ADVERTISEMENT

EXPLAINER- ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಮಾಯಾಜಾಲ..! ಏನಿದರ ಮರ್ಮ?

ರಾಯಿಟರ್ಸ್
Published 2 ಜುಲೈ 2024, 11:14 IST
Last Updated 2 ಜುಲೈ 2024, 11:14 IST
<div class="paragraphs"><p>ದೆಹಲಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಲ್ಲಿ ಜಲಾವೃತಗೊಂಡ ರಸ್ತೆಯನ್ನು ದಾಟುತ್ತಿರುವ ಚಿಣ್ಣರು</p></div>

ದೆಹಲಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಲ್ಲಿ ಜಲಾವೃತಗೊಂಡ ರಸ್ತೆಯನ್ನು ದಾಟುತ್ತಿರುವ ಚಿಣ್ಣರು

   

ರಾಯಿಟರ್ಸ್ ಚಿತ್ರ

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಬಿಸಿಲ ಝಳ ಹಾಗೂ ಶಾಖಾಘಾತಕ್ಕೆ ಒಳಗಾಗಿದ್ದ ರಾಷ್ಟ್ರರಾಜಧಾನಿ ದೆಹಲಿಯ ಜನತೆ ಇದನ್ನು ಸಹಿಸಿಕೊಳ್ಳುವ ಹೊತ್ತಿಗೇ 88 ವರ್ಷಗಳಲ್ಲೇ ದಾಖಲೆಯ ಮಳೆ ಸುರಿದು ಮತ್ತಷ್ಟು ಹೈರಾಣಾಗಿಸಿತು. 

ADVERTISEMENT

24 ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮೇಲ್ಛಾವಣಿ ಕುಸಿಯಿತು, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. ಮೆಟ್ರೊ ನಿಲ್ದಾಣಗಳು ಬಂದ್ ಆದವು. ಅಂಡರ್‌ಪಾಸ್‌ಗಳಲ್ಲಿ ನೀರು ರಭಸದಿಂದ ಹರಿಯಿತು, ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್‌. 

ಹಾಗಿದ್ದರೆ ದೆಹಲಿಯಲ್ಲಿ ಆಗಿದ್ದೇನು?

ದೆಹಲಿಯ ಸಫ್ದರ್‌ಜಂಗ್ ಮುಖ್ಯ ಹವಾಮಾನ ಕೇಂದ್ರದಲ್ಲಿ ದಾಖಲಾದಂತೆ ಜೂನ್ 28ರಂದು 22.81 ಸೆಂ.ಮೀ. (9 ಇಂಚುಗಳ) ಮಳೆ ಸುರಿದಿದೆ. ಇಲಾಖೆಯ ದಾಖಲೆಗಳಂತೆ ದೆಹಲಿಯಲ್ಲಿ ಜೂನ್ ತಿಂಗಳಲ್ಲಿ ಸುರಿದ ಮಳೆಯ ದಾಖಲೆಗಳಲ್ಲಿ ಇದು 88 ವರ್ಷಗಳಲ್ಲೇ ಅತ್ಯಧಿಕ ಎಂದು ಹೇಳಲಾಗಿದೆ.

ದೆಹಲಿ ವಿಮಾನ ನಿಲ್ದಾಣದ ಸುತ್ತ ಮೂರು ಗಂಟೆಗಳಲ್ಲಿ 14.85 ಸೆಂ.ಮೀ. (5.85 ಇಂಚು) ಮಳೆ ಸುರಿದಿದೆ. 2023ರ ಜೂನ್‌ನಲ್ಲಿ 10.17 ಸೆಂ.ಮೀ. (4 ಇಂಚು) ಮಳೆಯಾಗಿತ್ತು.

ಮುಂಗಾರು ಋತುವಿನಲ್ಲಿ ಮಳೆಯು ಮೇ ಕೊನೆಯ ವಾರದಲ್ಲಿ ದಕ್ಷಿಣದ ತುದಿಯಿಂದ ಆರಂಭಗೊಂಡು ನಿಧಾನವಾಗಿ ಉತ್ತರದತ್ತ ಸಾಗುತ್ತದೆ. ಜೂನ್ ಕೊನೆಯ ವಾರದವರೆಗೂ ದೆಹಲಿ ಸಹಿಸಲಸಾಧ್ಯ ಸೆಖೆಯಿಂದ ಬಳಲಿತ್ತು. ನಿರಂತರ 40 ದಿನಗಳ ಕಾಲ 50 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ದೆಹಲಿ ಸಾಕ್ಷಿಯಾಗಿತ್ತು. ಕೆಲವೊಮ್ಮೆ ಇದು 50 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದೂ ಇದೆ.

ಬಿಸಿ ಗಾಳಿಯು ಜನರನ್ನು ಹೈರಾಣಾಗಿಸಿತ್ತು. ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು. ಯಮುನಾ ನದಿಯಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ದೆಹಲಿ ಸಚಿವೆ ಅತಿಶಿ ನಿರಶನ ಆರಂಭಿಸಿದ್ದರು. ಆದರೆ ಜೂನ್ 28ರಂದು ಸುರಿದ ಮಳೆ ತಂಪೆರೆಯುವ ಬದಲು, ಜನರ ಬದುಕನ್ನು ಮತ್ತಷ್ಟು ಹೈರಾಣಾಗಿಸಿತು.

ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ, ಮುಂಗಾರು ಆರಂಭವಾಗುವ ಪ್ರಕ್ರಿಯೆಯು ಒಂದು ವಾರ ಸ್ಥಗಿತಗೊಂಡಿತ್ತು. ಇದರಿಂದ ಉತ್ತರ ಭಾರತದಲ್ಲಿ ಮಳೆಯ ಸಾಧ್ಯತೆ ಕ್ಷೀಣಿಸಿ, ಬಿಸಿಲ ಝಳ ಹೆಚ್ಚಳವಾಗುವಂತೆ ಮಾಡಿತು. ಆದರೆ ಕಳೆದ ವಾರ ಗುಡುಗು, ಸಿಡಿಲು ಸಹಿತ ಸುರಿದ ಮಳೆ ಉತ್ತರದತ್ತ ಮಳೆ ತರಿಸುವ ಮೋಡಗಳನ್ನು ಮತ್ತೆ ಪಥಕ್ಕೆ ತಂದವು. ಇದರ ಪರಿಣಾಮ ಆರು ದಿನಗಳ ಮೊದಲೇ ಮುಂಗಾರು ಇಡೀ ದೇಶವನ್ನು ವ್ಯಾಪಿಸಿದೆ’ ಎಂದಿದ್ದಾರೆ.

ದೆಹಲಿಯಲ್ಲಿ ಜೂನ್ ತಿಂಗಳಲ್ಲಿ ತೀವ್ರ ಬಿಸಿಲಿನಿಂದಾಗಿ ನೀರಿಗೂ ಬರ ಎದುರಾಗಿದ್ದು, ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗಿತ್ತು

ಈ ವೈಪರೀತ್ಯವೇಕೆ?

ಭೂಮಿ ಮೇಲ್ಮೈನಲ್ಲಿ ಪ್ರತಿಯೊಂದು ಡಿಗ್ರಿ ತಾಪಮಾನ ಹೆಚ್ಚಳವಾದಂತೆಯೂ ವಾತಾವರಣದಲ್ಲಿರುವ ಗಾಳಿಯಲ್ಲಿನ ನೀರಿನ ಆವಿಯು ಶೇ 7ರಷ್ಟು ಹೆಚ್ಚಳವಾಗುತ್ತದೆ ಎಂದು 2022ರಲ್ಲಿ ನಾಸಾ ಪ್ರಕಟಿಸಿದ ಲೇಖನದಲ್ಲಿ ಹೇಳಲಾಗಿದೆ. ಇದರ ಪರಿಣಾಮ ಕೆಲವೇ ಸಮಯದಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಹೆಚ್ಚಿಸುತ್ತದೆ.

‘ಹವಾಮಾನ ಬದಲಾವಣೆಯಿಂದಾಗಿ ಇಂಥ ವಿಪರೀತ ಎನಿಸುವ ಮಳೆ ಸಾಮಾನ್ಯ. ಕಡಿಮೆ ದಿನಗಳಲ್ಲಿ ಅಥವಾ ಗಂಟೆಗಳಲ್ಲಿ ಹೆಚ್ಚು ಮಳೆ ಸುರಿಯುವ ಲಕ್ಷಣ ಇದು’ ಎಂದು ವಿಜ್ಞಾನ ಹಾಗೂ ಪರಿಸರ ವಿಷಯ ಕುರಿತ ಭಾರತೀಯ ಸಂಶೋಧನಾ ಕೇಂದ್ರದ ಡೈರೆಕ್ಟರ್ ಜನರಲ್‌ ಸುನಿತಾ ನರೇನ್‌ ಅವರು ತಿಳಿಸಿದ್ದಾರೆ.

‘ಇಡೀ ದೇಶದ ಮಳೆ ಮಾಪನ ಕೇಂದ್ರಗಳ ಮಾಹಿತಿಯನ್ನು ಅವಲೋಕಿಸಿದರೆ, 24 ಗಂಟೆಗಳಲ್ಲಿ ಭಾರೀ ಮಳೆ ಸುರಿದ ಕುರಿತು ವರದಿಯಾಗಿವೆ. ವರ್ಷದಲ್ಲಿ ಸುರಿಯಬೇಕಾದ ಮಳೆ ಒಂದೇ ದಿನದಲ್ಲಿ ಅಥವಾ ಕೆಲವೇ ದಿನಗಳಲ್ಲಿ ಸುರಿದಿರುವ ಕುರಿತು ಆಗಾಗ್ಗೆ ವರದಿಯಾಗುತ್ತಿದೆ’ ಎಂದಿದ್ದಾರೆ.

ದೆಹಲ್ಲಿ ಒಂದೇ ದಿನ ಸುರಿದ ಮಳೆಗೆ ಯುಮನಾ ನದಿ ಉಕ್ಕಿ ಹರಿದ ಪರಿಣಾಮ ಜನರು ಸುರಕ್ಷಿತ ಸ್ಥಳಗಳತ್ತ ಸಾಗಿದರು

ಅನಿಯಮಿತ ಮುಂಗಾರು ನಿರ್ವಹಣೆ ಹೇಗೆ?

ಕಳೆದ 40 ವರ್ಷಗಳಿಂದ ದೆಹಲಿಯಲ್ಲಿ ಹೀಗೆ ಅನಿಯಮಿತವಾಗಿ ಮಳೆ ಸುರಿಯುತ್ತಿದೆ. ಕೆಲವೊಮ್ಮೆ ಕೊರತೆ ಹಾಗೂ ಇನ್ನೂ ಕೆಲವೊಮ್ಮೆ ಅತ್ಯಧಿಕ ಮಳೆ ಸುರಿದ ಕುರಿತು ವರದಿಯಾಗಿವೆ. ಮಳೆ ಸುರಿಯುವ ದಿನಗಳ ಅಸಮರ್ಪಕ ಹಂಚಿಕೆಯಿಂದ ಜನಜೀವನ ಅಸ್ತವ್ಯಸ್ಥವಾಗಿವೆ. ಮೂಲಸೌಕರ್ಯ ಹಾಳಾಗುತ್ತಿದೆ. ಹೀಗಾಗಿ ಹವಾಮಾನ ಆಧಾರಿತ ಮೂಲಸೌಕರ್ಯ ಹಾಗೂ ಆರ್ಥಿಕತೆ ಹೊಂದುವುದು ಬಹಳಾ ಮುಖ್ಯ’ ಎಂದು ಇಂಧನ, ಪರಿಸರ ಹಾಗೂ ನೀರು ವಿಷಯ ಕುರಿತ ಭಾರತೀಯ ಥಿಂಕ್‌ ಟ್ಯಾಂಕ್‌ ಸಮಿತಿಯ ವಿಶ್ವಾಸ್ ಚಿಟಲೆ ಹೇಳಿದ್ದಾರೆ.

ಇದರೊಂದಿಗೆ ಹಸಿರು ಪ್ರದೇಶವನ್ನು ದೇಶವ್ಯಾಪಿ ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಹವಾಮಾನ ವೈಪರೀತ್ಯದಿಂದ ಏರುತ್ತಿರುವ ತಾಪಮಾನ ಕುರಿತು ಜನರಿಗೆ ತಿಳಿಸಬೇಕಿದೆ. ಕೆಲಸದ ಅವಧಿ ಹಾಗೂ ಶಾಲಾ ಕಾಲೇಜುಗಳ ಸಮಯವನ್ನು ಬದಲಿಸಬೇಕಿದೆ. 

ದೆಹಲಿ ಹಾಗೂ ಬೆಂಗಳೂರಿನಂತ ನಗರಗಳಲ್ಲಿ ಇಂಥ ಅನಿಯಮಿತವಾಗಿ ಸುರಿಯುವ ಮಳೆ ನೀರನ್ನು ಸಂಗ್ರಹಿಸಿ, ನೀರಿನ ಕೊರತೆ ನೀಗಿಸಲು ಹೆಚ್ಚು ಕೊಳಗಳು ಹಾಗೂ ಕೆರೆಗಳನ್ನು ನಿರ್ಮಿಸುವ ಅಗತ್ಯವಿದೆ. ಅತಿಯಾಗಿ ಮಳೆ ಸುರಿಯುವುದರಿಂದ ಸೃಷ್ಟಿಯಾಗುವ ಪ್ರವಾಹ ಪರಿಸ್ಥಿತಿ ಎದುರಿಸಲು ಪಾಲಿಕೆಗಳು ಉತ್ತಮ ಚರಂಡಿ ವ್ಯವಸ್ಥೆ ಹಾಗೂ ರಾಜಾಕಾಲುವೆಗಳನ್ನು ನಿರ್ಮಿಸುವ ಹಾಗೂ ಸಮರ್ಪಕವಾಗಿ ನಿರ್ವಹಿಸುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.