ಸಸ್ಯ ಶಾಸ್ತ್ರದಲ್ಲಿ ವಿಶೇಷ ಆಸಕ್ತಿ ತಳೆದ ನನಗೆ ಕಳೆದ ಬೇಸಿಗೆಯಲ್ಲಿ ಲಂಡನ್ ವಾಸ್ತವ್ಯದ ಅವಧಿಯಲ್ಲಿ ಕಿವ್, ರಾಯಲ್ ಬಟಾನಿಕಲ್ ಗಾರ್ಡನ್ ನೋಡುವ ಅವಕಾಶವನ್ನು ಮಗಳು-ಅಳಿಯ ಒದಗಿಸಿದ್ದು ಅವರ್ಣನೀಯ ಆನಂದವನ್ನು ಒದಗಿಸಿತ್ತು. ಅದೊಂದು ಸುಂದರ ಅನುಭವ.
ಲಂಡನ್ನಿನ ಬೇಸಿಗೆಯ ಬೆಳಗಿನ ಹಿತವಾದ ಬಿಸಿಲು, ತಂಪಾದ ವಾತಾವರಣ, ಹಕ್ಕಿಗಳ ಕಲರವ, ಬಾನೆತ್ತರಕ್ಕೆ ಬೆಳೆದ ವಿಧ ವಿಧ ಮರಗಳು, ಅಂದದ ವಾಸ್ತುಶಿಲ್ಪದಿಂದ ನಿರ್ಮಿತವಾದ 40ಕ್ಕೂ ಹೆಚ್ಚು ಐತಿಹಾಸಿಕ ಆಕರ್ಷಕ ಕಟ್ಟಡಗಳು, ಹಸಿರಾದ ಹುಲ್ಲು ಮೈದಾನ, ವಿವಿಧ ಜಾತಿಯ ಸಸ್ಯ ಸಂಕುಲ, ಅದರಲ್ಲಿ ಪಲ್ಲವಿಸಿದ ಬಣ್ಣ ಬಣ್ಣದ ಸುಂದರ ಪುಷ್ಪಗಳು, ಕನಸಿನ ಕಿನ್ನರ ಲೋಕವನ್ನೇ ಧರೆಗಿಳಿಸಿದ ಈ ಸುಂದರ ಕಿವ್ ರಾಯಲ್ ಬಟಾನಿಕಲ್ ಗಾರ್ಡನ್ ಲಂಡನ್ ನಗರದ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲೊಂದು.
ಪ್ರತಿವರ್ಷ ಸುಮಾರು 15 ಲಕ್ಷ ಪ್ರವಾಸಿಗರು ಭೇಟಿ ನೀಡುವ ತಾಣ. ಇದು ಲಂಡನ್ ನಗರದ ನೈಋತ್ಯ ದಿಕ್ಕಿನಲ್ಲಿ ಥೇಮ್ಸ್ ನದಿ ದಡದ ಲಂಡನ್ ಬರೋ ಆಫ್ ರಿಚ್‌ಮಂಡ್‌ನಲ್ಲಿ ನೆಲೆ ಕಂಡುಕೊಂಡ 18ನೇ ಶತಮಾನದಲ್ಲಿ (1759) ಮೈದಳೆದ ಉದ್ಯಾನ. 2003ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಈ ಉದ್ಯಾನಕ್ಕೆ ನಾಲ್ಕು ಸಾರ್ವಜನಿಕ ಪ್ರವೇಶ ದ್ವಾರಗಳಿವೆ. ಲಂಡನ್ ಕೇಂದ್ರ ಸ್ಥಳದಿಂದ 30 ನಿಮಿಷಗಳ ದಾರಿ.
ಜಗತ್ತಿನ ವಿವಿಧ ಭಾಗಗಳಿಂದ ತಂದ ಸುಮಾರು 28,000 ಪ್ರಭೇದಗಳ ಸಸ್ಯಸಂಪತ್ತು ಮತ್ತು ಕ್ರಮವಾಗಿ ಜೋಡಿಸಲ್ಪಟ್ಟ 83 ಲಕ್ಷ ಸಸ್ಯ ಹಾಗೂ ಶಿಲೀಂಧ್ರಗಳ ಶುಷ್ಕ ಮಾದರಿಗಳ ಸಂಗ್ರಹವಿದೆ. ಸಹಸ್ರಮಾನದ ಬೀಜ ಬ್ಯಾಂಕ್‌ನ ತವರು. 30,000 ಬೀಜ ಮಾದರಿಗಳಿವೆ.
ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿ ಮತ್ತು ಪ್ರೆಸಿಡೆಂಟ್ ಕ್ಯಾವೆಂಡಿಶ್‌ನ ಪ್ರಯತ್ನದಿಂದ ವಿಲಿಯಂ ಹೂಕರ್ ನಿರ್ದೇಶನದಲ್ಲಿ ಉದ್ಯಾನವನ್ನು 300 ಎಕರೆ ವರೆಗೆ ವಿಸ್ತರಿಸಲಾಯಿತು. ಪ್ರಥಮ ಮೇಲ್ವಿಚಾರಕ ಜಾನ್ ಸ್ಮಿತ್. ಕಿವ್ ಗಾರ್ಡನ್‌ನ ಮೂಲೆ ಮೂಲೆಯೂ ವಿಶೇಷವನ್ನು ಹೊಂದಿದೆ. ಅದರಲ್ಲೂ ಈ ಉದ್ಯಾನದಲ್ಲಿ ನೋಡಲೇಬೇಕಾದ ಹತ್ತು ಆಕರ್ಷಣೆಗಳು: ಟೆಂಪರೇಟ್ ಹೌಸ್, ಪಾಮ್ ಹೌಸ್, ಟ್ರೀ ಟಾಪ್ ವಾಕ್ ವೇ, ಡೇವಿಸ್ ಅಲ್ಪೈನ್ ಹೌಸ್, ಪ್ರಿನ್ಸೆಸ್ ಆಫ್ ವೇಲ್ಸ್ ಕನ್ಸರ್ವೇಟರಿ, ಆರ್ಬೋರೇಟಮ್, ಮರಿಯಾನ್ನೇ, ನಾರ್ತ್ ಗ್ಯಾಲರಿ, ಶಿರ್ಲೆ ಶೇರ್‌ವುಡ್ ಗ್ಯಾಲರಿ ಆಫ್ ಬಟಾನಿಕಲ್ ಆರ್ಟ್, ಗ್ರೇಟ್ ಪಗೋಡಾ ಮತ್ತು ಕಿವ್ ಪ್ಯಾಲೇಸ್.
ಒಮ್ಮೆ ಉದ್ಯಾನದ ಒಳಹೊಕ್ಕರೆ ಒಂದೇ ದಿನದಲ್ಲಿ ಆದ್ಯಂತವಾಗಿ ವೀಕ್ಷಿಸುವುದು ಅಸಾಧ್ಯ. ಅಷ್ಟೊಂದು ವಿಸ್ಮಯಕಾರಿ ಸಂಗತಿಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ. ಹಾಗೇ ನಡೆಯುತ್ತಾ ನೋಡುತ್ತಾ ಹೋದಂತೆ ಉದ್ಯಾನದ ಅಗಾಧತೆಯ ಅರಿವಾಗುತ್ತಾ ಹೋಗುತ್ತದೆ. ಜಗತ್ತಿನಾದ್ಯಂತ ಸಮುದಾಯಗಳ ಅಗತ್ಯಗಳಿಗೆ ತಕ್ಕಂತೆ ವಿಜ್ಞಾನ ಮತ್ತು ಪ್ರಕೃತಿಗೆ ಅನುಗುಣವಾಗಿ ಹೊಸ ಹೊಸ ವಿಚಾರಗಳೊಂದಿಗೆ ವಿಸ್ತಾರವಾಗುತ್ತಾ ಸಾಗಿದೆ ಈ ಉದ್ಯಾನ. ಆ ಬದಲಾವಣೆಯನ್ನು ಬೃಹತ್ ಸಸ್ಯಸಂಗ್ರಹವೇ ಪ್ರತಿಬಿಂಬಿಸುತ್ತದೆ. ಎಲ್ಲಾ ಕಾಲಗಳಲ್ಲೂ ಕಿವ್ ಸೌಂದರ್ಯದ ಖನಿಯೇ. ಜಗತ್ತಿನ ಯಾವುದೇ ಉದ್ಯಾನದಲ್ಲೂ ಕಂಡುಬರದಂತಹ ವನಸ್ಪತಿ ಪ್ರಭೇದಗಳಿವೆ.
ಟೆಂಪರೇಟ್ ಹೌಸ್: 1862ರಿಂದಲೇ ಕಾರ್ಯನಿರ್ವಹಿಸುತ್ತಿದ್ದು ಡೆಸಿಮಸ್ ಬರ್ಟನ್ ಇದರ ವಿನ್ಯಾಸಕ. ಜಗತ್ತಿನ ಅತ್ಯಂತ ದೊಡ್ಡದಾದ ವಿಕ್ಟೋರಿಯನ್ ಗಾಜಿನ ಮನೆ. ಆಯತಾಕಾರದ ಸುಂದರ ರಚನೆ. ಪಾಮ್ ಹೌಸ್‌ನ ಇಮ್ಮಡಿ ಗಾತ್ರ. ಐದು ಖಂಡಗಳ, ಹದಿನಾರು ದ್ವೀಪಗಳ ಸಸ್ಯ ಸಮೂಹವಿಲ್ಲಿದೆ. ಸಮಶೀತೋಷ್ಣ ವಲಯದ 10,000 ಸಸ್ಯ ನಮೂನೆಗಳ ಮಧ್ಯೆ ಸಂಚರಿಸುವುದೊಂದು ಅದ್ಭುತ ಅನುಭವ. ಮಧ್ಯದಲ್ಲಿ ವೀಕ್ಷಣಾ ಗ್ಯಾಲರಿ ಇದೆ. ಬಾಳೆ, ನೇಪಲ್ ಯ್ಯಾಮ್ ಮೆಜೆಂಟಾ ಲಿಲ್ಲಿ ಪಿಲ್ಲಿ, ಕ್ಲೈಂಬಿಂಗ್ ವೈನ್ ಮೊದಲಾದ ಸಸ್ಯಗಳು ಇಲ್ಲಿವೆ.
ಪಾಮ್ ಹೌಸ್: ಇದು ಹಸಿರು ಮನೆ. ಕಿವ್‌ನ ಗಮನಾರ್ಹ ಕಟ್ಟಡ. ಐರಿಶ್ ಎಂಜಿನಿಯರ್ ಡೆಸಿಮಸ್ ಬರ್ಟನ್ನನೇ ಇದನ್ನು ರಚಿಸಿದ್ದು. ಪ್ರಪಂಚದ ಮಳೆಕಾಡು, ಉಷ್ಣವಲಯದ ಪಾಮ್ ಮಾದರಿಗಳ ಸಂಗ್ರಹ ಈ ಉಷ್ಣ ಹಾಗೂ ಆರ್ದ್ರ ಕಟ್ಟಡದಲ್ಲಿದೆ.
ಟ್ರೀ ಟಾಪ್ ವಾಕ್ ವೇ: ಡೆವಿಡ್ ಮಾಂಕ್ ಇದರ ವಿನ್ಯಾಸಕ. ಭೂಮಿಯಿಂದ 18 ಮೀಟರ್ ಎತ್ತರದ ಮೇಲೆ ನಿರ್ಮಿಸಲಾದ ಕಾನನದ ಮರಗಳ ನಡುವಿನ ಬಯಲಲ್ಲಿ ಮರಗಳಿಂದ ಆಚ್ಛಾದಿತವಾದ 200 ಮೀಟರ್ ಉದ್ದದ ವಿಹಾರ ಪಥದಲ್ಲಿ ಸಾಗುವದು ಪ್ರವಾಸಿಗರಿಗೊಂದು ಮೈನವಿರೇಳಿಸುವ ಅನುಭವ. 2008ರಲ್ಲಿ ಈ ಕ್ಯಾನೋಪಿ ವಾಕ್ ವೇ ಬಳಕೆಗೆ ತೆರೆದುಕೊಂಡಿತು. ಈ ಪಥಕ್ಕೆ ಮೆಟ್ಟಿಲುಗಳೂ ಇವೆ. ಲಿಫ್ಟ್ ಕೂಡ ಇದೆ. ಪಥ ರಂಧ್ರಗಳಿಂದ ಕೂಡಿದ್ದು ಲೋಹದಿಂದ ಮಾಡಲ್ಪಟ್ಟಿದೆ. ಮುಂದೆ ಸಾಗಿದಂತೆ ಇಡೀ ಸೇತುವೆಯೇ ಗಾಳಿಯಲ್ಲಿ ತೂರಾಡುವುದು. ಈ ಪಥದ ವಿಹಾರದಲ್ಲಿ ಪರಿಸರದಲ್ಲಿರುವ ಗಿಡ, ಮರ, ಸಸ್ಯ, ಪಕ್ಷಸಂಕುಲ, ಕೀಟ ವೈವಿಧ್ಯ ಶಿಲೀಂಧ್ರಗಳು, ಲೈಕೆನ್‌ಗಳ ಮಾದರಿಗಳನ್ನು ಕಣ್ತುಂಬಿಕೊಳ್ಳಬಹುದು.
ಅಲ್ ಪೈನ್ ಹೌಸ್‌ನಲ್ಲಿಯ ಪರ್ವತ ಪ್ರದೇಶದ, ಮೆಡಿಟರೇನಿಯನ್ ಭಾಗದ ಸಸ್ಯಗಳ ನೋಟ ಬಲು ಸೊಗಸು.
ಪ್ರಿನ್ಸೆಸ್ ಆಫ್ ವೇಲ್ಸ್ ಕನ್ಸರ್ವೇಟರಿಯಲ್ಲಿ ತಂತ್ರಜ್ಞಾನದಿಂದ ನಿಯಂತ್ರಿತ ಬೇರೆ ಬೇರೆ ಹವಾಗುಣದ ಹತ್ತು ಸೂಕ್ಷ್ಮ ವಲಯಗಳಿವೆ. ಉಷ್ಣವಲಯದ, ಮಳೆಕಾಡುಗಳ ಮತ್ತು ಸಮಶೀತೋಷ್ಣ ವಲಯದ 30,000 ವಿಧ ವಿಧ ಸಸ್ಯ ಪ್ರಭೇದಗಳನ್ನು ಕಾಣಬಹುದು. ಗಣನೀಯವಾದ ಸಸ್ಯಗಳಿಂದ ಅಂಚು ಕಟ್ಟಿದ ವಿಹಾರ ಪಥದ ಬಣ್ಣ ಬಣ್ಣದ ಹೂಹಾಸು ರಮ್ಯಮನೋಹರ.
ಆರ್ಬೋರೇಟಮ್ (ಉಪವನ): ಕಿವ್‌ನ 2/3 ಭಾಗ ವಿಸ್ತರಿಸಿದೆ. ಇದನ್ನು ಸುತ್ತಿ ಬರುವಷ್ಟರಲ್ಲಿ ಸುಸ್ತಂತೂ ಖಂಡಿತ. ಆದರೆ ಜಗವನ್ನೇ ಸುತ್ತಿ ಬಂದಷ್ಟು ಆನಂದ, ತೃಪ್ತಿ. ಏಕೆಂದರೆ ಜಗತ್ತಿನ ಎಲ್ಲಾ ಭಾಗಗಳ ಸುಮಾರು 14,000 ಗಿಡಮರಗಳ ವಿವರವನ್ನು ಈ ಉಪವನದಲ್ಲಿ ಸಂಚರಿಸಿ ತಿಳಿದುಕೊಳ್ಳಬಹುದು. ಅತಿ ವಿರಳವಾಗಿ ದೊರೆಯುವ ಹಾಗೂ ಪುರಾತನ (ಕಿವ್‌ನಷ್ಟೇ) ಮರಗಳೂ ಇಲ್ಲಿವೆ. ಪ್ರತಿಯೊಂದು ಮರವೂ ಜ್ಞಾನದ ಆಕರ. ಅರಣ್ಯನಾಶದಿಂದ ಅಳಿಯುತ್ತಿರುವ ಹಲವಾರು ಪ್ರಭೇದಗಳ ರಕ್ಷಣೆಯ ಅರಿವು ಮೂಡುತ್ತದೆ. ಇಲ್ಲಿನ ಮರಗಳು ಓಕ್, ಜಪನೀಸ್ ಪಗೋಡಾ, ಬ್ಲ್ಯಾಕ್ ಲೋಕಸ್ಟ್, ಬೃಹದಾಕಾರದ ರೆಡ್ ವುಡ್, ಚೆಸ್ಟ್‌ನಟ್, ಪೆಂಡುಲಾ, ಬಿದಿರು ಸಸ್ಯ ಕುಟುಂಬದ ಬಹುತೇಕ ಎಲ್ಲ ಪ್ರಭೇದಗಳು ಇಲ್ಲಿವೆ. ಗ್ಯಾಲರಿಗಳಲ್ಲಿ ಸಸ್ಯಗಳ ಸುಂದರ ವರ್ಣಚಿತ್ರಗಳಿವೆ. ಅಂದಿನಿಂದ ಇಂದಿನವರೆಗಿನ ಸೊಗಸಾದ ಸಸ್ಯ ಛಾಯಾಚಿತ್ರಗಳಿವೆ. 1762ರಲ್ಲಿ ರಾಜಕುಮಾರಿ ಆಗಷ್ಟಾಳಿಗೆ ಬಳುವಳಿಯಾಗಿತ್ತ ಕಟ್ಟಡ ಪಗೋಡಾ. ಮೈಲುಗಳಾಚೆಯಿಂದಲೇ ಕಾಣಬಲ್ಲ ಗಗನಚುಂಬಿ ಕಟ್ಟಡ. ಹತ್ತು ಅಂತಸ್ತಿನ ಅಷ್ಟಕೋನಾಕೃತಿಯ ಚೈನೀಸ್ ಮಾದರಿಯ ರಚನೆ. ಸುಮಾರು 50 ಮೀಟರ್ ಎತ್ತರ. 18ನೇ ಶತಮಾನದ ವೈಭವವನ್ನು ಉಳಿಸಿಕೊಂಡಿದೆ. ವಿಲಿಯಂ ಚೇಂಬರ್ಸ್ ಇದರ ವಿನ್ಯಾಸಕ.
ಕಿವ್ ಪ್ಯಾಲೇಸ್ - ಗಾರ್ಡನ್‌ನಲ್ಲಿರುವ ಚಿಕ್ಕ ಅರಮನೆ, 1631ರಲ್ಲಿ ನಿರ್ಮಿತವಾದದ್ದು. ಈಗ ಉಳಿದಿರುವ ಡಚ್ ಹೌಸ್ ನೋಡಬಹುದಾಗಿದೆ.
ಕೃತ್ರಿಮ ಜೇನುಗೂಡು: ವನಸುಮಗಳ ಮೈದಾನದ ಹೃದಯ ಭಾಗದಲ್ಲಿ ಪ್ರತಿಷ್ಠಾಪಿಸಿದ 17ಮೀಟರ್ ಎತ್ತರದ ವಿಶೇಷ ಲಕ್ಷಣಗಳಿಂದ ಕೂಡಿದ ಕೃತ್ರಿಮ ಜೇನುಗೂಡು ಕಿವ್‌ನ ಮತ್ತೊಂದು ಆಕರ್ಷಣೆ. 1000 ಎಲ್ಇಡಿ ವಿದ್ಯುದ್ದೀಪಗಳು ದುಂಬಿಗಳ ಚಲನವಲನಗಳಿಗೆ ಅನುಗುಣವಾಗಿ ಬೆಳಗುವವಲ್ಲದೇ ಹಿನ್ನಲೆಯಲ್ಲಿ ಪ್ರತಿ ಶಬ್ದ ಕೂಡ ದುಂಬಿಯ ಸ್ಪರ್ಶಕ್ಕೆ ತಕ್ಕಂತೆ ಬದಲಾಗುವ ವಿನ್ಯಾಸ ಅಚ್ಚರಿ ಮೂಡಿಸುತ್ತದೆ. ಇಂಗ್ಲೆಂಡ್‌ನ ಕಲಾಕಾರ ವೂಲ್ಫ್ ಗಾಂಗ್ ಬಟ್ರಸ್ ಸೃಷ್ಟಿಸಿದ್ದು. ಈ ಜೇನುಗೂಡಿನ ವೈಶಿಷ್ಟ್ಯಪೂರ್ಣ ಜಾಲಂಧ್ರದ ಮೈಕಟ್ಟನ್ನು 170,000 ಅಲ್ಯುಮಿನಿಯಂ ಬಿಡಿ ಭಾಗಗಳಿಂದ ತಯಾರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.