ಪರಿಸರ ಎಂದರೆ ಗಾಳಿ, ನೀರು, ಕಾಡು, ಪ್ರಾಣಿಗಳಷ್ಟೇ ಅಲ್ಲ; ಇವುಗಳೊಂದಿಗೆ ಜೀವಿಸುವ ಮನುಷ್ಯನೂ ಪರಿಸರದ ಭಾಗ. ಇವತ್ತು ಮನುಷ್ಯ ಮಾಡುವ ತಪ್ಪುಗಳಿಂದ ಪರಿಸರ ಹಾಳಾಗುತ್ತಿದೆ. ಆ ತಪ್ಪುಗಳನ್ನು ಅರಿತು, ತಿದ್ದಿಕೊಳ್ಳುತ್ತಾ ಹೊರಟರೆ, ನಿತ್ಯವೂ ಪರಿಸರ ದಿನವಾಗುತ್ತದೆ...
-ಅಪ್ಪಟ ಕೃಷಿಕ, ಪರಿಸರ ಆರಾಧಕ, ದಕ್ಷಿಣ ಭಾರತದ ಪ್ರತಿಭಾವಂತ ನಟ ಕಿಶೋರ್ ‘ವಿಶ್ವ ಪರಿಸರ ದಿನ’ದ ಅಂಗವಾಗಿ ಶುಕ್ರವಾರ ‘ಪ್ರಜಾವಾಣಿ’ ಆಯೋಜಿಸಿದ್ದ ವಿಶೇಷ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಆಡಿದ ಮಾತುಗಳಿವು.
ಅವರ ಮಾತುಗಳಲ್ಲಿ ಪ್ರಗತಿ ಮತ್ತು ಅಭಿವೃದ್ಧಿ ಹೆಸರಲ್ಲಿ ಪರಿಸರದ ಮೇಲಾಗುತ್ತಿರುವ ಪರಿಣಾಮಗಳು, ನಗರೀಕರಣ, ಅತಿಯಾದ ತಂತ್ರಜ್ಞಾನ, ಜೀವನ ಶೈಲಿ, ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯಿಂದ ಪ್ರಕೃತಿಯಲ್ಲಾಗುತ್ತಿರುವ ಬದಲಾವಣೆಗಳ ಉಲ್ಲೇಖವಿತ್ತು. ಕೃಷಿ ಕ್ಷೇತ್ರದಲ್ಲಿ ಇತಿಮಿತಿಯಿಲ್ಲದೇ ಬಳಕೆಯಾಗುತ್ತಿರುವ ರಾಸಾಯನಿಕಗಳಿಂದ ಜೀವ ವೈವಿಧ್ಯದ ಮೇಲಾಗುತ್ತಿರುವ ಪರಿಣಾಮಗಳ ವಿವರಣೆಯೂ ಇತ್ತು. ಕಿಶೋರ್, ಕೇವಲ ಸಮಸ್ಯೆಗಳನ್ನಷ್ಟೇ ಉಲ್ಲೇಖಿಸಲಿಲ್ಲ. ಈ ಸಮಸ್ಯೆಗಳನ್ನಿಟ್ಟುಕೊಂಡು ಹೇಗೆ ಪರಿಹಾರ ಕಂಡುಕೊಳ್ಳಬಹುದೆಂದು ವಿವರಿಸಿದರು.
‘ವಾಹನಗಳನ್ನು ಬಳಸುವವರು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿ, ಕಡಿಮೆ ಇಂಧನ ಬಳಸಿಕೊಂಡು ಉತ್ತಮ ಮೈಲೇಜ್ ಕೊಡುವಂತೆ ಸುಸ್ಥಿತಿಯಲ್ಲಿಟ್ಟುಕೊಂಡರೆ, ಸಿಗ್ನಲ್ ಬಂದಾಗ ಗಾಡಿ ಆಫ್ ಮಾಡಿದರೆ ಸಾಕು. ಸಾಧ್ಯವಾಗುವ ಕಡೆ ನಡೆದು ಹೋಗುವುದು, ಅಗತ್ಯವಿದ್ದಕಡೆ ಸೈಕಲ್ ಬಳಸುವುದು... ಇಂಥ ಉಪಕ್ರಮಗಳು ನೈಸರ್ಗಿಕ ಸಂಪನ್ಮೂಲದ ಜತೆಗೆ ಹಣವನ್ನೂ ಉಳಿಸುತ್ತವೆ’ ಎಂದು ಪರಿಸರ ಸಂರಕ್ಷಣೆಯ ದಾರಿಯೊಂದನ್ನು ತೆರೆದಿಟ್ಟರು ಕಿಶೋರ್.
ಕಿಶೋರ್ ಅವರ ಇಂಥ ಮಾತುಗಳಿಗೆ ವೀಕ್ಷಕರಿಂದ ಪ್ರತಿಕ್ರಿಯೆ ಮಹಾಪೂರವೇ ಹರಿದುಬಂತು. ಕೆಲವರು ಅವರ ಸಿನಿಮಾ ಮತ್ತು ನಟನೆ ಬಗ್ಗೆ ತಮ್ಮ ಅಭಿಮಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅವರ ಕೃಷಿ ಮತ್ತು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಶ್ಲಾಘಿಸಿದರು. ಆ ಪ್ರತಿಕ್ರಿಯೆಗಳಲ್ಲಿ ಕೆಲವು ಪ್ರಶ್ನೆಗಳೂ ಇದ್ದವು. ಅದರಲ್ಲಿ ‘ಪಶ್ಚಿಮಘಟ್ಟ ರಕ್ಷಣೆ ಹೋರಾಟ’ಕ್ಕೆ ಬೆಂಬಲದ ಕುರಿತಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಪಶ್ಚಿಮಘಟ್ಟ ರಕ್ಷಣೆ ಹೋರಾಟಕ್ಕೆ ಎಲ್ಲ ರೀತಿಯಿಂದಲೂ ಬೆಂಬಲಿಸು ವುದಾಗಿ ಹೇಳಿದರು.
ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದಾಗಿ ಪರಿಸರದ ಮೇಲಾಗುತ್ತಿರುವ ಪರಿಣಾಮಗಳನ್ನು ಉಲ್ಲೇಖಿಸಿದರು. ‘ಇದೇ ಕಾರಣಕ್ಕೆ ನಾನು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದೇನೆ’ ಎಂದರು. ಅಂದ ಹಾಗೆ, ಕಿಶೋರ್ ಅವರು ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಜಮೀನೊಂದರಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ‘ಈ ಪದ್ಧತಿಯಲ್ಲಿ ನಿಸರ್ಗಕ್ಕೆ ಯಾವುದೇ ತೊಂದರೆ ಮಾಡದಂತೆ ಆಹಾರ ಉತ್ಪಾದನೆಯಾಗುತ್ತದೆ’ ಎನ್ನುತ್ತಾ, ತಾವು ಅನುಸರಿಸುತ್ತಿರುವ ಕೃಷಿ ಚಟುವಟಿಕೆಗಳನ್ನೂ ವಿವರಿಸಿದರು.
‘ಮನುಷ್ಯ ಏನೂ ಮಾಡದೇ ಸುಮ್ಮನಿದ್ದರೆ ಸಾಕು, ಪರಿಸರ ತನ್ನನ್ನು ತಾನೇ ರಕ್ಷಿಸಿಕೊಳ್ಳುತ್ತದೆ. ನಮ್ಮನ್ನೂ ರಕ್ಷಿಸುತ್ತದೆ...’ ಎಂದು ಹೇಳಿ ಮಾತು ಮುಗಿಸಿದರು
ಫೇಸ್‌ಬುಕ್ ಲೈವ್ ಇಲ್ಲಿ ನೋಡಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.