ADVERTISEMENT

PV Web Exclusive: ಬಿಳಿ ಹುಲಿ, ದೈತ್ಯ ಆಮೆ, ಬೃಹತ್ ಮೊಸಳೆ...

ರಾಹುಲ ಬೆಳಗಲಿ
Published 31 ಜನವರಿ 2021, 1:19 IST
Last Updated 31 ಜನವರಿ 2021, 1:19 IST
ಜವಾಹರಲಾಲ್ ನೆಹರೂ ಮೃಗಾಲಯದಲ್ಲಿ ಬಿಳಿ ಹುಲಿ
ಜವಾಹರಲಾಲ್ ನೆಹರೂ ಮೃಗಾಲಯದಲ್ಲಿ ಬಿಳಿ ಹುಲಿ   

ಕಲಬುರ್ಗಿ: ಕೃತಕ ನಿರ್ಮಾಣದ ಪುಟ್ಟ ಗುಹೆಯೊಳಗಿನಿಂದ ಸಣ್ಣದಾಗಿ ಘರ್ಜನೆ ಕೇಳಿಸಿತು. ಏನೆಂದು ಕಣ್ಣರಳಿಸಿ, ಸದ್ದಿನತ್ತ ಕತ್ತು ತಿರುಗಿಸಿದ್ದೇ ತಡ, ಕಂಡಿದ್ದು ಬಿಳಿ ಹುಲಿ. ಪೊದೆಯೊಳಗಿನಿಂದ ನಿಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತ ಹೊರ ಬಂದ ಹುಲಿ ಒಂದು ಕ್ಷಣ ನಿಂತು, ಸುತ್ತಲೂ ಒಮ್ಮೆ ಕಣ್ಣಾಡಿಸಿತು. ಎದುರಿಗಿದ್ದ ಕೊಳದಲ್ಲಿ ಜಿಗಿಯದೇ, ಪುನಃ ಗುಹೆಯೊಳಗೂ ಹೋಗದೇ ಪಕ್ಕದ ಪುಟ್ಟದಾದ ಮಾರ್ಗದಲ್ಲಿ ರಾಜಗಾಂಭೀರ್ಯದಿಂದ ಮುನ್ನಡೆಯಿತು.

ವಿಶ್ವದಲ್ಲಿ ಅದರಲ್ಲೂ ಭಾರತದಲ್ಲಿ ಬಿಳಿ ಹುಲಿಗಳ ಸಂಖ್ಯೆ ತುಂಬಾನೇ ಕಡಿಮೆ. ಇದರ ಬಗ್ಗೆ ಸಮೀಕ್ಷೆ ಮಾಡಿರುವ ಭಾರತೀಯ ಹುಲಿ ಸಂರಕ್ಷಣಾ ಸೊಸೈಟಿಯು ಅವುಗಳ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಶ್ವೇತ ಬಣ್ಣದ ಕಾರಣ ವಿಶಿಷ್ಟವಾಗಿ ಕಾಣಸಿಗುವ ಹುಲಿಯ ನಡಿಗೆ, ಹಾವ–ಭಾವ ನೋಡುವುದೇ ಸೊಗಸು.

ಅಂಥ ಹುಲಿಯ ದರ್ಶನ ಮಾಡುವ ಇಚ್ಛೆಯಿದ್ದರೆ, ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಜವಾಹರಲಾಲ್ ನೆಹರೂ ಮೃಗಾಲಯಕ್ಕೆ ಭೇಟಿ ನೀಡಬೇಕು. ಅಲ್ಲಿ ಹುಲಿಯ ದರ್ಶನವಾಗುತ್ತದೆ ಅಲ್ಲದೇ ಅರಣ್ಯಾಧಿಕಾರಿಗಳು ಮತ್ತು ಮೃಗಾಲಯದ ಸಿಬ್ಬಂದಿಯಿಂದ ಕುತೂಹಲಕರ ಮಾಹಿತಿಯೂ ಸಿಗುತ್ತದೆ.

ADVERTISEMENT

ಬಿಳಿ ಹುಲಿಯನ್ನು ಜತನದಿಂದ ನೋಡಿಕೊಳ್ಳಲಾಗುತ್ತಿದೆ. ಅದರ ವಾಸಕ್ಕೆ ಚೆಂದದ ವಾತಾವರಣ ಕಲ್ಪಿಸಲಾಗಿದೆ. ವಿಶ್ರಾಂತಿಗೆ ಗುಹೆ, ಈಜಾಡಲು ಕೊಳ, ಕುಡಿಯಲು ನೀರು, ನಿಯಮಿತ ಆಹಾರ ಎಲ್ಲವೂ ಇಲ್ಲಿದೆ. ಹಸಿರು ಪರಿಸರದಿಂದ ಕೂಡಿರುವ ಆವರಣದಲ್ಲಿ ಒಂದು ತುದಿಗೆ ಮತ್ತೊಂದು ತುದಿಯವರೆಗೆ ಓಡಾಡುವ ಹುಲಿಯನ್ನು ನೋಡುವುದೇ ಖುಷಿ.

ಬೃಹತ್ ಗಾತ್ರದ ಆಮೆ

ಈ ಮೃಗಾಲಯದಲ್ಲಿ ಬಿಳಿ ಹುಲಿಯಷ್ಟೇ ಅಲ್ಲ, ರಾಯಲ್ ಬೆಂಗಾಲ ಹುಲಿ, ಸಿಂಹ, ಚಿರತೆ, ಕರಡಿ, ಆನೆ, ಬಗೆಬಗೆಯ ಹಾವುಗಳು, ಬಣ್ಣಬಣ್ಣದ ಪಕ್ಷಿಗಳು ಮತ್ತು ಚಿಟ್ಟೆಗಳಿವೆ. ದೈತ್ಯ ಆಮೆಗಳು ಮತ್ತು ಬೃಹದಾಕಾರದ ಮೊಸಳೆಗಳು ಬೆರಗು ಮೂಡಿಸುತ್ತವೆ.

1,500ಕ್ಕೂ ಹೆಚ್ಚು ಜೀವಿಗಳು

1963ರಲ್ಲಿ ಸ್ಥಾಪಿತ ಈ ಮೃಗಾಲಯವು ಸುಮಾರು 380 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. 600 ಎಕರೆ ವಿಶಾಲವಾದ ಮೀರ್ ಆಲಂ ಕೆರೆಗೆ ಹೊಂದಿಕೊಂಡಂತಿರುವ ಈ ಮೃಗಾಲಯದಲ್ಲಿ ಎಲ್ಲಾ ಪ್ರಾಣಿ, ಪಕ್ಷಿಗಳು ಮತ್ತು ಚಿಟ್ಟೆಗಳಿಗೆ ಅಗತ್ಯವಿದ್ದಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ಜಾಗದ ಕೊರತೆ ಮತ್ತು ಸಮಸ್ಯೆಯಾಗದಂತೆ ನಿರ್ವಹಿಸಲಾಗುತ್ತಿದೆ.

1,500ಕ್ಕು ಹೆಚ್ಚು ಬಗೆಬಗೆಯ ಪ್ರಾಣಿ, ಪಕ್ಷಿಗಳು ಮತ್ತು ಚಿಟ್ಟೆಗಳು ಇಲ್ಲಿದ್ದು, ಎಲ್ಲವನ್ನೂ ನೋಡಲು ಒಂದಿಡೀ ದಿನ ಸಾಕಾಗುವುದಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಸಹಕಾರದೊಂದಿಗೆ ಒಂದೊಂದೇ ಜೀವಿಗಳ ಬಗ್ಗೆ ಅಧ್ಯಯನ ಮಾಡಲು ದಿನಗಳೇ ಬೇಕಾಗುತ್ತದೆ. ವನ್ಯಜೀವಿ ಆಸಕ್ತರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ.

ಇಡೀ ಆವರಣ ನಡೆದಾಡಿಕೊಂಡು ಎಲ್ಲಾ ಕಡೆ ಭೇಟಿ ನೀಡಲು ಕಷ್ಟ. ಈ ಕಾರಣಕ್ಕೆ ಇಲ್ಲಿ ಬ್ಯಾಟರಿ ವಾಹನದ ವ್ಯವಸ್ಥೆಯಿದೆ. ಅದಕ್ಕೆ ಪ್ರತ್ಯೇಕ ಟಿಕೆಟ್‌ ಪಡೆದು, ಆ ವಾಹನವನ್ನು ಏರಿದ್ದಲ್ಲಿ ಇಂತಿಷ್ಟು ದೂರ ಕರೆದೊಯ್ದು ಪ್ರಾಣಿಗಳು ಇರುವ ಸಮೀಪದ ಸ್ಥಳಗಳಿಗೆ ಬಿಡಲಾಗುತ್ತದೆ. ಪುನಃ ಹತ್ತಿಸಿಕೊಂಡು ಮುಂದಿನ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ.

ಮಕ್ಕಳಿಗೆ ಸೇರಿದಂತೆ ಎಲ್ಲರಿಗೂ ವಿಶೇಷ ಅನುಭವ ದೊರಕಿಸಲು ಮತ್ತು ಪ್ರಾಣಿಗಳನ್ನು ಹತ್ತಿರದಿಂದ ನೋಡಲು ಇಲ್ಲಿ ಸಿಂಹ, ಕರಡಿ ಸೇರಿದಂತೆ ಬಗೆಬಗೆಯ ಸಫಾರಿ ಲಭ್ಯವಿದೆ. ಇಡೀ ಆವರಣ ಸುತ್ತು ಹಾಕಿಸುವ ಪುಟಾಣಿ ರೈಲು ಕೂಡ ಇಲ್ಲಿದೆ. ಒಮ್ಮೆ ಆ ರೈಲು ಹತ್ತಿಬಿಟ್ಟರೆ, ಅರಣ್ಯದಲ್ಲಿ ಸಾಗಿ ಬಂದಂತೆ ಭಾಸವಾಗುತ್ತದೆ.

ಕರಡಿ

ಮೃಗಾಲಯದಲ್ಲಿ ವಿಶಾಲವಾದ ಉದ್ಯಾನ ಮತ್ತು ಮರಗಳಿದ್ದು, ಅಲ್ಲಿ ಮನೆಯಿಂದ ಕಟ್ಟಿಕೊಂಡು ಬಂದ ಊಟ ಮಾಡಬಹುದು. ಪ್ಲಾಸ್ಟಿಕ್ ಮುಕ್ತ ಪ್ರದೇಶವಾದ ಕಾರಣ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜನರ ಅನುಕೂಲಕ್ಕೆಂದು ಅಲ್ಲಲ್ಲಿ ನಿಯೋಜಿಸಲಾಗಿರುವ ಸಿಬ್ಬಂದಿ ನೆರವಾಗುತ್ತಾರೆ.

‘ಅಧ್ಯಯನ ಆಸಕ್ತಿ ಅವಶ್ಯ’

‘ಪರಿಸರಸ್ನೇಹಿ, ಪ್ರಾಣಿ–ಪಕ್ಷಿ–ಕೀಟ ಸ್ನೇಹಿ ಮತ್ತು ಜನಸ್ನೇಹಿ ವಾತಾವರಣ ನಿರ್ಮಿಸುವ ಉದ್ದೇಶ ನಮ್ಮದು. ಈ ಕಾರಣಕ್ಕೆ ಇಲ್ಲಿ ತೀವ್ರ ನಿಗಾ ವಹಿಸಿದ್ದೇವೆ. ಕೋವಿಡ್ ಹಾವಳಿ ತೀವ್ರ ಸ್ವರೂಪದಲ್ಲಿ ಇದ್ದ ಸಂದರ್ಭದಲ್ಲಿ ಮೃಗಾಲಯ ಬಂದ್ ಮಾಡಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಮೃಗಾಲಯವನ್ನು ಪುನಃ ತೆರೆದಿದ್ದು, ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಇಲ್ಲಿನ ನಿಯಮ ಎಲ್ಲರೂ ತಪ್ಪದೇ ಪಾಲಿಸಬೇಕು’ ಎಂದು ಮೃಗಾಲಯದ ಅಧಿಕಾರಿ ತಿಳಿಸಿದರು.

ನೀರು ಕುಡಿಯುತ್ತಿರುವ ಹುಲಿ

‘ವನ್ಯಜೀವಿಗಳ ಬಗ್ಗೆ ಜನರು ನೋಡಿದರಷ್ಟೇ ಸಾಲದು, ಅವುಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನವೂ ಮಾಡಬೇಕು. ಇದರಿಂದ ಪರಿಸರಕ್ಕೆ ವನ್ಯಜೀವಿಗಳು ಎಷ್ಟು ಮುಖ್ಯ ಎಂಬುದು ಅರಿವಿಗೆ ಬರುತ್ತದೆ. 58 ವರ್ಷಗಳ ಅವಧಿಯಲ್ಲಿ ಮೃಗಾಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಇಲ್ಲಿ ಭೇಟಿ ನೀಡುವ ಜನರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಇನ್ನಷ್ಟು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ. ಮುಂದಿನ 6 ತಿಂಗಳ ಅವಧಿಯಲ್ಲಿ ಇನ್ನಷ್ಟು ಪರಿವರ್ತನೆಯಾಗಲಿದೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.