ಮಾಡ್ರಿಡ್ (ಪಿಟಿಐ): ‘ಭೂಮಿ ಮತ್ತು ಮಕ್ಕಳ ಭವಿಷ್ಯದ ರಕ್ಷಣೆಗೆ ವಿಶ್ವದ ನಾಯಕರು ಕ್ರಮಕೈಗೊಳ್ಳಬೇಕು’ ಎಂದು ಹವಾಮಾನ ಬದಲಾವಣೆ ವಿರುದ್ಧ ಹೋರಾಡುತ್ತಿರುವ ‘ಭಾರತದ ಗ್ರೆಟಾ’ ಎಂದೇ ಹೆಸರಾದ 8 ವರ್ಷದ ಲಿಸಿಪ್ರಿಯಾ ಕಂಗುಜಮ್ ಪ್ರತಿಪಾದಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ‘ಸಿಒಪಿ25’ ತಾಪಮಾನ ಸಮಾವೇಶದಲ್ಲಿ ಮಾತನಾಡಿದ ಭಾರತದ ಮಣಿಪುರದ ಈ ಯುವ ಕಾರ್ಯಕರ್ತೆ, ‘ಹವಾಮಾನ ಬದಲಾವಣೆ ತಡೆಗೆ ತಕ್ಷಣದಿಂದ ಕಾರ್ಯಪ್ರವೃತ್ತರಾಗಬೇಕು’ ಎಂದು ಹಕ್ಕೊತ್ತಾಯ ಮಂಡಿಸಿದರು.
ಕಂಗುಜಮ್ ಅವರು ಈಗಾಗಲೇ ಹವಾಮಾನ ಬದಲಾವಣೆ ಕುರಿತಂತೆ ಸುಮಾರು 21 ರಾಷ್ಟ್ರಗಳಲ್ಲಿ ವಿಷಯ ಮಂಡಿಸಿದ್ದಾರೆ. ಸ್ಪೇನ್‌ನ ಮಾಧ್ಯಮಗಳು ಈಕೆಯನ್ನು ಜಾಗತಿಕವಾಗಿ ದಕ್ಷಿಣ ಭಾಗದ ಗ್ರೆಟಾ ಎಂದು ಬಿಂಬಿಸಿದ ಬಳಿಕ ಚರ್ಚೆಯ ಮುನ್ನೆಲೆಗೆ ಬಂದಿದ್ದಳು.
ಸ್ಪಷ್ಟ ಮತ್ತು ದೃಢವಾಗಿ ವಿಷಯ ಮಂಡಿಸುವ ಕಂಗುಜಮ್ ಅವರ ವಾಕ್ಪಟುತ್ವ ಗಮನಿಸಿದಾಗ ಆಕೆಯ ವಯಸ್ಸು ಕೇವಲ ಎಂಟು ವರ್ಷ ಎಂದು ಅಂದಾಜಿಸುವುದು ಕಷ್ಟ. ಆದರೂ, ಜಗತ್ತಿಗೆ ಸಂದೇಶ ರವಾನಿಸುವ ಅವಕಾಶವನ್ನು ಆಕೆ ಎಂದೂ ತಪ್ಪಿಸಿಕೊಳ್ಳುವುದಿಲ್ಲ.
‘ಸಿಒಪಿ25’ ಸಮಾವೇಶಕ್ಕಾಗಿ ಸ್ಪೇನ್‌ಗೆ ಬಾಲಕಿ ಜೊತೆಗೆ ಬಂದಿರುವ ಆಕೆಯ ತಂದೆ ಕೆ.ಕೆ.ಸಿಂಗ್, ‘ಇಂತಹ ಕಾರ್ಯಕ್ರಮಗಳಿಗೆ ತೆರಳಲು ಆರ್ಥಿಕ ನೆರವು ಒದಗಿಸಬೇಕು ಎಂಬ ಹಲವು ಮನವಿಗಳಿಗೆ ಸರ್ಕಾರ ಕಿವುಡಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಸಿಒಪಿ25 ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ವಿಶ್ವಸಂಸ್ಥೆಯು ಆಹ್ವಾನ ನೀಡಿದಾಗ, ಸ್ಪೇನ್‌ಗೆ ತೆರಳುವ ವೆಚ್ಚ ಭರಿಸುವುದು ಹೇಗೆ ಎಂಬ ಚಿಂತೆ ಕಾಡಿತ್ತು. ಕ್ರೌಡ್‌ಫಂಡಿಂಗ್‌ನ ಮೊರೆ ಹೋದಾಗ ಭುವನೇಶ್ವರದ ವ್ಯಕ್ತಿಯೊಬ್ಬರು ವಿಮಾನ ಟಿಕೆಟ್ ಕಾಯ್ದಿರಿಸಲು ನೆರವಾದರು.
‘ಬಳಿಕ ಮ್ಯಾಡ್ರಿಡ್‌ನಲ್ಲಿ ತಂಗಲು, ಕೊಠಡಿ ಕಾಯ್ದಿರಿಸಲು ನನ್ನ ತಾಯಿ ಚಿನ್ನದ ಸರ ಮಾರಬೇಕಾಯಿತು’ ಎಂದು ಕಂಗುಜಮ್ ಹೇಳಿದರು. ಆದರೆ, ಮ್ಯಾಡ್ರಿಡ್‌ಗೆ ತೆರಳಲು ಭಾರತದಿಂದ ನಿರ್ಗಮಿಸುವ ಒಂದು ದಿನ ಮೊದಲು ನ.30ರಂದು ಸ್ಪೇನ್ ಸರ್ಕಾರ ಇ–ಮೇಲ್ ಕಳುಹಿಸಿದ್ದು, 13 ದಿನಗಳ ವಾಸ್ತವ್ಯದ ಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿತ್ತು ಎಂದು ಸಿಂಗ್ ಬಳಿಕ ಹೇಳಿದರು. ಹಲವು ತೊಡಕುಗಳ ನಂತರ ಮ್ಯಾಡ್ರಿಡ್ ತಲುಪಿದ ಕಂಗುಜಮ್ ತನ್ನ ಮಾತುಗಳಿಂದ ಸಭಿಕರ ಮನಗೆಲ್ಲುವಲ್ಲಿ ಯಶಸ್ವಿಯಾದಳು. ಹವಾಮಾನ ವೈಪರೀತ್ಯ ತಡೆಯುವ ಅಗತ್ಯವನ್ನು ಜಗತ್ತಿನ ಪ್ರಮುಖರ ಎದುರು ಮಂಡಿಸಿದಳು. ಈ ಮಧ್ಯೆ, ಪರಿಸರ ರಕ್ಷಣೆ ಕುರಿತ ಹೋರಾಟಗಳಲ್ಲಿ ಭಾಗವಹಿಸಿದ್ದರಿಂದ, ತರಗತಿಗಳಿಗೆ ಗೈರುಹಾಜರಾದ ಕಾರಣ ಫೆಬ್ರುವರಿಯಲ್ಲಿ ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಆಗಲಿಲ್ಲ ಎಂದು ಆಕೆಯ ತಂದೆ ತಿಳಿಸಿದರು.
ಆದರೆ, ತಾಪಮಾನ ವೈಪರೀತ್ಯ ವಿರುದ್ಧದ ಹೋರಾಟದ ಜೊತೆಗೆ ಶಿಕ್ಷಣವನ್ನು ಮುಂದುವರಿಸುವ ಗುರಿ ಹೊಂದಿದ್ದಾಳೆ. ತಾಪಮಾನ ವೈಪರೀತ್ಯ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿರುವ ವಿಶ್ವದ ಕಿರಿಯ ಹೋರಾಟಗಾರ್ತಿ ಕಂಗುಜಮ್ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕೆ.ಕೆ. ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.