ADVERTISEMENT

ಕಿಕ್‌ಬ್ಯಾಕ್‌ ಪಡೆಯಲು ಮೂರ್ಖ ಯೋಜನೆ: ಪ್ರಸನ್ನ

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಪೂರೈಕೆ ಯೋಜನೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 16:14 IST
Last Updated 23 ಜೂನ್ 2018, 16:14 IST
ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ರಾಜ್ಯ ಸರ್ಕಾರದ ಉದ್ದೇಶಿತ ಯೋಜನೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳ ಪ್ರಮುಖರು ಶನಿವಾರ ಪ್ರತಿಭಟನೆ ನಡೆಸಿದರು
ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ರಾಜ್ಯ ಸರ್ಕಾರದ ಉದ್ದೇಶಿತ ಯೋಜನೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳ ಪ್ರಮುಖರು ಶನಿವಾರ ಪ್ರತಿಭಟನೆ ನಡೆಸಿದರು   

ಸಾಗರ: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆ ಹಾಸ್ಯಾಸ್ಪದವಾಗಿದೆ. ಸಿಮೆಂಟ್ ಮತ್ತು ಕಬ್ಬಿಣದ ಮೂಲಕ ಭಾರಿ ಮೊತ್ತದ ‘ಕಿಕ್‌ಬ್ಯಾಕ್’ ಪಡೆಯಲು ಮೂರ್ಖ ಯೋಜನೆಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತಿದೆ ಎಂದು ದೇಸಿ ಚಿಂತಕ ಪ್ರಸನ್ನ ಆರೋಪಿಸಿದರು.

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ರಾಜ್ಯ ಸರ್ಕಾರದ ಉದ್ದೇಶಿತ ಯೋಜನೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ನಡುವೆ ಸಮಾಜಮುಖಿಯಾಗಿ ಕೆಲಸ ಮಾಡುವ ಎಂಜಿನಿಯರ್‌ಗಳೂ ಇದ್ದಾರೆ. ಇದರ ಜೊತೆಗೆ ರಾಜಕಾರಣಿಗಳಿಗೆ ‘ವಿಧೇಯ’ರಾಗಿರುವ ಎಂಜಿನಿಯರ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಇಂಥವರ ಸಲಹೆಯಿಂದ ಮೂರ್ಖ ಯೋಜನೆ ರೂಪಿಸಲಾಗುತ್ತಿದೆ’ ಎಂದು ದೂರಿದರು.

ADVERTISEMENT

ರೈತರು, ನೇಕಾರರು, ಕೂಲಿಕಾರರು ಗ್ರಾಮಗಳಿಂದ ಗುಳೆ ಹೋಗುವಂತೆ ಮಾಡುವ ಮೂಲಕ ನಗರವನ್ನು ಕೊಬ್ಬಿಸುವುದಕ್ಕೆ ಸರ್ಕಾರಗಳೇ ಪ್ರೇರಣೆ ನೀಡುತ್ತಿವೆ. ಬೆಂಗಳೂರು ನಗರ ಈಗಾಗಲೇ ಸಾಕಷ್ಟು ಬೆಳೆದಿದೆ. ಈಗ ಅದನ್ನು ಮತ್ತಷ್ಟು ಕೊಬ್ಬಿಸುವ ಅಗತ್ಯವಿಲ್ಲ. ‘ಕಿಕ್‌ಬ್ಯಾಕ್’ ಗಾಗಿ ಯೋಜನೆ ರೂಪಿಸಲು ಸರ್ಕಾರ ಮುಂದಾದರೆ ಜನರೂ ಅದಕ್ಕೆ ‘ಕಿಕ್’ ಮಾಡಬೇಕು ಎಂದು ಎಂದು ಹೇಳಿದರು.

ಕೆಳಗಿನಿಂದ ನೀರನ್ನು ಮೇಲಕ್ಕೆ ಎತ್ತುವ ಯೋಜನೆ ಅವೈಜ್ಞಾನಿಕ ಎಂದು ಹೇಳಲು ಯಾವ ವಿಜ್ಞಾನವೂ ಬೇಕಿಲ್ಲ. ಲಿಂಗನಮಕ್ಕಿಯಿಂದ 400 ಕಿ.ಮೀ ದೂರದಲ್ಲಿರುವ ಬೆಂಗಳೂರಿಗೆ ನೀರು ಹರಿಸುವ ಮುನ್ನ ಅಂತಹ ಒಂದು ಯೋಜನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಸಲಹೆ ನೀಡಿದರು.

ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಮಾತನಾಡಿ, ‘ಮಲೆನಾಡಿನ ಅನೇಕ ಗ್ರಾಮಗಳಲ್ಲಿನ ಬಾವಿಯ ನೀರು ಈಗಾಗಲೇ ಬತ್ತಿದೆ. ಹೀಗಿರುವಾಗ ಇಲ್ಲಿಂದ ಬೆಂಗಳೂರಿಗೆ ನೀರು ಹರಿಸುತ್ತೇವೆ ಎನ್ನುವುದು ತೀರಾ ಅವಾಸ್ತವಿಕ ಯೋಜನೆ’ ಎಂದು ಟೀಕಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ. ರಾಘವೇಂದ್ರ ,ಲೇಖಕ ವಿಲಿಯಂ, ಬಿ.ಆರ್. ವಿಜಯವಾಮನ್, ಕೆ.ಸಿ. ಬಸವರಾಜ್, ಚಂದ್ರಶೇಖರ ಗೂರ್ಲಕೆರೆ, ಟಿ.ಡಿ. ಮೇಘರಾಜ್, ಟಿ.ಆರ್. ಕೃಷ್ಣಪ್ಪ, ಕೆ.ವಿ.ಪ್ರವೀಣ್, ಎಂ.ವಿ. ಪ್ರತಿಭಾ, ನಾದಿರಾ ಮಾತನಾಡಿದರು. ನಂತರ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.