ADVERTISEMENT

‌ಡಾಡರ್ ಎಂಬ ಪರಾವಲಂಬಿ ಸಸ್ಯ

ಡಾ.ಎಸ್.ಶಿಶುಪಾಲ
Published 22 ಮೇ 2022, 19:30 IST
Last Updated 22 ಮೇ 2022, 19:30 IST
ಡಾಡರ್‌ ಗಿಡ  (ಚಿತ್ರ: ಲೇಖಕರದ್ದು)
ಡಾಡರ್‌ ಗಿಡ  (ಚಿತ್ರ: ಲೇಖಕರದ್ದು)   

ಸಾಮಾನ್ಯವಾಗಿ ಸಸ್ಯಗಳು ತಮ್ಮ ಆಹಾರವನ್ನು ತಾವೇ ಉತ್ಪಾದಿಸುತ್ತವೆ. ಎಲೆಗಳಲ್ಲಿರುವ ಪತ್ರಹರಿತ್ತು (Cholorophyll) ಎಂಬ ಹಸಿರು ವರ್ಣದ್ರವ್ಯವು ಸೂರ್ಯನ ಕಿರಣಗಳ ಶಕ್ತಿಯನ್ನು ಬಳಸಿಕೊಂಡು ಗಾಳಿಯಲ್ಲಿರುವ ಇಂಗಾಲದ ಡೈ ಆಕ್ಸೈಡ್‌ನ್ನು ಮತ್ತು ನೀರಿನಲ್ಲಿರುವ ಜಲಜನಕವನ್ನು ಪಡೆದು ಶರ್ಕರವನ್ನು ಉತ್ಪಾದಿಸುತ್ತದೆ. ಇದನ್ನು ದ್ಯುತಿಸಂಶ್ಲೇಷಣೆ (Photosynthesis) ಎನ್ನುವರು. ಹಾಗಾಗಿ ಎಲ್ಲಾ ಸಸ್ಯಗಳನ್ನು ಸ್ವಯಂಪೋಷಣೆ ಜೀವಿಗಳೆಂದು ಪರಿಗಣಿಸಲಾಗಿದೆ. ಆದ್ದರಿಂದ ಜಗತ್ತಿನ ಎಲ್ಲಾ ಜೀವಿಗಳು ಸಸ್ಯಗಳನ್ನೇ ಅವಲಂಬಿಸಿವೆ.

ಸಸ್ಯಗಳ ಬೆಳವಣಿಗೆ ಕುಂಠಿತವಾಗಲು ಹಲವಾರು ಜೈವಿಕ ಮತ್ತು ಅಜೈವಿಕ ಅಂಶಗಳಿವೆ. ಹಲವಾರು ಸೂಕ್ಷ್ಮ ಜೀವಿಗಳು ಮತ್ತು ಕೀಟಗಳು ಸಸ್ಯಗಳನ್ನು ತಿಂದು ಹಾಳುಮಾಡುತ್ತವೆ. ಕೆಲವು ಪರವಾಲಂಬಿ ಸಸ್ಯಗಳು ಇತರೆ ಸಸ್ಯಗಳ ಆಸರೆಯಲ್ಲಿಯೇ ಜೀವನ ನಡೆಸುತ್ತವೆ. ಅಂತಹ ಒಂದು ಸಸ್ಯವೇ ಡಾಡರ್. ಇದನ್ನು ಸಸ್ಯಶಾಸ್ತ್ರೀಯವಾಗಿ ಕಸ್ಕ್ಯುಟ (Cuscuta) ಎಂದು ಕರೆಯುತ್ತಾರೆ. ಇದರಲ್ಲಿ ಸುಮಾರು 200 ಪ್ರಬೇಧಗಳನ್ನು ಗುರುತಿಸಲಾಗಿದೆ. ಇವೆಲ್ಲವೂ ಕನ್ವಾಲ್ಯುಲೆಸಿ ಕುಟುಂಬದ ಸದಸ್ಯರು.

ಸಸ್ಯಗಳ ಸ್ವಯಂಪೋಷಣೆಗೆ ಅಪವಾದವೆಂಬಂತೆ ಹಲವಾರು ಸಸ್ಯಗಳು ಪರಾವಲಂಬಿ ಜೀವನ ನಡೆಸುತ್ತವೆ. ಡಾಡರ್ ಒಂದು ಸಂಪೂರ್ಣ ಪರವಾಲಂಬಿ ಸಸ್ಯವಾಗಿದ್ದು ಆಹಾರ ತಯಾರಿಕೆಯ ಕ್ಷಮತೆ ಇಲ್ಲದೆ ಅಧಿಸಸ್ಯವಾಗಿ (Epiphyte) ಬೆಳೆಯುತ್ತದೆ. ಈ ಸಸ್ಯದಲ್ಲಿ ಎಲೆಗಳಿಲ್ಲ. ಆಹಾರ ತಯಾರಿಕೆಗೆ ಬೇಕಾದ ಪತ್ರಹರಿತ್ತೂ ಇಲ್ಲ. ಆದರೆ ತನ್ನ ಅತಿಥೇಯ ಗಿಡದ ಅಂಗಾಶಗಳ ಜೀವಕೋಶಗಳೊಳಗೆ ತನ್ನ ವಿಶಿಷ್ಟ ಬೇರುಗಳಂತಹ ಹೀರುಪಾತ್ರೆ (ಹಾಸ್ಟೊರಿಯಾ) ಗಳನ್ನು ಬೆಳೆಸುತ್ತದೆ. ಇವು ಅತಿಥೇಯ ಸಸ್ಯ ತಯಾರು ಮಾಡಿದ ಆಹಾರವನ್ನು ಕಬಳಿಸಲು ಸಹಾಯ ಮಾಡುತ್ತವೆ. ಗಿಡ ಬೆಳೆದಂತೆ ಕಿತ್ತಳೆ-ಹಳದಿ ಬಣ್ಣದ ತೆಳುವಾದ ದಾರದಂತಹ ಕಾಂಡವು ಅತಿಥೇಯ ಗಿಡವನ್ನು ಎಲ್ಲಾ ಕಡೆಯಿಂದ ಆವರಿಸುತ್ತದೆ. ಕೆಲವೊಂದು ಪ್ರಭೇದಗಳಲ್ಲಿ ಕಾಂಡವು ತಿಳಿಗುಲಾಬಿ ಅಥವ ಕಂದು ಬಣ್ಣದ್ದಾಗಿರುತ್ತದೆ. ಬೇರೆಲ್ಲಾ ಅವೃತ ಬೀಜ (Angiosperm) ಸಸ್ಯಗಳಂತೆ ಡಾಡರ್ ಸಹ ಹೂವುಗಳನ್ನು ಬಿಡುತ್ತದೆ. ಸಣ್ಣ ಹಳದಿ ಅಥವಾ ಬಿಳಿ ಬಣ್ಣದ, ಗಂಟೆಯಾಕಾರದ ಗಂಟುಗಳಂತೆ ಕಾಣುವ ಹೂಗಳನ್ನು ಅರಳಿಸುತ್ತದೆ.

ADVERTISEMENT

ಮಣ್ಣಿನಲ್ಲಿ ಅಥವಾ ತನ್ನ ಅತಿಥೇಯ ಗಿಡಗಳ ಮೇಲೆ ಬಿದ್ದ ಡಾಡರ್ ಸಸ್ಯದ ಬೀಜಗಳು ಮೊಳಕೆಯೊಡೆದು ಮೊದಲಿಗೆ ಬೇರುಗಳನ್ನು ಬಿಡುತ್ತದೆ. ಅದು ಆ ಗಿಡದ ಕಾಂಡವನ್ನು ಗಟ್ಟಿಯಾಗಿ ಹಿಡಿದುಕೊಂಡ ನಂತರ ಡಾಡರ್ ಸಸ್ಯದ ತೆಳುವಾದ ಕಾಂಡವು ಟಿಸಿಲೊಡೆದು ಸುರುಳಿ ಸುರುಳಿಯಾಗಿ ಸುತ್ತುವರಿಯುತ್ತದೆ. ತನ್ನ ಕಾಂಡದಿಂದ ಮೊಳಕೆಯೊಡದಂತೆ ಬರುವ ಹೀರುಪಾತ್ರೆಗಳನ್ನು ಅತಿಥೇಯ ಗಿಡದ ಕಾಂಡದ ಅಂಗಾಂಶಗಳಿಗೆ ಕಳಿಸುತ್ತದೆ. ಆ ಸಸ್ಯದ ಅಕ್ಷದಿಂಡು (Steel) ವಿನಿಂದ ನೀರು ಮತ್ತು ಪೊಷಕಾಂಶಗಳನ್ನು ಹೀರುತ್ತದೆ. ಡಾಡರ್‌ನ ಬೇರುಗಳು ಕೊಳೆತು ಹೋಗುತ್ತವೆ. ಆದರೆ ಈಗಾಗಲೇ ಅತಿಥೇಯ ಗಿಡವನ್ನು ಆಕ್ರಮಿಸಿರುವ ಕಾಂಡವೇ ಬೇರಿನ ಕೆಲಸವನ್ನು ನಿರ್ವಹಿಸುತ್ತದೆ. ದಿನಕಳೆದಂತೆ ಅಕ್ಕಪಕ್ಕದ ಗಿಡಗಳನ್ನು ಆವರಿಸಿ ಅವುಗಳನ್ನು ತನ್ನ ಅತಿಥೇಯ ಗಿಡಗಳನ್ನಾಗಿ ಮಾಡಿಕೊಳ್ಳುತ್ತದೆ. ತನ್ನ ದಾರದಂತಹ ಕಾಂಡವನ್ನು ಜೇಡದ ಬಲೆಯಂತೆ ಹಬ್ಬಿಸುತ್ತಾ ಸಂಪೂರ್ಣವಾಗಿ ಅತಿಥೇಯ ಗಿಡವನ್ನು ಆಕ್ರಮಿಸಿಬಿಡುತ್ತದೆ.

ಅತಿಥೇಯ ಸಸ್ಯಗಳಾಗಿ ಆಲೂಗೆಡ್ಡೆ, ಹುರುಳಿಕಾಯಿ, ಸೆಣಬು, ಸೇವಂತಿಗೆ, ಡೇರೆ, ಕ್ಲೋವರ್, ನರಿಬಾಲದ ಹೊನ್ನೆ, ಲುಸರ್ನೆ ಸೊಪ್ಪು ಮುಂತಾದವುಗಳಿಗೆ ಗಣನೀಯವಾಗಿ ಹಾನಿ ಉಂಟುಮಾಡಬಲ್ಲದು. ನಮ್ಮ ಗದ್ದೆ ತೋಟಗಳಲ್ಲಿ ಅವಶ್ಯ ಸಸ್ಯಗಳ ಮೇಲೆ ಡಾಡರ್ ಬೆಳೆದಿರುವುದು ಕಾಣಿಸಿದರೆ ಅದನ್ನು ಕೈಯಿಂದ ಕಿತ್ತು ಸುಟ್ಟು ಹಾಕುವುದೊಂದೆ ಪರಿಹಾರೋಪಯ. ಇಲ್ಲದಿದ್ದರೆ ತನ್ನ ಕಬಂದ ಬಾಹುಗಳನ್ನು ಎಲ್ಲಾ ಕಡೆ ಚಾಚಿ ಆದಷ್ಟು ಹೆಚ್ಚು ಗಿಡಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಮರ್ಥ ಡಾಡರ್‌ಗೆ ಇದೆ.

ಆವೃತಬೀಜ ಸಸ್ಯವಾದರೂ ತನ್ನ ಜೀವನವೆಲ್ಲಾ ಬೇರೆ ಸಸ್ಯಗಳಲ್ಲಿ ಪರಾವಲಂಬಿಯಾಗಿ ಕಳೆಯುವಂತಹ ವಿಶಿಷ್ಟ ಸಸ್ಯವಿದು. ಪ್ರಕೃತಿಯ ಮೂಸೆಯಲ್ಲಿ ಹೊರಬಂದ ಜೀವವೈವಿಧ್ಯದಲ್ಲಿ ಇಂತಹ ಅನೇಕ ವಿಶೇಷಗಳನ್ನು ಗಮನಿಸಬಹುದು. ಪ್ರತಿಯೊಂದು ಜೀವಿಯೂ ಒಂದಕ್ಕೊಂದು ಅವಲಂಬಿಸಿಯೇ ಜೀವನದ ಸಾರ್ಥಕತೆ ಕಾಣುವುದು ಪ್ರಕೃತಿಯ ವಿಶಿಷ್ಟತೆ.

(ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.