ADVERTISEMENT

ಡೇಂಜರ್‌ ಜೋನ್‌ನಲ್ಲಿ ಓಜೋನ್ ಪೊರೆ

ಪೃಥ್ವಿರಾಜ್ ಎಂ ಎಚ್
Published 16 ಸೆಪ್ಟೆಂಬರ್ 2019, 6:26 IST
Last Updated 16 ಸೆಪ್ಟೆಂಬರ್ 2019, 6:26 IST
   

ಅವನಿಗೆ ರಕ್ಷಾ ಕವಚದಂತಿರುವ ಓಜೋನ್ ಪೊರೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದರಿಂದ ವಿಶ್ವದ ಹಲವು ಭೂಪ್ರದೇಶಗಳು ಅಪಾಯದಲ್ಲಿವೆ. ಈ ಪೊರೆ ಕ್ಷೀಣಿಸದಂತೆ ಕ್ರಮ ಕೈಗೊಳ್ಳುವುದಕ್ಕಾಗಿ ವಿಶ್ವಸಂಸ್ಥೆ 1987ರಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ಓಜೋನ್ ಪೊರೆ ರಕ್ಷಣಾ ಸಭೆ ನಡೆಸಿತು. ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 16ರಂದು ಓಜೋನ್ ಪೊರೆ ರಕ್ಷಣಾ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ವಿಶೇಷ ದಿನದ ಅಂಗವಾಗಿ ಒಂದಿಷ್ಟು ಮಾಹಿತಿ ಇಲ್ಲಿದೆ.

ಪೊರೆ ಕ್ಷೀಣಿಸಿದರೆ ಏನಾಗುತ್ತದೆ?

ADVERTISEMENT

ಓಜೋನ್ ಪೊರೆ ಕ್ಷೀಣಿಸಿದರೆ ನೇರಳಾತೀತ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತವೆ. ಇವು ಅಪಾಯಕಾರಿ ಕಿರಣಗಳಾಗಿರುವುದರಿಂದ ಹಲವು ಸೂಕ್ಷ್ಮ ಮತ್ತು ಪುಟ್ಟ ಗಾತ್ರದ ಜೀವಿಗಳು ಸಾಯುತ್ತವೆ. ಹಲವು ಚರ್ಮ ರೋಗಗಳು ಮತ್ತು ಅಪಾಯಕಾರಿ ಚರ್ಮ ಕ್ಯಾನ್ಸರ್‌ಗಳಿಗೆ ಈ ಕಿರಣಗಳು ಕಾರಣವಾಗುತ್ತವೆ. ಕಣ್ಣಿನ ದೃಷ್ಟಿ ಕ್ಷೀಣಿಸಿ ಅಂಧತ್ವ ಆವರಿಸಿಕೊಳ್ಳುತ್ತದೆ. ಸಮುದ್ರ ಜೀವಿಗಳೂ ಸಾಯುತ್ತವೆ. ಕೀಟಗಳೂ ಸಾಯುವುದರಿಂದ ಪರಾಗಸ್ಪರ್ಶ ಕ್ರಿಯೆ ನಡೆಯದೆ, ಬೆಳೆಗಳ ಇಳುವರಿಯೂ ಕುಸಿಯುತ್ತದೆ. ಇದರಿಂದ ಆಹಾರ ಉತ್ಪಾದನಾ ಸಮಸ್ಯೆಗಳೂ ಎದುರಾಗುತ್ತವೆ.

ನೇರಳಾತೀತ ವಿಕಿರಣ ಸಮಸ್ಯೆ, ಮತ್ತು ವಿಷಕಾರಿ ರಾಸಾಯನಿಕಗಳ ದುಷ್ಪರಿಣಾಮಗಳ ಪ್ರಭಾವ ಹೆಚ್ಚಾಗುತ್ತದೆ. ಪಾಲಿಮರ್ಸ್‌, ಬಯೊ ಪಾಲಿಮರ್ಸ್‌ನಂತಹ ವಸ್ತುಗಳೂ ನಶಿಸುತ್ತವೆ. ಹೀಗೆ ಜೀವಕೋಟಿಗೆ ಪ್ರಾಣವಾಗಿರುವ ಈ ಓಜೋನ್‌ ಪೊರೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಕ್ಷೀಣಿಸಲು ಕಾರಣಗಳೇನು?

ಕ್ಲೋರಿನ್‌ ಮತ್ತು ಬ್ರೊಮೈನ್‌ಗಳು ವಾತಾವರಣಕ್ಕೆ ಹೆಚ್ಚು ಬಿಡುಗಡೆಯಾಗುತ್ತಿರು
ವುದರ ಪರಿಣಾಮವೇ ಓಜೋನ್‌ ಕ್ಷೀಣತೆಗೆ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಸಿಎಫ್‌ಸಿ (ಕ್ಲೊರೊಫೋರೊ) ಮತ್ತು ಹಾಲೊಕಾರ್ಬನ್‌ಗಳ ತಯಾರಿ ಹೆಚ್ಚಾಗುತ್ತಿರುವುದರಿಂದ ಕ್ಲೋರಿನ್ ಮತ್ತು ಬ್ರೊಮೈನ್‌ಗಳು ಹೆಚ್ಚಾಗುತ್ತಿವೆ. ಏರ್‌ ಕಂಡಿಷನರ್‌, ರಿಫ್ರಿಜಿರೇಟರ್, ಫೊಮ್ ಬ್ಲೊಯಿಂಗ್ ಮತ್ತು ಏರೊಸೋಲ್ಸ್‌ಗಳಲ್ಲಿ ಈ ಕಾರ್ಬನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇವನ್ನು ಫ್ರಿಯಾನ್ಸ್‌ ಎಂದೂ ಕರೆಯುತ್ತಾರೆ. ದುರಂತವೆಂದರೆ ಈ ಸಿಎಫ್‌ಸಿಗಳು ಬೇಗ ನಶಿಸುವುದಿಲ್ಲ. ಹಲವು ವರ್ಷಗಳ ವರೆಗೆ ವಾಯುಮಂಡಲದಲ್ಲೇ ಇರುತ್ತವೆ.

ಈ ಸಿಎಫ್‌ಸಿಗಳನ್ನು ತಾಕುವ ನೇರಳಾತೀತ ಕಿರಣಗಳು ವಾಯುಮಂಡದಲ್ಲಿ ಕ್ಲೋರಿನ್‌ ಫ್ರೀರಾಡಿಕಲ್ಸ್ ಬಿಡುಗಡೆ ಮಾಡುತ್ತವೆ. ಇವು ಓಜೋನ್ ಪೊರೆಯ ಕಣಗಳನ್ನು ವಿಚ್ಛಿನ್ನ ಮಾಡುತ್ತವೆ. ಇದರ ತೀವ್ರತೆ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ, ಒಂದು ಕ್ಲೋರಿನ್ ಫ್ರೀರಾಡಿಕಲ್‌ 10 ಲಕ್ಷ ಓಜೋನ್ ಅಣುಗಳನ್ನು ನಾಶ ಮಾಡುತ್ತದೆ. ವಾಹನಗಳು ಉಗುಳುತ್ತಿರುವ ಹೊಗೆಯಿಂದ ಅಧಿಕ ಪ್ರಮಾಣದಲ್ಲಿ ನೈಟ್ರೋಜನ್ ಆಕ್ಸೈಡ್ ಬಿಡುಗಡೆಯಾಗುತ್ತದೆ.

ಕೈಗಾರಿಕೆಗಳು, ಸೂಪರ್‌ಸಾನಿಕ್ ಜೆಟ್‌ಗಳು ಕೂಡ ನೈಟ್ರೋಜನ್ ಆಕ್ಸೈಡ್ ಬಿಡುಗಡೆ ಮಾಡುತ್ತಿವೆ. ಇವು ವಾಯುಮಂಡಲವನ್ನು ಪ್ರವೇಶಿಸಿದರೆ ಕನಿಷ್ಠ ಮೂರು ವರ್ಷ ಒಜೋನ್ ಪೊರೆಯನ್ನು ಹರಿಯುವ ಕೆಲಸದಲ್ಲಿ ಮಗ್ನವಾಗಿರುತ್ತವೆ.

ಬೆಳೆಗಳ ರಕ್ಷಣೆಗೆ ಬಳಸುವ ರಾಸಾಯನಿಕಗಳು, ಹಸಿರುಮನೆ ಅನಿಲಗಳು, ಜಾಗತಿಕ ತಾಪಮಾನ ಕೂಡ ಓಜೋನ್ ಪೊರೆ ಕ್ಷೀಣಿಸಲು ಕಾರಣವಾಗುತ್ತಿವೆ. ಸಿಎಫ್‌ಸಿಗಳಿಂದ ಓಜೋನ್ ಪೊರೆ ಕ್ಷೀಣಿಸುತ್ತಿರುವುದನ್ನು ಅಮೆರಿಕ ವಿಜ್ಞಾನಿಗಳಾದ ಷೇರ್ ಉಡ್‌ ಮತ್ತು ರೌಲಾಂಡ್ ಪತ್ತೆ ಮಾಡಿದರು. 1980ರ ನಂತರ ಉಪಗ್ರಹಗಳು, ಗಗನನೌಕೆಗಳ ಮೂಲಕ ಓಜೋನ್ ಪೊರೆ ಬಗ್ಗೆ ಅಧ್ಯಯನ ಆರಂಭವಾಯಿತು.

1970–90ರ ಅವಧಿಯಲ್ಲಿ ವಿಶ್ವದಾದ್ಯಂತ ಶೇ 5ರಷ್ಟು ಓಜೋನ್ ಪೊರೆ ಕ್ಷೀಣಿಸಿದ್ದು, ಧ್ರುವ ಪ್ರದೇಶಗಳಲ್ಲೇ ಹೆಚ್ಚಾಗಿ ಕ್ಷೀಣಿಸಿದೆ ಎಂದೂ ಸಂಶೋಧಕರು ತಿಳಿಸಿದ್ದಾರೆ. 1985ರಲ್ಲಿ ಬ್ರಿಟಿಷ್ ಅಂಟಾರ್ಕಿಟಿಕ್‌ ಸಮೀಕ್ಷೆ ಸಂಶೋಧಕರು, ಅಂಟಾರ್ಕಿಟಿಕ್ ಪ್ರಾಂತ್ಯದಲ ದಕ್ಷಿಣ ಧ್ರುವದ ಮೇಲ್ಭಾಗದಲ್ಲಿ ಓಜೊನ್‌ ಪೊರೆಗೆ ರಂಧ್ರ ಬಿದ್ದಿರುವುದಾಗಿ ತಿಳಿಸಿದ್ದಾರೆ. ಈ ರಂಧ್ರ ಆಸ್ಟ್ರೇಲಿಯಾ ಖಂಡದ ಭೂಭಾಗದಷ್ಟು ದೊಡ್ಡದಾಗಿದೆ ಎಂದೂ ಎಚ್ಚರಿಸಿದ್ದಾರೆ.

ಸಿಎಫ್‌ಸಿ ಮತ್ತು ನೈಟ್ರೊಜನ್ ಆಕ್ಸೈಡ್‌ಗಳು ವಾಯುಮಂಡಲ ಸೇರದಂತೆ ವಿಶ್ವದ ಪ್ರತಿಯೊಬ್ಬರೂ ಶ್ರಮಿಸಬೇಕು. ಓಜೋನ್ ಪೊರೆ ರಕ್ಷಣೆ ಬಗ್ಗೆ ಹೆಚ್ಚಾಗಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ.

ಓಜೋನ್ ಪೊರೆ ಎಂದರೇನು?

ವಿಶ್ವದ ಸಮಸ್ತ ಜೀವ ಸಂಕುಲಕ್ಕೆ ಆಮ್ಲಜನಕವೇ ಪ್ರಾಣ. ಈ ಪ್ರಾಣವಾಯು ಇಲ್ಲದಿದ್ದರೆ ಭೂಮಿಯ ಮೇಲೆ ಯಾವ ಜೀವಿಯೂ ಇರುವುದಿಲ್ಲ. ಇದು ಎರಡು ಪರಮಾಣುಗಳನ್ನು ಒಳಗೊಂಡಿರುವುದರಿಂದ ರಸಾಯನವಿಜ್ಞಾನದಲ್ಲಿ ಇದನ್ನು O2 ಎಂದು ಗುರುತಿಸಲಾಗುತ್ತದೆ. ಈ ಪರಮಾಣುಗಳ ಜತೆಗೆ ಮತ್ತೊಂದು ಪರಮಾಣು ಓಜೋನ್ ಸೇರಿದರೆ ಆಗ O3 ಎನ್ನುತ್ತಾರೆ. ಇದು ತಿಳಿ ನೀಲಿ ಬಣ್ಣದಲ್ಲಿರುವ ವಿಷಾನಿಲವಾಗಿದ್ದು, ಆಮ್ಲಜನಕದ ಒಂದು ರೂಪವಾಗಿದೆ.

ಇದು ಭೂಮಿಯಿಂದ 20–25 ಕಿ.ಮೀ ದೂರದಲ್ಲಿ ಸ್ಟ್ರಾಟ್ಸೊಪಿಯರ್‌ನಲ್ಲಿ (ವಾಯುಮಂಡಲ) ಇದ್ದು, ಭೂಮಿಯ ಸುತ್ತ 3 ಮಿ.ಮೀಟರ್‌ನಷ್ಟು ಪದರವಾಗಿ ಹರಡಿಕೊಂಡಿದೆ. ಇದು ವಿಷಾನಿಲವಾದರೂ ಸೂರ್ಯನಿಂದ ಹೊರಡುವ ನೇರಳಾತೀತ ಕಿರಣಗಳು ಭೂಮಿಯ ವಾತಾವರಣ ಪ್ರವೇಶಿಸದಂತೆ ತಡೆಯುತ್ತದೆ. ಹೀಗಾಗಿ ನಿಸರ್ಗದತ್ತ ರಕ್ಷಣಾ ಕವಚ ಎನ್ನುತ್ತಾರೆ. ಇದು ಸುಮಾರು 60 ಕೋಟಿ ವರ್ಷಗಳ ಹಿಂದೆ ರಚನೆಯಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. 1839ರಲ್ಲಿ ಕ್ರಿಶ್ಚಿಯನ್ ಸ್ಕೂನ್‌ಬೀನ್ ಎಂಬ ಸಂಶೋಧಕ ಇದನ್ನು ಪತ್ತೆ ಮಾಡಿದ.

ಮಾಂಟ್ರಿಯಲ್‌ನಲ್ಲಿ ನಡೆದದ್ದೇನು?

1987ರಲ್ಲಿ ನಡೆದ ಈ ಸಭೆಯಲ್ಲಿ ವಿಶ್ವದ ಸುಮಾರು 150 ರಾಷ್ಟ್ರಗಳು ಭಾಗವಹಿಸಿದ್ದವು. ಓಜೋನ್‌ ಪೊರೆ ಕ್ಷೀಣಿಸುತ್ತಿರುವುದಕ್ಕೆ ಕಾರಣವಾಗುತ್ತಿರುವ ಅನಿಲಗಳನ್ನು ವಾಯುಮಂಡಲಕ್ಕೆ ಬಿಡಬಾರದು ಎಂಬ ತೀರ್ಮಾನ ಮಾಡಲಾಯಿತು. ಈ ತೀರ್ಮಾನವನ್ನು ‘ಮಾಂಟ್ರಿಯಲ್‌ ಪ್ರೊಟೊಕಾಲ್‌’ ಎನ್ನುತ್ತಾರೆ.

ಈ ಸಭೆಯ ನಂತರ 1988ರಲ್ಲಿ ವಿಯೆನ್ನಾದಲ್ಲಿ 151 ರಾಷ್ಟ್ರಗಳು ಇದೇ ವಿಷಯವಾಗಿ ಸಭೆ ಸೇರಿದರು. ಈ ಸಭೆಯಲ್ಲೂ ಮಾಂಟ್ರಿಯಲ್‌ ತೀರ್ಮಾನವನ್ನೇ ಪುನರುಚ್ಛರಿಸಲಾಯಿತು. 1996ರಲ್ಲಿ ಸಿಎಫ್‌ಸಿಗಳ ಬಳಕೆ ನಿಷೇಧಕ್ಕೆ ವಿಶ್ವಸಂಸ್ಥೆ ಕರೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.