‘ವಾಣಿಜ್ಯನಗರ’ ಎಂದೇ ಪ್ರಸಿದ್ಧಿ ಪಡೆದಹುಬ್ಬಳ್ಳಿ, ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲೂ ಸೇರಿಕೊಂಡಿದೆ. ಅಭಿವೃದ್ಧಿ ನೆಪದಲ್ಲಿ ಅದೆಷ್ಟೋ ಮರ–ಗಿಡಗಳನ್ನು ಈಗಾಗಲೇ ಧರೆಗುರುಳಿಸಿಬಿಡಲಾಗಿದೆ. ಸುಂದರ ಮರಗಳ ಸೌಂದರ್ಯ ಕಮರಿ ಅಕ್ಷರಶಃ ಕಾಂಕ್ರೀಟ್ ಕಾಡಾಗಿಬಿಟ್ಟಿದೆ. ಇಂತಹ ಸ್ಥಿತಿಯಲ್ಲಿ ಅಳಿದುಳಿದ ಮರ-ಗಿಡಗಳಿಗಾದರೂ ರಕ್ಷಣೆಯಿದೆಯೇ ಎಂಬ ಪ್ರಶ್ನೆಗೆ ಉತ್ತರ ‘ಇಲ್ಲ’ ಎಂಬುದೇ ಆಗಿದೆ.
ದಿನೇದಿನೆ ಜನಸಂಖ್ಯೆ ಹೆಚ್ಚಾದಂತೆ ಮಹಾನಗರ ಸಹ ಬೆಳೆಯುತ್ತಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಪೂರೈಸುವುದು ಸ್ಥಳೀಯ ಹಾಗೂ ಸರ್ಕಾರದ ಕರ್ತವ್ಯ. ಆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದರೆ ಆಡಳಿತದ ಕಣ್ಣಿಗೆ ತಕ್ಷಣ ಗೋಚರಿಸುವುದು ಮರಗಿಡಗಳು. ಹೌದು, ರಸ್ತೆ ಅಭಿವೃದ್ಧಿ ಮಾಡಬೇಕೆಂದರೂ ಅಕ್ಕಪಕ್ಕದ ಮರಗಳನ್ನೇ ಉರುಳಿಸುತ್ತಾರೆ. ಯಾವುದಾದರೂ ಬೃಹತ್ ಯೋಜನೆ ಅನುಷ್ಠಾನಗೊಳಿಸಬೇಕೆಂದರೂ ಅಡ್ಡಲಾಗಿರುವ ಮರ-ಗಿಡಗಳಿಗೇ ಕೊಡಲಿ ಹಾಕುತ್ತಾರೆ. ಹೀಗೆ ಮಹಾನಗರಗಳಲ್ಲಿ ಅಭಿವೃದ್ಧಿಯೆಂದರೆ ಅದು, ಮರ ಕಡಿಯುವುದು ಎನ್ನುವುದು ಸಾಮಾನ್ಯವಾಗಿದೆ.
ಅವಳಿನಗರದ ನಡುವೆ ಅನುಷ್ಠಾನಗೊಂಡಿರುವ ಬಿಆರ್‌ಟಿಎಸ್(ತ್ವರಿತ ಬಸ್ ಸಾರಿಗೆ) ಯೋಜನೆಗೆ ಈಗಾಗಲೇ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮರಗಿಡಗಳನ್ನು ಕಡಿದು, ಹಸಿರಿನ ತೋರಣದಂತಿದ್ದ ಮಾರ್ಗವನ್ನು ‘ಬಿರ್‌ಟಿಎಸ್ ಕಾರಿಡಾರ್’ ಎಂದು ಬದಲಾಯಿಸಿದೆ. ಅಷ್ಟೇ ಅಲ್ಲದೆ, ನಗರ ಪ್ರದೇಶದಲ್ಲಿನ ಒಳ ರಸ್ತೆ ಅಭಿವೃದ್ಧಿಗಾಗಿಯೂ ಸಾವಿರಾರು ಮರಗಳನ್ನು ಸದ್ದಿಲ್ಲದೆ ಕಡಿಯಲಾಗಿದೆ. ಇನ್ನೂ ಕಡಿಯಲು ಪ್ರಯತ್ನಗಳು ನಡೆಯುತ್ತಲೇ ಇವೆ.
ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡದ ಎದುರು ಇರುವ ಮರಗಳಿಗೂ ವಿಷಕಾರಿ ರಾಸಾಯನಿಕ ನೀಡಿ, ಹಂತಹಂತವಾಗಿ ಸಾಯಿಸಲಾಗುತ್ತಿದೆ. ಇಲ್ಲಿನ ವಿದ್ಯಾನಗರದಿಂದ ಶಿರೂರ ಪಾರ್ಕ್‌ವರೆಗಿನ ಮೂರು ಕಿ.ಮೀ. ದವರೆಗಿನ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಸುಮಾರು 60ಕ್ಕೂ ಅಧಿಕ ಮರಗಳನ್ನು, ರಸ್ತೆ ನಿರ್ಮಾಣಕ್ಕೆಂದು ಕಡೆಯಲಾಗಿದೆ. ಇದೀಗ ಅಂಚಟಗೇರಿಯಿಂದ ಅಂಕೋಲಾವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಲಕ್ಷದ ಲೆಕ್ಕಾಚಾರದಲ್ಲಿ ಮರ ಉರುಳಿಸುವ ಯೋಜನೆ ಕಣ್ಮುಂದೆಯೇ ಇದೆ. ದಿನದಿಂದ ದಿನಕ್ಕೆ ಮರಗಳನ್ನು ಕಡಿಯಲಾಗುತ್ತದೆಯೇ ಹೊರತು, ಅವುಗಳನ್ನು ಉಳಿಸಿಕೊಳ್ಳುವತ್ತ ಆಡಳಿತ ವರ್ಗದವರು ಯಾವ ಚಿಂತನೆಯನ್ನೂ ಮಾಡುತ್ತಿಲ್ಲ.
ಲಕ್ಷಾಂತರ ಮರ-ಗಿಡಗಳನ್ನು ಅಭಿವೃದ್ಧಿ ಹೆಸರಲ್ಲಿ ಹೋಮವೇನೋ ಮಾಡಿದ್ದಾರೆ. ಆದರೆ, ಅಲ್ಲಲ್ಲಿ ಅಳಿದುಳಿದ ಮರಗಳನ್ನಾದರೂ ರಕ್ಷಿಸಿಕೊಳ್ಳಬೇಕೆನ್ನುವ ಸಾಮಾನ್ಯ ಚಿಂತನೆಯೂ ಆಡಳಿತ ವರ್ಗಕ್ಕಿಲ್ಲ. ಸರ್ಕಾರಿ ಇಲಾಖೆಗಳೇ ಮರಗಳಿಗೆ ಮೊಳೆ ಹೊಡೆದು ಸಂಚಾರದ ಪಾಠ ಹೇಳುತ್ತವೆ ಎಂದರೆ, ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದು ಯೋಚಿಸಬಹುದು. ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದೆಯೇ ಎಂಬುವುದನ್ನು ಪ್ರಶ್ನಿಸಿಕೊಳ್ಳಬೇಕಾದ ಅನಿವಾರ್ಯವಿದೆ.
ದೊಡ್ಡ ದೊಡ್ಡ ವ್ಯಾಪಾರಸ್ಥರು ಲಾಭಕ್ಕಾಗಿ ಮಾರ್ಕೆಟ್ ಜಗತ್ತಿನಲ್ಲಿ ಜಾಹೀರಾತು ಮೊರೆ ಹೋಗುತ್ತಾರೆ. ಆದರೆ, ಕೆಲವರು ಮರಗಳನ್ನೇ ತಮ್ಮ ಜಾಹೀರಾತು ತಾಣವನ್ನಾಗಿಸಿಕೊಂಡಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿನ ಬಹುತೇಕ ಪ್ರದೇಶಗಳಲ್ಲಿರುವ ಮರಗಳಿಗೆ ಮೊಳೆ ಹೊಡೆದು ಜಾಹೀರಾತು ಪ್ರದರ್ಶಿಸಲಾಗಿದೆ. ಕೋಚಿಂಗ್, ರೂಮ್ ರೆಂಟ್, ಉದ್ಯೋಗಾವಕಾಶ, ಪಿಜಿ, ಮಸಾಜ್, ಸ್ಪೀಕಿಂಗ್ ಕೋರ್ಸ್, ಶಿಬಿರ, ಕರಾಟೆ, ಭರತನಾಟ್ಯಂ, ಸಂಗೀತ, ಡಾನ್ಸ್, ಪ್ರವಾಸ ಹೀಗೆ ನಾನಾ ವಿಧದ ಜಾಹೀರಾತುಗಳು ಮರಗಳ ಅಸ್ತಿತ್ವವನ್ನೇ ಅಲುಗಾಡಿಸುತ್ತಿವೆ. ಮೂಕರೋದನಕ್ಕೆ ಯಾರು ಸ್ಪಂದಿಸದಂತಹ ಬದುಕು ಮರಗಿಡಗಳದ್ದಾಗಿದೆ.
ಜೆಸಿ ನಗರದ ಅಜಂತಾ ಹೋಟೆಲ್ ಎದುರಿನ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಅಶೋಕನಗರ, ವಿದ್ಯಾನಗರ, ರಂಭಾಪುರಿ ಕಲ್ಯಾಣ ಮಂಟಪ ಸುತ್ತಮುತ್ತ, ಶಿರೂರ ಪಾರ್ಕ್ ಸುತ್ತಮುತ್ತ ರಸ್ತೆ, ಜೈನ್ ಕಾಲೇಜುರಸ್ತೆ, ಕೋರ್ಟ್ ವೃತ್ತದಿಂದ ಪ್ರವಾಸಿ ಮಂದಿರದ ಕಡೆ ತೆರಳುವ ರಸ್ತೆ, ಕೇಶ್ವಾಪುರ, ನಾಗಶೆಟ್ಟಿಕೊಪ್ಪ ರಸ್ತೆ ಹೀಗೆ ಬಹುತೇಕ ಕಡೆಗಳಲ್ಲಿನ ಮರಗಳಿಗೆ ಮೊಳೆ ಹೊಡೆದು, ಅವುಗಳ ಜೀವರಸವನ್ನೇ ತೆಗೆಯುತ್ತಿದ್ದಾರೆ. ಅಲ್ಲೋ ಇಲ್ಲೋ ಒಂದೆರಡು ಕಡೆ ಬದುಕಿದ್ದ ಮರಗಳನ್ನು ಕೂಡ ಸ್ವಾರ್ಥ ತುಂಬಿರುವ ಹಣದಾಯಿ ಮನಸ್ಸುಗಳು ಕೊಲ್ಲುತ್ತಿವೆ.
1976 ಪ್ರಿವೆನ್ಶಿಯನ್ ಟ್ರೀ ಆ್ಯಕ್ಟ್ ಪ್ರಕಾರ ಮರ-ಗಿಡಗಳಿಗೆ ಮೊಳೆ ಹೊಡೆಯುವುದು, ಅದರ ಬೆಳವಣಿಗೆಗೆ ತೊಂದರೆ ಕೊಡುವುದು, ಅದರ ಸಾವಿಗೆ ಕಾರಣವಾಗುವುದು ಕಾನೂನು ಪ್ರಕಾರ ಅಪರಾಧ. ಅಂತಹ ಘಟನೆಗಳು ಎಲ್ಲಿಯಾದರೂ ನಡೆದರೆ ಇದಕ್ಕೆ ಕಾರಣವಾದ ವ್ಯಕ್ತಿಯಿಂದ ಒಂದೊಂದು ಮರಕ್ಕೆ ₹5 ಸಾವಿರ ದಂಡ ವಸೂಲಿ ಮಾಡಬಹುದು. ಇಷ್ಟೇಲ್ಲಕಾನೂನುಗಳಿದ್ದರೂ ಅವುಗಳನ್ನು ಗಾಳಿಗೆ ತೂರಿಬಿಡಲಾಗಿದೆ. ಕಾನೂನು ರಕ್ಷಿಸುವವರ ಬೇಜವಾಬ್ದಾರಿಗೆ ಇದು ಒಂದು ಸಣ್ಣ ಉದಾಹರಣೆ.
ಮರಗಳ ರಕ್ಷಣೆ ಅರಣ್ಯ ಇಲಾಖೆಯ ಆದ್ಯ ಕರ್ತವ್ಯಗಳಲ್ಲಿಯೂ ಒಂದಾಗಿದೆ. ಆದರೆ, ವಾಣಿಜ್ಯ ನಗರಿಯಲ್ಲಿ ನೆಪ ಮಾತ್ರಕ್ಕೆಂಬಂತೆ ಅರಣ್ಯ ಇಲಾಖೆ ಇದೆಯೇ ಹೊರತು, ಅದು ಇಲ್ಲಿಯ ಒಂದೇ ಒಂದು ಮರಗಳ ರಕ್ಷಣೆಗೂ ಮುಂದಾಗುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿನಿತ್ಯ ಓಡಾಡುವ ರಸ್ತೆಯ ಅಕ್ಕಪಕ್ಕದಲ್ಲಿಯೇ ಮರಗಳನ್ನು ಹಾಳುಗೆಡುವುತ್ತಿದ್ದರೂ ಅದು ತಮಗೆ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಪರಿಸರ ರಕ್ಷಣೆ ಸಮಿತಿಗಳು ದೂರುತ್ತಾರೆ.
ಮರಗಳನ್ನು ಕಡಿಯುವುದು ಎಷ್ಟು ಅಪರಾಧವೋ ಇರುವ ಮರಗಳಿಗೆ ನೋವು ನೀಡುವುದು ಅಷ್ಟೇ ದೊಡ್ಡ ಅಪರಾಧ. ನಮ್ಮಂತೆ ಜೀವಿಸುವ ಮರಗಳು, ಮಾನವನಿಗೆ ಅಗತ್ಯವಾದ ಜೀವವಾಯುವನ್ನು ನೀಡುವ ಮರಗಳ ಉಸಿರಿಗೇ ಕಂಟಕವಾಗುವ ಇಂತಹ ‘ಮೊಳೆ–ಜಾಹೀರಾತು’ಗಳಿಗೆ ಕಡಿವಾಣ ಹಾಕಲೇಬೇಕಿದೆ.
*
ಮರಗಿಡಗಳ ನಾಶ ಮಾಡುತ್ತಿರುವ ಮನುಷ್ಯ ತನ್ನದೇ ವಿನಾಶಕ್ಕೆ ಕಾರಣವೆಂಬುದನ್ನು ಎಚ್ಚೆತ್ತುಕೊಳ್ಳಬೇಕಿದೆ. ಮೊಳೆ ಜಡಿಯುವುದು, ಕಡಿಯುವುದು ಮಾಡಿದರೆ ಮನುಷ್ಯನಂತೆ ಅವುಗಳಿಗೂ ನೋವಾಗುತ್ತೆ
-ಪುಷ್ಪ ಪಂಡಿತ ಮುಂಜಿ, ನಿವಾಸಿ
*
ಸತತ 30 ವರ್ಷಗಳಿಂದ ಮರಗಳ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇನೆ. ಮನುಷ್ಯನ ಸ್ವಾರ್ಥದಿಂದ ಅನೇಕ ಜಾತಿ ಮರಗಳು ಕಣ್ಮರೆಯಾಗಿವೆ. ಮರಗಳ ಉಳಿವಿಗಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು.
–ಶಂಕರ ಕುಂಬಿ, ಹುಬ್ಬಳ್ಳಿ–ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.