ADVERTISEMENT

ಪ್ರಕೃತಿಯ ಮಡಿಲಲ್ಲಿ ಸೃಜನಶೀಲತೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 19:30 IST
Last Updated 25 ಆಗಸ್ಟ್ 2019, 19:30 IST

ರಿಕರ್ಡ್ ಷರ್ಮನ್ ಎನ್ನುವನೊಬ್ಬ ಜರ್ಮನಿಯ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಯೂರೋಪಿನಾದ್ಯಂತ ಔದ್ಯಮಿಕ ಕ್ರಾಂತಿ ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದ ಸಮಯವದು.

ನಗರಗಳಿಗೆ ಜನ ವಲಸೆ ಹೋಗುವುದು ಪ್ರಾರಂಭವಾಗಿತ್ತು. ಅಲ್ಲಿಯ ಮಕ್ಕಳಿಗೆ ಪ್ರಕೃತಿಯ ಸೌಂದರ್ಯ ತಪ್ಪಿ ಹೋಗುತ್ತಿದೆ ಎಂಬ ಕೊರಗು ಷರ್ಮನ್ ಅವರನ್ನು ಕಾಡುತ್ತಿತ್ತು. ಪೋಷಕರ ಅನುಮತಿ ಪಡೆದು ವಾರಾಂತ್ಯದಲ್ಲಿ ಅವರು ಮಕ್ಕಳನ್ನು ಪ್ರಕೃತಿದರ್ಶನಕ್ಕೆ ಪ್ರವಾಸ ಕರೆದೊಯ್ಯಲು ಪ್ರಾರಂಭಿಸಿದರು.

ಹಾಲು ಎಲ್ಲಿಂದ ಬರುತ್ತದೆ ಎನ್ನುವ ಪ್ರಶ್ನೆಗೆ ನಗರದ ವಿದ್ಯಾರ್ಥಿನಿಯೊಬ್ಬಳು ಡೈರಿಯಿಂದ ಎಂದು ಹೇಳಿದಳು ಎನ್ನುವುದು ಒಂದು ಜೋಕ್ ಆಗಿತ್ತು. ಇಂತಹುದೇ ಒಂದು ಪ್ರಸಂಗ ಇಂತಹ ವಾರಾಂತ್ಯದ ಪ್ರವಾಸಗಳಲ್ಲಿ ಆಗುತ್ತಿತ್ತು. ನದಿಯಲ್ಲಿ ಮೀನುಗಳು ಓಡಾಡುತ್ತಿದ್ದುದು, ನೀರಿನ ಮೇಲಿಂದ ಜಿಗಿದು ನೀರಿಗೆ ಮರಳುತ್ತಿದ್ದುದು ಒಬ್ಬ ಹುಡುಗನಿಗೆ ಅತ್ಯಾಕರ್ಷಕ ದೃಶ್ಯವಾಗಿ ಬಿಟ್ಟಿತು.

ADVERTISEMENT

ಅಲ್ಲಿ ನೋಡಿ, ಬದುಕಿರುವ ಮೀನು, ಹೇಗೆ ಆಡುತ್ತಿದೆ ಎಂದು ಕಿರುಚತೊಡಗಿದ. ಅದುವರೆಗೆ ಅವನು ಮೀನನ್ನು ನೋಡಿದ್ದುದು ತನ್ನ ಊಟದ ತಟ್ಟೆಯಲ್ಲಿ ಮಾತ್ರ. ನಗರದ ಸೌಲಭ್ಯಗಳು ಕೆಲವರಿಗೆ ಅಚ್ಚರಿ ಮೂಡಿಸಿದಂತೆ ನಗರದವರನ್ನು ಅಚ್ಚರಿಗೊಳಿಸುವ ಅಂಶಗಳು ಹಳ್ಳಿಗಳಲ್ಲಿಯೂ ಇರುತ್ತವೆ.

ಹೀಗೆ ಪ್ರವಾಸ ಹೋಗುತ್ತಿದ್ದ ಸಮಯದಲ್ಲಿ ಒಮ್ಮೆ ಮಳೆ ಬಂದು ಎಲ್ಲರೂ ಸಿಕ್ಕಿ ಹಾಕಿಕೊಂಡರು. ಇರಲು ಜಾಗವೂ ಇರಲಿಲ್ಲ. ಕೊನೆಗೆ ರೈತನೊಬ್ಬ ತನ್ನ ದನದ ಕೊಟ್ಟಿಗೆಯಲ್ಲಿ ಜಾಗ ಮಾಡಿ ಅವರಿಗೆ ಇರುಳು ಮಲಗಲು ಅವಕಾಶ ಮಾಡಿಕೊಟ್ಟ. ಅಂದು ರಾತ್ರಿ, ಆಗಸ್ಟ್ 26, 1909. ಹಾಗೆ ಮಲಗಿದ್ದಾಗ ‘ಹೀಗೆ ಪ್ರವಾಸ ಹೊರಟಾಗ ತಂಗಲು ಒಂದು ಸುಲಭ ವ್ಯವಸ್ಥೆ- ಮಲಗಲು ಜಾಗ, ನೀರು-ಸಿಕ್ಕರೆ ಎಷ್ಟು ಚೆಂದ’ ಎನ್ನುವ ಕಲ್ಪನೆ ಅವನ ಮನಸ್ಸಿನಲ್ಲಿ ಮೂಡಿ ಬಂದಿತು. ಅಂಥ ವ್ಯವಸ್ಥೆಯನ್ನು ತನ್ನ ಶಾಲೆಯಲ್ಲಿಯೇ ಪ್ರಾರಂಭಿಸಿದ.

ಕ್ರಮೇಣ ಇದು ಅನ್ಯರನ್ನೂ ಆಕರ್ಷಿಸಿ, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಯುವ ಜನರಿಗೂ ಉಪಯುಕ್ತ ಎನಿಸಿತು. ನಾಲ್ಕು ವರ್ಷಗಳಲ್ಲಿ ನೆರೆಯ ದೇಶಗಳಿಗೂ ವ್ಯಾಪಿಸಿ, ಅಂತರ ರಾಷ್ಟ್ರೀಯ ಸಂಸ್ಥೆಯ ಸ್ಥಾಪನೆಯೂ ಆಯಿತು!

ಯೂತ್ ಹಾಸ್ಟೆಲ್ ಆಂದೋಲನದ ಪ್ರಾರಂಭವಾಗಿದ್ದು ಹೀಗೆ. 1949ರಲ್ಲಿ ಮೈಸೂರಿನಲ್ಲಿ ಭಾರತವನ್ನು ಈ ಆಂದೋಲನ ಪ್ರವೇಶಿಸಿತು. ಇಂದು ಜಗತ್ತಿನಾದ್ಯಂತ ಯೂತ್ ಹಾಸ್ಟೆಲ್‍ಗಳು ಕಡಿಮೆ ವೆಚ್ಚದಲ್ಲಿ ತಂಗಲು ಅನುಕೂಲ ಒದಗಿಸುತ್ತವೆ.

ಪ್ರಕೃತಿಯ ಮಡಿಲಲ್ಲಿದ್ದಾಗ ಇಂತಹ ಅನೇಕ ಉಪಯುಕ್ತ ಕಲ್ಪನೆಗಳು ಮೂಡಿ ಬರುತ್ತವೆ. ಉಲ್ಲಾಸ ಮನಸ್ಸನ್ನು ಆಕ್ರಮಿಸುತ್ತದೆ. ನಕಾರಾತ್ಮಕ ಶಕ್ತಿಗಳು ಕುಂದುತ್ತವೆ. ಜೊತೆಗೆ ಪ್ರವಾಸಗಳು ವಿವಿಧ ಅಚ್ಚರಿಗಳಿಗೆ, ಅನುಭವಗಳಿಗೆ ಅವಕಾಶ ಮಾಡಿಕೊಟ್ಟು ಬೌದ್ಧಿಕವಾಗಿ, ಮಾನಸಿಕವಾಗಿ ನಮ್ಮನ್ನು ಬೆಳೆಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.