ADVERTISEMENT

ಪ್ರಚಾರ ಬಯಸದ ಸ್ವಯಂಸೇವಕರು

ಪ್ರೊ.ಸಿ.ಸಿದ್ದರಾಜು ಆಲಕೆರೆ
Published 8 ನವೆಂಬರ್ 2018, 20:00 IST
Last Updated 8 ನವೆಂಬರ್ 2018, 20:00 IST
ಹೆಚ್.ಬಿ.ಆರ್.ಬಡಾವಣೆಯ 19ನೇ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸುಶಿಕ್ಷಿತರ ಸ್ವಯಂಸೇವಕರ ಚಿತ್ರಗಳು.
ಹೆಚ್.ಬಿ.ಆರ್.ಬಡಾವಣೆಯ 19ನೇ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸುಶಿಕ್ಷಿತರ ಸ್ವಯಂಸೇವಕರ ಚಿತ್ರಗಳು.   

ಇತ್ತೀಚೆಗೆ ಬೆಂಗಳೂರಿನ ಹೆಚ್.ಬಿ.ಆರ್.ಬಡಾವಣೆಯಲ್ಲಿ ವಾಸವಾಗಿರುವ ನನ್ನ ಮಗನ ಮನೆಗೆ ಹೋಗಿದ್ದೆ. ಬೆಳಗಿನ ಜಾವ ಹಾಲು ತರಲು ಅಲ್ಲಿನ 19ನೇ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಪುಟ್ಟ ಬಾಲಕನೊಬ್ಬ ’ಬನ್ನಿಸಾರ್ ಭಾರತ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ’ ಎಂದು ಕರೆದನು.

ಅಲ್ಲಿ ಹಲವು ಮಂದಿ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕೈಗೆ ಗ್ಲೌಸ್, ಮೂಗಿಗೆ ಮಾಸ್ಕ್ ಹಾಕಿಕೊಂಡು ವಿದ್ಯಾವಂತರೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದನ್ನು ನೋಡಿ ಆಶ್ಚರ್ಯಗೊಂಡೆ.

ಅವರನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಮಾತನಾಡಲು ಹೆಚ್ಚು ಆಸಕ್ತಿ ತೋರದೆ ಅಲ್ಲಿದ್ದ ಕಸದ ರಾಶಿಯನ್ನು ಬೇರೆಡೆಗೆ ಸಾಗಿಸುತ್ತಿದ್ದರು. ಒಂದು ಕಡೆ ಸಿಮೆಂಟ್ ಇಟ್ಟಿಗೆ(ಹಾಲೋ ಬ್ರಿಕ್ಸ್)ಗೆ ಬಣ್ಣ ಬಳಿಯುತ್ತಿದ್ದರು. ಬಣ್ಣದ ಡಬ್ಬಿಗಳ ರಾಶಿಯೇ ಅಲ್ಲಿತ್ತು. ಬಣ್ಣ ಬಳಿದ ಇಟ್ಟಿಗೆಗಳನ್ನು ಸಿಮೆಂಟಿನಿಂದ ಎರಡು ಕಡೆ ಒಂದರಮೇಲೊಂದು ಇಟ್ಟು ಅದರ ಮೇಲೆ ಕಡಪ ಕಲ್ಲನ್ನು ಇರಿಸುವ ಮೂಲಕ ನಾಗರಿಕರು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಿದರು.

ADVERTISEMENT

ಅಲ್ಲಿನ ವೃತ್ತದ ಬಳಿ ಇದ್ದ ಖಾಲಿ ನಿವೇಶನದ ಬೇಲಿ ಅಸಹ್ಯವಾಗಿ ಕಾಣುತ್ತಿದ್ದುದನ್ನು ಮರೆಮಾಚಲು ಒಂದು ಪರದೆಯನ್ನೇ ಕಟ್ಟಿದರು. `ಇಲ್ಲಿ ಕಸ ಹಾಕಿ ತಿಪ್ಪೆ ಮಾಡುವ ಮೂಲಕ ನಗರದ ಅಂದವನ್ನು ಕುರೂಪ ಮಾಡಬೇಡಿ' ಎಂದಿತ್ತು.

ಪುಟ್‍ಪಾತ್ ಮೇಲೆ ಹಲವು ಹೂಕುಂಡಗಳನ್ನು ತಂದು ಬಣ್ಣ ಬಳಿದು ಅವುಗಳಲ್ಲಿ ಗಿಡನೆಟ್ಟರು.ಸಾಯಿಕಿರಣ್ ಎಂಬ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದರು. ಅಷ್ಟೆ ಅಲ್ಲ ವಿದ್ಯಾ, ವಿನಯ್ ಮುಂತಾದ ಪ್ರಜ್ಞಾವಂತರು ಆ ಕಾರ್ಯದಲ್ಲಿ ನಿರತರಾಗಿದ್ದರು.

ಈಗ ಅಲ್ಲಿ ನಿರ್ಮಿಸಿದ ಬೆಂಚಿನ ಮೇಲೆ ನಾಗರಿಕರು, ವಿದ್ಯಾರ್ಥಿಗಳು ಕೂರುವಂತಾಯಿತು. ಅಲ್ಲಿ ಪಾದಚಾರಿಗಳು ಪುಟ್‍ಪಾತ್‍ನಲ್ಲೆ ನಡೆಯುವಂತಾಯಿತು. ಈ ಬದಲಾವಣೆಗೆ ಕಾರಣ ರಜಾದಿನಗಳಲ್ಲಿ ಸ್ವಯಂಸೇವಕರಾಗಿ ಬಂದ ಕೆಲವು ಮಂದಿಯಿಂದ ಸಾಧ್ಯವಾಯಿತು. ಅಲ್ಲಿ ಪಾಲ್ಗೊಂಡಿದ್ದವರು ಕೇವಲ ಐಟಿ ಕಂಪನಿಯವರೆ ಅಲ್ಲ ಬೇರೆಯವರು ಇದ್ದರು. ಸಣ್ಣ ಉದ್ದಿಮೆಗಾರರು, ವೈದ್ಯರು, ಎಂಜಿನಿಯರುಗಳು, ಹಲವರು ನಾಗರಿಕರು ಪಾಲ್ಗೊಳ್ಳುತ್ತಾರೆ ಎಂಬ ವಿಷಯವನ್ನು ತಿಳಿದು ಇದೊಂದು ಒಳ್ಳೆಯ ಬೆಳವಣಿಗೆ ಎನಿಸಿತು.

`ಅಗ್ಲಿ ಇಂಡಿಯನ್ಸ್' ಫೇಸ್‍ಬುಕ್‍ ಪುಟದಲ್ಲಿ ರಜಾದಿನಗಳಲ್ಲಿ ಇಂತಹ ಕಡೆ ಸ್ವಯಂಸೇವಾ ಕಾರ್ಯ ನಡೆಯಲಿದೆ ಎಂದು ಬಿತ್ತರಿಸುತ್ತಾರೆ. ಈ ಗುಂಪಿಗೆ ನಾಯಕನಿಲ್ಲ. ಆಸಕ್ತಿಯುಳ್ಳ ಸ್ವಯಂಸೇವಕರು ಒಳ್ಳೆಯ ಕೆಲಸಕ್ಕಾಗಿ ವಾರಕ್ಕೊಮ್ಮೆ ಇಲ್ಲವೇ ರಜಾದಿನಗಳಲ್ಲಿ ಒಂದು ಕಡೆ ಸೇರುತ್ತಾರೆ. ಆಪ್ರದೇಶವನ್ನು ಸ್ವಚ್ಛಗೊಳಿಸುತ್ತಾರೆ.

ಮತ್ತೊಂದು ವಿಶೇಷ ಎಂದರೆ ಇವರಲ್ಲಿ ಹಣಕಾಸಿನ ವ್ಯವಹಾರವಿಲ್ಲ. ಯಾರನ್ನೂ ಹಣಕ್ಕಾಗಿ ಪೀಡಿಸುವುದಿಲ್ಲ. ಅಲ್ಲಿಗೆ ಬೇಕಾಗುವ ಸಣ್ಣಪುಟ್ಟ ಖರ್ಚುಗಳನ್ನು ಅವರೇ ಭರಿಸಿಕೊಳ್ಳುತ್ತಾರೆ. ತಮಗೆ ಬೇಕಾದಂತಹ ಕೈಗ್ಲೌಸ್‍ಗಳನ್ನು, ಮಾಸ್ಕ್‌ಗಳನ್ನು ತೆಗೆದುಕೊಂಡೇ ಬರುತ್ತಾರೆ. ಆಪ್ರದೇಶಕ್ಕೆ ಬೇಕಾದ ವಸ್ತುಗಳನ್ನು ಕೊಟ್ಟರೆ ಮಾತ್ರ ಸ್ವೀಕರಿಸಿ ಅವುಗಳನ್ನು ಅಲ್ಲೇ ಅಳವಡಿಸಿ ಸೌಂದರ್ಯಕ್ಕೆ ಪೂರಕವಾದ ಪರಿಸರವನ್ನು ಸೃಷ್ಟಿಸಿಹೋಗುತ್ತಾರೆ. ಮಾಹಿತಿಗೆ: https://www.facebook.com/theugl.yindian/

ಎಚ್.ಬಿ.ಆರ್.ಬಡಾವಣೆಯ 19ನೇ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸ್ವಯಂಸೇವಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.