(ನಮ್ಮ ನಾಡಿನ ಎರಡು ಅನನ್ಯ ಚೇತನಗಳಿಗೆ ಈ ಸಲ ಪದ್ಮ ಪ್ರಶಸ್ತಿ ಬಂದಿದೆ. ಆ ಮೂಲಕ ಪ್ರಶಸ್ತಿಯ ಗೌರವವೂ ಹೆಚ್ಚಿದೆ)
ಕರಿಮಣಿ, ಬೆಲ್ಲದ ಮಣಿಗಳ ಹಾರದಿಂದ ತುಂಬಿದ ಕೊರಳಿನ, ಹಾಲಕ್ಕಿ ಸಂಪ್ರದಾಯದಂತೆ ಉಟ್ಟ ಸೀರೆಗೆ ಹೊಂದಿದಂತೆ ಕಾಣುವ ಸುಕ್ಕುಗಟ್ಟಿದ ಚರ್ಮದ ತೆರೆದ ಬೆನ್ನಿನ, ಬರಿಗಾಲಿನ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ನಡೆಯುತ್ತಿದ್ದರೆ ಹಾಲಕ್ಕಿ ಸಂಸ್ಕೃತಿಯೇ ನಿಧಾನವಾಗಿ ಹೆಜ್ಜೆ ಹಾಕಿದಂತೆ ಭಾಸವಾಗುತ್ತಿತ್ತು. ಅವರು ಮುಗ್ಧ ನಗೆಬೀರಿ ಪ್ರಶಸ್ತಿ ಸ್ವೀಕರಿಸುವಾಗ ಸರಳತೆಯೇ ಮಾನವರೂಪು ತಾಳಿದಂತಿತ್ತು.
ಪ್ರಧಾನಿಯವರು ಅಭಿನಂದಿಸಿದಾಗಲೂ ‘ನಾನ್ ರಾಶಿ ಗಿಡ ನೆಟ್ಟಿದೆ’ ಎನ್ನುವಂತೆ ಕೈ ಸನ್ನೆ ಮಾಡುತ್ತ ಕನ್ನಡದಲ್ಲಿ ನುಡಿವಾಗ ಭಾವಕ್ಕೆ ಭಾಷೆ ಬೇಕೇ ಎನ್ನಿಸಿತು. ಎಲ್ಲರೂ ಅವರನ್ನು ನೋಡಿ, ಎಲ್ಲವೂ ಅರ್ಥವಾದಂತೆ ಮೆಚ್ಚುಗೆಯಿಂದ ತಲೆದೂಗಿ ಕರತಾಡನ ಮಾಡಿದ್ದರು! ‘ವೃಕ್ಷಮಾತೆ’ ಎಂದೇ ಖ್ಯಾತರಾದ ಅಂಕೋಲಾ ತಾಲ್ಲೂಕಿನ ಅಗಸೂರಿನ ಹಾಲಕ್ಕಿ ಒಕ್ಕಲಿಗ ಸಮಾಜದ ತುಳಸಿಗೌಡ ಅವರು ಪದ್ಮಶ್ರೀ ಪ್ರಶಸ್ತಿ ಪಡೆದದ್ದು ಅದೆಂತಹ ಹೃದ್ಯ ಕ್ಷಣ!
1944ರಲ್ಲಿ ಹೊನ್ನಳ್ಳಿ ಗ್ರಾಮದಲ್ಲಿ ನಾರಾಯಣ ಹಾಗೂ ನೀಲಿ ದಂಪತಿಗೆ ಜನಿಸಿದ ಕೂಸಿಗೆ ತುಳಸಿ ಎಂಬ ಸಸ್ಯದ ಹೆಸರಿಟ್ಟರು. ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳ ಹಾಲಕ್ಕಿ ಸಮಾಜದದಲ್ಲಿ ಹುಟ್ಟಿ ಬಡತನವನ್ನೇ ಹಾಸಿ ಹೊದೆದು ಬೆಳೆದ ತುಳಸಿ ಎರಡು ವರ್ಷದ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡವರು. ಬಡತನದ ಬಾಳು, ಕುಮ್ರೀ ಬೇಸಾಯ ಮಾಡುವ ಕ್ರಮ ಗಮನಿಸುತ್ತಲೇ ಬೆಳೆದ ತುಳಸಿಯವರಿಗೆ ಸಿಕ್ಕಿದ್ದು ಕೂಲಿ ಮಾಡುತ್ತಲೇ ಪಡೆದ ಅನುಭವದ ವಿದ್ಯೆ, ಅಪಾರ ಪರಿಸರಪ್ರೀತಿ.
ಗೋವಿಂದೇಗೌಡ ಎಂಬವರೊಂದಿಗೆ ಬಾಲ್ಯವಿವಾಹವಾದರೂ ಅಲ್ಪಾಯುಷ್ಯದ ಪತಿಯೊಂದಿಗೆ ದಾಂಪತ್ಯ ಜೀವನ ಸಿಕ್ಕಿದ್ದು ಹದಿನೈದು ವರ್ಷವಷ್ಟೆ. ಮಗ ಸುಬ್ಬಯ್ಯನನ್ನು ಬೆಳೆಸುವ ಹೊಣೆಗಾರಿಕೆ ಹೆಗಲೇರಿತು. ವೈಧವ್ಯದ ನೋವು ನುಂಗಿ ಜೀವನ ನಿರ್ವಹಣೆ ಮಾಡುವುದಕ್ಕೋಸ್ಕರ ಕಾಡಿನಿಂದ ಸೌದೆ ಹೊರೆ ತಂದು ಮಾರಾಟ ಮಾಡುವ ಕೆಲಸ ಆರಂಭಿಸಿದರು. ಒಣಕಟ್ಟಿಗೆ ಕೂಡಿಸಿ ಹೊರೆಕಟ್ಟುವಾಗ ಕಾಡಿನಲ್ಲಿ ಉದುರಿ ಮಣ್ಣಾಗುವ ಹಲವು ಜಾತಿಯ ಸಸ್ಯಗಳ ಬೀಜಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಬರುತ್ತಿದ್ದರು. ಅವುಗಳನ್ನು ಬಿತ್ತಿ ಗಿಡ ಬೆಳೆಸಿ ಅರಣ್ಯ ಇಲಾಖೆಗೇ ಕೊಡುತ್ತಿದ್ದರು. ಕ್ರಮೇಣ ಅರಣ್ಯ ಇಲಾಖೆಯ ದಿನಗೂಲಿಯೂ ಆದರು.
‘ಒಂದೂಕಾಲು ರೂಪಾಯಿಗೆಂತ ಇಡೀದಿನಾ ದುಡಿತೆ? ಮತ್ತೆಂತಾರೂ ಕೆಲ್ಸಾ ಮಾಡಿರೆ ಮತ್ತೂ ಜಾಸ್ತಿ ರೊಕ್ಕ ಸಿಗೂದಿಲ್ಲನೇ’ ಎಂದು ಪರಿಚಿತರು ಕೇಳಿದರೂ ತುಳಸಿಗೆ ಗಿಡ ನೆಡುವುದರಲ್ಲಿ ಸಿಗುವ ಸಮಾಧಾನ ಕೂಲಿಗೆ ಸಿಗುವ ಸಂಬಳಕ್ಕಿಂತ ಹೆಚ್ಚಿನದಾಗಿತ್ತು. ತಾವು ಬೆಳೆಸಿದ ಒಂದಿಷ್ಟು ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರಕಾರಿ ರಸ್ತೆಯ ಪಕ್ಕದಲ್ಲಿ ನೆಡಲಾರಂಭಿಸಿದರು.
ನೆಟ್ಟ ಸಸಿಗಳಲ್ಲಿ ಹೆಚ್ಚಿನವು ಬದುಕಿ ಕಡು ಬಿಸಿಲಿನ ಅಂಕೋಲೆಯ ಸುತ್ತಮುತ್ತಲಿನ ಹಲವು ಗ್ರಾಮಗಳಿಗೂ ಒಂದಿಷ್ಟು ತಂಪುಣಿಸಿದವು. ‘ಇದೊಂದು ಹೆಂಗಸು ಕಂಡಲ್ಲೆಲ್ಲ ಗಿಡಾ ನೆಡ್ತೆ ಹೇಳ್ತದೆ’ ಎಂದು ಟೀಕಿಸುವ ಬಾಯಿಗಳು ತುಳಸಿಯ ಬಗ್ಗೆ ಮೆಚ್ಚುಗೆಯ ಮಾತಾಡಲಾರಂಭಿಸಿದವು! ಇವರ ಪರಿಸರಪ್ರೇಮದ ಪರಿಯನ್ನು ಕಂಡ ಅರಣ್ಯಾಧಿಕಾರಿಯಾಗಿದ್ದ ಯಲ್ಲಪ್ಪ ರೆಡ್ಡಿಯವರು ಮಾಸ್ತಿಕಟ್ಟೆ ಅರಣ್ಯವಲಯದಲ್ಲಿ ಕಾಯಂ ನೌಕರಳನ್ನಾಗಿಸಿ ಸಸ್ಯಪಾಲನೆಯ ಕೆಲಸ ನೀಡಿದರು.
ಗಿಡಗಳನ್ನು ಬೆಳೆಸುತ್ತಲೇ ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡ ತುಳಸಿಯವರು ನುರಿತ ಸಸ್ಯ ವಿಜ್ಞಾನಿಯಂತೆ ಯಾವ ಕಾಲದಲ್ಲಿ ಯಾವ ಸಸ್ಯಗಳ ಬೀಜವನ್ನು ಹೇಗೆ ಸಂಗ್ರಹಿಸಬೇಕು, ಅದನ್ನು ಬೀಜೋಪಚಾರ ಮಾಡಿ ನೆಡುವ ಕ್ರಮ ಹೇಗೆ ಎನ್ನುವುದನ್ನು ಅರಿತು ಉಳಿದವರಿಗೆ ಹೇಳುವಂತಾದರು. ತುಳಸಿ ಬೆಳೆಸಿದ ಗಿಡಗಳೂ ಬೆಳೆದು ವೃಕ್ಷಗಳಾದಂತೆ ತುಳಸಿಯ ಜ್ಞಾನವೂ, ಪರಿಸರಪ್ರೇಮವೂ ವೃಕ್ಷವಾಯಿತು.
ತುಳಸಿಯವರು ಎಷ್ಟು ಗಿಡಗಳನ್ನು ನೆಟ್ಟೆನೆಂಬ ಲೆಕ್ಕವಿಟ್ಟವರಲ್ಲ, ಎಷ್ಟು ನೀರುಣಿಸಿದೆನೆಂಬುದನ್ನೂ ಹೇಳಿದವರಲ್ಲ. ಶ್ರಮವಾಯಿತೆಂದು ಬೇಸರಿಸಿದವರಲ್ಲ. ಹಗಲಿರುಳೆನ್ನದೇ ದುಡಿದ ಅವರ ರೀತಿ, ಜೀವನ ಪ್ರೀತಿ ಅಷ್ಟೆ. ‘ಗಿಡಾ ಬೆಳಸಿರೆ ಚೊಲೊ ಗಾಳಿ ನೆಳ್ಳು ಕೊಡತದೆ, ನಮಗೂ ಅನುಕೂಲ ಆಗ್ತದೆ, ಪ್ರಾಣಿ ಪಕ್ಷಿಗೂ ಅನುಕೂಲಾಗ್ತದೆ. ಒಂದೇ ನಮೂನಿ ಅಕೇಶಿಯಾ ಗಿಡಾ ಬೆಳ್ಸಿ ನೆಡುತೋಪು ಮಾಡತ್ರಲಾ, ಅದು ಉಪಯೋಗಕ್ಕಿಲ್ಲ ಮತ್ತೆ. ಭೂಮಿ ಬೆಟ್ಟ (ಬರಡು) ಆಗ್ತದೆ, ಅದ್ರ ಬದ್ಲು ಮಾವು, ಹಲಸು, ನೇರಲೆ, ಮತ್ತಿ, ಅತ್ತಿ, ಆಲ, ನೆಲ್ಲಿ, ನಂದಿ ಹೊನ್ನೆ, ತೇಗ, ಬೀಟೆ ಇಂಥಾ ಗಿಡಾ ತಯಾರ ಮಾಡಿ ನೆಡಬೇಕು’ ಎನ್ನುತ್ತಾರೆ.
ಆರು ದಶಕಗಳ ಇವರ ಪರಿಸರ ಸಂರಕ್ಷಣೆಯ ಕಾರ್ಯವನ್ನು ಮೆಚ್ಚಿ ರಾಜ್ಯೋತ್ಸವ ಪ್ರಶಸ್ತಿ, ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಪದ್ಮಶ್ರಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ತುಳಸಿ ಗೌಡರಿಗೆ ಸಂದಿವೆ. ಆದರೆ ಇವರ ಜೀವನಮಟ್ಟ ಸುಧಾರಿಸಿಲ್ಲ. ಮೂಲಭೂತ ಸೌಕರ್ಯ ಕೊರತೆ ಇರುವ ಪುಟ್ಟ ಮನೆಯಲ್ಲಿ ಮಗ, ಸೊಸೆ, ನಾಲ್ವರು ಮೊಮ್ಮಕ್ಕಳೊಂದಿಗೆ ತುಳಸಜ್ಜಿ ಬದುಕುತ್ತಿದ್ದಾರೆ.
ಹಾಲಕ್ಕಿ ಸಮಾಜದ ಬಹುತೇಕರಂತೆಯೇ ಇವರೂ ಭೂರಹಿತರು. ಹಲವು ಕೊರತೆಗಳ ನಡುವೆಯೂ ಇವರ ಸಕಾರಾತ್ಮಕ ಮನೋಭಾವ, ಸಮಾಜಮುಖಿ ಕಾರ್ಯ ಚ್ಯುತಿ ಇಲ್ಲದಂತೆ ನಡೆಯುವುದೇ ಸೋಜಿಗ! ಹಾಲಕ್ಕಿ ಸಮಾಜದ ಇನ್ನೊಬ್ಬ ಸಾಧಕಿ ಸುಕ್ರಿ ಬೊಮ್ಮಗೌಡರೊಂದಿಗೆ ಮದ್ಯಪಾನ ವಿರೋಧಿ ಚಳವಳಿ, ಪರಿಸರ ಚಳವಳಿಗಳಲ್ಲಿ ತುಳಸಿಗೌಡರೂ ಪಾಲ್ಗೊಳ್ಳುತ್ತಾರೆ. ‘ಪ್ರಸಸ್ತಿ ತಕಳೂಕೆ ಹೋಗೂಕೂ ನನ್ನ ಕೂಡೆ ದುಡ್ಡು ಇರಲಿಲ್ಲಾಗಿತ್ತು ಜನರೆಲ್ಲ ಕೊಟ್ರು’ ಎಂದು ಸಾರ್ವಜನಿಕರ ನೆರವನ್ನು ಸ್ಮರಿಸುವ ತುಳಸಿಯವರ ಜೀವನ ಭದ್ರತೆಗೆ ಅರಣ್ಯ ಇಲಾಖೆ ನೀಡುವ ಪಿಂಚಣಿ ಹಣವೊಂದೇ ಆಧಾರ.
ಹೆಚ್ಚುತ್ತಿರುವ ಭೂಮಿಯ ತಾಪಮಾನ ಇಳಿಸಲು ಭೂಮಿಗೆ ಹಸಿರು ಹೊದಿಸುವುದೊಂದೇ ಉಪಾಯ ಎನ್ನುವ ಈ ಕಾಲಘಟ್ಟದಲ್ಲಿ ತಮ್ಮ ನೈಜ ಪರಿಸರ ಪ್ರೇಮದಿಂದ, ನಿಸ್ವಾರ್ಥ ಭಾವದಿಂದ ಲಕ್ಷಾಂತರ ಗಿಡಗಳನ್ನು ಬೆಳೆಸಲು ಶ್ರಮಿಸಿದ ತುಳಸಿ ಅವರು ಸಾಮಾನ್ಯರ ನಡುವಿನ ಅಸಾಮಾನ್ಯ ಮಹಿಳೆ. ಹಲವರ ಮನೆಯ ಮುಂದೆ ಕಂಗೊಳಿಸುವ ತುಳಸಿ ಗಿಡದಂತೆ ಈ ನಾಡಿನ ಜನರ ಮನದಂಗಳದ ತುಳಸಿಯಾಗಿ ಇವರು ಕಂಗೊಳಿಸಲಿ ಎನ್ನುವುದಷ್ಟೇ ಹಾರೈಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.