ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಭಾನುವಾರ ವಿಶಿಷ್ಟ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದ್ದು, 12 ಗಂಟೆಗಳಲ್ಲಿ 11 ಲಕ್ಷ ಗಿಡಗಳನ್ನು ನೆಡುವ ಮೆಗಾ ವನಮಹೋತ್ಸವಕ್ಕೆ ಸಿದ್ಧತೆ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಸಚಿವ ಕೈಲಾಶ್ ವಿಜಯವರ್ಗೀಯ ಶುಕ್ರವಾರ ಹೇಳಿದ್ದಾರೆ.
‘ಏಕ್ ಟ್ರೀ ಮಾ ಕೇ ನಾಮ್’ (ತಾಯಿಯ ಹೆಸರಿನಲ್ಲಿ ಒಂದು ಗಿಡ) ಎಂಬ ಯೋಜನೆಯಡಿ ಇಂದೋರ್‌ನಲ್ಲಿ 2,649 ಸ್ಥಳಗಳಲ್ಲಿ 51 ಲಕ್ಷ ಗಿಡಗಳನ್ನು ನೆಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಇದರ ಭಾಗವಾಗಿ ಗಡಿ ಭದ್ರತಾ ಪಡೆಯ ರೇವತಿ ಶೂಟಿಂಗ್ ರೇಂಜನ್ ಕ್ಯಾಂಪಸ್‌ನಲ್ಲಿ ಭಾನುವಾರ (ಜುಲೈ 14) ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 11 ಲಕ್ಷ ಗಿಡಗಳನ್ನು ನೆಡಲಾಗುವುದು’ ಎಂದು ತಿಳಿಸಿದ್ದಾರೆ.
‘ಸರ್ಕಾರ ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವ ವಿಶ್ವದ ಅತಿ ದೊಡ್ಡ ವಮನೋತ್ಸವ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು ₹20 ಕೋಟಿ ಖರ್ಚಾಗಲಿದ್ದು, ವಿವಿಧ ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಹಲವರು ನೆರವಾಗಿದ್ದಾರೆ. ಈ ಕಾರ್ಯಕ್ರಮದೊಂದಿಗೆ ರಾಜ್ಯದ 55 ಜಿಲ್ಲೆಗಳಲ್ಲಿ ಪ್ರೈಮಿನಸ್ಟರ್ ಕಾಲೇಜ್ ಆಫ್ ಎಕ್ಸಲೆನ್ಸ್ ಅನ್ನು ಅಮಿತ್ ಶಾ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ’ ಎಂದು ವಿಜಯವರ್ಗೀಯ ವಿವರಿಸಿದ್ದಾರೆ.
‘ಗಿಡ ನಡೆವು ಕಾರ್ಯಕ್ರಮದಲ್ಲಿ ವಿಶ್ವದಾಖಲೆ ಸದ್ಯ ಅಸ್ಸಾಂನ ಹೆಸರಿನಲ್ಲಿದೆ. ಉದಲಗುರಿ ಎಂಬಲ್ಲಿ 2023ರ ಸೆ. 13 ಹಾಗೂ 14ರಂದು 24 ಗಂಟೆಗಳಲ್ಲಿ 9,21,730 ಗಿಡಗಳನ್ನು ಅರಣ್ಯ ಇಲಾಖೆ ನೆಟ್ಟಿದ್ದು ಈವರೆಗಿನ ದಾಖಲೆಯಾಗಿದೆ. ಈ ದಾಖಲೆಯನ್ನು ಮುರಿದು, ಹೊಸ ದಾಖಲೆ ಸೃಷ್ಟಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ನೂರಕ್ಕೂ ಹೆಚ್ಚು ಗಿನ್ನಿಸ್ ದಾಖಲೆ ವೀರರು ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ದೇಶದ ಅತ್ಯಂತ ಶುಚಿಯಾದ ನಗರಗಳ ಪಟ್ಟಿಯಲ್ಲಿ ಸತತ ಏಳು ವರ್ಷಗಳಿಂದ ಇಂದೋರ್ ಮೊದಲ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.