ADVERTISEMENT

ಬಿಂಕದಕಟ್ಟಿಯಲ್ಲಿ ವನಸಿರಿಯ ಸೊಬಗು

125 ಎಕರೆ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ನಿರ್ಮಾಣ

ಹುಚ್ಚೇಶ್ವರ ಅಣ್ಣಿಗೇರಿ
Published 22 ಜುಲೈ 2018, 19:30 IST
Last Updated 22 ಜುಲೈ 2018, 19:30 IST
ಬಿಂಕದಕಟ್ಟಿ ಸಮೀಪ ನಿರ್ಮಾಣಗೊಂಡಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ
ಬಿಂಕದಕಟ್ಟಿ ಸಮೀಪ ನಿರ್ಮಾಣಗೊಂಡಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ   

ಗದಗ: ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು, ಮಕ್ಕಳಂತೆ ಬೆಳೆಸಿ, ದೇಶಕ್ಕೆ ಮಾದರಿಯಾದ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಅರಣ್ಯ ಇಲಾಖೆ ಇಲ್ಲಿನ ಬಿಂಕದಕಟ್ಟಿ ಗ್ರಾಮದ ಸಮೀಪ ವೃಕ್ಷೋದ್ಯಾನ (ಟ್ರೀ ಪಾರ್ಕ್) ನಿರ್ಮಿಸಿದೆ.

ಜಿಲ್ಲೆಯ ಅಪರೂಪದ ಜೀವವೈವಿಧ್ಯ ತಾಣ ಕಪ್ಪತಗುಡ್ಡದ ತಪ್ಪಲಿಗೆ ಹೊಂದಿಕೊಂಡಂತೆ ಈ ಸಾಲುಮರದ ತಿಮ್ಮಕ್ಕ ಸಸ್ಯೋದಾನ ತಲೆಯೆತ್ತಿದೆ. ಈಗಾಗಲೇ ಉದ್ಯಾನದ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಚಾರಣ ಪಥ ನಿರ್ಮಾಣ ಹಾಗೂ ಸಾಹಸ ಕ್ರೀಡೆಗಳಿಗೆ ಅಗತ್ಯವಿರುವ ಉಪಕರಣಗಳ ಅಳವಡಿಕೆ ಕಾರ್ಯ ಅಂತಿಮ ಹಂತದಲ್ಲಿದೆ.

125 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನವನ್ನು ಪರಿಸರ ಶಿಕ್ಷಣ ಕೇಂದ್ರವಾಗಿ ರೂಪಿಸುವುದರ ಜತೆಯಲ್ಲೇ, ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಪಡಿಸಿ, ವರಮಾನ ಸಂಗ್ರಹಕ್ಕೂ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಬಿಂಕದಕಟ್ಟಿ ಮೃಗಾಲಯದಿಂದ ಕೂಗಳತೆಯ ದೂರದಲ್ಲೇ ಈ ಸಸ್ಯೋದ್ಯಾನ ಇದ್ದು,ಅಲ್ಲಿಗೆ ಬರುವ ಪ್ರವಾಸಿಗರು ಇಲ್ಲಿಗೂ ಭೇಟಿ ವನಸಿರಿಯ ಸೊಬಗನ್ನು ಆಸ್ವಾದಿಸಬಹುದು.

‘ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಅರಣ್ಯ ಮೀಸಲು ಅಥವಾ ಕಂದಾಯ ಇಲಾಖೆಗೆ ಒಳಪಟ್ಟ ಪ್ರದೇಶದಲ್ಲಿ ಸಸ್ಯೋದ್ಯಾನ ನಿರ್ಮಿಸಬೇಕು ಎಂದು ಇಲಾಖೆ ಆದೇಶ ಹೊರಡಿಸಿದೆ. ಅದರ ಅನ್ವಯ 2017ರಲ್ಲಿ ಇಲ್ಲಿ ಸಸ್ಯೋದ್ಯಾನ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಶೇ 80ರಷ್ಟು ಕಾರ್ಯ ಪೂರ್ಣಗೊಂಡಿದೆ’ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದರು.

ಈ ಉದ್ಯಾನದಲ್ಲಿಸಸಿಗಳೇ ಸ್ವಾಗತಕೋರುವ ಅನುಭವವಾಗುತ್ತದೆ. ಉದ್ಯಾನದ ಒಂದು ಭಾಗದಲ್ಲಿ ಹಣ್ಣಿನ ಸಸಿಗಳಾದ ಪೇರಲ, ಸೀತಾಫಲ, ಚೆರ್ರಿ, ಮಾವು, ನೇರಳೆ, ಚಿಕ್ಕು, ದಾಳಿಂಬೆ ಸಸಿಗಳನ್ನು ಬೆಳೆಸಲಾಗಿದೆ. ಪಕ್ಷಿಗಳನ್ನು ಆಕರ್ಷಿಸುವ ಅವುಗಳಿಗೆ ನೈಸರ್ಗಿಕ ಆವಾಸ ಸ್ಥಾನ ಒದಗಿಸುವ ಯೋಜನೆಯೂ ಇದರ ಹಿಂದಿದೆ. ಇನ್ನೊಂದೆಡೆ ಹೊಂಗೆ, ಬೇವು, ಆಲ, ಅರಳಿ, ಹತ್ತಿ, ಹುಣಸೆ, ತಪಸಿ, ಬಸರಿ, ಗುಲ್‌ಮೋಹರ್ ಸೇರಿದಂತೆ 25ಕ್ಕೂ ಹೆಚ್ಚು ಜಾತಿಯ ಸಸಿಗಳನ್ನು ಬೆಳೆಸಲಾಗಿದೆ. ನಡುನಡುವೆ ಅಲ್ಲಲ್ಲಿ ಹುಲ್ಲು ಹಾಸು, ಹಲವು ಅಪರೂಪದ ಔಷಧ ಸಸ್ಯಗಳ ಮೂಲಕವೂ ಈ ಹಸಿರುಮಯ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

ಕಾಡಿನ ನಿಶಬ್ದವನ್ನು ಅನುಭವಿಸಲು ಇಲ್ಲಿ ಒಂದು ಕಿ.ಮೀ. ಉದ್ದದ ಐದು ನಡಿಗೆ ಪಥಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ವಿಶ್ರಾಂತಿಗಾಗಿ ಬೆಂಚ್‌ಗಳನ್ನು ಅಳವಡಿಸಲಾಗಿದೆ. ನಾಲ್ಕು ಪರಿಸರ ಸ್ನೇಹಿ ಕುಟೀರಗಳು ನಿರ್ಮಾಣ ಹಂತದಲ್ಲಿವೆ.
ಇಲ್ಲಿನ ಗುಡ್ಡದ ಮೇಲೆ ಪ್ರಕೃತಿ ಭವನ ನಿರ್ಮಿಸುವುದು. ಜಿಲ್ಲೆಯ ಪ್ರವಾಸಿ ತಾಣವಾದ ಮಾಗಡಿ ಕೆರೆ, ಕಪ್ಪತಗುಡ್ಡದ ಮಹತ್ವ ಸಾರುವ ಮಾದರಿಗಳನ್ನು ಪ್ರದರ್ಶನ ಮಾಡುವುದು. ಚಾರಣಿಗರ ಪಥ ನಿರ್ಮಿಸುವ ಯೋಜನೆಯನ್ನೂ ಇಲಾಖೆ ಹಾಕಿಕೊಂಡಿದೆ. ಸಸ್ಯೋದ್ಯಾನದ ನಡುವೆ ಮಕ್ಕಳಿಗೆ ಸಾಹಸ ಕ್ರೀಡೆಗಳಿಗಾಗಿ ಪರಿಕರಗಳನ್ನು ಅಳವಡಿಸಲಾಗಿದೆ.

ಬಿಂಕದಕಟ್ಟಿ ಮೃಗಾಲಯಕ್ಕಿಂತ ವಿಭಿನ್ನವಾಗಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಅಭಿವೃದ್ಧಿಪಡಿಸಲಾಗಿದೆ. ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು
ಕಿರಣ್ ಅಂಗಡಿ, ಗದಗ ಆರ್ಎಫ್‍ಒ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.