ADVERTISEMENT

ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಜಗತ್ತಿನ ನಾಲ್ಕು ಖಂಡಗಳಲ್ಲಿ ಬಿಸಿಲಿನ ಬೇಗೆ ತೀವ್ರ, ಪ್ರಾಣಕ್ಕೆ ಎರವಾಗುತ್ತಿರುವ ಬಿಸಿಲಾಘಾತ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 23:23 IST
Last Updated 21 ಜೂನ್ 2024, 23:23 IST
ಅಮೆರಿಕದ ನ್ಯೂಯಾರ್ಕ್‌ ರಾಜ್ಯದ ಕೋನಿ ದ್ವೀಪದಲ್ಲಿ ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನರು ನೀರಿನಲ್ಲಿ ಈಜಾಟಕ್ಕೆ ಮೊರೆ ಹೋದರು ಎಎಫ್‌ಪಿ ಚಿತ್ರ 
ಅಮೆರಿಕದ ನ್ಯೂಯಾರ್ಕ್‌ ರಾಜ್ಯದ ಕೋನಿ ದ್ವೀಪದಲ್ಲಿ ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನರು ನೀರಿನಲ್ಲಿ ಈಜಾಟಕ್ಕೆ ಮೊರೆ ಹೋದರು ಎಎಫ್‌ಪಿ ಚಿತ್ರ    

ಬೆಂಗಳೂರು: ದೇಶದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಮಾತ್ರವಲ್ಲ; ಪ್ರಪಂಚದ ಅರ್ಧದಷ್ಟು ಭಾಗದಲ್ಲಿ ಬಿಸಿಗಾಳಿಯ ತೀವ್ರತೆ ಜಾಸ್ತಿಯಾಗಿದ್ದು, ಅಪಾರ ಸಾವು ನೋವು ಸಂಭವಿಸುತ್ತಿದೆ. 

ಏಷ್ಯಾ ಸೇರಿದಂತೆ ಭೂಮಿಯ ಉತ್ತರಗೋಳದಲ್ಲಿ ಬರುವ ನಾಲ್ಕು ಖಂಡಗಳಲ್ಲಿ ಬಿಸಿಗಾಳಿ ಆತಂಕ ಸೃಷ್ಟಿಸಿದ್ದು, ಸಾವಿರಾರು ಜನರ ಪ್ರಾಣಕ್ಕೆ ಎರವಾಗಿದೆ.

ಭಾರತ, ಚೀನಾ, ಸೌದಿ ಅರೇಬಿಯಾ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳು, ಅಮೆರಿಕ, ಮೆಕ್ಸಿಕೊ ಸೇರಿದಂತೆ ಉತ್ತರ ಅಮೆರಿಕ ಖಂಡದಲ್ಲಿ ಬರುವ ದೇಶಗಳು, ದಕ್ಷಿಣ ಅಮೆರಿಕ ಖಂಡ, ಬ್ರಿಟನ್‌ ಸೇರಿದಂತೆ ಯುರೋಪ್‌ ಖಂಡದ ರಾಷ್ಟ್ರಗಳು, ಆಫ್ರಿಕಾ ಖಂಡದ ಉತ್ತರ ಭಾಗಗಳಲ್ಲಿ ಉಷ್ಣಾಂಶ ಏರುಗತಿಯಲ್ಲಿದ್ದು, ಬಿಸಿ ವಾತಾವರಣ ಜನಜೀವನವನ್ನು ಅಸಹನೀಯವಾಗಿಸಿದೆ. 

ADVERTISEMENT

ಸೌದಿ ಅರೇಬಿಯಾದ ಮೆಕ್ಕಾಕ್ಕೆ ಹಜ್‌ ಯಾತ್ರೆ ಕೈಗೊಂಡಿದ್ದ ಯಾತ್ರಿಗಳಲ್ಲಿ ಬಿಸಿಲಾಘಾತದಿಂದ ಮೃತಪಟ್ಟವರ ಸಂಖ್ಯೆ 1,000 ದಾಟಿದೆ. ಭಾರತದಲ್ಲಿ ಮಾರ್ಚ್‌ 1ರಿಂದ ಜೂನ್‌ 20ರವರೆಗೆ ಬಿಸಿಗಾಳಿ ಹೊಡೆತಕ್ಕೆ ಸಿಕ್ಕು 143 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇದಕ್ಕೂ ಎರಡು ಪಟ್ಟು ಹೆಚ್ಚು ಮಂದಿ ಬಿಸಿಗಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಮೆಕ್ಸಿಕೊದಲ್ಲಿ ಮಾರ್ಚ್‌ನಿಂದೀಚೆಗೆ ಬಿಸಿಗಾಳಿ ಕಾರಣಕ್ಕೆ 125 ಜನರು ನಿಧನರಾಗಿದ್ದಾರೆ.

ಅಮೆರಿಕದಲ್ಲೂ ಉಷ್ಣಾಂಶ ದಾಖಲೆ ಪ್ರಮಾಣದಲ್ಲಿ ಏರಿದ್ದು, ದೇಶದ ನೈರುತ್ಯ ಭಾಗದಲ್ಲಿ ಸೆಕೆಯಿಂದ ಜನರು ತತ್ತರಿಸುತ್ತಿದ್ದಾರೆ. 10 ಕೋಟಿಯಷ್ಟು ಜನರಿಗೆ ಎಚ್ಚರಿಕೆಯಿಂದ ಇರುವಂತೆ ಅಮೆರಿಕ ಸರ್ಕಾರ ಸಲಹೆ ನೀಡಿದೆ. ಅಮೆರಿಕದ ಅರಿಜೋನಾ ರಾಜ್ಯದಲ್ಲಿ ವಾತಾವರಣದ ಉಷ್ಣತೆ 45.5 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.

ನ್ಯೂಯಾರ್ಕ್‌ ನಗರದ ಆಡಳಿತವು ಜನರ ಅನುಕೂಲಕ್ಕಾಗಿ ಗ್ರಂಥಾಲಯಗಳಲ್ಲಿ ಉಷ್ಣತೆಯ ತೀವ್ರತೆಯನ್ನು ಕಡಿಮೆ ಮಾಡಲು ಕೂಲಿಂಗ್‌ ಕೇಂದ್ರಗಳು, ಹಿರಿಯ ನಾಗರಿಕ ಕೇಂದ್ರ ಹಾಗೂ ಇತರ ಸೌಲಭ್ಯಗಳನ್ನು ಆರಂಭಿಸಿದೆ. ನಗರದ ಹೊರವಲಯಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. 

ಉತ್ತರ ಆಫ್ರಿಕಾ ಭಾಗದಲ್ಲಿರುವ ರಾಷ್ಟ್ರಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. 

ಕಾಳ್ಗಿಚ್ಚಿನ ಕೊಡುಗೆ: ಗ್ರೀಸ್‌, ಪೋರ್ಚುಗಲ್‌ ಸೇರಿದಂತೆ ಆಫ್ರಿಕಾದ ಉತ್ತರ ಕರಾವಳಿ ಭಾಗದಲ್ಲಿ ಕಂಡು ಬಂದಿರುವ ಕಾಳ್ಗಿಚ್ಚು ಮೆಡಿಟರೇನಿಯನ್‌ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಉಷ್ಣಾಂಶ ಏರುವಂತೆ ಮಾಡಿದೆ. 

* ಸೌದಿ ಅರೇಬಿಯಾದಲ್ಲಿ 51 ಡಿಗ್ರಿ ಸೆಲ್ಸಿಯಸ್‌ ದಾಟಿದ ಉಷ್ಣತೆ

* ಅಮೆರಿಕದಲ್ಲೂ ಹೆಚ್ಚಿದ ಸೆಕೆ ಎಚ್ಚರದಿಂದ ಇರಲು ಸಲಹೆ

* ಯೂರೋಪ್‌ ರಾಷ್ಟ್ರಗಳಲ್ಲೂ ಬಿರು ಬೇಸಿಗೆಯ ಅನುಭವ

* ಭಾರತದಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸಾವು

* ಶುಕ್ರವಾರ ಒಂದೇ ದಿನ ಭಾರತದಲ್ಲಿ 23 ಜನ ಕೊನೆಯುಸಿರು

ಭಾರತದಲ್ಲಿ ಲೆಕ್ಕಕ್ಕೆ ಸಿಕ್ಕಿದ್ದು 143 ಸಾವು

ಮಾರ್ಚ್‌ 1ರಿಂದ ಜೂನ್‌ 20ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಬಿಸಿಗಾಳಿಯ ಕಾರಣದಿಂದ 143 ಮಂದಿ ಮೃತಪಟ್ಟಿದ್ದಾರೆ. 41789 ಮಂದಿ ಶಂಕಿತ ಬಿಸಿಲಾಘಾತದಿಂದ ಬಳಲಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿ ಬರುವ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಉಷ್ಣತೆಗೆ ಸಂಬಂಧಿಸಿದ ಅನಾರೋಗ್ಯ ಮತ್ತು ಸಾವಿನ ಮೇಲಿನ ಕಣ್ಗಾವಲು ವರದಿಯು ಈ ವಿವರಗಳನ್ನು ನೀಡಿದೆ. ರಾಜ್ಯಗಳು ಇನ್ನೂ ಮಾಹಿತಿಗಳನ್ನು ‍ಪರಿಷ್ಕರಿಸಬೇಕಿರುವುದರಿಂದ ಮೃತಪಟ್ಟವರ ಮತ್ತು ಅಸ್ವಸ್ಥಗೊಂಡವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಸಚಿವಾಲಯ ಹೇಳಿದೆ.  ಶುಕ್ರವಾರ ಒಂದೇ ದಿನ ಬಿಸಿಲಾಘಾತದಿಂದ 14 ಮಂದಿ ಮತ್ತು ಶಂಕಿತ ಬಿಸಿಲಾಘಾತದಿಂದ ಒಂಬತ್ತು ಜನರು ಕೊನೆಯುಸಿರೆಳೆದಿದ್ದಾರೆ.  ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 35 ಮಂದಿ ರಾಜಧಾನಿ ದೆಹಲಿಯಲ್ಲಿ 21 ಮತ್ತು ರಾಜಸ್ಥಾನದಲ್ಲಿ 17 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.  ‘ಜೂನ್‌ 11ರಿಂದ 19ರ ನಡುವೆ ಬಿಸಿಗಾಳಿಯ ಕಾರಣಕ್ಕೆ ದೆಹಲಿಯಲ್ಲಿ ವಸತಿರಹಿತ 192 ಮಂದಿ ಮೃತಪಟ್ಟಿದ್ದಾರೆ’ ಎಂದು ವಸತಿರಹಿತರ ಪರವಾಗಿ ಕೆಲಸ ಮಾಡುವ ‘ದಿ ಸೆಂಟೆರ್‌ ಫಾರ್‌ ಹೋಲಿಸ್ಟಿಕ್‌ ಡೆವೆಲಪ್‌ಮೆಂಟ್‌’ ಎಂಬ ಸ್ವಯಂ ಸೇವಾ ಸಂಸ್ಥೆ ಹೇಳಿಕೊಂಡಿದೆ.

ಹವಾಮಾನ ಬದಲಾವಣೆ ಕಾರಣ

ಹವಾಮಾನ ಬದಲಾವಣೆಯ ಕಾರಣದಿಂದ ಭೂ ವಾತಾವರಣದ ಉಷ್ಣತೆಯಲ್ಲಿ ಆಗುತ್ತಿರುವ ಏರಿಕೆಯು ಬಿಸಿಗಾಳಿಯ ಹಾವಳಿ ಉಂಟುಮಾಡುತ್ತಿದೆ ಎಂದು ಹೇಳುತ್ತದೆ ಅಮೆರಿಕ ಮೆಕ್ಸಿಕೊ ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳ ವಿಜ್ಞಾನಿಗಳು ನಡೆಸಿರುವ ಅಧ್ಯಯನ.   2000 ವರ್ಷಗಳಲ್ಲೇ ಕಳೆದ ವರ್ಷದ ಬೇಸಿಗೆ ಅತ್ಯಂತ ‘ಬಿಸಿ’ಯಾಗಿತ್ತು. ಈ ಬಾರಿ ಜಗತ್ತಿನ ಹಲವು ದೇಶಗಳಲ್ಲಿ ತಾಪಮಾನ ದಾಖಲೆ ಮಟ್ಟಕ್ಕೆ ಏರಿದ್ದು ಈ ವರ್ಷದ ಬೇಸಿಗೆ ಕಳೆದ ವರ್ಷಕ್ಕಿಂತಲೂ ಹೆಚ್ಚು ಬಿಸಿಯಾಗಿರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.