ADVERTISEMENT

ಇಂದು ವಿಶ್ವ ಗುಬ್ಬಚ್ಚಿಗಳ ದಿನ: ಮನೆಯಂಗಳದ ಮೆಚ್ಚಿನ ಪಕ್ಷಿಗಳಿಗೆ ಬಂದಿದೆ ಕಂಟಕ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಮಾರ್ಚ್ 2022, 4:59 IST
Last Updated 20 ಮಾರ್ಚ್ 2022, 4:59 IST
ಮುದ್ದು ಗುಬ್ಬಚ್ಚಿಗಳು– ಪ್ರಜಾವಾಣಿ ಚಿತ್ರ
ಮುದ್ದು ಗುಬ್ಬಚ್ಚಿಗಳು– ಪ್ರಜಾವಾಣಿ ಚಿತ್ರ   

ಪೃಕೃತಿಯ ಭಾಗವೇ ಆಗಿರುವ ಮನೆಯಂಗಳದ ಮೆಚ್ಚಿನ ಗುಬ್ಬಚ್ಚಿಗಳು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನಿಸರ್ಗದ ಸಮತೋಲನ ಕಾಪಾಡುವಲ್ಲಿ ಈ ಪುಟ್ಟ ಪಕ್ಷಿಗಳ ಕೊಡುಗೆ ಕೂಡ ಅಪಾರ.

ಆದರೆ, ಆಧುನಿಕ ಮಾನವನ ದುರಾಸೆಯ ಭರಾಟೆಗೆ ಸಿಕ್ಕು ಭೂಮಿ ಮೇಲೆ ಇರಬೇಕಾದ ನಿಜವಾದ ನಿಸರ್ಗ ಸಂಪತ್ತು ಕರಗುತ್ತಾ ಸಾಗುತ್ತಿದೆ. ಇದರಿಂದ ಗುಬ್ಬಚ್ಚಿ ಸೇರಿದಂತೆ ಅನೇಕ ಪಕ್ಷಿಗಳು ಇಂದು ಅಳವಿನಂಚಿಗೆ ಸೇರುತ್ತಿರುವುದು ಆತಂಕಕಾರಿ ಸಂಗತಿ.

ಗುಬ್ಬಚ್ಚಿಗಳ ಮಹತ್ವ ಸಾರಲು ಹಾಗೂ ಅವುಗಳ ರಕ್ಷಣೆ ಕಾಳಜಿ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್ 20 ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ADVERTISEMENT

ಭಾರತದ ನೇಚರ್ ಫಾರೆವರ್ ಸೊಸೈಟಿಯ ಆಸಕ್ತಿಯ ಮೇರೆಗೆ ಪ್ರಾರಂಭಗೊಂಡಿರುವ ವಿಶ್ವ ಗುಬ್ಬಚ್ಚಿ ದಿನಕ್ಕೆ, ಫ್ರಾನ್ಸಿನ ಇಕೋ-ಸಿಸ್ ಆಕ್ಷನ್ ಫೌಂಡೆಶನ್ ಮತ್ತು ವಿಶ್ವದ ಅನೇಕ ಸಂಸ್ಥೆಗಳು ಸಹಯೋಗ ನೀಡಿವೆ. ನೇಚರ್ ಫಾರೆವರ್ ಸೊಸೈಟಿಯ ಸ್ಥಾಪಕ ಮೊಹಮ್ಮದ್ ದಿಲ್ವಾರ್ ಅವರು 2010ರಲ್ಲಿ ಗುಬ್ಬಚ್ಚಿಗಳ ದಿನವನ್ನು ಜಗತ್ತಿಗೆ ಪರಿಚಯಿಸಿದರು.ಈ ಮೂಲಕ ಗುಬ್ಬಚ್ಚಿಗಳ ಸಂರಕ್ಷಣೆಗೆ ವಿಶ್ವದ ಸುಮಾರು 50 ಕ್ಕೂ ಹೆಚ್ಚು ರಾಷ್ಟ್ರಗಳು ಕೈ ಜೋಡಿಸಿವೆ.

ಕಾಣದ ಗುಬ್ಬಚ್ಚಿಗಳು

ಗುಬ್ಬಚ್ಚಿಗಳು ಹೊಲ ಗದ್ದೆಗಳಲ್ಲಿ ಕಟಾವು ಮುಗಿಯುತ್ತಿದ್ದಂತೆ ಒಂದೊಂದೇ ಹುಲ್ಲಿನ ತುಂಡು ಹೆಕ್ಕುತ್ತ ಸಾಗುವ ತವಕ ಸೋಜಿಗವನ್ನು ಉಂಟುಮಾಡುತ್ತದೆ. ಮುಂಗಾರಿಗೂ ಮುನ್ನ ಗೂಡು ಕಟ್ಟಿಕೊಂಡು ಮರಿಗಳೊಡನೆ ಹಾಡುವ ಗಾನದ ಪುಳಕ ಸೂಜಿಗ ಮೂಡಿಸುತ್ತದೆ. ಬಿಸಿಲಿನ ಬೇಗೆ ಏರುತ್ತಿದ್ದಂತೆ ಪುಟ್ಟ ಪುಟ್ಟ ನೀರಿನ ಒರತೆಗಳ ಬಳಿ ಮಿಂದೆದ್ದು ಸಂಭ್ರಮಿಸುವ ಗುಬ್ಬಿಗಳ ಕಿಚಕಿಚ ಶಬ್ದ ಮಕ್ಕಳ ಸ್ಫೂರ್ತಿಗೆ ಕಾರಣವಾಗುತ್ತದೆ.

ಆದರೆ, ಇಂತಹ ಸಂತಸ-ಸಡಗರ ತಂದೊಡ್ಡುತ್ತಿದ್ದ ಗುಬ್ಬಚ್ಚಿ ಸಂಸಾರದ ಗುನುಗು, ಗುಂಗು ಈಗ ಕಾಣದಾಗಿದೆ. ಮಾನವ ಸಂಪರ್ಕಕ್ಕೆ ಸದಾ ಹಾತೊರೆಯುತ್ತಿದ್ದ ಗುಬ್ಬಚ್ಚಿಗಳ ಆವಾಸದಲ್ಲಿ ಆಗುತ್ತಿರುವ ಪಲ್ಲಟದಿಂದ ಇವುಗಳ ಸಂತತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿದೆ.

ಗ್ರಾಮೀಣ ಭಾಗಗಳ ಮನೆಯಂಗಳಗಳಲ್ಲಿ ಈಗಲೂ ನೇಸರನ ಆಗಮನದೊಂದಿಗೆ ಚೆಲ್ಲಾಟ ಆಡುವ ಹಕ್ಕಿಗಳನ್ನು ಕಾಣಬಹುದು. ಅವುಗಳಲ್ಲಿ ಗುಬ್ಬಚ್ಚಿಗಳದ್ದೇ ಕಾರುಬಾರು. ಮುಂಜಾನೆ ಬಂದುಕಾಳು ಹೆಕ್ಕಿಪರಿಸರವನ್ನು ಸ್ವಚ್ಛಗೊಳಿಸುತ್ತವೆ. ಈಗ ಗುಂಪುಗಳಿಗೆ ಬದಲಾಗಿ ಬೆರಳೆಣಿಕೆಯಲ್ಲಿಆಗಮಿಸುತ್ತಿವೆ. ಬರುತ್ತಲೇ ಚಿಂವ್ ಚಿಂವ್ ಸಂಗೀತದ ಲಹರಿ ಹರಿಸುತ್ತವೆ. ತನ್ನಬಳಗಕ್ಕೆ ಬೇಕಾದ ಆಹಾರ ಅರಸುತ್ತದೆ. ಈಗಲೂ, ಭಯ ಇಲ್ಲದೆ ಜನ ಜಂಗುಳಿಯ ನಡುವೆ ಹಾದುಬರುವ ಗುಬ್ಬಚ್ಚಿಗಳ ದರ್ಶನ ನಿಸರ್ಗದ ಚಲುವನ್ನು ವಿಸ್ತರಿಸುತ್ತದೆ ಎನ್ನುತ್ತಾರೆ ಪಕ್ಷಿ ಪ್ರಿಯರು.

ಕುಸಿದ ಆವಾಸ

ಗುಬ್ಬಚ್ಚಿಗಳ ಆವಾಸ ಮಾತ್ರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಪಕ್ಷಿ ಸಂಶೋಧಕರು, ವೀಕ್ಷಕರು ಮತ್ತು ಪರಿಸರ ಪ್ರಿಯರು ಇದಕ್ಕೆ ಕಾರಣಗಳನ್ನು ಹುಡುಕುತ್ತಿದ್ದಾರೆ.ಗ್ರಾಮೀಣ ಭಾಗಗಳಲ್ಲಿ ಧಾನ್ಯದ ಒಕ್ಕಣೆ ಯಾಂತ್ರೀಕರಣದಿಂದ ಕಾಳು, ಬೇಳೆಸಿಗುವುದೇ ಈ‌ಗ ಕಷ್ಟವಾಗಿದೆ. ಪಟ್ಟಣದ ಅಂಗಡಿ-ಮುಂಗಟ್ಟುಗಳ ಬಳಿ ಚೆಲ್ಲುತ್ತಿದ್ದ ದವಸ ಧಾನ್ಯಗಳನ್ನು ಸಿಮೆಂಟ್ ರಸ್ತೆಯಲ್ಲಿ ಹುಡುಕುವುದೇ ಸವಾಲಾಗಿದೆ.

ಗೋಣಿ ಚೀಲ ಹುಡುಕಿ ಆಹಾರ ಸೇವಿಸುತ್ತಿದ್ದ ದಿನಗಳು ಕಾಣೆಯಾಗಿವೆ. ಪ್ಲಾಸ್ಟಿಕ್ ಬ್ಯಾಗ್‌ಗಳ ಭರಾಟೆಯಿಂದ ದೈನಂದಿನಅಕ್ಕಿ-ರಾಗಿ ಇವುಗಳು ಹುಡುಕಾಟಕ್ಕೆ ನಿಲುಕದಾಗಿವೆ. ನಗರಗಳ ಮನೆ ನಿರ್ಮಾಣ ಶೈಲಿ ಗ್ರಾಮೀಣ ಪ್ರದೇಶಗಳ ರಸ್ತೆ, ಬಡವಾಣೆಗಳು ಕಾಂಕ್ರೀಟ್‌ನಿಂದ ಸಜ್ಜುಗೊಂಡು ನಿಸರ್ಗಸ್ನೇಹಿ ನೆಲೆಗಳು ಅಳಿಯುತ್ತಿವೆ. ಸಿಮೆಂಟ್ ಹಾದಿಗಳಲ್ಲಿ ಗಿಡ, ಮರ, ಬಳ್ಳಿಗಳುಅಸ್ತಿತ್ವ ಕಳೆದುಕೊಂಡು, ಗುಬ್ಬಿಗಳಿಗೆ ಸೂಕ್ತ ಸ್ಥಳಾವಕಾಶಕ್ಕೂ ಕಂಟಕವಾಗಿದೆ ಎನ್ನುತ್ತಾರೆ ಪಕ್ಷಿತಜ್ಞರು.

ಗುಬ್ಬಚ್ಚಿ ಉಳಿಸಲು ನಾವೇನು ಮಾಡಬಹುದು?

‘ಬೇಸಿಗೆ ಅವಧಿಯಲ್ಲಿ ಮನೆಗಳ ಮುಂದೆ ಶುದ್ಧ ನೀರು ಮತ್ತು ಕಾಳನ್ನು ಇಟ್ಟುಗುಬ್ಬಚ್ಚಿಗಳ ಜೀವ ಸಂಕುಲವನ್ನು ಉಳಿಸಬೇಕು.

ತಾರಸಿ ಕಟ್ಟಡಗಳ ಬಳಿಯೂ ಗೂಡುಗಳಮಾದರಿಯನ್ನು ಇಟ್ಟು ಸಂರಕ್ಷಣೆಗೆ ಮುಂದಾಗಬೇಕು.

ಕೃಷಿಯಲ್ಲಿ ಕೀಟ ನಾಶಕಗಳ ಬಳಕೆ ನಿಯಂತ್ರಿಸಬೇಕು. ಇದರಿಂದ ಹುಳು-ಹುಪ್ಪಟೆ ಹೆಚ್ಚು ದೊರೆತು ಗುಬ್ಬಚ್ಚಿಗಳ ಆವಾಸಹಿಗ್ಗುತ್ತದೆ. ಬೆಳೆಗಳನ್ನು ಕಾಡುವ ಕೀಟಗಳನ್ನು ಜೈವಿಕವಾಗಿ ಹತೋಟಿ ಮಾಡಲು ಸಾಧ್ಯವಾಗುತ್ತದೆ

ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಬ್ಬರೂ ಗುಬ್ಬಚ್ಚಿಗಳ ಬಗ್ಗೆ ಅರಿವು ಮೂಡಿಸಲು ಶ್ರಮಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.