ಶಿರಸಿ: ಪಶ್ಚಿಮಘಟ್ಟದಲ್ಲಿ ವ್ಯಾಪಕವಾಗಿ ಹರಡಿವೆ ಎಂದು ಭಾವಿಸಲಾಗಿದ್ದ ಬೆಟ್ಟದ ಗಾಳಿಚೀಲ ಕಪ್ಪೆ (ವೈಜ್ಞಾನಿಕ ಹೆಸರು–Uperodon montanus)ಯ ಶೈಶವಾವಸ್ಥೆಯ ಬಾಲಗಪ್ಪೆಗಳು ಪಶ್ಚಿಮ ಘಟ್ಟದ ದಟ್ಟಾರಣ್ಯದ ಪರ್ವತ ಶ್ರೇಣಿಗಳಿಗೆ ಮಾತ್ರವೇ ಸೀಮಿತವಾಗಿವೆ. ಈ ಅಂಶ 89 ವರ್ಷಗಳ ನಂತರ ಪ್ರಕಟಿಸಿದ ಇಲ್ಲಿನ ಜೀವವೈವಿಧ್ಯ ತಜ್ಞರ ಸಂಶೋಧನಾತ್ಮಕ ವರದಿಯಲ್ಲಿ ದಾಖಲಾಗಿದೆ.
ಜೀವವೈವಿಧ್ಯ ಸಂಶೋಧಕ ಶಿರಸಿ ತಾಲ್ಲೂಕಿನ ವರ್ಗಾಸರದ ಅಮಿತ್ ಹೆಗಡೆ ಹಾಗೂ ತಂಡ ಈ ಗಾಳಿಚೀಲ ಕಪ್ಪೆಯ ಬಾಲಗಪ್ಪೆ ಕುರಿತು ಅಧ್ಯಯನ ನಡೆಸಿತ್ತು. 1934ರಲ್ಲಿ ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಪಾರ್ಕರ್ ಅವರ ಚಿಕ್ಕ ವಿವರಣೆ ನಂತರ ಇದೀಗ ಆ ಬಾಲಗಪ್ಪೆ ಮರು ಅನ್ವೇಷಣೆ ನಡೆದಿದೆ. ಸಂಶೋಧನಾತ್ಮಕ ವರದಿಯು ‘ಜರ್ನಲ್ ಆಫ್ ಥ್ರೆಟನ್ಡ್ ಟಾಕ್ಸಾ’ ನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಸಾರಾಂಶ ಸಹಿತ ಪ್ರಕಟಿಸಲಾಗಿದೆ.
ಬಾಲಗಪ್ಪೆಯ ಬೆಳವಣಿಗೆ ಹಂತ, ಬಾಹ್ಯರೂಪ ವಿವರಣೆ, ಆವಾಸಸ್ಥಾನ, ಪರಿಸರ ಹಾಗೂ ಇತರ ವೈಶಿಷ್ಟ್ಯತೆ ಬಗ್ಗೆ ತಿಳಿಸುತ್ತದೆ. ಈ ಕಪ್ಪೆ ಕರ್ನಾಟಕದ ಪುಷ್ಪಗಿರಿ ಪರ್ವತ ಶ್ರೇಣಿಯಿಂದ ತಮಿಳುನಾಡಿನ ತಿರುನಲ್ವೇಲಿಯ ಮುರುಂಗಾ ಮೊಟ್ಟೈ ಅರಣ್ಯ ಪರ್ವತ ಶ್ರೇಣಿವರೆಗೆ ಇರುವಿಕೆ ಗುರುತಿಸಲಾಗಿದೆ.
ಮೀನಿನಂತೆ ಕಾಣುವ ಬಾಲಗಪ್ಪೆ ಅಥವಾ ರೂಪಾಂತರಗೊಂಡ ನಂತರ ಪ್ರೌಢಾವಸ್ಥೆಯ ಕಪ್ಪೆಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಈವರೆಗೆ ಕಂಡುಹಿಡಿದ ಪ್ರಭೇದಗಳಲ್ಲಿ ಬಾಲಗಪ್ಪೆಗಳ ಅಧ್ಯಯನ ವಿರಳ. ಇದು ಅನೇಕ ಉಭಯಜೀವಿಗಳ ಸಂಪೂರ್ಣ ಜೀವನ ಚಕ್ರದ ತಿಳಿವಳಿಕೆ ಕೊರತೆ ಬಿಂಬಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
‘ಮೊದಲು ಬೆಟ್ಟದ ಗಾಳಿಚೀಲ ಕಪ್ಪೆ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕವಾಗಿ ಹರಡಿದೆ ಎಂದು ದಾಖಲಾಗಿತ್ತು. ಆದರೆ ಈ ಪ್ರಭೇದ ನೋಡಲು ಸಾಧ್ಯವಾಗುತ್ತಿಲ್ಲ. ಇದೇ ಕುಲದ ಕಪ್ಪೆಗಳು ನೋಡಲು ಒಂದೇ ರೀತಿ ಕಾಣುವುದರಿಂದ ತಪ್ಪಾಗಿ ಗುರುತಿಸಿರಬಹುದು. ಪ್ರಸ್ತುತ ಸಂಶೋಧನೆ ಪ್ರಕಾರ ಈ ಕಪ್ಪೆ ಪಶ್ಚಿಮ ಘಟ್ಟದ ಅರಣ್ಯ ಪರ್ವತ ಶ್ರೇಣಿಗಳಿಗೆ (ಸಮುದ್ರ ಮಟ್ಟದಿಂದ 800-1,916 ಮೀಟರ್) ಸೀಮಿತವಾಗಿವೆ’ ಎಂದು ಜೀವವೈವಿಧ್ಯ ಸಂಶೋಧಕ ಅಮಿತ್ ಹೆಗಡೆ ಮಾಹಿತಿ ನೀಡಿದರು.
‘ಉಭಯಜೀವಿಗಳ ಸಂಖ್ಯೆಯಲ್ಲಿ ಇಳಿಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಅವುಗಳ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿದೆ' ಎನ್ನುತ್ತಾರೆ ಅವರು.
‘ಪ್ರಭೇದ ಹಾಗೂ ಅವುಗಳ ಆವಾಸ ಸ್ಥಾನಗಳ ಅಧ್ಯಯನಗಳಲ್ಲಿ ಪ್ರತಿಯೊಂದು ಮಾಹಿತಿಗಳನ್ನು ದಾಖಲಿಸುವುದು ಅತ್ಯಮೂಲ್ಯ. ನಾವು ಹೆಚ್ಚು ತಿಳಿದಷ್ಟು ಹೆಚ್ಚು ಅರ್ಥ ಮಾಡಿಕೊಳ್ಳುವಲ್ಲಿ ಹತ್ತಿರವಾಗುತ್ತೇವೆ’ ಎಂದು ತಂಡದ ಸದಸ್ಯ ಡಾ. ಗಿರೀಶ ಕಾಡದೇವರು ಹೇಳಿದರು.
****
ಉಭಯಜೀವಿಗಳ ಸಂಖ್ಯೆ ಇಳಿಕೆ ವೇಳೆ ಬಾಲಗಪ್ಪೆಗಳ ದಾಖಲೀಕರಣ, ಪರಿಸರ ವ್ಯವಸ್ಥೆಯ ಸೂಕ್ಷ್ಮ ವಿವರಗಳ ವರದಿ ಪ್ರಭೇದದ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತದೆ.
-ಕೆ.ಪಿ.ದಿನೇಶ, ಪುಣೆಯ ಝೂವಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.