ಜಗತ್ತಿನ ಅತಿ ದೊಡ್ಡ ಉಷ್ಣ ಮರುಭೂಮಿಗಳಲ್ಲಿ ಸಹರಾವೂ ಒಂದು. ಇದು ಉತ್ತರ ಆಫ್ರಿಕಾದಲ್ಲಿದ್ದು, ಆಲ್ಜಿರಿಯಾ, ಚಾಡ್, ಈಜಿಪ್ಟ್, ಲಿಬಿಯಾ, ಮಾಲಿ, ಮೊರೊಕ್ಕೊ, ನಿಗ್, ಪಶ್ಚಿಮ ಸಹಾರ, ಸೂಡಾನ್, ಟುನೇಷಿಯಾವನ್ನು ಆವರಿಸಿದೆ. ಲಿಬಿಯಾನ್ ಮರುಭೂಮಿಯಲ್ಲದೇ ಆಫ್ರಿಕಾ ಖಂಡದ ನಾಲ್ಕನೇ ಒಂದು ಭಾಗವನ್ನು ಆವರಿಸಿದೆ.
ಪಶ್ಚಿಮದ ತುದಿಯಲ್ಲಿ ಆಟ್ಲಾಂಟಿಕ್ ಸಾಗರದ ಗಡಿರೇಖೆಯನ್ನು ಹೊಂದಿದ್ದು, ಉತ್ತರದಲ್ಲಿ ಮೆಡಿಟೇರಿಯನ್ ಸಮುದ್ರ , ದಕ್ಷಿಣದಲ್ಲಿ ನಿಗರ್ ಕಣಿವೆಗಳಿವೆ. ಇಲ್ಲಿನ ವಾತಾವರಣವು ಅತ್ಯಧಿಕ ಉಷ್ಣಾಂಶದಿಂದ ಕೂಡಿರುತ್ತದೆ.ಮರಳುಗಾಡು, ಮರಳಿನ ಸಮುದ್ರ, ಮರಳುದಿನ್ನೆ,ಉಪ್ಪಿನ ಭೂಮಿ, ಒಣ ಕಣಿವೆಗಳು, ಶಿಲೆಗಳು, ನದಿಗಳು ಸೇರಿ ಇಷ್ಟು ದೊಡ್ಡ ಮರುಭೂಮಿ ರೂಪುಗೊಂಡಿದೆ.
ಸ್ವಾರಸ್ಯಕರ ಸಂಗತಿಗಳು
ಈ ಮರುಭೂಮಿಯ ಉತ್ತರ ಮತ್ತು ದಕ್ಷಿಣ ಭಾಗಗಳ ಕೆಲವೆಡೆ ಹುಲ್ಲುಗಾವಲಿನ ಪ್ರದೇಶವಿರುತ್ತದೆ.
ಒಟ್ಟಾರೆ ಮರುಭೂಮಿಯ ರಚನೆಯು ಗಾಳಿಯ ವೇಗದ ಮೇಲೆ ನಿರ್ಧರಿತವಾಗಿದ್ದು, ವಿರಳವಾಗಿ ಮಳೆಯಾಗುತ್ತದೆ. ಹಾಗಾಗಿ ಇದರ ಸ್ಪರೂಪ ಬದಲಾಗುತ್ತಿರುತ್ತದೆ.
ಮರಳು ದಿನ್ನೆಗಳು 590 ಅಡಿಗಿಂತಲೂ ಎತ್ತರದಲ್ಲಿ ರೂಪುಗೊಳ್ಳುತ್ತದೆ. ಈ ಮರುಭೂಮಿಯಲ್ಲಿ ಕೆಲವು ಶಿಲೆಗಳು ಜ್ವಾಲೆಯನ್ನು ಹೊರಸೂಸುತ್ತದೆ. ಕೆಲವೊಮ್ಮೆ ಹಿಮದ ಮಳೆಯಾಗಬಹುದು. ದಕ್ಷಿಣ ಆಲ್ಜಿರಿಯಾದಲ್ಲಿ 2012ರಲ್ಲಿ ಹಿಮದ ಮಳೆಯಾಗಿತ್ತು.
ಈ ಭಾಗದಲ್ಲಿ ಬರುವ ನದಿಯು ಆಯಾ ಋತುಗೆ ತಕ್ಕನಾಗಿರುತ್ತದೆ. ನೈಲ್ ನದಿಯು ಇದೇ ಮರುಭೂಮಿಯನ್ನು ಹಾದುಹೋಗುತ್ತದೆ.
20ಕ್ಕೂ ಹೆಚ್ಚು ಸರೋವರಗಳಿದ್ದು, ಬಹುತೇಕ ಉಪ್ಪು ನೀರನ್ನು ಹೊಂದಿರುತ್ತದೆ. ಚಾಡ್ ಸರೋವರ ಮಾತ್ರ ಸಿಹಿ ನೀರಿನಿಂದ ಕೂಡಿರುತ್ತದೆ.
ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಈ ಮರುಭೂಮಿಯಲ್ಲಿ ವಾಸವಾಗಿದ್ದಾರೆ. ಆದರೆ, ಬಹುತೇಕರು ಅಲೆಮಾರಿಗಳಾಗಿದ್ದು, ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವಲಸೆ ಹೋಗುತ್ತಾರೆ.
ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಖರ್ಜೂರ ಮರಗಳಲ್ಲದೇ. ತಮಾರಿಸ್ಕ ಮತ್ತು ಅಕೆಶೀಯಾ ನೆಲದಡಿಯವರೆಗೆತನ್ನ ಬೇರುಗಳನ್ನು ಬಿಡುತ್ತದೆ. ಈ ಖರ್ಜೂರ ಗಿಡಗಳನ್ನು ಅರಬ್ಬರು ಪರಿಚಯಿಸಿದರು. ಈ ಖರ್ಜೂರ ಮರ ಉಪಯುಕ್ತವಾಗಿದ್ದು, ಕೊಂಬೆಗಳಿಂದ ತೊಲೆ ಮಾಡಲಾಗುತ್ತದೆ, ಅದರ ಎಲೆಗಳಿಂದ ಬುಟ್ಟಿ ಹೆಣೆಯಲಾಗುತ್ತದೆ ಅಲ್ಲದೇ, ಗುಡಿಸಲು ಕಟ್ಟಲು ಈ ಮರದ ಬಳಕೆ ಹೆಚ್ಚು.
ಒಂಟೆ ಪ್ರಮುಖ ಪ್ರಾಣಿ. ಅತಿ ಉಷ್ಣ ಮತ್ತು ಬಾಯಾರಿಕೆಯನ್ನು ತಡೆದುಕೊಳ್ಳುವ ಶಕ್ತಿ ಇದಕ್ಕಿದ್ದು, 50 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ಉಷ್ಣಾಂಶವಿದ್ದರೂ ನೀರು ಕುಡಿಯದೇ ಬದುಕಬಲ್ಲದು. ಒಂಟೆ ಮತ್ತು ಮೇಕೆಗಳು ಅಲೆಮಾರಿಗಳ ಪ್ರಿಯವಾದ ಪ್ರಾಣಿಗಳು. ಇದಲ್ಲದೇ ನರಿಗಳ ವಿವಿಧ ತಳಿಗಳು ವಾಸಿಸುತ್ತವೆ.
**
ಮರುಭೂಮಿ: ಸಹರಾ
ಉದ್ದ: 9,400 ಕಿ.ಮೀ
ಪ್ರದೇಶ: ಉತ್ತರ ಆಫ್ರಿಕಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.