ADVERTISEMENT

ಪರಿಸರ ಸ್ನೇಹಿ ದೀಪಾವಳಿ– ಸೆಲಿಬ್ರಿಟಿಗಳ ಮಾತು

ಬೇಡ ಮಾಲಿನ್ಯಕ್ಕೆ ಕೊಡುಗೆ: ನೀಡಿ ಪರಿಸರಕ್ಕೆ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 19:31 IST
Last Updated 25 ಅಕ್ಟೋಬರ್ 2019, 19:31 IST
   

ದೀಪಾವಳಿ’ಬೆಳಕಿನ ಹಬ್ಬ. ಸಾಲು ದೀಪಗಳನ್ನು ಹಚ್ಚಿ ಸಂಭ್ರಮಿಸಬೇಕಾದ ಈ ಹಬ್ಬದಲ್ಲಿ, ನೆಲದಿಂದಿಡಿದು ಮುಗಿಲೆತ್ತರಕ್ಕೆ ಚಿಮ್ಮಿ ಸಿಡಿಯುವ ಪಟಾಕಿಗಳ ಅಬ್ಬರವೇ ಹೆಚ್ಚು. ಇದರಿಂದ ಹೊಗೆಯ ಮಾಲಿನ್ಯ ವನ್ನು ಪರಿಸರಕ್ಕೆ ಮತ್ತೊಂದು ಕೊಡುಗೆಯಾಗಿ ನೀಡಲಾಗುತ್ತಿದೆ.

ಪರಿಸರವನ್ನು ಕಾಪಾಡಿಕೊಳ್ಳುವಲ್ಲಿ ಪಟಾಕಿಯನ್ನು ಬದಿಗಿರಿಸಿ ನಾವೊಂದು ಉಡುಗೊರೆ ಕೊಡೋಣ, ದೀಪದ ಬೆಳಕಿನ ಸಂಭ್ರಮ ಆಚರಿಸೋಣ ಎಂದಿದ್ದಾರೆ ಉತ್ತರ ಕರ್ನಾಟಕದ ತಾರೆಯರು. ಜಾಗತಿಕ ತಾಪಮಾನ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ, ಪಟಾಕಿ ಸೂಸುವ ಮಾಲಿನ್ಯ ಹಾಗೂ ಶಬ್ದದ ಪರಿಣಾಮ ವರ್ಣಾತೀತ.

ಮಾಲಿನ್ಯರಹಿತ ಹಾಗೂ ಕಿವಿಗಡಚಿಕ್ಕುವ ಶಬ್ದವಿಲ್ಲದ ಹಬ್ಬದ ಆಚರಣೆಯೂ ಸಾಧ್ಯವಿದೆ ಎಂದು ಸೆಲೆಬ್ರಿಟಿಗಳು ಓದೇಶ ಸಕಲೇಶಪುರ ಅವರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

**

ಶಾಸ್ತ್ರಕ್ಕಷ್ಟೇ ಪಟಾಕಿ ಇರಲಿ
ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಜಗತ್ತಿನ ಭೂತಗಳಾಗಿ ಕಾಡುತ್ತಿವೆ. ಹಾಗಾಗಿ, ಇವೆರಡಕ್ಕೂ ಹೊರತಾದ ದೀಪಾವಳಿಯನ್ನು ನಾವು ಆಚರಿಸಬೇಕಿದೆ. ಇದರಿಂದ ನಮ್ಮನ್ನು ಹೊತ್ತು ಪೊರೆಯುತ್ತಿರುವ ಪ್ರಕೃತಿಗೂ ಒಳಿತು. ಹಾಗಾಗಿ, ಶಾಸ್ತ್ರಕ್ಕಷ್ಟೇ ಪಟಾಕಿ ಹಚ್ಚಿ, ದೀಪಗಳನ್ನು ಬೆಳಗೋಣ.

ಮಾಲಿನ್ಯ ರಹಿತ ದೀಪಾವಳಿ ಆಚರಣೆಯನ್ನು ಈಗಿನಿಂದಲೇ ಮಕ್ಕಳ ಮನಸ್ಸಿನಲ್ಲಿ ಬಿತ್ತೋಣ. ಒಂದು ದಿನದ ಖುಷಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರದಿರಲಿ. ಸಂಭ್ರಮದ ಹೆಸರಿನಲ್ಲಿ ಪಟಾಕಿ ಹಚ್ಚುವಾಗ ಯಾರೂ ಕಣ್ಣು ಕಳೆದುಕೊಳ್ಳಬಾರದು, ಮೈ–ಕೈ ಸುಟ್ಟುಕೊಳ್ಳಬಾರದೆಂದರೆ ಎಲ್ಲರೂ ಪರಿಸರಕ್ಕೆ ಪೂರಕವಾದ ದೀಪಾವಳಿ ಆಚರಿಸೋಣ.


-ಶರಣ್, ನಟ

**

ದೀಪಗಳ ಹಬ್ಬವಾಗಲಿ
ದೀಪಾವಳಿ ಹಬ್ಬ ಎಂದರೆ, ಪಟಾಕಿ ಎಂಬಂತಾಗಿದೆ. ಚಿಕ್ಕವಳಿದ್ದಾಗ ಹೆಚ್ಚು ಪಟಾಕಿ ಹಚ್ಚುತ್ತಿದ್ದೆ. ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಪ್ರಕೃತಿ ಮೇಲೆ ಬೀರುವ ಪರಿಣಾಮ ಗೊತ್ತಾದಾಗಿನಿಂದ, ಪಟಾಕಿ ಹಚ್ಚುವುದನ್ನು ನಿಲ್ಲಿಸಿದ್ದೇನೆ. ನಮ್ಮ ಮನೆಯಲ್ಲಿ ದೀಪಾವಳಿ ಅಂದರೆ, ದೀಪಗಳ ಹಬ್ಬವಷ್ಟೇ. ಪಟಾಕಿಗೆ ಹತ್ತು ವರ್ಷದಿಂದ ಗುಡ್‌ಬೈ ಹೇಳಿದ್ದೇವೆ.

ದೀಪಾವಳಿ ಆಚರಣೆಯ ಒಂದು ದಿನದ ಮಾಲಿನ್ಯ, ಒಂದು ತಿಂಗಳ ಮಾಲಿನ್ಯಕ್ಕೆ ಸಮವಾಗಿರುತ್ತದೆ. ಹಾಗಾಗಿ, ಪಟಾಕಿರಹಿತ ಹಬ್ಬಕ್ಕೆ ಎಲ್ಲರೂ ಸಾಕ್ಷಿಯಾಗುವ ಮೂಲಕ, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ಸಂಭ್ರಮಿಸೋಣ.


– ಮೇಘನಾ ಗಾಂವ್ಕರ್, ನಟಿ

**

ಪಟಾಕಿ ದುಡ್ಡುಸೇವೆಗೆ ಬಳಸೋಣ
ವರ್ಷವಿಡೀ ಕೂಡಿಟ್ಟ ಹಣವನ್ನು ಪಟಾಕಿ ಹೆಸರಿನಲ್ಲಿ ಪೋಲು ಮಾಡುವುದನ್ನು ನೋಡುತ್ತಲೇ ಇರುತ್ತೇವೆ. ಒಂದು ದಿನದ ಸಂಭ್ರಮ, ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರದಿರಲಿ.

ಪಟಾಕಿಗಾಗಿ ವೆಚ್ಚ ಮಾಡುವ ಹಣದಲ್ಲಿ ಬಡವರ ಅಥವಾ ಅನಾಥರ ಸೇವೆ ಮಾಡೋಣ. ಮನೆಯವರೆಲ್ಲರೂ ಸಸಿ ನೆಟ್ಟು ಸಂಭ್ರಮಿಸೋಣ. ಹಬ್ಬದ ಹೆಸರಿನಲ್ಲಿ ಪಟಾಕಿ ಬೆಳಕಿಗಿಂತ ದೀಪಗಳೇ ಹೆಚ್ಚಾಗಿ ಬೆಳಗಲಿ. ಆ ಮೂಲಕ, ನಮ್ಮೊಳಗಿನ ಅಜ್ಞಾನ ಅಳಿದು, ಜ್ಞಾನ ಮೂಡಲಿ.


-ನಯನಾ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟಿ

**

ಆಚರಣೆ ಅಡಚಣೆಯಾಗದಿರಲಿ
ದೀಪಾವಳಿಯಲ್ಲಿ ದೀಪಗಳ ಬೆಳಕಿನ ಪ್ರಖರಕ್ಕಿಂತ, ಪಟಾಕಿಯ ಕಿಡಿ ಹಾಗೂ ಶಬ್ದವೇ ಹೆಚ್ಚಾಗುತ್ತಿದೆ. ಕಿವಿಗಡಚಿಕ್ಕುವ ಪಟಾಕಿಯ ಶಬ್ದಕ್ಕೆ ರೋಗಿಗಳು, ವಯಸ್ಕರು, ಪ್ರಾಣಿ, ಪಕ್ಷಿ ಹಾಗೂ ಕೀಟಗಳಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಇನ್ನು ಆಕಾಶದೊಡಲು ಸೇರುವ ಮಾಲಿನ್ಯ, ಮನುಷ್ಯನಿಗೇ ಪ್ರತಿಕೂಲವಾಗಿ ಕಾಡುತ್ತದೆ ಎಂಬ ಅರಿವು ನಮಗಿರಬೇಕು.

ಹೆಚ್ಚು ಶಬ್ದ ಮಾಡದ ಹಾಗೂ ನಮ್ಮ ಉಸಿರು ಕಾಯುವ ಗಾಳಿಯನ್ನು ಮಲೀನಗೊಳ್ಳದ ಹಾಗೆ ಹಬ್ಬವನ್ನು ಆಚರಿಸಬೇಕಿದೆ. ಹಾಗಾಗಿ, ದೀಪಾವಳಿಯಲ್ಲಿ ಪಟಾಕಿ ಶಬ್ದಕ್ಕಿಂತ, ನಗು ಮತ್ತು ಸಂಭ್ರಮ ಹೆಚ್ಚಾಗಿ ಮೊಳಗಲಿ.


– ಪೂಜಾ, ‘ತಿಥಿ’ ಖ್ಯಾತಿಯ ನಟಿ

**

ಮಾಲಿನ್ಯರಹಿತ ಸಂಭ್ರಮವಿರಲಿ
ದೀಪಾವಳಿ ಅಂದರೆ, ಪಟಾಕಿ ಎನ್ನುವಂತಹ ಸ್ಥಿತಿ ಇತ್ತೀಚೆಗೆ ನಿರ್ಮಾಣವಾಗಿದೆ. ಅದರಾಚೆಗೂ ಇರುವ ಆಚರಣೆ ಹಾಗೂ ಸಂಭ್ರಮ ಮಸುಕಾಗುತ್ತಿದೆ. ಹಬ್ಬದ ಹೆಸರಿನಲ್ಲಷ್ಟೇ ಅಲ್ಲದೆ, ಯಾವ ಸಂದರ್ಭದಲ್ಲೂ ಪಟಾಕಿ ಹಚ್ಚದಿರುವುದು ಸದ್ಯದ ಸ್ಥಿತಿಯಲ್ಲಿ ಒಳ್ಳೆಯದು.

ಹೊಸ ಬಟ್ಟೆ ಧರಿಸಿ, ದೀಪಗಳನ್ನು ಹಚ್ಚಿ, ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರೊಂದಿಗೆ ಹಬ್ಬವನ್ನು ಸಂಭ್ರಮಿಸೋಣ. ಮುರಿದ ಸಂಬಂಧಗಳ ಕಟ್ಟೋಣ. ಯಾವುದೇ ಕಾರಣಕ್ಕೂ ಹಬ್ಬದ ಹೆಸರಿನಲ್ಲಿ ಮಾಲಿನ್ಯ ಮಾಡುವುದಿಲ್ಲ ಎಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡೋಣ.


– ನವೀನ್ ಶಂಕರ್, ‘ಗುಳ್ಟು ಖ್ಯಾತಿಯ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.