ADVERTISEMENT

ಪ್ರವಾಸದ ಸಿಹಿ–ಕಹಿ ನೆನಪುಗಳು

ಮೋಹನ ಬಿ.ಎಂ.
Published 13 ಜುಲೈ 2018, 19:30 IST
Last Updated 13 ಜುಲೈ 2018, 19:30 IST
   

ಅದು ಪರೀಕ್ಷೆ ಮುಗಿದು ವಿದ್ಯಾರ್ಥಿಗಳೆಲ್ಲರೂ ಊರಿಗೆ ತೆರಳುತ್ತಿದ್ದ ವೇಳೆ. ಹೊರಡುವ ಮುನ್ನ ಸಿಹಿ–ಕಹಿ ನೆನಪುಗಳು ಮನದಲ್ಲಿರಲಿ ಎಂದು ನಿರ್ಧರಿಸಿದ ನಮ್ಮ ಸ್ನೇಹತರ ತಂಡವೊಂದು ಪ್ರವಾಸ ಹೊರಡಲು ಸಿದ್ಧವಾಯಿತು.

ಮೂಡಣದಿ ಹಕ್ಕಿಗಳ ಚಿಲಿಪಿಲಿಯ ಇಂಚರವನ್ನು ಆಸ್ವಾದಿಸುತ್ತಾ ಬೆಳ್ಳಂ–ಬೆಳಿಗ್ಗೆ ಸುರ್ಯೋದಯಕ್ಕೂ ಮುನ್ನ ದೌಡಾಯಿಸಿದ್ದು ಮೈಸೂರಿನ ರೈಲ್ವೆ ನಿಲ್ದಾಣದ ಬಳಿ.

ಪರೀಕ್ಷೆ ಮುಗಿಸಿದ ಖುಷಿಯಲ್ಲಿದ್ದ ನಾವು, ಯಾವ ಊರು–ಕೇರಿ ಎಂದು ನಿರ್ಧರಿಸದೇ ಪ್ರವಾಸಕ್ಕೆ ಹೊರಟಾಗ ಗೋಚರಿಸಿದ್ದು ಗುಡ್ಡಗಾಡಿನ ಪ್ರದೇಶದಲ್ಲಿದ್ದ ನಮ್ಮ ಸ್ನೇಹಿತ ಊರು. ಪಬ್ಬು, ಡಿಸ್ಕೋಥೆಕ್ ಅಂತ ಚಾಯ್ಸ್ ಮಾಡುವ ವಯಸ್ಸಿನ ಹುಡುಗರ ನಡುವೆ ಪರಿಸರ ವೀಕ್ಷಣೆಯ ಸಲುವಾಗಿ ಪ್ರವಾಸ ಹೊರಟ ನಾವು ಹೋಗಿದ್ದು ಚಾಮರಾಜನಗರದ ಅರಣ್ಯ ಪ್ರದೇಶದತ್ತ. ಮೊದಲ ಬಾರಿಯ ಪ್ರವಾಸ ಹೋಗುತ್ತಿದ್ದರಿಂದ ಬಹಳ ಕುತೂಹಲಗಳ ನಿರೀಕ್ಷೆಯಲ್ಲಿಯೇ ಹೊರಟೆವು. ಮನಸ್ಸಿನಲ್ಲಿ ರೆಕ್ಕೆ ಕಟ್ಟಿ ಬಾನಿಗೆ ಹಾರಿದಂತೆ, ಮತ್ಸ್ಯವಾಗಿ ಸಾಗರದಲ್ಲಿ ಈಜಿದಂತೆ ಪಟ್ಟಷ್ಟು ಖುಷಿ, ಊಹಿಸಲಾರದಷ್ಟು ಸಂತಸ ತುಂಬಿತ್ತು.

ADVERTISEMENT

ನಮ್ಮ ಪ್ರಯಾಣಕ್ಕೆ ತಡೆಯಾಗುವಂತೆ ತಂಗಾಳಿಯ ಚಾದರದೊಂದಿಗೆ ಧಾವಿಸಿದ ವರುಣ ಗರ್ಜಿಸತೊಡಗಿದ. ಯಾವುದನ್ನು ಧನಾತ್ಮಕವಾಗಿ ಸ್ವೀಕರಿಸುತ್ತಿದ್ದ ನಾವು ವರುಣನ ಆಗಮನವೇ ಶುಭ ಶಕುನ ಎಂದು ಭಾವಿಸಿ ‍ಪ್ರಯಾಣ ಮುಂದುವರೆಸಿದೆವು. ರೈಲು ಪ್ರಯಾಣದಿಂದ ಊರಬಾಗಿಲು ತಲುಪಲು ಸಾಧ್ಯವಿಲ್ಲವೆಂದು ತಿಳಿದ ನಮಗಾಗಿ ಕಾದಿತ್ತು ಗ್ರಾಮಾಂತರದ ಕೆಂಪು ಬಸ್ಸು. ಮುಂದಾಗಿಯೇ ಇಬ್ಬರು ಹೋಗಿ ಟಿಕೆಟ್ ಖರಿದಿಸಿ, ದಡ-ಬಡ ಸದ್ದಾಯಿಸಿ, ಸಿಕ್ಕವರನ್ನು ಡಿಕ್ಕಿ ಹೊಡೆದು ಸಿನಿಮಾದಲ್ಲಿ ಕೆಂಪು ಟವಲ್ ಹಾಕಿ ಸೀಟು ಹಿಡಿದುಕೊಳ್ಳುವಂತೆ ಕಿಟಕಿಯಿಂದ ಸೀಟು ಹಿಡಿದು ಮತ್ತಷ್ಟು ಸ್ನೇಹಿತರಿಗಾಗಿ ಕಾದು ಕುಳಿತೆವು. ಎಲ್ಲರು ಒಮ್ಮೆಲೆ ಬಂದ ನಂತರ ಒಮ್ಮೆಲೆ ಪ್ರಯಾಣ ಬೆಳೆಸಿದ ನಾವು ನೇರ ಸ್ನೇಹಿತನ ಊರಲ್ಲಿ ಬಂದು ಇಳಿದೆವು.

ಸೀಕ್ರೇಟ್ ಸರದಾರನ ಅವಾಂತರ: ಕ್ಷಣ–ಕ್ಷಣಕ್ಕೂ ಅಚ್ಚರಿಗೊಳಿಸುವುದು, ಯಾವುದೋ ವಿಷಯಗಳ ಬಗ್ಗೆ ಕುತೂಹಲ ಕೆರಳಿಸುವುದು, ಗಂಟೆಗೊಮ್ಮೆ ಹರಟೆ ಹೊಡೆಯುವುದು, ಸಾಲದೆ ಅಲ್ಲಿ ಹಾಗೇ–ಇಲ್ಲೀ ಹೀಗೆ ಎಂದು ಬಿಡುತ್ತಿದ್ದ ನ‌ಮ್ಮ ಸ್ನೇಹಿತ. ಅದಕ್ಕೆ ಪ್ರತಿಕ್ರಿಯಿಸದೇ ಮನದಲ್ಲೇ ನಗುತ್ತಿದ್ದೆವು. ಅವನಲ್ಲಿ ಪ್ರತಿಯೊಂದು ವಿಷಯಕ್ಕೂ ಒಂದೊಂದು ಮಹಾ ಕಾರಣಗಳಿರುತ್ತವೆ. ಆದರೆ ಯಾರಿಗೂ ಹೇಳಲಾರ. ಹಾಗಾಗಿ ಅವನನ್ನು ನಾವೆಲ್ಲರೂ ಸೀಕ್ರೆಟ್ ಸರದಾರ, ಮನೆ ಮಹೇಶ, ಮೆಂಟಲ್‌ ಮಹೆಶ ಎಂದು ರೇಗಿಸುತ್ತಿದ್ದೆವು.

ದಾರಿಯುದ್ದಕ್ಕೂ ನಮ್ಮಲ್ಲಿ ಆ ಅರಣ್ಯ ಪ್ರದೇಶದ ಬಗ್ಗೆ ಕುತೂಹಲ ಕೆರಳಿಸುತ್ತಲೇ ಹೋದ. ಇದು ಸಾಲದು ಅಂತ ನನ್ನ ಜೂನಿಯರ್‌ ಒಬ್ಬಳ ಬ್ಯಾಗ್‌ ಬಸ್ಸಿನಲ್ಲಿ ಮಿಸ್ಸಾಗಿತ್ತು. ಎಲ್ಲಿ ಎಂದು ಕೇಳುವ ಮುನ್ನವೇ ಪಕ್ಕದಲ್ಲಿದ್ದ ತನ್ನ ಮಾವನ ಬೈಕ್ ಸ್ಟಾರ್ಟ್‌ ಮಾಡಿ ಬಸ್‌ನತ್ತ ದೌಡಾಯಿಸಿದ. ಬ್ಯಾಗ್ ಹುಡುಕಿಕೊಂಡು ಏನೋ ಸಾಧಿಸಿದವನಂತೆ ಬಂದ ಅವನು ಸೀದಾ ತನ್ನ ಮಾವನ ಕಾಲಿಗೆ ಬೈಕಿನಿಂದಲೇ ಬಿದ್ದ. ನಾವೂ ಅವರ ಊರಿನಲ್ಲಿ ಇದು ಧನ್ಯವಾದ ಹೇಳುವ ಸಂಪ್ರದಾಯ ಇರಬಹುದೆಂದು ಭಾವಿಸಿ ಕಕ್ಕಾಬಿಕ್ಕಿಯಾಗಿ ನಕ್ಕು ಗಪ್-ಚಿಪ್ ಆದೆವು.

ಸ್ನೇಹಿತನ ಮನೆ ಕಡೆ ನಡೆದೆವು. ದಾರಿಯಲ್ಲಿ ಮೇಲ್ನೋಟಕ್ಕೆ ಕಾಣುತ್ತಿದ್ದ ಕಾಡು–ಬೆಟ್ಟಗಳು, ಚಕಿತಗೊಳಿಸುತ್ತಿದ್ದ ಕಾಡುಪ್ರಾಣಿಯ ಸದ್ದು ನಮ್ಮನ್ನು ಕಾಡಿನತ್ತ ಆಹ್ವಾನಿಸುತ್ತಿತ್ತು. ಸ್ನೇಹಿತನ ಮನೆಗೆ ತೆರಳಿದ ನಾವು ಒಂದಷ್ಟು ಊಟ–ಹರಟೆ ಕೊಚ್ಚುತ್ತಾ ತಕ್ಷಣ ಕಾಡಿನತ್ತ ನಡೆಯುವಾಗಲೇ ಕತ್ತಲು ಕವಿಯುತ್ತಿತ್ತು. ಕತ್ತಲಲ್ಲಿ ಕಾಡಿನತ್ತ ಧಾವಿಸುವಷ್ಟರಲ್ಲೇ, ಆರಕ್ಷಕನೊಬ್ಬ ತಡೆಹಿಡಿದ. ಬಹುಶಃ ಆತ ನಮ್ಮ ಆಜನ್ಮ ಶತ್ರುವೇ ಇರಬೇಕೆಂದು ಅವನನ್ನು ಮನದಲ್ಲೆ ಬೈದುಕೊಂಡೆವು. ಅಂದು ಪ್ರವಾಸ ನಡಸಬೇಕಿದ್ದ ನಾವೂ ವನವಾಸದಂತೆ ಬೀದಿಯಲ್ಲಿ ಬಿದ್ದೆವು.

ಅದೇನು ಪ್ರವಾಸವೋ, ಇಲ್ಲ ರಾಮಾಯಣದ ವನವಾಸವೋ ತಿಳಿಯಲಿಲ್ಲ. ಹೇಗೋ ಅನುಮತಿ ಪಡೆದ ನಂತರವಾದರೂ ಸಹ ಪ್ರವಾಸ ಸುಗಮವಾಗಿ ಸಾಗಬಹುದು ಎಂದುಕೊಂಡ ನಮಗೆ ಒಂದೊಂದೆ ಪೀಕಲಾಟಗಳು ಶುರುವಾದವು. ಕಾಡಿನಲ್ಲಿ ತಂಗಲು ಸ್ಥಳವಿಲ್ಲದೇ ಯಾವುದೋ ಬಾಡಿಗೆ ಮನೆಯಲ್ಲಿ ತಂಗಿದೆವು. ತಂಗಿದಾಗ ಚೆನ್ನಾಗಿ ಮಾತನಾಡಿದ ಜನ, ಪ್ರವಾಸ ಮುಗಿಸಿ ಹೊರಡುವ ವೇಳೆ ತಂಗುದಾಣಕ್ಕೆ ಹಣ ಕೊಟ್ಟು ಹೋಗಿ ಇಲ್ಲವಾದರೆ ನಿಮ್ಮ ಲಗೇಜ್‌ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

ಕಾಡುಜನರನ್ನು ಯಾಮಾರಿಸಬಹುದು ಎಂದುಕೊಂಡಿದ್ದ ನಾವೂ ಕೊನೆಗೆ ಅವರೆದುರು ತಲೆ ಬಾಗಲೇಬೇಕಾಯಿತು. ಹಣಕೊಟ್ಟು ಲಗೇಜ್‌ ತಂದೆವು. ಇಂತಹ ಉಪಕಾರಸ್ತರ ಊರಂತು ನಾವೂ ಎಲ್ಲಿಯೂ ಕಂಡಿರಲಿಲ್ಲ. ಉಳಿದಷ್ಟು ಸಮಯದಲ್ಲಿ ಸಿಹಿ–ಕಹಿ ನೆನಪುಗಳು ಗೋಚರಿಸುವಂತೆ ಪ್ರವಾಸ ಮುಂದುವರೆಸಿ ವಾಪಾಸು ಬಂದೆವು.

ಸೆರೆಹಿಡಿದ ದೃಶ್ಯಗಳು: "ಕಣ್ಣು ಬಿಟ್ಟರೆ ಕನಸು ಹಾರಿತು, ನನಸಾಗಿ ಮನಸು ಜಾರಿತು, ಜಾರಿದ ಮನಸಿನ ಕನಸಿನಲಿ ಶೃಂಗಾರ ಮೂಡಿತು” ಎಂಬಂತೆ ಪ್ರಯಾಣ ನಡೆಸುವಾಗ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗದ ಕೆಲವು ದೃಶ್ಯಗಳನ್ನು ಕಣ್ಣಲ್ಲಿ ಕಲೆಹಾಕಿದೆವು. ಬರಹದಲ್ಲಿ ವರ್ಣಿಸಲಾಗದ ಆ ಪ್ರಕೃತಿಯ ದೃಶ್ಯವನ್ನು ಅನುಭವಿಸಿ ಆಸ್ವಾದಿಸಬೇಕು ಅಷ್ಟೇ. ‘ಬಾನಲ್ಲಿ ಹಾರುವ ಬೆಳದಿಂಗಳ ಹಕ್ಕಿ, ಹೂವಿನ ಮಕರಂದವನ್ನು ಹೀರುವ ದುಂಬಿ, ತಾಯಿ-ಮಗುವಿನ ಮಮತೆಯನ್ನು ಸಾರುತ್ತ ಬಾಯಿಯಿಂದ ಬಾಯಿಗೆ ತುತ್ತಿಡುತ್ತಿದ್ದ ಪಕ್ಷಿ ಹಾಗೂ ಬಂಡೆಗಳಿಗೆ ಮುತ್ತಿಡುತ್ತಿದ್ದ ನದಿಯ ನೀರಿನ ಅಲೆಗಳು ಒಮ್ಮೆ ಕಣ್ಣ ಕ್ಯಾಮೆರಾದಲ್ಲಿ ಸೆರೆಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.