ಹಿರಿಯಡಕ: ಕುಂಬಾರಿಕೆಗೆ ವಿಶೇಷ ಉತ್ತೇಜನ ನೀಡುತ್ತ ಬಂದಿರುವ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘವು ಜಿಲ್ಲೆ ಹಾಗೂ ಹೊರಜಿಲ್ಲೆಗಳಲ್ಲಿ ‘ಕ್ಲೇ ಕಾರ್ಟ್ಸ್’ ಮಾರಾಟ ಮಳಿಗೆಯ ಮೂಲಕ ಪಾರಂಪರಿಕ ಮಣ್ಣಿನ ಪರಿಕರಗಳನ್ನು ತಯಾರಿಸಿ ಮಾರಾಟ ಮಾಡಿ ಯಶಸ್ವಿಯಾಗಿದಲ್ಲದೆ, ಈ ಪರಿಕರಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿದೆ.
ಉಡುಪಿಯ ಪೆರ್ಡೂರು, ಬ್ರಹ್ಮಾವರ, ಶಿರ್ವ, ಉಡುಪಿ ಹಾಗೂ ಶಿವಮೊಗ್ಗದಲ್ಲಿರುವ ಕ್ಲೇ ಕಾರ್ಟ್ಸ್ ಮಳಿಗೆಗಳಲ್ಲಿ ದಿನಬಳಕೆಯ ಪಾತ್ರೆಗಳು, ಆಲಂಕಾರಿಕ ವಸ್ತುಗಳು, ಮಣ್ಣಿನ ರೆಫ್ರಿಜರೇಟರ್, ಕೂಲರ್, ಕುಕ್ಕರ್, ದೀಪಸ್ತಂಭ, ಹೂಜಿ, ಬಾಣಲೆ, ಮಡಕೆ, ಬಿಸಲೆ, ಹಣತೆ, ಬಿಸಿ ನೀರಿನ ಸ್ನಾನಕ್ಕೆ ತಯಾರಿಸಿದ ನಾನಾ ಸೈಜಿನ ಹಂಡೆ, ಮಣ್ಣಿನ ಸಣ್ಣ ಮಡಕೆ, ಓಡು ದೋಸೆ ಕಾವಲಿ, ಅಳಗೆ, ಕಡಾಯಿ, ಹೂದಾನಿ ಮೊದಲಾದ 450ಕ್ಕೂ ಮಿಕ್ಕಿ ಮಣ್ಣಿನ ಪರಿಕರಗಳು ಇಲ್ಲಿ ಮಾರಾಟಕ್ಕೆ ಲಭ್ಯ ಇವೆ. ಸ್ಟೀಲ್ ಹಾಗೂ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಈ ಮಣ್ಣಿನ ಪರಿಕರಗಳನ್ನು ಬಳಸಬಹುದು.
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 60 ಕುಟುಂಬಗಳು ಕುಂಬಾರಿಕೆ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಅವರಿಂದ ತಯಾರಾದ ಮಣ್ಣಿನ ಪರಿಕರಗಳನ್ನು ಈ ಸಂಸ್ಥೆಯ ಮೂಲಕ ಮಾರಾಟ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಮೈಸೂರು ಹಾಗೂ ಬೆಂಗಳೂರಿನಲ್ಲಿ ಮಳಿಗೆ ಪ್ರಾರಂಭವಾಗಲಿದೆ.
1958ರಲ್ಲಿ ಮಡಿಕೆ ತಯಾರಕರ ಸಂಘ ಎಂಬ ಹೆಸರಿನಲ್ಲಿ ಪೆರ್ಡೂರು ದೇವಸ್ಥಾನದ ಮುಂಭಾಗ ಪ್ರಾರಂಭವಾದ ಸಂಸ್ಥೆಯ ಮೂಲಕ ಜಿಲ್ಲೆಯ ಕುಂಬಾರರಿಂದ ತಯಾರಿಸಿದ ಮಣ್ಣಿನ ಪರಿಕರಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. 1998ರಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಎಂಬ ಬದಲಾದ ಹೆಸರಿನೊಂದಿಗೆ ಈ ಸಂಸ್ಥೆಯು ಪರಿಣಿತ ಕುಂಬಾರಿಕೆ ಕೆಲಸಗಾರರ ಮೂಲಕ ಯಾವುದೇ ರಾಸಾಯನಿಕಗಳನ್ನು ಬಳಸದೇ ಪಾರಂಪರಿಕವಾದ ಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದೆ. ಕುಂಬಾರಿಕೆ ನಡೆಸುವ ಕುಟುಂಬಗಳನ್ನು ಗುರುತಿಸಿ ಅವರ ಕಾಯಕಕ್ಕೆ ಪೂರಕ ವಾತಾವರಣ, ತಂತ್ರಜ್ಞಾನ, ಆರ್ಥಿಕತೆ ಒದಗಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಮಣ್ಣಿನ ಪರಿಕರಗಳಿಗೆ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಸಂಘವು ಕಾರ್ಯೋನ್ಮುಖವಾಗಿದೆ. ಈ ಸಂಘದ ಮೂಲಕ 60 ವರ್ಷ ಮೇಲಿನವರಿಗೆ ಪಿಂಚಣಿ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್, ಆರೋಗ್ಯ ಯೋಜನೆಗಳನ್ನು ನೀಡಲಾಗು
ತ್ತಿದೆ. ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘ ಪೆರ್ಡೂರಿನಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಮಡಿಕೆ ಬೇಯಿಸುವ ಘಟಕವನ್ನು ಸ್ಥಾಪಿಸಲಾಗಿದೆ.
‘ಒಂದೇ ಸೂರಿನಡಿ ಮಣ್ಣಿನ ಪರಿಕರ’
ಎಲ್ಲ ವಿಧಗಳ ಮಣ್ಣಿನ ಪರಿಕರಗಳು ಒಂದೇ ಸೂರಿನಲ್ಲಿ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಆಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರೋಪಕರಣಗಳ ಮೂಲಕ ವಿವಿಧ ಬಗೆಯ ಮಣ್ಣಿನ ಉತ್ಪನ್ನಗಳನ್ನು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಸರ್ಕಾರದ ಸಹಕಾರ ಅಗತ್ಯವಿದೆ ಎಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಅಧ್ಯಕ್ಷ ಸಂತೋಷ್ ಕುಲಾಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.