ಅದು ಹತ್ತು ಸದಸ್ಯರಿರುವ ಪುಟ್ಟ ತಂಡ. ಸಮಾನ ಮನಸ್ಕರೇ ಸೇರಿಕೊಂಡು ರಚಿಸಿಕೊಂಡಿರುವ ಬಳಗ. ಪ್ರತಿ ಗ್ರಾಮಗಳಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಗಿಡಗಳನ್ನು ನೆಡುತ್ತಾ, ಅಲ್ಲೊಂದು ಪುಟ್ಟವನವನ್ನು ಸೃಷ್ಟಿ ಮಾಡಿ, ನಿರ್ವಹಣೆ ಮಾಡಬೇಕೆಂಬುದು ಆ ತಂಡದ ಉದ್ದೇಶ. ಈ ಕಾರ್ಯಕ್ಕೆ ಅವರು ಯಾರನ್ನೂ ನೆರವು ಕೇಳುವುದಿಲ್ಲ. ಸ್ವಂತ ಹಣ ಖರ್ಚುಮಾಡುತ್ತಾರೆ. ಜತೆಗೆ, ಗಿಡಗಳು ಬೆಳೆದ ಮೇಲೆ ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ವಹಿಸುತ್ತಾರೆ. ಇದಕ್ಕಾಗಿ ಈ ಯುವ ತಂಡ ಗ್ರಾಮಸ್ಥರನ್ನು ಕೇಳುವುದು ಇಷ್ಟೇ; ‘ಗಿಡ ಬೆಳೆಸಲು ಗ್ರಾಮಗಳಲ್ಲಿ ಉದಾರವಾಗಿ ಒಂದಿಷ್ಟು ಜಾಗ ಕೊಡಿ’ ಎಂದು.
ಇಂಥ ವಿಶೇಷ ಕಾರ್ಯಕ್ಕೆ ಮುಂದಾಗಿರುವ ಯುವ ತಂಡದ ಹೆಸರು ‘ವೃಕ್ಷಭಾರತ’. ಎಸ್.ವೈ.ಚಿರಂಜೀವಿ ಎಂಬ ಉತ್ಸಾಹಿ ಯುವಕ ಇದನ್ನು ಮುನ್ನಡೆಸುತ್ತಿದ್ದಾರೆ. ಇವರೊಂದಿಗೆ ಚಿದಾನಂದ್, ಧನುಷ್, ಮಂಜುನಾಥ್, ಸಂತೋಷ್ ಕುಮಾರ್ ಹಾಗೂ ಗಿರೀಶ್‌ರಂತಹ ಯುವಕರು ಕೈಜೋಡಿಸಿದ್ದಾರೆ. ಈ ತಂಡದ ಸದಸ್ಯರೆಲ್ಲ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಖಾಸಗಿ ಕಂಪನಿಗಳ ಉದ್ಯೋಗಿಗಳಾಗಿದ್ದಾರೆ. ವಾರಾಂತ್ಯದಲ್ಲಿ ಒಂದೆಡೆ ಸೇರುತ್ತಾರೆ. ತಮ್ಮ ತಂಡದ ಧ್ಯೇಯೋದ್ಧೇಶವಿಟ್ಟುಕೊಂಡು ಚರ್ಚೆ ಮಾಡಿ, ಯೋಜನೆ ರೂಪಿಸಿ, ಒಮ್ಮತದ ನಿರ್ಣಯಗಳನ್ನು ಕೈಗೊಂಡು, ಅದನ್ನು ಕಾರ್ಯರೂಪಕ್ಕಿಳಿಸುತ್ತಾರೆ.
ವಾರಾಂತ್ಯದ ಚರ್ಚೆಯಲ್ಲಿ ಹಳ್ಳಿಯೊಂದನ್ನು ಆಯ್ಕೆ ಮಾಡಿಕೊಳ್ಳುವ ತಂಡ, ಆ ಊರಿನ ಕಡೆಗೆ ಹೆಜ್ಜೆ ಹಾಕುತ್ತದೆ. ಅಲ್ಲಿನ ಗ್ರಾಮಸ್ಥರ ಮನವೊಲಿಸಿ, ಅವರ ಸಹಯೋಗದೊಂದಿಗೆ ಆ ಊರಿನ ದೇವಸ್ಥಾನ, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಸಿಗುವ ಸ್ವಲ್ಪ ಜಾಗದಲ್ಲೇ ಆ ಪ್ರದೇಶದ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯುವ ಸಸಿಗಳನ್ನು ನೆಡುತ್ತಾರೆ. ಆ ಸಸಿಗಳನ್ನು ಒಂದೆರೆಡು ವರ್ಷಗಳ ಕಾಲ ತಾವೇ ಆರೈಕೆ ಮಾಡುತ್ತಾರೆ. ನಂತರ ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಆಸಕ್ತ ಗ್ರಾಮಸ್ಥರಿಗೋ ಅಥವಾ ಸ್ಥಳೀಯ ಯುವಕ ಮಂಡಳಿಗಳಿಗೆ ನೀಡುತ್ತಾರೆ. ಗಿಡ ನಿರ್ವಹಣೆ ಕುರಿತು ತಿಳಿವಳಿಕೆಯನ್ನೂ ನೀಡುತ್ತಾರೆ.
ಹೇಗೆ ಶುರುವಾಯ್ತು ಸಂಘಟನೆ
ತಂಡದ ಮುಖಂಡ ಚಿತ್ರದುರ್ಗದ ಚಿರಂಜೀವಿಗೆ ಮೊದಲಿನಿಂದಲೂ ಪರಿಸರದ ಬಗ್ಗೆ ಅದಮ್ಯ ಪ್ರೀತಿ. ಶಾಲಾ ಕಾಲೇಜಿನಲ್ಲೂ ಆ ಪ್ರೀತಿ ಮುಂದುವರಿದಿತ್ತು. ಮುಂದೆ ಬಿಇಎಲ್‌ನಲ್ಲಿ ವೃತ್ತಿಪರ ತರಬೇತಿ ಪಡೆಯುತ್ತಿದ್ದಾಗ, ವಿಶ್ವ ಪರಿಸರ ದಿನ ಕಾರ್ಯಕ್ರಮ ನಡೆಯಿತು. ಅಂದು ಪರಿಸರ ಮಾಲಿನ್ಯ ಕುರಿತ ಟೆಲಿಚಿತ್ರ ಪ್ರದರ್ಶನಗೊಂಡಿತು. ಪರಿಸರ ಅಸಮತೋಲನದಿಂದ ಜಗತ್ತಿನಲ್ಲಿ ಉಂಟಾಗುತ್ತಿರುವ ವಿಷಯಗಳನ್ನು ಆ ಚಿತ್ರ ಕಟ್ಟಿಕೊಟ್ಟಿತ್ತು. ಇದು ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿತು. ‘ಮುಂದೆ ನಮ್ಮ ದೇಶಕ್ಕೆ ಅಂಥ ಪರಿಸ್ಥಿತಿ ಬರಬಾರದು. ಹಾಗಾಗಬೇಕೆಂದರೆ ಪರಿಸರ ಜಾಗೃತಿ ಎನ್ನುವುದು ವ್ಯಾಪಕವಾಗಬೇಕು’ ಎಂದು ತೀರ್ಮಾನಿಸಿದರು. ಇದಕ್ಕಾಗಿ ಸಮಾನ ಆಸಕ್ತರ ತಂಡ ಕಟ್ಟಲು ‘ಸೇವ್ ಅವರ್ ಎನ್ವಿರಾನ್‍ಮೆಂಟ್’ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಆರಂಭಿಸಿದರು. ಆ ಪುಟದಲ್ಲಿ ಪರಿಸರ ಸಂರಕ್ಷಣೆ ಕುರಿತ ಲೇಖನಗಳನ್ನು ಪ್ರಕಟಿಸುತ್ತಿದ್ದರು. ‘ಇಷ್ಟು ಮಾಡಿದರೆ ಸಾಲದು’ ಎಂದು ತೀರ್ಮಾನಿಸಿ, ಅಂಥ ಗೆಳೆಯರನ್ನು ಒಟ್ಟುಗೂಡಿಸಿ ‘ವೃಕ್ಷಭಾರತ ಸ್ವಯಂ ಸೇವಕ ತಂಡ’ ಸಂಘಟಿಸಿದರು.
ಸಂಸ್ಥೆಗಳಿಂದ ತರಬೇತಿ
‘ಗಿಡ ನೆಡುವುದು, ನಿರ್ವಹಿಸುವುದು ಸುಲಭವಲ್ಲ’ ಎಂದು ಮನಗಂಡ ತಂಡದವರು ಬೆಂಗಳೂರಿನ ‘ಸೇ ಟ್ರೀಸ್’ ಹೆಸರಿನ ಸ್ವಯಂಸೇವಾ ಸಂಘಟನೆಯೊಡನೆ ಕೈಜೋಡಿಸಿದರು. ವಾರಾಂತ್ಯದಲ್ಲಿ ಸಸಿ ನೆಡುವ ಅಭಿಯಾನಗಳಲ್ಲಿ ತಂಡದ ಸದಸ್ಯರು ಪಾಲ್ಗೊಂಡರು. ಗಿಡ ನೆಡುವ ಹಾಗೂ ನಿರ್ವಹಣೆ ವಿಧಾನಗಳ ಅನುಭವ ಪಡೆದರು. ಎರಡು ವರ್ಷಗಳ ಕಾಲ ಸ್ವಯಂ ಸೇವಕರಾಗಿ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನಲ್ಲಿ 50 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಿದರು.
ನಂತರ ಬೆಂಗಳೂರಿನ ಹೊರವಲಯದ ಕೆಲವು ಗ್ರಾಮಗಳನ್ನೇ ಆಯ್ಕೆ ಮಾಡಿಕೊಂಡರು. ಆ ಗ್ರಾಮಗಳಿಗೆ ಭೇಟಿ ನೀಡುವುದು. ಅಲ್ಲಿನ ಜನರಿಗೆ ಅರಣ್ಯ ಹಾಗೂ ಅವುಗಳ ಸಂರಕ್ಷಣೆ ಕುರಿತಾಗಿ ತಿಳಿವಳಿಕೆ ಮೂಡಿಸಲು ಆರಂಭಿಸಿದರು. ಗ್ರಾಮಸ್ಥರ ಒಪ್ಪಿಗೆ ಪಡೆದು ಗ್ರಾಮದ ಖಾಲಿ ಜಾಗದಲ್ಲಿ ಅರಣ್ಯ ಇಲಾಖೆ ನೆರವಿನೊಂದಿಗೆ ಸಸಿಗಳ ನಾಟಿ ಮಾಡಿದರು. ಈ ಅಭಿಯಾನಕ್ಕಾಗಿ ಆ ಗ್ರಾಮದ ಶಾಲಾ ಮಕ್ಕಳು, ಪರಿಸರ ಪ್ರೇಮಿಗಳು, ಸ್ತ್ರೀಶಕ್ತಿ ಸಂಘಟನೆಗಳು ಹಾಗೂ ಯುವಕ ಮಂಡಳಿಗಳ ಸಹಕಾರ ಪಡೆದರು. ನೆಟ್ಟ ಗಿಡಗಳಿಗೆ ಗ್ರಾಮದಲ್ಲಿ ಸಿಗುವ ನೀರಿನ ಮೂಲದಿಂದಲೇ ಹನಿನೀರಾವರಿ ವ್ಯವಸ್ಥೆ ಮಾಡಿಸಿದರು. ಇದಕ್ಕಾಗಿ ಸ್ವಂತ ಹಣ ಖರ್ಚು ಮಾಡಿದರು. ನೀರಿನ ನಿರ್ವಹಣೆ ವೀಕ್ಷಣೆಗೆ ವಾರಾಂತ್ಯದಲ್ಲಿ ಆ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು. ಈಗ ಹಲವು ಗ್ರಾಮಗಳಲ್ಲಿ ಗಿಡ ಬೆಳೆದು ದೊಡ್ಡವಾಗಿವೆ. ಅವನ್ನೆಲ್ಲ ಅಲ್ಲಿನ ಗ್ರಾಮಸ್ಥರಿಗೆ ಹಸ್ತಾಂತರಿಸಿದ್ದಾರೆ.
ಇತ್ತೀಚೆಗೆ ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಗೋಪಾಲ ದೇವರಹಳ್ಳಿಯಲ್ಲಿ 250ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ‘ಸ್ಥಳೀಯ ಆಡಳಿ ತದ ಅನುಮತಿ, ಸಹಕಾರ ದೊರಕಿದರೆ ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ವಿಭಜಕಗಳಲ್ಲಿರುವ ಜಾಗದಲ್ಲಿ ಹೂಗಿಡಗಳನ್ನು ನೆಟ್ಟು ಪೋಷಿಸುವ ಮಹತ್ವದ ಯೋಜನೆ ಹಾಕಿಕೊಂಡಿದ್ದೇವೆ’ ಎನ್ನುತ್ತಾರೆ ತಂಡದ ಸದಸ್ಯರು.
ಮಾಹಿತಿಗಾಗಿ: ಚಿರಂಜೀವಿ– 9164443936, ಚಿದಾನಂದ್– 9740742794.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.