ADVERTISEMENT

ಒಳನೋಟ| ಅತಿವೃಷ್ಟಿಯಾದರೂ ಬಾಗಲಕೋಟೆಯಲ್ಲಿ ಕುಸಿದ ಅಂತರ್ಜಲ ಮಟ್ಟ!

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 19:22 IST
Last Updated 1 ಜನವರಿ 2022, 19:22 IST
ಅಂತರ್ಜಲ ಏರಿಕೆಗಾಗಿ ನಡೆಯುತ್ತಿರುವ ಮಳೆನೀರು ಕೊಯ್ಲು
ಅಂತರ್ಜಲ ಏರಿಕೆಗಾಗಿ ನಡೆಯುತ್ತಿರುವ ಮಳೆನೀರು ಕೊಯ್ಲು    

ಬಾಗಲಕೋಟೆ: ಈ ವರ್ಷ ರಾಜ್ಯದ ಹಲವು ಜಿಲ್ಲೆಗಳು ಅತಿವೃಷ್ಟಿ ಹಾಗೂ ಪ್ರವಾಹದ ಸಂಕಷ್ಟ ಎದುರಿಸಿದ್ದರೂ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಅಂತರ್ಜಲ ಮಟ್ಟ ಇಳಿಕೆಯಾಗಿದೆ.

2020ರ ನವೆಂಬರ್‌ನಿಂದ 2021ರ ನವೆಂಬರ್ ಅವಧಿಯಲ್ಲಿ ಅಂತರ್ಜಲ ಮಟ್ಟ ಜಿಲ್ಲೆಯಲ್ಲಿ ಸರಾಸರಿ 1.20 ಮೀಟರ್ ಇಳಿಕೆಯಾಗಿದೆ ಎಂದು ಹಿರಿಯ ಭೂ ವಿಜ್ಞಾನಿ ಮಹೇಶ ಬಿರಾಜನವರ ಹೇಳುತ್ತಾರೆ.

‘ಮಳೆ ಹೆಚ್ಚು ಆಗಿದೆ ಎಂದರೆ ಅಂತರ್ಜಲ ಮಟ್ಟ ಹೆಚ್ಚಾಗಬೇಕಿದೆ ಎಂದೇನೂ ಇಲ್ಲ.ನಮ್ಮಲ್ಲಿ ಬಿದ್ದ ಮಳೆಯ ನೀರನ್ನು ಹಿಡಿದಿಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಜಿಲ್ಲೆಯಲ್ಲಿ ನದಿಗಳ ಪಾತ್ರ ಇಲ್ಲವೇ ಆಲಮಟ್ಟಿ ಜಲಾಶಯದ ಹಿನ್ನೀರಿನ ಪಕ್ಕದಲ್ಲಿ ಮಾತ್ರ ಒಂದಷ್ಟು ಅಂತರ್ಜಲ ಮಟ್ಟ ಹೆಚ್ಚುತ್ತದೆ. ಅದು ಕೂಡ 5 ಕಿ.ಮೀನಷ್ಟು ಸುತ್ತಳತೆಯಲ್ಲಿ ಅಂತರ್ಜಲ ಹೆಚ್ಚಬಹುದು’ ಎಂದು ಮಾಹಿತಿ ನೀಡಿದರು.

ADVERTISEMENT

ಬಾದಾಮಿ ತಾಲ್ಲೂಕಿನಲ್ಲಿ 600 ಅಡಿಯವರೆಗೆ ಕೊರೆಸಿದರೆ ಮಾತ್ರ ಒಂದಷ್ಟು ನೀರಿನ ಪಸೆ ಕಾಣಸಿಗುತ್ತದೆ. ಅಲ್ಲಿ ಅಂತರ್ಜಲ ಬಳಕೆ ಅತಿಯಾದ ಕಾರಣ ಕೊಳವೆ ಬಾವಿ ಕೊರೆಸಲು ಅನುಮತಿ ಕಡ್ಡಾಯ. ಇನ್ನು ಹುನಗುಂದ ತಾಲ್ಲೂಕಿನಲ್ಲಿ ಗ್ರಾನೈಟ್ ಗಣಿಗಳಿರುವ ಕಾರಣ ನೀರಿನಲ್ಲಿ ಫ್ಲೋರೈಡ್‌ ಅಂಶ ಸಾಮಾನ್ಯ.

‘ಕುಡಿಯಲು ನೀರು ಯೋಗ್ಯವಿಲ್ಲದ ಕಡೆ ಬಹುಗ್ರಾಮ ಯೋಜನೆ (ಎಂವಿಎಸ್) ಹಾಗೂ ಜಲಜೀವನ ಮಿಷನ್‌ನ ಜಲಧಾರೆ ಮೂಲಕ ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದ ಮನೆಗಳಿಗೆ ನೀರು ಪೂರೈಸುತ್ತಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿ ಶ್ರೀನಿವಾಸ ಹೇಳುತ್ತಾರೆ.

ಉಳಿದಂತೆ ಉತ್ತರ ಕರ್ನಾಟಕದ ಬೆಳಗಾವಿ, ಗದಗ, ಹಾವೇರಿ, ಧಾರವಾಡ ಮತ್ತಿತರ ಜಿಲ್ಲೆಗಳಲ್ಲಿ ಇಂತಹ ಸಮಸ್ಯೆ ಕಂಡುಬಂದಿಲ್ಲ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.