ADVERTISEMENT

ಹಿಮಾಲಯನ್ ಸತ್ಯಾಗ್ರಹ

ಕೃಪಾಕರ ಸೇನಾನಿ
Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಹಿಮಾಲಯ ಪರ್ವತಶ್ರೇಣಿ 
ಹಿಮಾಲಯ ಪರ್ವತಶ್ರೇಣಿ    

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಂ ವಾಂಗ್‌ಚುಕ್‌ ಅವರು ಹಿಮಾಲಯ ಪರ್ವತ ಪ್ರದೇಶಗಳ ಉಳಿವಿಗಾಗಿ ಈಚೆಗೆ 21 ದಿನಗಳು ಉಪವಾಸ ಸತ್ಯಾಗ್ರಹ ನಡೆಸಿದರು. ಅತ್ಯಂತ ಸೂಕ್ಷ್ಮ ಜೀವವೈವಿಧ್ಯವನ್ನು ಒಡಲಲ್ಲಿ ಇಟ್ಟುಕೊಂಡಿರುವ ಪರ್ವತ ಶ್ರೇಣಿ ಉತ್ತರ ಭಾರತದ ಹಲವು ನದಿಗಳಿಗೆ, ವಿಶೇಷ ಬುಡಕಟ್ಟು ಜನಾಂಗಗಳಿಗೆ, ವೈವಿಧ್ಯ ಜೀವರಾಶಿಗಳಿಗೆ ಆಶ್ರಯ ನೀಡಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿದೆ.

****

ಮಾರ್ಚ್ ಕಡೆಯ ವಾರ. ಮುಂಜಾನೆ ನಾವು ‘ಲೇಹ್’ನ ವಿಮಾನ ನಿಲ್ದಾಣದಲ್ಲಿ ಇಳಿದಾಗ ಚಳಿ ಹೆಪ್ಪುಗಟ್ಟಿತ್ತು. ಹಿಂದಿನ ರಾತ್ರಿ ಸುರಿದಿದ್ದ ಹಿಮಪಾತ ಪರ್ವತಗಳಿಗೆ ಬಿಳಿಯ ಚಾದರ ಹೊದಿಸಿತ್ತು. ಚಾಲಕ ‘ನೋರ್ಬು’ ನಮಗಾಗಿ ಕಾದಿದ್ದ. ನಾವು ಇನ್ನೇನು ಅಲ್ಲಿಂದ ಹೊರಡಬೇಕೆಂದಿರುವಾಗ ಪಕ್ಕದ ಟ್ಯಾಕ್ಸಿ ಚಾಲಕ ಇಪ್ಪತ್ತರ ಹರೆಯದ ಯುವಕನೊಬ್ಬ ಹಿಂಜರಿಕೆಯಿಂದ ಮೆಲ್ಲನೆ ನಮ್ಮತ್ತ ಬಂದು ‘ನೀವು ಎಲ್ಲಿಂದ ಬಂದಿದ್ದು’ ಎಂದು ವಿನಯದಿಂದ ಕೇಳಿದ.

ADVERTISEMENT

‘ಕರ್ನಾಟಕ’,

‘ಬಂದ ಉದ್ದೇಶ?’
‘ಒಂದು ದಿನ ನಿಮ್ಮ ಉಪವಾಸದಲ್ಲಿ ಭಾಗವಹಿಸೋಣ ಎಂದೆನಿಸಿ ಬಂದಿದ್ದೇವೆ’
‘ಅದಕ್ಕಾಗಿ ಅಷ್ಟು ದೂರದಿಂದ ಬಂದಿದ್ದೀರಾ?’ ಎಂದ ಮೆಲುದನಿಯಲ್ಲಿ.

ಬಹುಶಃ ನಮ್ಮ ಚಾಲಕ ‘ನೋರ್ಬು’ ಅವನಿಗೆ ನಾವು ಬಂದಿರುವ ಉದ್ದೇಶದ ಬಗ್ಗೆ ತಿಳಿಸಿದ್ದನೇನೊ. ‘ಹೌದು’ ಎಂದೆವು. ಆತನ ಕಣ್ಣಾಲಿಗಳು ಒದ್ದೆಯಾದವು. ಧ್ವನಿ ಮಾತಾಗಲಿಲ್ಲ. ತನ್ನ ಕೈಗಳನ್ನು ಜೋಡಿಸಿ ತಲೆಬಾಗಿ ನಮಿಸುತ್ತಾ ಏನನ್ನೋ ಹೇಳಲೆತ್ನಿಸುತ್ತಾ ಗದ್ಗದಿತನಾದ.

ಆ ಭಾವನಾತ್ಮಕ ಸನ್ನಿವೇಶದಿಂದ ಹೊರಬರಲು ನಾವು ಬೇರೆ ಏನೇನೋ ಮಾತನಾಡಲು ಯತ್ನಿಸುತ್ತಿದ್ದೆವು. ಆದರೆ ಆತ ಮಾತ್ರ ನಮ್ಮ ಕೈಗಳನ್ನು ಹಿಡಿದುಕೊಂಡು ‘ಥ್ಯಾಂಕ್ ಯು ಸಾರ್... ಥ್ಯಾಂಕ್ಯು ಸಾ...’ ಎಂದು ಭಾವಪರವಶನಾಗಿ ಅಸ್ಪಷ್ಟವಾಗಿ ಉಸುರುತ್ತಿದ್ದ. ಆತ ಇಡೀ ಲಡಾಖ್‌ನ ನೋವಿನ ರೂಪಕದಂತೆ ಕಂಡ.

ಭಾರತದ ನೆತ್ತಿಯಲ್ಲಿರುವ ‘ಲಡಾಖ್’- ಚೀನಾ ಮತ್ತು ಪಾಕಿಸ್ತಾನ ದೇಶಗಳ ಗಡಿಗಳಿಗೆ ಹೊಂದಿಕೊಂಡಿರುವ ಪ್ರದೇಶ. ಹೆಚ್ಚು ಕಡಿಮೆ ಮಳೆಯೇ ಬೀಳದ ಈ ‘ತಣ್ಣನೆಯ ಮರುಭೂಮಿ’ ಅತ್ಯಂತ ಸೂಕ್ಷ್ಮವಲಯ. ಮಂಜುಗಡ್ಡೆಗಳನ್ನು ಹೊದ್ದು ಮಲಗಿರುವ ಗಗನಚುಂಬಿ ಪರ್ವತಗಳದ್ದೇ ಇಲ್ಲಿ ಕಾರುಬಾರು. ಇವುಗಳ ನಡುವೆ ಚದುರಿದಂತೆ ಮೂರ‍್ನಾಲ್ಕು ಮನೆಗಳ ಪುಟ್ಟ ಹಳ್ಳಿಗಳು. ಇಲ್ಲಿ ವ್ಯವಸಾಯಕ್ಕೆ ದಕ್ಕುವ ಭೂಮಿಯೂ ಅತ್ಯಲ್ಪ. ನಡುಮಧ್ಯಾಹ್ನ ಹರಿಯುವ ಝರಿಗಳು ಸಂಜೆಯ ಬಳಿಕ ಚಲನೆ ಕಳೆದುಕೊಂಡು ಮಂಜುಗಡ್ಡೆಗಳಾಗಿ ಮಲಗಿಬಿಡುತ್ತವೆ. ತೀವ್ರವಾದ ಚಳಿ, ಕಡಿದಾದ ಪರ್ವತಗಳು, ಸಂಪನ್ಮೂಲಗಳ ಕೊರತೆಯ ನಡುವೆ ಸಾವಿರಾರು ವರ್ಷಗಳಿಂದ ವಿಕಸನ ಹೊಂದಿರುವ ಈ ಜೀವ ಪರಿಸರದಲ್ಲಿ ಇಲ್ಲಿನ ಜನರು ಸುಸ್ಥಿರ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ಜೀವಪರಿಸರದ ರೂಪರಚನೆಗಳನ್ನು ಅರ್ಥಮಾಡಿಕೊಳ್ಳದ, ಗಡಿಯಾಚೆಯಿಂದ ತರುವ ಕಾರ್ಪೋರೇಟ್ ಅಭಿವೃದ್ಧಿ ಮಾದರಿಗಳಾಗಲಿ, ಚಿಂತನೆಗಳಾಗಲಿ ಇಲ್ಲಿ ದುರಂತಗಳನ್ನೇ ಸೃಷ್ಟಿಸುವುದು ಖಚಿತವೆಂದು ವಿಜ್ಞಾನಿಗಳು ಮೇಲಿಂದ ಮೇಲೆ ಹೇಳುತ್ತಲೇ ಬಂದಿದ್ದಾರೆ.

ಹಿಮ ಚಿರತೆಗಳ ಹುಡುಕಾಟದಲ್ಲಿ ಹಲವು ವರ್ಷಗಳ ಕಾಲ ಲಡಾಖ್‌ನಲ್ಲಿ ಅಲೆದಾಡಿಕೊಂಡಿದ್ದ ನಮಗೆ ಈ ಜನರ ಸಂಸ್ಕೃತಿಯ ಪರಿಚಯ ಸ್ವಲ್ಪಮಟ್ಟಿಗಿದೆ. ಪ್ರತಿಕಾರ ಮನೋಭಾವ ಇಲ್ಲದ, ಭ್ರಷ್ಟಾಚಾರ, ಕುತಂತ್ರಗಳ ಅರಿವೇ ಇಲ್ಲದ ಈ ಸಮುದಾಯದ ಸಂಸ್ಕೃತಿ ಹೇಗೆ ವಿಕಸಿಸಿರಬಹುದೆಂದು ನಾವು ಬಹಳ ಬಾರಿ ಯೋಚಿಸಿದ್ದೆವು. ಬಹುಶಃ ಹಿಮಾಲಯದ ಅಗಾಧತೆ ಮತ್ತು ಜೀವಿಗಳ ಅಸ್ತಿತ್ವಕ್ಕೇ ಸವಾಲೆಸೆಯುವ ಹವಾಮಾನ ವೈಪರೀತ್ಯಗಳು ಈ ಸಂಸ್ಕೃತಿಯನ್ನು ರೂಪಿಸಿರಬಹುದು.

ಇಂತಹ ಹಿನ್ನೆಲೆಯುಳ್ಳ ಲಡಾಖ್‌ ಮಂದಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ ಎಂಬ ಸುದ್ದಿ ತಲುಪಿದಾಗ ಆತಂಕಕ್ಕೊಳಗಾದೆವು. ಈ ಸಜ್ಜನರ ನಾಡಿನಲ್ಲಿ ಏನಾಗಿರಬಹುದೆಂದು ಅರಿಯಲು ಮತ್ತು ನಾವು ನಿಮ್ಮೊಂದಿಗಿದ್ದೇವೆಂದು ತಿಳಿಸುವ ಕನಿಷ್ಠ ಸೌಜನ್ಯಕ್ಕಾಗಿ ನಾವು ‘ಲೇಹ್’ಗೆ ಹೋಗಿದ್ದೆವು.

ಅಂದು, ನಾವು ‘ಲೇಹ್‌’ನ ತೆರೆದಬಯಲಿಗೆ ತಲುಪಿದಾಗ ಅಲ್ಲಿ ನೂರಾರು ಮಂದಿ ಕುಳಿತಿದ್ದರು. ಅಲ್ಲಿ ಗದ್ದಲವಿರಲಿಲ್ಲ, ರೋಷ-ದ್ವೇಷಗಳ ಕುರುಹು ಕೂಡ ಇರಲಿಲ್ಲ. ಬೆರಳುಗಳು ಸರದಲ್ಲಿದ್ದ ಮಣಿಗಳನ್ನು ಮೆಲ್ಲಗೆ ತಿರುವುತ್ತಿದ್ದವು. ಪ್ರಾರ್ಥನೆಯ ಚಕ್ರಗಳು ತಿರುಗುತ್ತಿದ್ದವು. ಇನ್ನು ಹಲವರು ಯಾವುದೋ ಗ್ರಂಥಗಳನ್ನು ಓದುತ್ತಿದ್ದರು. ಆ ಉಪವಾಸ ಪ್ರತಿರೋಧದ ಸಂಕೇತವಾಗಿತ್ತು ಎಂಬುದು ನಿಜ. ಆದರೂ, ಸಿಟ್ಟು-ಪ್ರತಿಕಾರಗಳ ಚಿಂತನೆಗಳಿಲ್ಲದೆ ನ್ಯಾಯ ಕೇಳುವ ಆ ಪರಿ ನಮ್ಮನ್ನು ಮಂತ್ರಮುಗ್ಧಗೊಳಿಸಿದ್ದವು. ಸಭೆಯ ಮೈದಾನದಲ್ಲಿ ಬಣ್ಣಬಣ್ಣದ ಬಟ್ಟೆಯ ತೋರಣಗಳಿದ್ದವು. ಅವುಗಳಲ್ಲಿ ಲಡಾಖಿ ಅಕ್ಷರಗಳು. ಅದರಲ್ಲಿ ‘ಹಿಂಸೆ, ದ್ವೇಷ ವಂಚನೆಗಳಿಂದ ಜಗತ್ತು ಮುಕ್ತವಾಗಲಿ, ಭೂಮಿಯ ಸಕಲಜೀವಿಗಳಿಗೂ ಒಳ್ಳೆಯದಾಗಲಿ’ ಎಂಬ ಸಂದೇಶವಿತ್ತು. ಬೀಸುವ ಗಾಳಿ ಕ್ಷಣಕಾಲ ನಿಂತು ಅಕ್ಷರಗಳನ್ನೆಲ್ಲ ಓದಿ ಜಗತ್ತಿನೆಲ್ಲೆಡೆಗೆ ಹೊತ್ತೊಯ್ಯುತ್ತದೆ ಎಂಬುದು ಇಲ್ಲಿನ ನಂಬಿಕೆ’ ಎಂದು ಜೀವವಿಜ್ಞಾನಿ ‘ಟ್ಸೆವಾಂಗ್ ನಾಮ್ಗ್ಯಾಲ್‌’ ವಿವರಿಸಿದರು.

ಮೈದಾನದ ನಡುವೆ ಕೊರೆಯುವ ಚಳಿಯಲ್ಲಿ ಸಂತನಂತೆ ಒಬ್ಬರು ಕುಳಿತಿದ್ದರು. ಹತ್ತಿರದಲ್ಲಿ ರವೀಂದ್ರನಾಥ ಠಾಗೋರರ ‘ಗೀತಾಂಜಲಿ’ಯಿಂದ ‘ಎಲ್ಲಿ ಮನಸ್ಸು ಭಯವನ್ನರಿಯದೋ... ಆ ಸ್ವಾತಂತ್ರದ ಸ್ವರ್ಗದಲ್ಲಿ ನನ್ನ ದೇಶವು ಎಚ್ಚರಗೊಳ್ಳಲಿ’ ಎಂಬ ಕವಿತೆಯಿದ್ದ ಚಿತ್ರಪಟ.

ನಾವು ಸೋನಂ ವಾಂಗ್‌ಚುಕ್‌ರ ಬಗ್ಗೆ ಬಹಳಷ್ಟು ಕೇಳಿದ್ದೆವು, ಓದಿದ್ದೆವು. ಆದರೆ ಅವರನ್ನು ಕಂಡಿದ್ದು ಅದೇ ಮೊದಲು.

ವಾಂಗ್‌ಚುಕ್, ವ್ಯಾಸಂಗದ ಬಳಿಕ ಲಡಾಖ್‌ಗೆ ಮರಳಿ ತನ್ನ ಸುತ್ತಮುತ್ತಲಿನ ಪರ್ವತಗಳ, ಜೀವಸಂಕುಲಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡರು. ನವೀನ ವೈಜ್ಞಾನಿಕ ಆವಿಷ್ಕಾರಗಳ ಮೂಲಕ ಅಲ್ಲಿಯ ರೈತರ, ಸೈನಿಕರ ಬದುಕು ಸಹನೀಯವಾಗುವಂತೆ ಮಾಡಿದರು. ಶಾಲಾ ಪಠ್ಯಗಳಲ್ಲಿ ವೈಜ್ಞಾನಿಕ ದೃಷ್ಟಿಕೋನಗಳನ್ನು ಪರಿಚಯಿಸಿ, ಸಾಂಸ್ಕೃತಿಕ ಆಂದೋಲನಗಳಿಗೆ ಮುನ್ನುಡಿ ಬರೆದರು. ಇದೇ ಹಿನ್ನೆಲೆಯಲ್ಲಿ 2018ರ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾದರು. ಇದಲ್ಲದೆ 2009ರಲ್ಲಿ ಅಪಾರ ಯಶಸ್ಸುಕಂಡ ‘3 ಇಡಿಯಟ್ಸ್’ ಸಿನಿಮಾದ ಅಮೀರ್ ಖಾನ್ ಅವರ ಪಾತ್ರಕ್ಕೆ ವಾಂಗ್‌ಚುಕ್ ವ್ಯಕ್ತಿತ್ವವೇ ಪ್ರೇರಣೆ. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ 21 ನೇ ದಿನದ ಉಪವಾಸದಲ್ಲಿದ್ದ ವಾಂಗ್‌ಚುಕ್ ಅವರ ಮುಖದಲ್ಲಿ ದಣಿವಿರಲಿಲ್ಲ, ಉತ್ಸಾಹ ಕಮರಿರಲಿಲ್ಲ. ಅವರ ಹೊಳೆಯುವ ಕಣ್ಣಲ್ಲಿ ಇನ್ನೂ ಭರವಸೆ ಇತ್ತು.

ನಮ್ಮೊಳಗೆ ಉಳಿದಿದ್ದ ಕೆಲವು ಪ್ರಶ್ನೆಗಳನ್ನು ಅವರಿಗೆ ಕೇಳಿದೆವು.

ಅವರು ಹೇಳತೊಡಗಿದರು. ‘ನಮ್ಮ ಸಂಸ್ಕೃತಿಯೇ ಬೇರೆ. ಪರ್ವತ, ಹರಿಯುವ ಝರಿ, ಮುಗಿಲಿನಲ್ಲಿ ಕುಳಿತ ನಕ್ಷತ್ರಗಳು, ಇಲ್ಲಿ ನೆಲೆಸಿರುವ ಸಕಲ ಜೀವಿಗಳನ್ನು ನಾವು ನಮ್ಮ ಪೂರ್ವಜರೆಂದು ಗೌರವಿಸುತ್ತೇವೆ.

2019ರಲ್ಲಿ ಕೇಂದ್ರಾಡಳಿತ ಪ್ರದೇಶವೆಂದು ವಿಭಜಿಸಿ, ಚುನಾವಣಾ ಪ್ರಣಾಳಿಕೆಯಲ್ಲಿ 371ರ 6ನೇ ವಿಧಿಯನ್ನು ನೀಡಿ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡುವುದಾಗಿ ಹೇಳಿದ್ದರು. ಈಗ ಆ ಬಗ್ಗೆ ದೆಹಲಿಯವರು ಏನೂ ಮಾತನಾಡುತ್ತಿಲ್ಲ. ಆಡುವ ಮಾತಿಗೆ ನೀಡಿದ ಭರವಸೆಗಳಿಗೆ ಬೆಲೆಯೇ ಇಲ್ಲವೇ?

ನಮ್ಮ ಸಂಸ್ಕೃತಿಯಲ್ಲಿ ಭೂಮಿ ಕೊಳ್ಳಬಹುದಾದ ಅಥವಾ ಮಾರಬಹುದಾದ ವಸ್ತುವೇ ಅಲ್ಲ. ಇರುವ ಕನಿಷ್ಠ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸಿ ಸುಸ್ಥಿರ ಬದುಕನ್ನು ನಾವು ಇಲ್ಲಿ ಕಂಡುಕೊಂಡಿದ್ದೇವೆ...

ಯಾವುದೋ ನೆಲೆಯಿಂದ ಬಂದ ಕಮಿಷನರ್‌ಗಳು ಇಲ್ಲಿ ಅಧಿಕಾರ ನಡೆಸಿದರೆ ಹೇಗೆ? ಅವರು ಒಳ್ಳೆಯವರೇ ಆಗಿರಬಹುದು. ಆದರೆ ಒಂದು ಸಂಸ್ಕೃತಿಗೆ ಅಸಂವೇದಿಯಾದ ಮನಸ್ಸುಗಳು ಅನಾಹುತಗಳನ್ನೇ ಸೃಷ್ಟಿಸುತ್ತವೆ.

ಲಡಾಖ್‌ನ 4 ಸಾವಿರ ಚ.ಕಿ.ಮೀ. ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ. ಅದರ ಮಗ್ಗುಲ್ಲಲ್ಲಿರುವ 40 ಸಾವಿರ ಎಕರೆ ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗಾಗಿ ಸರ್ಕಾರ  ಎಸ್‌ಸಿಸಿಐ ಕಂಪನಿಗೆ ನೀಡಿದೆ. ಈ ಪ್ರದೇಶದ ವಿಸ್ತಾರವಾದ ಹುಲ್ಲುಗಾವಲಿನಲ್ಲಿ ವಿಶ್ವಪ್ರಸಿದ್ಧ ‘ಪಶ್ಮೀನಾ’ ತುಪ್ಪಳ ಕೊಡುವ ಮೇಕೆ ಸಾಕಾಣಿಕೆ ಮಾಡಿಕೊಂಡಿದ್ದ ಜಂಗ್‌ಫಾ ಜನಾಂಗ ಈಗ ಬೀದಿಪಾಲಾಗಿದೆ. ಇದರಿಂದ ಪುರಾತನ ಸಂಸ್ಕೃತಿಯೊಂದು ಆತ್ಮಹತ್ಯೆಗೆ ಸಿದ್ಧವಾಗಿದೆ. ಇದಕ್ಕೆ ಯಾರನ್ನು ಹೊಣೆ ಮಾಡುವುದು...?

ಗಣಿಗಾರಿಕೆಯ ವಿಷಯಕ್ಕೆ ಬಂದರೆ, ಕಾರ್ಪೋರೇಟ್ ಉದ್ಯಮಿಗಳು ಪರ್ವತಗಳನ್ನು ಕೆಡವಿ ಲೀಥಿಯಂ ಅಥವಾ ಚಿನ್ನವನ್ನೇ ಬಾಚಬಹುದು, ಇದನ್ನು ಅಭಿವೃದ್ಧಿ ಎಂದು ಕರೆಯಬಹುದು. ಆದರೆ, ಇವೆಲ್ಲಾ ಕೇವಲ ಕ್ಷಣಿಕ ಲಾಭ ತರುವ ದೂರದೃಷ್ಟಿಯಿಲ್ಲದ ಆಲೋಚನೆಗಳು. ಈ ಪರ್ವತಗಳು ಬೃಹದಾಕಾರವಾಗಿ ಕಂಡರೂ ಅತ್ಯಂತ ಸೂಕ್ಷ್ಮ, ಅಡಿಪಾಯವಿಲ್ಲದೆ ನಿಂತಿರುವ ಮರಳುಗುಡ್ಡಗಳಂತೆ. ಅಲ್ಲದೆ ಗಣಿಗಾರಿಕೆಯಿಂದ ಹೊರಬರುವ ಇಂಗಾಲ ಮತ್ತು ದೂಳಿನ ಕಣಗಳು ಪರ್ವತಗಳ ನೆತ್ತಿಯಲ್ಲಿರುವ ಹಿಮಗಡ್ಡೆಗಳ ಕರಗುವಿಕೆಯನ್ನು ಹಲವು ಪಟ್ಟು ಹೆಚ್ಚಿಸುತ್ತವೆ. ಇದರಿಂದಾಗುವ ದುರ್ಘಟನೆಗಳ ಸರಮಾಲೆಯನ್ನು ಊಹಿಸಲಸಾಧ್ಯ. ಇದೇ ಹಿಮಗಡ್ಡೆಗಳಿಂದ ಹುಟ್ಟುವ ಹಲವಾರು ನದಿಗಳು, ಹಲವಾರು ರಾಜ್ಯಗಳನ್ನು ದಾಟಿ ಸಾಗುತ್ತವೆ. ಇದರ ಮೌಲ್ಯವನ್ನು ಎಂದಾದರೂ ಅಂದಾಜಿಸುವುದು ಸಾಧ್ಯವೇ?’

ವಾಂಗ್‌ಚುಕ್ ಅವರ ಆತಂಕ ನಮಗೆ ಅರಿವಾಗತೊಡಗಿತು. ಸ್ಮಾರ್ಟ್‌ಫೋನ್‌ಗೆ ಅತ್ಯಗತ್ಯವಾದ ಕೋಲ್ಟಾನ್ ಖನಿಜಕ್ಕೆ ಕಾಂಗೊ ದೇಶ ಬಲಿಯಾದದ್ದು, ಇದೇ ರೀತಿ ವಜ್ರದ ಗಣಿಗಾರಿಕೆಗೆ ದಕ್ಷಿಣ ಆಫ್ರಿಕಾ ಆಹುತಿಯಾದದ್ದು, ದಕ್ಷಿಣ ಅಮೆರಿಕದಿಂದ ಮೊಂಗೋಲಿಯಾ, ತಾಸ್ಮೆನಿಯಾವರೆಗೆ ಜರುಗಿದ ಅನಾಹುತಗಳು, ಎಲ್ಲವೂ ನೆನಪಿಗೆ ಬಂದವು. ಆಧುನಿಕ ಪ್ರಪಂಚದಲ್ಲಿ ಕಾರ್ಪೊರೇಟ್ ಕಂಪನಿಗಳ ದುರಾಸೆಗಳಿಗೆ ಆಹುತಿಯಾದ ಬುಡಕಟ್ಟು ಜನರ ಸಂಸ್ಕೃತಿಗಳು, ಛಿದ್ರವಾದ ಪರಿಸರದ ಅಧ್ಯಾಯಗಳೆಲ್ಲ ನೆನಪಾಗತೊಡಗಿದವು.

ಮನುಕುಲದ ದೊಡ್ಡ ದುರಂತವೆಂದರೆ ಚರಿತ್ರೆಯಿಂದ ಕಲಿಯಲು ನಿರಾಕರಿಸುವುದು. ವಿಜ್ಞಾನವನ್ನು ತಿರಸ್ಕರಿಸುತ್ತಾ, ಸ್ಥಳೀಯ ವಿವೇಕಕ್ಕೆ ಕಿವಿಗೊಡದೆ ಮನಸೋ ಇಚ್ಛೆ ತೀರ್ಮಾನಗಳನ್ನು ಕೈಗೊಳ್ಳುವುದು. ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಮುಖ್ಯ ವಿಷಯವೆಂದರೆ, ಇಂತಹ ಸಂಚುಗಳಿಗೆ ಮೊದಲು ಬಲಿಯಾಗುವುದು ಮೂಲನಿವಾಸಿಗಳು ಮತ್ತು ಅವರ ಪರಿಸರ. ಲಡಾಖ್ ವಿಷಯದಲ್ಲಿ ಆಗುತ್ತಿರುವುದು ಕೂಡ ಇದೆ.

ಭಾರವಾದ ಹೃದಯದಿಂದ ಹೊರಟು ನಿಂತ ನಮ್ಮನ್ನು ಚಾಲಕ ‘ನೋರ್ಬು’ ವಿಮಾನನಿಲ್ದಾಣಕ್ಕೆ ಬಿಡಲು ಬಂದ. ಹಣ ನೀಡಲು ಮುಂದಾದಾಗ, ನಿರಾಕರಿಸಿ, ‘ದಯವಿಟ್ಟು ಮತ್ತೊಮ್ಮೆ ಬನ್ನಿ’ ಎಂದು ಒದ್ದೆಯಾದ ಕಣ್ಣುಗಳೊಂದಿಗೆ ಅಲ್ಲಿಂದ ಮರೆಯಾದ.

ಸೋನಂ ವ್ಯಾಂಗ್‌ಚುಕ್‌
ಸತ್ಯಾಗ್ರಹವೂ ಇವರಿಗೆ ಪ್ರಾರ್ಥನೆಯೇ
ಸತ್ಯಾಗ್ರಹವೂ ಇವರಿಗೆ ಪ್ರಾರ್ಥನೆಯೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.