗೇನಾಗುತ್ತಿದೆ ಎಂಬುದರ ಚಿತ್ರಣ ಅಷ್ಟೆ. ನಾಳೆ ಏನಾಗಲಿದೆ ಎಂಬುದನ್ನು ಮಾತ್ರ ರಾಷ್ಟ್ರಮಟ್ಟದ ಐಎಮ್‌ಡಿ ತಂತ್ರಜ್ಞರೇ ಹೇಳಬೇಕು. ಏನೇ ಆದರೂ ಅದೆಷ್ಟೇ ತಾಂತ್ರಿಕ ಸೌಲಭ್ಯಗಳಿದ್ದರೂ ‘ಆಕಾಶರಾಯ ನಮ್ಮೆಲ್ಲರನ್ನೂ ಆಟ ಆಡಿಸ್ತಾನೆ’ ಎನ್ನುತ್ತಾರೆ, ಕನ್ನಡದಲ್ಲಿ ‘ಸಿಡಿಲು’ ಆ್ಯಪ್ ಸೃಷ್ಟಿಗೆ ಕಾರಣರಾದ, ಕರ್ನಾಟಕದ ನೈಸರ್ಗಿಕ ವಿಪತ್ತು ಉಸ್ತುವಾರಿ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸ ರೆಡ್ಡಿ.
ಅಷ್ಟದಿಕ್ಪಾಲಕರೇ ದಿಕ್ಕಾಪಾಲು
ಆಟ ಆಡಿಸುವುದೆಂದರೇನು, ಅಷ್ಟದಿಕ್ಪಾಲಕರೂ ದಿಕ್ಕಾಪಾಲಾಗಿ ಹೋಗುವಷ್ಟರ ಮಟ್ಟಿಗೆ ನಾವೇ ಆಕಾಶರಾಯನಿಗೆ ಬಿಸಿ ಮುಟ್ಟಿಸುತ್ತಿದ್ದೇವೆ. ಫಾಸಿಲ್ ಇಂಧನಗಳನ್ನು ಉರೂರಲ್ಲೂ ಉರಿಸಿ, ಸೂರ್ಯನ ಶಾಖ ಮರಳಿ ಹೋಗದಂತೆ ಹಿಡಿದಿಟ್ಟುಕೊಂಡು ನಾವು ಭೂಮಿಯನ್ನು ಬಿಸಿ ಮಾಡುತ್ತಿದ್ದೇವೆ. ಅರಣ್ಯಗಳಿಗೆ ತಂತಾನೆ ಬೆಂಕಿ ಬೀಳುತ್ತಿದೆ. ಹೊಸ ಹೊಸ ಮರುಭೂಮಿಗಳು ಸೃಷ್ಟಿಯಾಗುತ್ತಿವೆ. ಧ್ರುವಗಳಲ್ಲಿ ಜಿಲ್ಲೆಗಾತ್ರದ ಹಿಮಗಡ್ಡೆಗಳು ಸಮುದ್ರದ ಪಾಲಾಗುತ್ತಿವೆ. ಆದರೂ ಸಾಗರಗಳು ಬಿಸಿಯಾಗುತ್ತಿವೆ. ಅಲ್ಲಿಂದ ಜಾಸ್ತಿ ಮೋಡಗಳು ವಾಯುಮಂಡಲಕ್ಕೆ ಸೇರುತ್ತಿರುವುದರಿಂದ ಆಕಾಶದ ಲೆಕ್ಕಾಚಾರಗಳೇ ಏರುಪೇರಾಗುತ್ತಿವೆ. ಚಂಡಮಾರುತಗಳ ಸಂಖ್ಯೆ ಮತ್ತು ತೀವ್ರತೆ ಹೆಚ್ಚುತ್ತಿದೆ. ಅನಿರೀಕ್ಷಿತ ಮೇಘಸ್ಫೋಟ, ಬಾಂಬ್ ಸೈಕ್ಲೋನ್, ಹೀಟ್ ಡೋಮ್ ಮುಂತಾದ ನಾನಾ ವೈಚಿತ್ರ್ಯಗಳು ಸಂಭವಿಸುತ್ತಿವೆ. ತಿಂಗಳ ಅವಧಿಯಲ್ಲಿ ಸುರಿಯಬೇಕಿದ್ದ ಮಳೆ ಹಠಾತ್ತಾಗಿ ಮೂರೇ ದಿನಗಳಲ್ಲಿ ಸುರಿಯುತ್ತದೆ. ಮಳೆನಕ್ಷತ್ರಗಳಂತೂ ಎರ್ರಾಬಿರ್ರಿ ಆಗಿವೆ. ಹವಾಮುನ್ಸೂಚನೆಗೆ ಆಧಾರವಾಗಿದ್ದ ಹಳೇ ಅಂಕಿಸಂಖ್ಯೆಗಳೆಲ್ಲ ಪಲ್ಟಿ ಹೊಡೆದು ನಿರುಪಯುಕ್ತ ಆಗುತ್ತಿವೆ. ಬರ ಬಂದೀತೆಂದು ಕಂಡಕಂಡಲ್ಲಿ ಬೋರ್‌ವೆಲ್ ಹಾಕಿ ಭೂಗತ ಮರುಭೂಮಿಗಳನ್ನು ಸೃಷ್ಟಿ ಮಾಡಿಕೊಂಡು- ಈಗ ಬರ ಎಂದರೆ ನಿಜಕ್ಕೂ ಅದು ನಾವೇ ಬರಮಾಡಿಕೊಂಡ ಬರ.
ಆದರೂ ವಿಜ್ಞಾನಿಗಳು ಹಿಮ್ಮೆಟ್ಟಿಲ್ಲ. ಸೂಪರ್ ಕಂಪ್ಯೂಟರ್‌ಗಿಂತ ಬಲವಾದ ಕ್ವಾಂಟಮ್ ಕಂಪ್ಯೂಟರ್ ಬರಲಿದೆ. ಸಹಸ್ರಕೋಟಿ ಡೇಟಾಗಳನ್ನು ನಿಭಾಯಿಸಬಲ್ಲ ʼಯಾಂಬುʼ (ಎಐ= ಯಾಂತ್ರಿಕ ಬುದ್ಧಿಮತ್ತೆ) ಬಳಕೆಗೆ ಬರುತ್ತಿದೆ. ಆಕಾಶಕ್ಕೆ ಡಬಲ್ ಡಾಪ್ಲರ್ ರಡಾರ್‌ಗಳನ್ನು ಏರಿಸಲಾಗುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಇದೀಗ ಯಾಂಬು ನೆರವಿನಿಂದ ಪ್ರತಿ ಅರ್ಧರ್ಧ ಗಂಟೆಗೆ ಕರಾರುವಾಕ್ಕಾಗಿ....
ಅದೆಲ್ಲ ಸರೀರಿ, ನಿಮ್ಮ ‘ಸಿಡಿಲು’ ಆಪ್ ಏನಾಗಿದೆ ಹೇಳಿ! ಕಳೆದ ವರ್ಷ ಗುಡುಗು ಸಿಡಿಲಿಗೆ ಸಿಕ್ಕು ನಮ್ಮ ದೇಶದಲ್ಲಿ 1285 ಜನರು ಸತ್ತಿದ್ದಾರೆ. ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಕಡಿಮೆ ಆಗಿದೆಯೆ? ಈ ಪ್ರಶ್ನೆಗೆ ಡಾ. ರೆಡ್ಡಿಯವರು ವಾಸ್ತವದ ಬೇರೆಯದೇ ಚಿತ್ರಣವನ್ನು ಕೊಡುತ್ತಾರೆ. ಕುರಿಗಾಹಿಗಳು, ರೈತರು ಈ ಆ್ಯಪ್ ಕಟ್ಟಿಕೊಂಡು ಓಡಾಡುತ್ತಾರೆಯೆ? ಸಿಡಿಲಿನಿಂದ ಬಚಾವಾಗಲು ಇಂತಿಂಥ ಮುನ್ನೆಚ್ಚರಿಕೆ ಕೈಗೊಳ್ಳಿ ಎಂದು ನೂರಾರು ಬಾರಿ ಹೇಳಿದರೂ ಆ ಮಾಹಿತಿ ಅಲ್ಲಿನ ಬಡಪಾಯಿಗಳಿಗೆ ಹೇಗೆ ತಲುಪಬೇಕು? ಗುಡುಗಿನ ಸದ್ದು ಕೇಳಿದ ತಕ್ಷಣ ಮರದ (ಅಂದರೆ ಮೃತ್ಯುವಿನ) ಬಳಿಗೇ ದೌಡಾಯಿಸುತ್ತಾರೆ. ಪಂಚಾಯತ್ ಮಟ್ಟದಲ್ಲಿ, ಗ್ರಾಮಸಭೆಯಲ್ಲಿ ಅವರಿಗೆ ತಿಳಿವಳಿಕೆ ನೀಡಬೇಕು.
ಯಾರು ನೀಡಬೇಕು?
ಅದೇನೊ ಗೊತ್ತಿಲ್ಲ. ಹವಾ ಮುನ್ಸೂಚನೆ ನೀಡುವ 37 ಡಾಪ್ಲರ್ ರಡಾರ್‌ಗಳನ್ನು ನಮ್ಮ ದೇಶದಲ್ಲಿ ಸ್ಥಾಪಿಸಲಾಗಿದೆ. ಇನ್ನೆರಡು ವರ್ಷಗಳಲ್ಲಿ ಅವುಗಳ ಸಂಖ್ಯೆಯನ್ನು 62ಕ್ಕೆ ಏರಿಸುತ್ತೇವೆಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಈಚೆಗೆ ಹೇಳಿದ್ದಾರೆ. ಏರಲಿ ಸ್ವಾಗತಿಸೋಣ. ಅವೇನೋ ಆಕಾಶದಲ್ಲಿ ಯೋಜನದೂರದ ಮಳೆಹನಿಗಳನ್ನು ಪತ್ತೆ ಮಾಡುತ್ತವೆ. ಸುಂಟರಗಾಳಿ, ಮೇಘಸ್ಫೋಟ, ದೂಳುಮಾರುತ, ಬರದ ಮಾರಿ, ಹಿಮಪಾತದ ಮುನ್ಸೂಚನೆ ನೀಡುತ್ತವೆ. ಆದರೆ ಕೋಲಾರದಲ್ಲಿ ಹೋಬಳಿ ಮಟ್ಟದಲ್ಲಿ ನೆಲದ ತೇವಾಂಶವನ್ನು ಅಳೆಯುವ ಒಂದು ಸಾಧನವೂ ಇಲ್ಲವಲ್ಲ? ಚಳ್ಳಕೆರೆಯಲ್ಲಿ ಮಳೆ ಬರಿಸುವ ಅಥವಾ ಸಕಲೇಶಪುರದ ಮೇಘಸ್ಫೋಟವನ್ನು ನಿಲ್ಲಿಸಲು ಯಾವ ಸಾಧನಕ್ಕೂ ಸಾಧ್ಯವಿಲ್ಲವಲ್ಲ? ಪ್ರಯೋಜನ ಏನು? ಡಾಪ್ಲರ್ ರಡಾರ್‌ಗಳು ಹೆಚ್ಚೆಂದರೆ ಅಪಾಯದ ಸೂಚನೆ ಕೊಟ್ಟು ಜನರನ್ನು ಸುರಕ್ಷಿತ ತಾಣಗಳತ್ತ ಗುಳೆ ಎಬ್ಬಿಸಬಹುದು. ಆ ಕೆಲಸವೇನೊ ಸಮರ್ಥವಾಗಿ ಆಗುತ್ತಿದೆ. ಆದರೆ ನಮಗೀಗ ಬೇಕಿದ್ದುದು ಜನರನ್ನು ನಿಸರ್ಗದತ್ತ ಗುಳೆ ಹೊರಡಿಸುವುದು. ನೀರಿಂಗಿಸಲು, ಹೂಳೆತ್ತಲು, ಗಿಡನೆಡಲು, ಬರನಿರೋಧಕ ಕೆಲಸಗಳತ್ತ ಜನರನ್ನು ಪ್ರೇರೇಪಿಸಲು ಉಪಾಯಗಳು ಬೇಕಿವೆ. ಅವೆಲ್ಲಿವೆ ಈ ನಗರಮುಖೀ ಸಮಾಜದಲ್ಲಿ? ಪರ್ಜನ್ಯ ಹೋಮಕ್ಕೊ, ಮೋಡಬಿತ್ತನೆಗೊ ತಜ್ಞರನ್ನು ಹುಡುಕುವುದನ್ನು ಬಿಟ್ಟರೆ ಬೇರೇನು ಮಾಡುತ್ತೇವೆ ನಾವು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.