ನಿಗೂಢ ಸದ್ದಿನ ಮೂಲ ಹುಡುಕುತ್ತ ತಮ್ಮ ಜೀವನದ ಒಂದು ಡಜನ್ ವರ್ಷಗಳನ್ನು ವ್ಯಯಿಸಿದ ತಜ್ಞರ ತಂಡವು ಆ ಸುದೀರ್ಘ ಸಮಯದಲ್ಲಿ ನಡೆಸಿದ ಸಂಶೋಧನೆಯಲ್ಲಿ ಬಿಚ್ಚಿಕೊಂಡಿದ್ದೇ ಈ ಒಂಟಿ ತಿಮಿಂಗಲದ ಕಥೆ...
***
ಒಂಟಿತನ, ಖಿನ್ನತೆ, ಒತ್ತಡದಂತಹ ಮಾನಸಿಕ ಪರಿಸ್ಥಿತಿಗಳು ಮಾನವನಿಗಷ್ಟೇ ಸೀಮಿತವೆಂಬುದು ಸಾಮಾನ್ಯ ನಂಬಿಕೆ. ಆದರೆ ನಿಜಕ್ಕೂ ಇದು ಸತ್ಯವೇ? ಆಗಸದಲ್ಲಿ ಹಾರುತ್ತಿರುವ ಹಕ್ಕಿ, ನೆಲದ ಮೇಲೆ ಕುಪ್ಪಳಿಸುತ್ತಿರುವ ಕಪ್ಪೆ, ಸಮುದ್ರದ ಆಳದಲ್ಲಿ ಈಜುತ್ತಿರುವ ಮೀನು ಇವುಗಳೆಲ್ಲವೂ ಈ ಖಿನ್ನತೆ, ಒಂಟಿತನವನ್ನು ಅನುಭವಿಸುತ್ತಿರಬಹುದೇ? ಹಾಗಿದ್ದ ಪಕ್ಷದಲ್ಲಿ ಯಾವ ಆಪ್ತಸಮಾಲೋಚಕರ ನೆರವಿಲ್ಲದೆಯೇ ಅಂತಹ ಸನ್ನಿವೇಶವನ್ನು ಅವುಗಳು ಹೇಗೆ ಸಂಭಾಳಿಸಿಕೊಳ್ಳುತ್ತವೆ?
ಮಾನವನಲ್ಲಿ ಇರುವಂತೆಯೇ ಎಲ್ಲ ಜೀವಿಗಳಲ್ಲಿಯೂ ತಮ್ಮದೇ ಆದ ಭಾವೆನೆಗಳಿರುತ್ತವೆ. ಅವುಗಳೂ ಮಾನಸಿಕ ಕಾಯಿಲೆಗಳಿಂದ ಬಳಲುತ್ತವೆ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಮನಃಶಾಸ್ತ್ರಜ್ಞರ ಸೆಮಿನಾರ್‌ಗಳ ಜಿಜ್ಞಾಸೆಯ ಪಟ್ಟಿಯಲ್ಲಷ್ಟೇ ಇರುತ್ತಿದ್ದ ಈ ವಿಷಯವನ್ನು ಜಾಗತಿಕವಾಗಿ ಚರ್ಚೆಗೆ ಕಾರಣವಾಗಿಸಿದ ಶ್ರೇಯ ಪೆಸಿಫಿಕ್ ಸಾಗರದಲ್ಲಿ ತೇಲಾಡಿಕೊಂಡಿರುವ ತಿಮಿಂಗಲವೊಂದಕ್ಕೆ ಸಲ್ಲುತ್ತದೆ.
ಅದು 1989ರ ಒಂದು ದಿನ. ಅಮೆರಿಕ ಮತ್ತು ಸೋವಿಯತ್ ರಷ್ಯಾ ನಡುವಿನ ಶೀತಲ ಸಮರ ತಾರಕಕ್ಕೇರಿತ್ತು. ಸಂಭಾವ್ಯ ಯುದ್ಧದ ಸನ್ನಿವೇಶದಲ್ಲಿ ತಮ್ಮ ದೇಶದ ನೆಲ, ಜಲ, ವಾಯುಗಡಿಗಳನ್ನು ಎರಡೂ ದೇಶಗಳ ಸೈನಿಕರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರು. ರಷ್ಯಾದ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚಲು ಅಮೆರಿಕದ ಮಿಲಿಟರಿ ಪಡೆಗಳು ಇರಿಸಿದ್ದ ಹೈಡ್ರೋಫೋನ್ ಉಪಕರಣವೊಂದು ಪೆಸಿಫಿಕ್ ಸಾಗರದಾಳದಿಂದ ಸದ್ದನ್ನೊಂದನ್ನು ಪತ್ತೆ ಹಚ್ಚಿತು. 52 ಹರ್ಟ್ಜ್‌ನ ಆವರ್ತನದಲ್ಲಿ ಹೊರಹೊಮ್ಮಿದ್ದ ಆ ಸದ್ದನ್ನು ಗಂಭೀರವಾಗಿಯೇ ತೆಗೆದುಕೊಂಡ ಮಿಲಿಟರಿ ಪಡೆಯು ಆ ಪ್ರದೇಶವನ್ನೆಲ್ಲ ಹುಡುಕಾಡಿ ಕೊನೆಗೆ ಏನೂ ಸಿಗದೇ ಸುಮ್ಮನಾಯಿತು.
ಇದಾದ ಮೂರು ವರ್ಷಗಳ ಬಳಿಕ ಅಮೆರಿಕ ಮಿಲಿಟರಿ ಪಡೆಯು ಈ ನಿಗೂಢ ಸದ್ದಿನ ಮೂಲ ಪತ್ತೆಹಚ್ಚಲು ವಿಲಿಯಮ್ ವಾಟ್ಕಿನ್ಸ್ ಎಂಬ ಸಾಗರ ಶಾಸ್ತ್ರಜ್ಜರೊಬ್ಬರನ್ನು ನೇಮಿಸಿತು. ಈ ಪತ್ತೇದಾರಿಕೆಯಲ್ಲಿ ವಾಟ್ಕಿನ್ಸ್ ಅವರ ಜೊತೆಗೆ ಪರಿಣಿತರ ತಂಡವೂ ಇತ್ತು. ಈ ಒಂದು ಸದ್ದಿನ ತುಣುಕನ್ನಿಟ್ಟುಕೊಂಡು ತನಿಖೆಯನ್ನಾರಂಭಿಸಿದ ತಂಡಕ್ಕೆ ಮೊದಲು ಗೊಂದಲ ಮೂಡಿಸಿದ್ದೇ ಆ 52ರ ಆವರ್ತನ.
ತಂಡದ ಪರಿಣಿತರಲ್ಲಿ ಕೆಲವರದನ್ನು ತಿಮಿಂಗಲವೊಂದರ ಕೂಗೆಂದು ವಾದಿಸಿದರು. ಆದರೆ ತಮ್ಮ ಕಿವಿಯ ಬಳಿಯ ಕವಾಟಗಳಿಂದ ಗಾಳಿಯನ್ನು ಊದಿ ಧ್ವನಿಯನ್ನು ಹೊರಹೊಮ್ಮಿಸುವ ತಿಮಿಂಗಲಗಳ ಹಾಡೆಂದೇ ಹೆಸರು ಪಡೆದಿರುವ ಆ ಕೂಗಿನ ಆವರ್ತನದ ವ್ಯಾಪ್ತಿ 10ರಿಂದ 30 ಹರ್ಟ್ಜ್‌ಗಳಷ್ಟೇ ಎಂಬ ಅರಿವಿನ ಹಿನ್ನೆಲೆಯಲ್ಲಿ ಅವರ ವಾದಕ್ಕೆ ಹೆಚ್ಚು ಪುಷ್ಟೀಕರಣ ಸಿಗಲಿಲ್ಲ. ಅಷ್ಟಕ್ಕೂ ತಮ್ಮ ಈ ಹಾಡುಗಳಿಂದಲೇ ತಾವು ತಿಮಿಂಗಲಗಳ ಯಾವ ಉಪಜಾತಿಗೆ ಸೇರಿದ್ದವೆಂಬುದರ ಕುರಿತ ಸುಳಿವನ್ನು ಕೊಡುವ ಈ ಜಲಚರಗಳ ಯಾವ ಜಾತಿಯೂ 30 ಹರ್ಟ್ಜ್‌ಗಳ ಈ ಲಕ್ಷ್ಮಣರೇಖೆಯನ್ನು ದಾಟದಿರುವುದನ್ನು ತಂಡವು ಮತ್ತೊಮ್ಮೆ ಖಾತ್ರಿ ಪಡಿಸಿಕೊಂಡಿತು.
ತಮ್ಮ ಸಂಶೋಧನೆಯ ಅಂಗವಾಗಿ 1992ರಿಂದ 2004 ರವೆರೆಗೆ ಪೆಸಿಫಿಕ್ ಸಾಗರ ಮತ್ತು ಸುತ್ತಮುತ್ತಲೆಲ್ಲ ಪ್ರದೇಶಗಳನ್ನು ಜಾಲಾಡಿದ ತಂಡಕ್ಕೆ ಹಲವು ಬಾರಿ ಆ ಕೂಗು ಕೇಳಿಸಿತು. ಅದು ಹೊರಹೊಮ್ಮುವ ಸಮಯ ಮತ್ತು ಪತ್ತೆಯಾಗುತ್ತಿದ್ದ ಜಾಗಗಳೆಲ್ಲ ತಿಮಿಂಗಲಗಳ ಮಿಲನದ ಸಮಯ ಮತ್ತು ವಲಸೆಯ ಮಾರ್ಗಕ್ಕೆ ತಾಳೆ ಹೊಂದುತ್ತಿದ್ದರೂ ಕಗ್ಗಂಟಾಗಿ ಉಳಿದದ್ದು ಆ 52 ಹರ್ಟ್ಜ್‌ನ ಆವರ್ತನ ಮಾತ್ರ. ಹೀಗೆ ಈ ನಿಗೂಢ ಸದ್ದಿನ ಮೂಲ ಹುಡುಕುತ್ತ ತಮ್ಮ ಜೀವನದ ಒಂದು ಡಜನ್ ವರ್ಷಗಳನ್ನು ವ್ಯಯಿಸಿದ ತಂಡವು ಆ ಸುದೀರ್ಘ ಸಮಯದಲ್ಲಿ ತಮಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಸಂಶೋಧನೆಯ ವರದಿಯನ್ನು ಅಖೈರುಗೊಳಿಸುವುದರೊಳಗೆ ಸಂಶೋಧನಾ ತಂಡದ ನಾಯಕ ವಾಟ್ಕಿನ್ಸ್ ತಮ್ಮ 78ರ ವಯಸ್ಸಿನಲ್ಲಿ ಸಾವನ್ನಪ್ಪಿದರು. ಅವರ ಮರಣಾನಂತರ 2004ರಲ್ಲಿ ಅಂತೂ ಇಂತೂ ಪ್ರಕಟಗೊಂಡ ವರದಿಯ ಬಗ್ಗೆ ಆರಂಭದಲ್ಲಿ ಇದ್ದ ಆಸಕ್ತಿಯನ್ನು ಅಧಿಕಾರಿಗಳು ಕಳೆದುಕೊಂಡಿದ್ದ ಪರಿಣಾಮವಾಗಿ ಹತ್ತರಲ್ಲಿ ಹನ್ನೊಂದು ಎಂಬಂತೇ ಅ ವರದಿ ಮೂಲೆ ಸೇರಿತು.
ಇದಾದ ಹಲವು ತಿಂಗಳುಗಳ ನಂತರ ಅಮೆರಿಕದ ಪ್ರಮುಖ ಪತ್ರಿಕೆಯೊಂದು ಈ ಪೂರ್ತಿ ಪ್ರಹಸನದ ಕುರಿತು ರೋಚಕ ಕತೆಯನ್ನು ಬರೆದು ಮುಖಪುಟದಲ್ಲಿ ಪ್ರಕಟಿಸಿತು. ಆ 52ರ ಆವರ್ತನದ ಯಕ್ಷಪ್ರಶ್ಣೆಗೆ ಕೊನೆಗೂ ಉತ್ತರವನ್ನು ಕಂಡುಹಿಡಿದ ಸಂಶೋಧನಾ ತಂಡವು ಅದರ ಮೂಲವೊಂದು ಅಂಗವಿಕಲ ತಿಮಿಂಗಲವೆಂದು ವರದಿಯಲ್ಲಿ ಬಹಿರಂಗಪಡಿಸಿತ್ತು. ಇದುವರೆಗೆ ಒಮ್ಮೆಯೂ ಯಾರಿಗೂ ಕಾಣಿಸಿಕೊಳ್ಳದೇ ಕೇವಲ ಧ್ವನಿಯಿಂದಲೇ ತನ್ನ ಇರುವಿಕೆಯನ್ನು ಪ್ರಚುರಪಡಿಸುತ್ತಿದ್ದ ಆ ತಿಮಿಂಗಲವು ತನ್ನ ದೈಹಿಕ ನ್ಯೂನತೆಯ ಪರಿಣಾಮದಿಂದ ಬೇರೆ ತಿಮಿಂಗಲಗಳಿಗಿಂತ ವಿಭಿನ್ನವಾಗಿ ತನ್ನದೇ ಸ್ವರದಲ್ಲಿ ಧ್ವನಿಯನ್ನು ಹೊರಡಿಸುತ್ತಿದೆಯೆಂಬ ನಿರ್ಧಾರಕ್ಕೆ ಸಂಶೋಧನಾ ತಂಡವು ಬಂದಿತ್ತು.
ತನ್ನ ನ್ಯೂನತೆಯ ಪರಿಣಾಮವಾಗಿ ಮಾತು ಬರುತ್ತಿದ್ದರೂ ಮೂಕನಂತಾಗಿದ್ದ ಆದರೂ ಇತರ ತಿಮಿಂಗಲಗಳ ಜೊತೆಗೆ ಸಂಪರ್ಕಿಸುವ ತನ್ನ ಪ್ರಯತ್ನವನ್ನು ಎಡೆಬಿಡದೇ ನಡೆಸುತ್ತಿದ್ದ ಈ ಜಲಚರವು ಬೇರೆಲ್ಲ ತಿಮಿಂಗಲಗಳು ಹೊರಡಿಸುವ 10ರಿಂದ 30ರ ಆವರ್ತದಿಂದ ಭಿನ್ನವಾಗಿ ಧ್ವನಿಯನ್ನು ಹೊರಡಿಸುವ ಜಗತ್ತಿನ ಏಕೈಕ ತಿಮಿಂಗಲವೆಂಬ ವಿಷಯವನ್ನೂ ತಂಡವು ಖಚಿತಪಡಿಸಿತು.
ಈ ಒಂಟಿ ತಿಮಿಂಗಲದ ಕಥೆ ಪತ್ರಿಕೆಯ ಮೂಲಕ ಜನರಿಗೆ ತಲುಪುತ್ತಿದ್ದಂತೆಯೇ ಅತಿಬೇಗ ಎಲ್ಲೆಡೆ ಹರಡಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾದವು. ವಿಜ್ಞಾನಿಗಳು, ಸಾಗರಶಾಸ್ತ್ರಜ್ಞರು ಈ ಬಗ್ಗೆ ಹೆಚ್ಚಿನ ವಿಶ್ಲೇಷಣೆಗೆ ಪೆಸಿಫಿಕ್ ಸಾಗರದ ಕಡೆಗೆ ಹೊರಟರೆ ಕವಿಗಳು, ಲೇಖಕರು, ಸಂಗೀತಕಾರರು ಮತ್ತು ಸಿನಿಮಾ ಮಂದಿ ಈ ಜಲಚರದಲ್ಲಿ ಭಗ್ನಪ್ರೇಮಿಯನ್ನು ಕಂಡು 52 ಎಂಬುದನ್ನು ಒಂಟಿತನದ ಚಿಹ್ನೆ ಎಂಬಂತೆ ಬಿಂಬಿಸತೊಡಗಿದರು. ಈ ಕಾರ್ಯದಲ್ಲಿ ಆಯಾ ಕ್ಷೇತ್ರದ ಘಟಾನುಘಟಿಗಳು ತೊಡಗಿಸಿಕೊಂಡಿದ್ದು ಮತ್ತೊಂದು ವಿಶೇಷ. 2015ರಲ್ಲಿ ದಕ್ಷಿಣ ಕೊರಿಯಾದ ಪ್ರಸಿದ್ಧ ಬ್ಯಾಂಡ್ ಬಿಟಿಎಸ್ ಹೊರತಂದ ಜನಪ್ರಿಯ ಆಲ್ಬಂ ‘ದಿ ಮೋಸ್ಟ್ ಬ್ಯೂಟಿಫುಲ್ ಮೂವ್‌ಮೆಂಟ್ ಇನ್ ಲೈಫ್’ನಲ್ಲಿ ವ್ಹೇಲಿನ್ 52 ಎಂಬ ಹಾಡನ್ನು ಈ ತಿಮಿಂಗಲದ ಒಂಟಿತನವನ್ನೇ ಬಿಂಬಿಸಿ ರಚಿಸಲಾಗಿತ್ತು. ಕ್ಯಾಥರಿನ್ ರಾಬರ್ಟ್ಸ್ ಮತ್ತು ಸೀನ್ ಲೇಕ್ಮನ್ 2015ರಲ್ಲಿ ಹೊರತಂದ ಅಲ್ಬಂ ‘ಟುಮಾರೋ ವಿಲ್ ಫಾಲೊ ಟುಡೆ’ ಎಂಬ ಆಲ್ಬಂನಲ್ಲಿ 52 ಎಂಬ ಶೀರ್ಷಿಕೆಯ ಹಾಡನ್ನು ಸಂಪೂರ್ಣವಾಗಿ ಈ ತಿಮಿಂಗಲದ ಕುರಿತಾಗಿಯೇ ಮೀಸಲಿಡಲಾಗಿತ್ತು. ‘ನೋ ಲ್ಯಾಂಡ್’, ‘ಅ ಲೋನ್ಲಿ ಬ್ಲೂ ವ್ಹೇಲ್ ಲಿವಿಂಗ್ ಲೈಕ್ ಆನ್ ಐಲ್ಯಾಂಡ್’, ‘52 ಹರ್ಟ್ಜ್’, ‘52 ಬ್ಲೂ’... ಹೀಗೆ ಈ ತಿಮಿಂಗಿಲನ ಕುರಿತು ಬಂದ ಆಲ್ಬಂಗಳಿಗೆ ಲೆಕ್ಕವಿಲ್ಲ.
ಇನ್ನು ತಾವೇನೂ ಕಮ್ಮಿಯಿಲ್ಲ ಎಂಬಂತೇ ಸಿನಿಮಾದವರು ಕೂಡ ಈ ಕಾಣದ ತಿಮಿಂಗಲದಿಂದ ಸ್ಫೂರ್ತಿ ಪಡೆದರು. 2014ರಲ್ಲಿ ಈ ‘52’ಅನ್ನು ಹುಡುಕುವ ಇಬ್ಬರು ಸಹೋದರಿಯರ ಕತೆಯನ್ನಾಧರಿಸಿದ ಕಿರು ಚಿತ್ರ ‘ದಿ ಲೋನ್‌ಲಿಯೆಸ್ಟ್’ ಬಿಡುಗಡೆಯಾಗಿ ಜನಪ್ರಿಯತೆಯನ್ನು ಗಳಿಸಿತಷ್ಟೆ. ಈ ಸಿನಿಮಾ ಮಂದಿ ಸಿದ್ಧಸೂತ್ರದ ಬೆನ್ನುಬಿದ್ದರು. ‘52 ಹರ್ಟ್ಜ್ ಐ ಲವ್ ಯೂ’, ‘ಮೈ ನೇಮ್ ಇಸ್ ಬಾಟ್ಲಿರ್ ನಾಟ್ ಬಟ್ಲರ್’, ‘ಫ್ಯಾಂಟಮ್ 52’ ಚಿತ್ರಗಳು ತಯಾರಾದವು. ಅವುಗಳಲ್ಲಿ ಫ್ಯಾಂಟಮ್ 52 ಅಂತೂ ಭರ್ಜರಿ ಯಶಸ್ಸು ಕಂಡು ಸುಮಾರು 60 ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಬಾಚಿತು. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಟೈಟಾನಿಕ್ ಖ್ಯಾತಿಯ ಲಿಯೋನರ್ಡೋ ಡಿ ಕಾಪ್ರಿಯೋ ನಿರ್ಮಿಸಿರುವ ಹೊಸ ಚಿತ್ರ ‘ದಿ ಲೋನ್‌ಲಿಯೆಸ್ಟ್ ವ್ಹೇಲ್, ದಿ ಸರ್ಚ್ ಫಾರ್ 52’ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
ಇವೆಲ್ಲದರ ನಡುವೆ ಈ 52 ಎಂಬ ಕುತೂಹಲವನ್ನು ಕ್ಯಾಮೆರಾದಲ್ಲಿ ಸೆರೆಹಿಡಿವ ಮೊದಲಿಗರಾಗುವ ಹಂಬಲದಿಂದ ಹಲವರು ಪೆಸಿಫಿಕ್ ಸಾಗರ ತೀರದಲ್ಲಿ ಬೀಡುಬಿಟ್ಟು ಆ ಅಲೆಗಳ ಮೇಲೆ ಸೋನೊಬಾಯ್ಸ್ ಎಂಬ ಉಪಕರಣವನ್ನು ತೇಲಿಬಿಟ್ಟು ಈ ಮಾಯಮೃಗಕ್ಕಾಗಿ ಕಾಯುತ್ತಿದ್ದಾರೆ. ನೀವೇನಾದರೂ ಆ ಕಡೆ ಹೋದಲ್ಲಿ ಸ್ವಲ್ಪ ಕಿವಿಗೊಟ್ಟು ಕೇಳುತ್ತಿರಿ. ಯಾರಿಗೊತ್ತು ನಿಮಗೂ ಒಂದು ದಿನ ಕೇಳಿಸಬಹುದು ದೂರದಲ್ಲಿ ಯಾರದೋ ಆ ಧ್ವನಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.