ಮಳೆಯೆಂದರೆ ಒಂದು ಸುಂದರವಾದ ಅನುಭೂತಿ, ಅನುಭವ. ಮಕ್ಕಳಿಂದ ಮೊದಲುಗೊಂಡು ಹಿರಿವಯಸ್ಸಿನವರೆಗೂ ಎಲ್ಲರೂ ಮಳೆಯನ್ನು ಕಂಡು ಉಲ್ಲಾಸಿತರಾಗುತ್ತಾರೆ.
ರಾತ್ರಿಯಿಡೀ ಸುರಿವ ಮಳೆಗೆ ತೊಯ್ದ ಗಿಡಮರಗಳನ್ನು ನೋಡುವುದೇ ಒಂದು ಹಬ್ಬ. ಮೈಯ ಕೊಳೆ ತೊಳೆದು ಅಭ್ಯಂಜನ ಮುಗಿಸಿ ಬಂದಂತಹ ಒಂದು ಚೈತನ್ಯ ಪ್ರಕೃತಿಯಲ್ಲಿ.
ಬಿಸಿಲಕಾಲದ ಪ್ರಖರವಾದ ಸೂರ್ಯನ ಕಿರಣಗಳಿಗೆ ಬಳಲಿ ಬೆಂಡಾದ ತರುಲತೆಗಳು ಮಳೆಯಲ್ಲಿ ಮಜ್ಜನ ಮಾಡಿದಂತೆ ಉಲ್ಲಾಸಭರಿತವಾಗಿ ಕಾಣುತ್ತವೆ. ಪ್ರಕೃತಿಯಲ್ಲಿ ಹೊಸ ಜೀವಕಳೆಯನ್ನು ತಂದುಕೊಡುವ ಸಮಯ ಮಳೆಗಾಲ. ನಿಸರ್ಗದ ನಂಟಿರುವವರು ಅಥವಾ ನಂಟನ್ನು ಬಯಸುವವರಿಗೆ ರೈನಥಾನ್ ಎಂಬ ಮಳೆನಡಿಗೆ ಕಾರ್ಯಕ್ರಮ ಆಗಸ್ಟ್ 3ರ ಶನಿವಾರದಂದು ಸಕಲೇಶಪುರದ ಬಳಿಯ ಒಂದು ಹಳ್ಳಿಯಲ್ಲಿ ಆಯೋಜಿತವಾಗಿದೆ.
ಮಳೆಯ ಸಾಂಗತ್ಯ ಸಾಮೀಪ್ಯ ಬಯಸುವವರಿಗೆ ರೈನಥಾನ್ ಒಂದು ಪ್ರೇಮಗೀತವಾಗಬಲ್ಲುದು.
ಬೆಳಗ್ಗಿನಿಂದ ಸಂಜೆಯವರೆಗೂ ಒಂದಿಡೀ ದಿನ ಮಳೆಯಲ್ಲಿ ನೆನೆದು ನಡೆಯುವ ವಿಶಿಷ್ಟ ಕಾರ್ಯಕ್ರಮ ರೈನಥಾನ್.
ಮಳೆಯಿಂದ ರಕ್ಷಿಸಿಕೊಳ್ಳಲು ಬಳಸುವಂತಹ ರೈನ್ ಕೋಟ್, ಟೋಪಿ, ಕೊಡೆ , ಗೊರಬು ...ಇವುಗಳ ಹಂಗಿಲ್ಲದೆ ಒಂದಿಡೀ ದಿನ ಮಳೆಗೆ ತೆರೆದುಕೊಂಡು ನಡಿಗೆ ಸಾಗುತ್ತದೆ. ಇದು ಏಕತಾನತೆಯ ನಡಿಗೆಯಾಗಿರದೆ ಮಧ್ಯದಲ್ಲಿ ಕೆಲವು ದೇಸೀ ಆಟಗಳು, ಪಂದ್ಯಗಳಿರುತ್ತವೆ.
ಕೆಸರುಗದ್ದೆಗಿಳಿದು ಕುಣಿದಾಡುವ ಸಂಭ್ರಮ, ಮಳೆಗಾಲದ ಒರತೆಯಿಂದ ಹುಟ್ಟಿರುವಂತಹ ಸಣ್ಣ ಸಣ್ಣ ಜಲಪಾತಗಳಿಗೆ ಮೈಯೊಡ್ಡಿ ಕುಳಿತುಕೊಳ್ಳುವ ಸುಖ ... ಹೀಗೆ ಒಂದೇ ಎರಡೇ ಹಲವು ಖುಷಿಗಳ ಸರದಾರರಾಗುವ ತವಕ. ಕಾಡಿನಲ್ಲಿ ಬಿಡುವ ಹೂವುಗಳ ಚೆಲುವನ್ನು ಆಸ್ವಾದಿಸುತ್ತಾ ನಡೆಯುತ್ತಾ ಸಮಾನಮನಸ್ಕರೊಂದಿಗೆ ಹೆಜ್ಜೆ ಹಾಕುವಾಗ ಒಂದಿಡೀ ದಿನ ಒಂದೆರಡು ಗಂಟೆಗಳಲ್ಲಿ ಕಳೆದುಹೋಯ್ತೆನೋ ಎನ್ನುವಷ್ಟು ಪುಳಕಿತರಾಗಿರುತ್ತದೆ ಮನಸ್ಸು. ಮಳೆಯ ದಾರಿ ಮಧ್ಯದಲ್ಲಿ ಸರಬರಾಜಾಗುವ ಚಹಾ, ತಿಂಡಿ, ಮಧ್ಯಾಹ್ನದ ಪುಷ್ಕಳ ಸಾತ್ವಿಕ ಭೋಜನ ಹೀಗೆ ಇನ್ನೂ ಹಲವು ಚಟುವಟಿಕೆಗಳು ಅದರ ಪಾಡಿಗೆ ನಡೆಯುತ್ತಾ ಇರುತ್ತವೆ.
ನಡಿಗೆಯ ಸಮಯದಲ್ಲಿ ಹಾಕಲು ಟೀಶರ್ಟ್ ಹಾಗೂ ಬೆನ್ನಿಗೆ ಹಾಕುವ ಚಿಕ್ಕ ಚೀಲ ರೈನಥಾನ್ ನಲ್ಲಿ ಒದಗಿಸಲಾಗುತ್ತದೆ.
ಇಡೀ ಕಾರ್ಯಕ್ರಮದಲ್ಲಿ ಏಕ.ಬಳಕೆಯ ಪ್ಲಾಸ್ಟಿಕ್ ಅಥವಾ ಇನ್ನಿತರ ವಸ್ತುಗಳನ್ನು ಬಳಸಲು ಅವಕಾಶವಿರುವುದಿಲ್ಲ. ಪೂರ್ವ ನೋಂದಣಿ ಇಲ್ಲಿ ಕಡ್ಡಾಯ.
ರೈನಥಾನ್ ನಲ್ಲಿ ಭಾಗವಹಿಸುವವರು ತಟ್ಟೆ, ಲೋಟ, ಚಮಚ ತರಬೇಕಾಗುತ್ತದೆ.
www.rainathon.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.