ADVERTISEMENT

‘ತಾಜ್ ಬಾವಡಿ’ಗೆ ತಾಜಾತನ; ನಳನಳಿಸುತ್ತಿದೆ ಜೀವಜಲ

ಬಸವರಾಜ ಸಂಪಳ್ಳಿ
Published 22 ಮಾರ್ಚ್ 2021, 19:30 IST
Last Updated 22 ಮಾರ್ಚ್ 2021, 19:30 IST
ಪುನಶ್ಚೇತನಗೊಂಡಿರುವ ವಿಜಯಪುರದ ಐತಿಹಾಸಿಕ ತಾಜ್‌ಬಾವಡಿ  -ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ಪುನಶ್ಚೇತನಗೊಂಡಿರುವ ವಿಜಯಪುರದ ಐತಿಹಾಸಿಕ ತಾಜ್‌ಬಾವಡಿ  -ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ನಾಲ್ಕು ಶತಮಾನಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ, ತ್ಯಾಜ್ಯದ ಗುಂಡಿಯಂತಾಗಿದ್ದ ‘ಗುಮ್ಮಟ ನಗರಿ’ಯ ಐತಿಹಾಸಿಕ ತಾಜ್‌ ಬಾವಡಿ ಪುನಶ್ಚೇತನಗೊಂಡಿದ್ದು, ಜೀವಜಲದಿಂದ ತುಂಬಿ ನಳನಳಿಸುತ್ತಿದೆ.

ಆದಿಲ್‌ಶಾಹಿ ಅರಸರ ಕಾಲದಲ್ಲಿ ಅಂದಿನ ವಿಜಯಪುರ ನಗರದ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಹತ್ತಾರು ಸಣ್ಣಪುಟ್ಟ ಬಾವಡಿಗಳನ್ನು(ಜಲಸಂಗ್ರಹಗಾರ) ನಿರ್ಮಿಸಿದ್ದರು. ಅವುಗಳಲ್ಲಿ ಮುಖ್ಯವಾಗಿರುವುದೇ ತಾಜ್‌ ಬಾವಡಿ.

ಈಐತಿಹಾಸಿಕ ಬಾವಡಿಯು ಸ್ಥಳೀಯರ ನಿಷ್ಕಾಳಜಿಯಿಂದ ಪಾಳು ಬಿದ್ದಿತ್ತು. ಸುತ್ತಮುತ್ತಲಿನ ನಿವಾಸಿಗಳು ತಮ್ಮ ಮನೆಯ ಕಸವನ್ನು ತಂದು ಇದರಲ್ಲಿ ಎಸೆಯುತ್ತಿದ್ದರು. ಗಣೇಶನ ಮೂರ್ತಿಗಳನ್ನು ಇಲ್ಲಿಯೇ ವಿಸರ್ಜಿಸುತ್ತಿದ್ದರು. ಅಷ್ಟೇ ಅಲ್ಲ, ಸುತ್ತಮುತ್ತಲಿನ ಜನ ಬಾವಡಿಯ ಆವರಣದಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದರು.

ADVERTISEMENT

ಬಾವಡಿಗೆ ಒಳಚರಂಡಿ ನೀರು, ಸುತ್ತಮುತ್ತಲಿನ ಮನೆಗಳ ಬಚ್ಚಲು ನೀರು ಹರಿದುಬಂದು ಸೇರಿ ಪಾಚಿಕಟ್ಟಿ ಕಲುಷಿತವಾಗಿತ್ತು. ಅಲ್ಲದೇ, ಬಾವಡಿಯ ಆವರಣವನ್ನೇ ಜನರು ಅತಿಕ್ರಮಿಸಿಕೊಂಡಿದ್ದರು.

ಐತಿಹಾಸಿಕ‌ ಬಾವಡಿಯ ಅವ್ಯವಸ್ಥೆಯನ್ನು ಕಣ್ಣಾರೆ ಕಂಡ ಹಿಂದಿನ ಜಲಸಂಪನ್ಮೂಲ ಸಚಿವ, ಹಾಲಿ ಶಾಸಕ ಎಂ.ಬಿ.ಪಾಟೀಲ ಅವರು ವಿಶೇಷ ಆಸಕ್ತಿ ವಹಿಸಿ, 2016–17ರಲ್ಲಿ ಕೆಬಿಜಿಎನ್‌ಎಲ್‌ ಮೂಲಕವಾಗಿ ₹ 11 ಕೋಟಿ ಅನುದಾನದಲ್ಲಿ ತಾಜ್‌ ಬಾವಡಿ ಸೇರಿದಂತೆ ಒಟ್ಟು 26 ಬಾವಡಿಗಳ ಹೂಳು ತೆಗೆಸಿ ಪುನಶ್ಚೇನಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾವಡಿಗಳ ಆವರಣದೊಳಗೆ ಯಾರೂ ಪ್ರವೇಶಿಸದಂತೆ ಸುತ್ತಲೂ ಜಾಲರಿ ಅಳವಡಿಸಿ, ತ್ಯಾಜ್ಯವನ್ನು ಎಸೆಯದಂತೆ ಮಾಡಲಾಗಿದೆ. ಜೊತೆಗೆ ಬಾವಡಿಗಳಿಗೆ ಒಳಚರಂಡಿ ನೀರು ಸೇರದಂತೆ ಬಂದ್‌ ಮಾಡಲಾಗಿದೆ. ಪರಿಣಾಮ ಬಾವಡಿಗಳುಇದೀಗಶುದ್ಧ ನೀರಿನಿಂದ ಕಂಗೊಳಿಸುತ್ತಿವೆ ಎನ್ನುತ್ತಾರೆ ಅವರು.

ತಾಜ್‌ ಬಾವಡಿಯೊಂದನ್ನೇ ₹3.09 ಕೋಟಿ ವೆಚ್ಚದಲ್ಲಿಸತತ ಮೂರು ತಿಂಗಳ ಕಾಲ ಕಾರ್ಮಿಕರು ಮತ್ತು ಬೃಹತ್‌ ಯಂತ್ರಗಳ ಸಹಾಯದಿಂದ ಹೂಳು ತೆಗೆಸಿ, ಪುನಶ್ಚೇತನಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜ್‌ ಬಾವಡಿಯ ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾ ವಕ್ಫ್‌ ಬೋರ್ಡ್‌ಗೆ ವಹಿಸಲಾಗಿದೆ.

ಬಾವಡಿ ಬಳಿಯೇ ಶುದ್ಧ ಕುಡಿಯುವ ನೀರಿನ ಘಟಕ(ಆರ್‌ಒ) ಅಳವಡಿಸಿ ಜನರಿಗೆ ಪೂರೈಸಲಾಗುತ್ತಿದೆ. ಕೃಷ್ಣಾ ನದಿಯಿಂದ ನಗರಕ್ಕೆ ನೀರು ಪೂರೈಕೆಯಾಗುತ್ತಿರುವುದರಿಂದಬಾವಡಿ ನೀರನ್ನು ಜನ ಬಳಸುತ್ತಿಲ್ಲ. ಸಮೀಪದಲ್ಲೇ ಇರುವ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಗಿಡಮರಗಳಿಗೆ ಮತ್ತು ಸ್ವಚ್ಛತೆಗೆ ಈ ಬಾವಡಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ.

ಕಣ್ಮನ ಸೆಳೆಯುವ ತಾಜ್‌ ಸೌಂದರ್ಯ

ಗೋಥಿಕ್‌ ಶೈಲಿಯಲ್ಲಿತಾಜ್ ಬಾವಾಡಿಯನ್ನು ಸುಂದರವಾಗಿ ನಿರ್ಮಿಸಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಜಯಪುರದಲ್ಲಿ ಹಲವು ಬಾವಾಡಿಗಳಿದ್ದು, ಅವುಗಳಲ್ಲಿ ತಾಜ್ ಬಾವಡಿ ನೋಡುಗರ ಕಣ್ಮನ ಸೆಳೆಯುವ ಐತಿಹಾಸಿಕ ಸ್ಮಾರಕವಾಗಿದೆ.

ಎರಡನೇ ಇಬ್ರಾಹಿಂ 1,620ರಲ್ಲಿ ತನ್ನ ಮೊದಲ ಪತ್ನಿ ರಾಣಿ ತಾಜ್ ಸುಲ್ತಾನ್‌ ನೆನಪಿಗಾಗಿ ಈ ತಾಜ್‌ ಬಾವಡಿಕಟ್ಟಿಸಿದ್ದನು ಎಂಬುದು ಇತಿಹಾಸದ ಪುಟಗಳಿಂದ ತಿಳಿಯುತ್ತದೆ.

ತಾಜ್ ಬಾವಡಿಯು 224 ಚದರ ಅಡಿ ವಿಸ್ತೀರ್ಣಹೊಂದಿದೆ. ಆಕರ್ಷಕ ವಿನ್ಯಾಸದ ಗೋಪುರ, ಗೋಥಿಕ್ ಶೈಲಿಯ ಕಮಾನುಪ್ರವೇಶ ದ್ವಾರದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.