ಅವರು ನೆಟ್ಟು ಬೆಳೆಸುವ ಸಸಿ ಮರವಾಗಿ ಚಪ್ಪರವಾಗುತ್ತದೆ. ಹಲವರಿಗೆ ನೆರಳಾಗುತ್ತಾ ಆಸರೆಯಾಗುತ್ತದೆ. ಗಿಡವನ್ನು ಎಲ್ಲರೂ ಬಾಗಿಸಬಹುದು, ಆದರೆ ಆ ವ್ಯಕ್ತಿ ಮರವನ್ನೇ ಬಗ್ಗಿಸುತ್ತಾರೆ. ಬೇಕಾದ ಆಕಾರವನ್ನೂ ಕೊಡುತ್ತಾರೆ...
‘ಮರವನ್ನೂ ಬೇಕಾದ ರೀತಿಯಲ್ಲಿ ಬಾಗಿಸಬಹುದಾ?’ ಎಂದು ಅಚ್ಚರಿಯಾಯಿತೇ?
ಹೌದು... ಇಂಥ ಪ್ರತಿಭಾವಂತ, ಪರಿಸರ ಪ್ರೇಮಿಯೊಬ್ಬರು ಮೈಸೂರಿನಲ್ಲಿ ಇದ್ದಾರೆ. ಅವರ ಹೆಸರು ಹೈದರ್ ಅಲಿ ಖಾನ್. ಇವರು ‘ಗ್ರೀನ್ ಖಾನ್’ ಎಂದೇ ಜನರಿಗೆ ಪರಿಚಿತರು. ಖಾನ್‌ಗೆ ಮರ ಬೆಳೆಸಿ ಅದನ್ನು ಚಪ್ಪರವಾಗಿಸುವುದೇ ತಪಸ್ಸು. ನೆಟ್ಟು ಬೆಳೆಸಿದ ಗಿಡ ಮರವಾಗಿ ಹಣ್ಣು ನೀಡಬೇಕು, ಮನುಷ್ಯನ ಅಲಂಕಾರಕ್ಕೆ ಹೂ ನೀಡಬೇಕು ಎನ್ನುವುದು ಅವರ ಉದ್ದೇಶವಲ್ಲ. ‘ನಾನು ನೆಟ್ಟ ಸಸಿ ನೆರಳು ನೀಡಬೇಕು. ಅದರ ಅಡಿಯಲ್ಲಿ ಜನ ಸೇರಬೇಕು. ಪರಿಸರವೂ ಚೆನ್ನಾಗಿರಬೇಕು’ ಎನ್ನುತ್ತಾರೆ ಹೈದರ್ ಅಲಿ ಖಾನ್. ಅವರ ಹಸಿರು ಚಪ್ಪರ ಕಾಯಕಕ್ಕೆ ಸುಮಾರು 21 ವರ್ಷ.
ಮೊದಲು ಚಪ್ಪರದ ರೀತಿಯಲ್ಲಿ ಬೆಳೆಸಲು ಪೂರಕವಾದ ಸಸಿಗಳನ್ನು ಸರಿಯಾದ ಅಂತರದಲ್ಲಿ ಬೆಳೆಸಿ ಪೋಷಿಸಿ, ನಿಗದಿತ ಎತ್ತರಕ್ಕೆ ಬೆಳೆದ ಬಳಿಕ ಮರದ ಕೊಂಬೆಗಳನ್ನು ಅಡ್ಡವಾಗಿ ಬೆಳೆಯಲು ಬಿಡುತ್ತಾರೆ. ರೆಂಬೆಗಳನ್ನು ಹಗ್ಗದಿಂದ ಬಿಗಿದು ಕಟ್ಟುತ್ತಾರೆ. ಪಕ್ಕದ ಗಿಡದ ಕೊಂಬೆಯೂ ಮತ್ತೊಂದರ ಜತೆಗೆ ಬೆಸೆದು ಅವುಗಳನ್ನು ಕಸಿ ಮಾಡುವ ಹೈದರ್ ಅಲಿಖಾನ್ ಮರಕ್ಕೆ ಒಂದು ಚಪ್ಪರದ ರೂಪ ಕೊಡುತ್ತಾರೆ.
ಮರ ಬೆಳೆಯುತ್ತಿದ್ದಂತೆ ಚಪ್ಪರದ ವ್ಯಾಪ್ತಿಯೂ ವಿಸ್ತಾರಗೊಳ್ಳುತ್ತದೆ. ಹಲವು ವರ್ಷಗಳ ಶ್ರಮದ ಬಳಿಕ ಸುಂದರವಾದ ಚಪ್ಪರ ನಿರ್ಮಾಣವಾಗಿ ಅದು ಶಾಶ್ವತವಾಗಿ ಇರುತ್ತದೆ. ರೆಂಬೆಗಳನ್ನು ಸ್ವಚ್ಛಗೊಳಿಸುವುದು, ಚಪ್ಪರಕ್ಕೆ ಪೂರಕವಾಗಿರದ ರೆಂಬೆಗಳನ್ನು ಕತ್ತರಿಸುವುದು ಒಂದು ಪ್ರಕ್ರಿಯೆಯಾಗಿ ನಡೆಯತ್ತದೆ. ಹಳೆಯ ಎಂ 80 ಸ್ಕೂಟರ್, ಒಂದು ಕಬ್ಬಿಣದ ಸ್ಟ್ಯಾಂಡ್, ಕೆಲವು ತೋಟಗಾರಿಕಾ ಪರಿಕರಗಳೇ ಹೈದರ್ ಅಲಿ ಖಾನ್ ಅವರ ಸಂಪತ್ತು.
ಸುಮಾರು 27 ವರ್ಷ ಮೆಕ್ಯಾನಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಅವರಿಗೆ ಅಚಾನಕ್ಕಾಗಿ ಈ ಕಲೆ ಒಲಿಯಿತು. ಪ್ರವೃತ್ತಿಯಾಗಿ ರೂಢಿಸಿಕೊಂಡ ಈ ಕಲೆ ವೃತ್ತಿಯಾಗಿಯೇ ಮುಂದುವರಿದಿದೆ. ಅವರನ್ನು ಕೈ ಹಿಡಿದು ಮುನ್ನಡೆಸುತ್ತಿದೆ.
ಮೆಕ್ಯಾನಿಕಲ್ ಕೆಲಸದಲ್ಲಿ ಸಿಗದ ಸಂತೃಪ್ತಿಯನ್ನು ಹಸಿರು ಚಪ್ಪರ ಕೆಲವೇ ವರ್ಷಗಳಲ್ಲಿ ನೀಡಿತು. ಇದಕ್ಕೆ ಏನು ಕಾರಣ ಎಂದು ಕೇಳಿದರೆ ‘ಸಮಾಜಕ್ಕೆ ನನ್ನದೇ ಆದ ಕೊಡುಗೆ ನೀಡಬೇಕು ಎಂಬ ತುಡಿತ ಇತ್ತು. ಅದು ಮೆಕ್ಯಾನಿಕಲ್ ಕ್ಷೇತ್ರದಲ್ಲಿ ಸಾಧ್ಯವಾಗಲಿಲ್ಲ. ಗಿಡ ಬೆಳೆಸಿ ಅದು ಮರವಾಗಿ ಅದರ ನೆರಳಲ್ಲಿ ಹಲವರು ಖುಷಿ ಪಡುತ್ತಿದ್ದಾರೆ. ಯಂತ್ರದೊಂದಿಗಿನ ಸಾಂಗತ್ಯ ಪ್ರಕೃತಿಗೆ ಬದಲಾದಾಗ ಯಾರಿಗೆ ಖುಷಿಯಾಗಲ್ಲ ಹೇಳಿ’ ಎಂದು ಮರು ಪ್ರಶ್ನಿಸುತ್ತಾರೆ ಖಾನ್.
ಹಸಿರತ್ತ ಸೆಳೆತ...
ಖಾನ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾಗ, ಬೇಸಿಗೆಯಲ್ಲಿ ಒಂದು ದಿನ ಕಾರ್ಯನಿಮಿತ್ತ ಕೊಲ್ಲಾಪುರದಿಂದ ಮೈಸೂರಿನತ್ತ ಹೊರಟರು. ದಾರಿಯಲ್ಲಿ ಬಿಸಿಲೋ ಬಿಸಿಲು. ತಡೆಯಲಾಗಲಿಲ್ಲ. ಮರದ ನೆರಳಲ್ಲಿ ಎಳನೀರು ಮಾರುತ್ತಿದ್ದನ್ನು ಕಂಡು, ವಾಹನ ನಿಲ್ಲಿಸಿದರು. ಮರದಡಿ ಕುಳಿತು ಎಳನೀರು ಕುಡಿದಾಗ ಅವರ ದಾಹ ನೀಗಿತು. ಒಂದು ರೀತಿಯ ಸಮಾಧಾನವೂ ಆಯಿತು. ‘ಇದೇ ರೀತಿ ನಾನೂ ನೆರಳು ನೀಡುವಂಥ ಮರಗಳನ್ನು ಬೆಳೆಸಬೇಕು’ ಎಂದು ನಿರ್ಧರಿಸಿದ ಅವರು ಮೈಸೂರಿಗೆ ಮರಳಿ ನೆರಳು ನೀಡುವ ಕಾಯಕದಲ್ಲಿ ತೊಡಗಿಸಿಕೊಂಡರು.
ಮೈಸೂರಿನಲ್ಲಿ ಈ ಹಸಿರು ಯೋಜನೆ ಶುರು ಮಾಡುತ್ತೇನೆಂದಾಗ, ಖಾನ್ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ತಿಲಕನಗರದಲ್ಲಿರುವ ಫರೂಕಿಯಾ ಕಾಲೇಜು ಸಮೂಹದ ಮುಖ್ಯಸ್ಥ ತಾಜ್‌ಮೊಹ್ಮದ್ ಖಾನ್ ಬಳಿ ತಮ್ಮ ಹಸಿರು ಬೆಳೆಸುವ ಇಂಗಿತ ವ್ಯಕ್ತಪಡಿಸಿದರು. ಕಾಲೇಜಿನ ಹಿಂಭಾಗದ ಈದ್ಗಾ ಮೈದಾನದಲ್ಲಿ ಜಾಗ ಕೊಡುವಂತೆ ಕೋರಿದರು. ಇವರ ಉತ್ಸಾಹಕ್ಕೆ ತಾಜ್ ಪ್ರೋತ್ಸಾಹ ನೀಡಿದರು. ‘ತಾಜ್ ಮೊಹ್ಮದ್ ಅವರ ಒಪ್ಪಿಗೆ ಮೇರೆಗೆ, ಈದ್ಗಾ ಮೈದಾನದಲ್ಲಿ 1999ರಲ್ಲಿ 313 ಹೊಂಗೆ ಸಸಿಗಳನ್ನು ಅಲ್ಲಿ ನೆಟ್ಟೆ. ಸುಮಾರು 3 ಎಕರೆ ಪ್ರದೇಶವನ್ನು ಹಸಿರಾಗಿಸಿದೆ. ಇದಾದ ನಂತರ ಅನೇಕ ಕಡೆ ಹಸಿರು ಚಪ್ಪರಕ್ಕೆ ಬೇಡಿಕೆ ಬಂತು’ ಎಂದು ತಮ್ಮ ಯೋಜನೆ ಬೆಳೆದಿದ್ದನ್ನು ಸಂತಸದಿಂದ ಹಂಚಿಕೊಳ್ಳುತ್ತಾರೆ ಖಾನ್. ‘ಈಗ ಈದ್‌ಉಲ್ ಫಿತ್ರ್, ಬಕ್ರೀದ್ ವೇಳೆ ಹಸಿರು ಚಪ್ಪರದ ಅಡಿಯಲ್ಲಿ 12 ಸಾವಿರ ಮಂದಿ ಪ್ರಾರ್ಥನೆ ಮಾಡುವಾಗ ಮನ ತುಂಬುತ್ತದೆ. ಕನಸು ಸಾರ್ಥಕವಾದ ಭಾವ ಮೂಡುತ್ತದೆ’ ಎಂದು ಖುಷಿಪಡುತ್ತಾರೆ.
ಶೀಘ್ರ ಬೆಳೆವ ಗಿಡಗಳ ಆಯ್ಕೆ
ಹಸಿರು ಚಪ್ಪರಕ್ಕೆ ಹೊಂಗೆ, ಗಸಗಸೆ ಹಾಗೂ ಕಾಡು ಬಾದಾಮಿ ಮರಗಳು ಸೂಕ್ತ ಎನ್ನುವುದು ಅವರ ಅನುಭವ. ಗಸಗಸೆ ಸಸಿಗಳ ಬೆಳವಣಿಗೆ ಶೀಘ್ರವಾಗಿದ್ದು, ಎರಡು ವರ್ಷಗಳಲ್ಲೇ ಚಪ್ಪರ ಮಾಡಬಹುದು. ಕಾಡು ಬಾದಾಮಿ 3 ಹಾಗೂ ಹೊಂಗೆ 6 ವರ್ಷಗಳಲ್ಲಿ ಚಪ್ಪರಕ್ಕೆ ಸಿದ್ಧವಾಗುತ್ತದೆ ಎನ್ನುತ್ತಾರೆ. ಈವರೆಗೆ 2,298 ಮರಗಳನ್ನು ಬೆಳೆಸಿದ್ದಾರೆ. ಆ ಸಂಖ್ಯೆ ಬೆಳೆಯುತ್ತಲೇ ಇದೆ. ಇವೆಲ್ಲದಕ್ಕೂ ಅವರಲ್ಲಿ ದಾಖಲೆಗಳಿವೆ.
ಧಾರ್ಮಿಕ ಕೇಂದ್ರಗಳ ಆವರಣ, ಶಾಲೆ, ಕ್ರೀಡಾಂಗಣಗಳು, ಬಯಲು ಮಾರುಕಟ್ಟೆಗಳು ಹಸಿರು ಚಪ್ಪರಕ್ಕೆ ಸೂಕ್ತ. ಸಂತೆಗಳು ನಡೆಯವ ಬಯಲಲ್ಲೇ ಟಾರ್ಪಾಲುಗಳನ್ನು ಹಾಕಿ ಇಲ್ಲವೇ ಬಿಸಿಲಿಗೆ ಹರಡಿಕೊಂಡು ತರಕಾರಿಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಅವುಗಳ ತಾಜಾತನ ಕಳೆದುಹೋಗುತ್ತದೆ. ಇದನ್ನು ತಪ್ಪಿಸಲು ಅಂಥ ಸ್ಥಳಗಳಲ್ಲಿ ಹಸಿರು ಚಪ್ಪರ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂಬುದು ಅವರ ಆಶಯ.
ಹೆದ್ದಾರಿಗೆ ನೆರಳು ಮಾಡುವ ಕನಸು
ಹೈದರ್ ಅಲಿ ಖಾನ್ ಅವರಿಗೆ ಹೆದ್ದಾರಿಗಳಿಗೆ ನೆರಳು ನೀಡಬೇಕು ಎನ್ನುವುದು ಕನಸು. ಹೆದ್ದಾರಿಯ ಎರಡೂ ಬದಿಗಳಲ್ಲಿ ಹಾಗೂ ವಿಭಜಕಗಳಲ್ಲೂ ಗಿಡ ನೆಡಬೇಕು ಎಂದುಕೊಂಡಿದ್ದಾರೆ. ಬೆಳಗ್ಗಿನ ಹಾಗೂ ಸಂಜೆಯ ಬಿಸಿಲು ಬೀಳುವಂತೆಯೂ ಮಧ್ಯಾಹ್ನದ ಬಿಸಿಲು ಮರೆಯಾಗುವಂತೆ ಮಾಡಲು ಅವರ ಯೋಜನೆಗಳು ಸಿದ್ಧವಾಗಿವೆ. ಹೆದ್ದಾರಿಗಳಲ್ಲಿ ಸಾಗುವ ಭಾರಿ ವಾಹನಗಳಿಗೆ ಅಡಚಣೆಯಾಗದಂತೆ ಮಾಡಲು ಎಷ್ಟು ಎತ್ತರಕ್ಕೆ ಮರ ಬೆಳೆಸಬೇಕು ಎಂಬುದನ್ನೂ ಸಾರಿಗೆ ಇಲಾಖೆ ಅಧಿಕಾರಿಗಳಿಂದ ತಿಳಿದುಕೊಂಡಿದ್ದಾರೆ. ಸರ್ಕಾರ ಅವಕಾಶ ನೀಡಿ ನೆರವಾದರೆ ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನ ಮಾಡಲು ಅವರು ಸಿದ್ಧರಾಗಿದ್ದಾರೆ. ಹೈದರ್ ಅಲಿ ಖಾನ್. ಅವರ ಸಂಪರ್ಕಕ್ಕೆ ಮೊ: 98451 59067.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.