ADVERTISEMENT

ಶ್ರಮದಾನ; ಹೊಂಡಕ್ಕೆ ಜೀವದಾನ

ಕುಮಾರವ್ಯಾಸನ ಕಾವ್ಯಕ್ಕೆ ಸ್ಪೂರ್ತಿ ನೀಡಿದ ಕೊನೇರಿ ಹೊಂಡ

ಹುಚ್ಚೇಶ್ವರ ಅಣ್ಣಿಗೇರಿ
Published 16 ಏಪ್ರಿಲ್ 2019, 12:15 IST
Last Updated 16 ಏಪ್ರಿಲ್ 2019, 12:15 IST
ನೀರಿನಿಂದ ತುಂಬಿರುವ ಕೊನೇರಿ ಹೊಂಡ
ನೀರಿನಿಂದ ತುಂಬಿರುವ ಕೊನೇರಿ ಹೊಂಡ   

2017 ರಲ್ಲಿ..

ಆ ಐತಿಹಾಸಿಕ ಹೊಂಡದಲ್ಲಿ ನೀರು ಬತ್ತಿತ್ತು. ಎದೆಮಟ್ಟದಷ್ಟು ದೊಡ್ಡ ದೊಡ್ಡ ಗಿಡಗಳು ಬೆಳೆದಿದ್ದವು. ಜತೆಗೆ ಕಸದ ರಾಶಿಯಿತ್ತು. ಪಾಳು ಬಿದ್ದ ಸ್ಮಾರಕದಂತೆ ಕಾಣುತ್ತಿತ್ತು.

2018ರಲ್ಲಿ..

ADVERTISEMENT

ಕಸದ ರಾಶಿ, ಎದೆಮಟ್ಟ ಗಿಡಗಳೆಲ್ಲ ಮಾಯವಾಗಿವೆ. ಐತಿಹಾಸಿಕ ಆ ಹೊಂಡಕ್ಕೆ ಮರು ಜೀವ ಬಂದಿದೆ. ಪಾಳು ಸ್ಮಾರಕದಂತಿದ್ದ ಹೊಂಡದಲ್ಲಿ ಜಲಧಾರೆ. ಈಗ ಬಿರು ಬೇಸಿಗೆಯಲ್ಲೂ ಹೊಂಡದಲ್ಲಿ ನೀರು ತುಂಬಿದೆ.

ಇದು ಗದಗದ ಐತಿಹಾಸಿಕ ಕೊನೇರಿ ಹೊಂಡದ ಯಶೋಗಾಥೆ. ದಶಕಗಳಿಂದ ಪಾಳುಬಿದ್ದಿದ್ದ ಹೊಂಡಕ್ಕೆ ಅಲ್ಲಿನ ಯುವ ಬ್ರಿಗೆಡ್‌ ತಂಡದ ಸದಸ್ಯರು ಶ್ರಮದಾನದ ಮೂಲಕ ಮರುಜೀವ ನೀಡಿದ್ದಾರೆ.

ಗದಗದ ಗಂಗಾಪೂರಪೇಟೆಯ ವೀರನಾರಾಯಣ ದೇಗುಲದ ಎದುರಿಗಿದೆ ಕೊನೇರಿ ಹೊಂಡ. ಎರಡು ವರ್ಷಗಳ ಹಿಂದಿನವರೆಗೂ ಪಾಳು ಗುಂಡಿಯಂತಾಗಿದ್ದ ಹೊಂಡವನ್ನು ಯುವ ಬ್ರಿಗೇಡ್‌ ಸದಸ್ಯರು ಆರೇಳು ತಿಂಗಳುಗಳ ಕಾಲ ಶ್ರಮದಾನ ಮಾಡಿ, ಹೂಳು ತೆಗೆದು, ಸ್ವಚ್ಛಗೊಳಿಸಿದ್ದಾರೆ. ಪರಿಣಾಮವಾಗಿ ಹೊಂಡದಲ್ಲಿ ನೀರು ಉಕ್ಕಿದೆ.

ಬ್ರಿಗೇಡ್ ತಂಡ

ಗದುಗಿನ ಭಾರತ ಬರೆಯಲು ಕುಮಾರವ್ಯಾಸನಿಗೆ ಸ್ಪೂರ್ತಿಯಾಗಿತ್ತು ಈ ಕೊನೇರಿ ಹೊಂಡ. ಕುಮಾರವ್ಯಾಸ, ಬೆಳಗಿನ ಜಾವ ಇದೇ ಹೊಂಡದಲ್ಲಿ ಸ್ನಾನ ಮಾಡಿ ಎದುರಿಗಿರುವ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ಕುಳಿತು ಮಹಾಕಾವ್ಯ ಬರೆಯುತ್ತಿದ್ದರು ಎನ್ನುತ್ತದೆ ಇತಿಹಾಸ. ಇಂಥ ಐತಿಹಾಸಿಕ ಹೊಂಡದಲ್ಲಿ ಕೆಲವು ವರ್ಷಗಳ ಹಿಂದೆ ಖ್ಯಾತ ನಾಟಕಕಾರ ಗಿರೀಶ್‌ ಕಾರ್ನಾಡ್ ಅವರ ‘ತಲೆದಂಡ’ ಪೌರಾಣಿಕ ನಾಟಕದ ಪ್ರದರ್ಶನ ಕೂಡ ನಡೆದಿತ್ತು.

ಗದಗ–ಬೆಟಗೇರಿ ಅವಳಿ ನಗರದಲ್ಲಿರುವ ಹೊಂಡಗಳಿಗೆ ಹೋಲಿಸಿದರೆ, ಇದೇ ತುಸು ದೊಡ್ಡ ವಿಸ್ತೀರ್ಣದ ಹೊಂಡವೇ. ಆ ಕಾಲದಲ್ಲೇ ಸುತ್ತಲೂ ಸುರಿಯುವ ಮಳೆ ನೀರೆಲ್ಲ ಹೊಂಡಕ್ಕೆ ಹರಿದುಬರುವಂತಹ ವ್ಯವಸ್ಥೆ ಮಾಡಲಾಗಿದೆ. ಈ ಜಲಪಾತ್ರೆಯಲ್ಲಿ ನೀರು ತುಂಬಿಕೊಂಡರೆ, ಸುತ್ತಮುತ್ತಲಿನ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಇಷ್ಟೆಲ್ಲ ಅನುಕೂಲ ಕಲ್ಪಿಸುತ್ತಿದ್ದ ಹೊಂಡ, ನಿರ್ವಹಣೆ ಕೊರತೆಯಿಂದಲೋ ಏನೋ ದಶಕದಿಂದೀಚೆಗೆ ಪಾಳು ಬಿದ್ದಿತ್ತು. ಹೂಳು ತುಂಬಿಕೊಂಡಿತ್ತು. ನೀರು ಒಸರುವ ಜಲದ ಕಣ್ಣುಗಳು ಮುಚ್ಚಿ ಹೋಗಿದ್ದವು.

‘ಬ್ರಿಗೆಡ್‌’ ಶ್ರಮದಾನ :ಕೊನೇರಿ ಹೊಂಡದ ಪರಿಸ್ಥಿತಿ ಗಮನಿಸಿದ ಯುವ ಬ್ರಿಗೇಡ್‌ ಸದಸ್ಯರು ‘ಜಲ ಜೀವನ’ ಯೋಜನೆಯಡಿ ಈ ಪುಷ್ಕರಣಿಯ ಪುನರುಜ್ಜೀವನಕ್ಕೆ ಯೋಜನೆ ರೂಪಿಸಿದರು. 2017 ಫೆಬ್ರುವರಿಯಿಂದ ಡಿಸೆಂಬರ್‌ ತಿಂಗಳ ಅಂತ್ಯದವರೆಗೆ ಹೂಳೆತ್ತುವ ಕಾರ್ಯ ನಡೆಯಿತು. ಹತ್ತಕ್ಕೂ ಹೆಚ್ಚು ಸದಸ್ಯರು ತಮ್ಮ ಬಿಡವಿನ ವೇಳೆಯಲ್ಲಿ ಪ್ರತಿದಿನ ಬೆಳಿಗ್ಗೆ 6.30ರಿಂದ 9 ಗಂಟೆವರೆಗೆ ಶ್ರಮದಾನ ಮಾಡಿದರು. 5 ಅಡಿ ಆಳದವರೆಗೆ ಹೂಳು ತೆಗೆದರು. ಮಧ್ಯೆ ಮಳೆಗಾಲ ಆರಂಭವಾಯಿತು. ಆಗ ಸ್ವಲ್ಪ ದಿನಗಳ ಕಾಲ ಶ್ರಮದಾನಕ್ಕೆ ವಿರಾಮ ನೀಡಿದರು. ನಂತರ ಸೆಪ್ಟೆಂಬರ್‌ನಲ್ಲಿ ಮತ್ತೆ ಹೂಳೆತ್ತುವ ಕಾರ್ಯ ಆರಂಭಿಸಿದರು.

ಒಟ್ಟು 250 ದಿನಗಳ ಶ್ರಮದಾನ. ಸುಮಾರು 150ಕ್ಕೂ ಟ್ರ್ಯಾಕ್ಟರ್‌ ಲೋಡ್‌ಗೂ ಹೆಚ್ಚು ಹೂಳೆತ್ತಿದರು. ಹೊಂಡ ಸ್ವಚ್ಛಗೊಳ್ಳುತ್ತಾ ಹೋದಂತೆ, ಪುರಾತನ ರೂಪ ಕಾಣಿಸಿಕೊಳ್ಳಲಾರಂಭಿಸಿತು. ಇವೆಲ್ಲದರ ಫಲವಾಗಿ 2018ರ ಜನವರಿಯಲ್ಲಿ ಕಲ್ಯಾಣಿಯಲ್ಲಿ ಜೀವಸೆಲೆ ಪುಟಿದೆದ್ದಿತು. ಸದ್ಯ ಕೊನೇರಿ ಹೊಂಡ ನೀರಿನಿಂದ ಭರ್ತಿಯಾಗಿದೆ. ನಗರದ ಹೃದಯ ಭಾಗದಲ್ಲಿರುವ ಭೀಷ್ಮಕೆರೆ ತುಂಬಿರುವುದರಿಂದ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿದೆ. ಈ ಕೆರೆಯಿಂದ ಒಂದೂವರೆ ಕಿ.ಮೀ ದೂರದಲ್ಲಿ ಕೊನೇರಿ ಹೊಂಡವಿರುವದಿರಂದ, ಇದರಲ್ಲೂ ಅಂತರ್ಜಲ ಸ್ಥಿರವಾಗಿದೆ.

ಕೊನೇರಿ ಹೊಂಡ ತುಂಬಿದ ನಂತರ ಕೆಲವು ತಿಂಗಳ ಹಿಂದೆ ಸಾಂಕೇತಿಕವಾಗಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಲ್ಯಾಣಿಯ ಆವರಣದಲ್ಲಿ ಮೆಟ್ಟಿಲುಗಳ ಮೇಲೆ ಹಣತೆಗಳನ್ನು ಹಚ್ಚಿ ದೀಪೋತ್ಸವ ಆಚರಿಸಲಾಯಿತು.

ಯುವ ಬ್ರಿಗೆಡ್ ಸದಸ್ಯರ ಶ್ರಮದಾನ

ಮತ್ತಷ್ಟು ಶ್ರಮದಾನಕ್ಕೆ ಸ್ಪೂರ್ತಿ: ‘ಒಂದೂವರೆ ವರ್ಷದಿಂದ ಹೊಂಡದಲ್ಲಿ ನೀರು ನಿಂತಿದೆ. ಸುತ್ತಮುತ್ತಲಿನ ಜನರು ನಿತ್ಯ ಇಲ್ಲಿಗೆ ಬಂದು ಕೆಲಹೊತ್ತು ಕಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗದುಗಿನ ನಾರಪ್ಪನ ಬಾವಿಯ(ಪುಷ್ಕರಣಿ) ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ’ ಎನ್ನುತ್ತಾರೆ ಯುವ ಬ್ರಿಗೇಡ್‌ನ ಸಂಚಾಲಕ ವಿಜಯಕುಮಾರ ಓದುಸುಮಠ, ಸಂಜಯ ಉಪ್ಪಿನ, ಆದರ್ಶ ಬಳಗಾನೂರ, ಮಂಜುನಾಥ ಜಿ.

2014ರಲ್ಲಿ ಇದೇ ತಂಡದ ಸದಸ್ಯರು ಗದುಗಿನ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದ ಸಮೀಪದ ಹೊಕ್ಕುತುಂಬವ ಬಾವಿಯಲ್ಲಿ (ಪಷ್ಕರಣಿ) ಹೂಳನ್ನು ತೆಗೆದಿದ್ದರು. ಕೆಸರು, ತ್ಯಾಜ್ಯವನ್ನು ಹೊರಹಾಕಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದರು. 2015ರಲ್ಲಿ ಈ ಬಾವಿಯಲ್ಲಿ ನೀರು ಜಿನುಗಲು ಆರಂಭವಾಯಿತು. ಯುವಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದರು. ಇದರಿಂದ ಸ್ಫೂರ್ತಿಗೊಂಡ ತಂಡವೇ ಕೊನೇರಿ ಹೊಂಡವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು. ಸದ್ಯ ಕೊನೇರಿ ಹೊಂಡ ಹಾಗೂ ಹೊಕ್ಕತುಂಬವ ಪುಷ್ಕರಣಿಯಲ್ಲಿ ನೀರು ಉಕ್ಕುತ್ತಿದೆ. ಯುವಕರ ಶ್ರಮ ಸಾರ್ಥಕವಾಗಿದೆ.

‘ಪುನರುಜ್ಜೀವನಗೊಂಡಿರುವ ಕೊನೇರಿ, ಹೊಕ್ಕುಬಾವಿ ಸುತ್ತಲಿನಲ್ಲಿರುವ ಸಾರ್ವಜನಿಕರು, ಹೊಂಡಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಐತಿಹಾಸಿಕ ಕಲ್ಯಾಣಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಅಭಿಪ್ರಾಯಪಡುತ್ತಾರೆ ನಿವಾಸಿಗಳಾದ ಪ್ರಕಾಶ ತಳವಾರ, ಮಹೇಶ ತಳೊಗೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.