ಹೊರಗಿನ ಮಾಲಿನ್ಯದ ಬಗ್ಗೆ ಸದಾ ಚಿಂತಿಸುವ ನಾವು ಮನೆಯೊಳಗಿನ ಮಾಲಿನ್ಯವನ್ನು ಮರೆತು ಬಿಡುವುದೇ ಹೆಚ್ಚು. ಆದರೆ ನಮ್ಮ ಆರೋಗ್ಯದ ಮೂಲ ಅಡಗಿರುವುದು ಈ ನಾಲ್ಕು ಗೋಡೆಗಳ ನಡುವಿನ ಗಾಳಿಯ ಗುಣದಲ್ಲಿ. ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...
ಶುದ್ಧವಾಗಿರಲಿ ಮನೆಯೊಳಗಿನ ಗಾಳಿ...
ಮನೆಯ ವಾತಾವರಣ ಆರಾಮದಾಯಕವಾಗಿರಬೇಕು, ಸ್ವಚ್ಚವಾಗಿರಬೇಕು, ಆಹ್ಲಾದಕರವಾಗಿರಬೇಕು ಎನ್ನುವುದು ಪ್ರತಿಯೊಬ್ಬರ ಇಂಗಿತ. ಆದರೆ ಈ ಕುಳಿರ್ಗಾಳಿಗೆ ಅಳುಕಿ ಕಿಟಕಿ–ಬಾಗಿಲುಗಳನ್ನು ಭದ್ರಪಡಿಸುವ ಕಾರಣ ಚಳಿಗಾಲದಲ್ಲಿ ಶುದ್ಧ ಗಾಳಿಗೆ ಮಿತಿಯೊಡ್ಡುವುದೇ ಹೆಚ್ಚು. ಇದರಿಂದ ಮನೆಗೂ–ಮನಸಿಗೂ–ಆರೋಗ್ಯಕ್ಕೂ ಗಂಡಾಂತರ ಎದುರಾಗಬಹುದು.
ಒಳಾಂಗಣ ಗಾಳಿಯಲ್ಲಿ ಕಂಡುಬರುವ ಭೌತಿಕ, ರಾಸಾಯನಿಕ ಮತ್ತು ಜೈವಿಕ ಮಾಲಿನ್ಯಕಾರಕಗಳು ಹೊರಾಂಗಣಕ್ಕಿಂತ ಹೆಚ್ಚು ಅಪಾಯಕಾರಿ ಎನ್ನುತ್ತವೆ ಅಧ್ಯಯನಗಳು. ಮುಚ್ಚಿದ ಕೊಠಡಿಯಲ್ಲಿ ಈ ಮಾಲಿನ್ಯಗಳು ಹಲವು ರೀತಿಯ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಒಳಾಂಗಣ ವಾಯು ಮಾಲಿನ್ಯ ಹೆಚ್ಚು ಅಪಾಯವನ್ನು ಆಹ್ವಾನಿಸುತ್ತಿದೆ. ಅದರಲ್ಲೂ ಇಂದಿನ ಈ ಕೊರೊನಾ ಕಾಲದಲ್ಲಿ ಮನೆಯೊಳಗೆ ಕಳೆಯುವ ಸಮಯ ಅಧಿಕವಾಗಿರುವ ಕಾರಣ ಈ ಬಗ್ಗೆ ತಕ್ಷಣ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.
ಮನೆಯಲ್ಲಿನ ಗಾಳಿ ಅಶುದ್ಧವಾಗುವುದರಿಂದ ಎದುರಾಗುವ ಸಮಸ್ಯೆಗಳು ಒಂದೆರಡಲ್ಲ. ಮನೆಯ ಗೋಡೆ–ಕಿಟಕಿ–ಬಾಗಿಲು ಬೂಸ್ಟು ಹಿಡಿಯುವುದರಿಂದ ಹಿಡಿದು, ಶೇಖರಿಸಿಟ್ಟ ದಿನಸಿಗಳು ಕೆಡುವುದು, ಮಾನಸಿಕ ಕಿರಿಕಿರಿ, ಆಯಾಸ, ಬಳಲಿಕೆ ಹಾಗೂ ಕೆಮ್ಮು, ತಲೆನೋವು, ಕಣ್ಣು–ಮೂಗಿನ ಉರಿತ, ಕೆರೆತ, ಗಂಟಲು ನೋವು, ಉಸಿರಾಟದಲ್ಲಿ ತೊಂದರೆಯಂತಹ ಆರೋಗ್ಯ ವ್ಯತ್ಯಾಸಗಳೂ ಎದುರಾಗಬಹುದು. ಅದರಲ್ಲೂ ಆಸ್ತಮಾ ರೋಗಿಗಳ ಮೇಲೆ ಮನೆಯೊಳಗಿನ ವಾತಾವರಣ ಹೆಚ್ಚಿನ ಪ್ರಭಾವ ಬೀರುತ್ತದೆ.
ಅಡುಗೆ ಮಾಡುವ, ಶುಚಿಗೊಳಿಸುವ ಸಾಮಗ್ರಿಗಳು ಮತ್ತು ಇತರ ದಿನನಿತ್ಯದ ಚಟುವಟಿಕೆಗಳು ಮನೆಯೊಳಗೆ ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತವೆ. ಅದರಲ್ಲೂ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಮನೆಗಳಲ್ಲಿ ವಾಹನಗಳ ಮಾಲಿನ್ಯವೂ ಜಮೆಯಾಗುವುದರಿಂದ ಆತಂಕ ಹೆಚ್ಚು.
ಅದೃಷ್ಟವಶಾತ್, ಮನೆಯಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಮಾರ್ಗಗಳಿವೆ ಎನ್ನುವುದು ಸಮಾಧಾನದ ಸಂಗತಿ. ಉದಾಹರಣೆಗೆ ಗಾಳಿಯ ನಾಳಗಳು, ಕುಲುಮೆಗಳು (ಅಗ್ಗಿಷ್ಟಿಕೆ), ಏರ್ ಪ್ಯೂರಿಫೈಯರ್‌ಗಳು, ಹ್ಯೂಮಿಡಿಫೈಯರ್‌ಗಳನ್ನು ಬಳಸುವ ಮೂಲಕ ತಕ್ಕ ಮಟ್ಟಿಗೆ ಮನೆಯ ವಾತಾವರಣವನ್ನು ಸಹ್ಯಗೊಳಿಸಬಹುದು.
ಮನೆಯಲ್ಲಿ ಮಾಲಿನ್ಯವನ್ನುಂಟು ಮಾಡುವ ಅಂಶಗಳೆಂದರೆ ಮನೆಯನ್ನು ಸ್ವಚ್ಚಗೊಳಿಸುವ ರಾಸಾಯನಿಕ ಉತ್ಪನ್ನಗಳು, ಅಗ್ಗಿಸ್ಟಿಕೆ, ಬಿಸಿನೀರಿನ ಹೀಟರ್, ಕುಲುಮೆ, ಡ್ರೈಯರ್ ಮತ್ತು ಒಲೆ ಇತ್ಯಾದಿ.
ಮನೆಯಲ್ಲಿ ಗಾಳಿಯ ಗುಣಮಟ್ಟವನ್ನು ಕಾಪಾಡಲು ಕೆಲವು ಸೂತ್ರಗಳು:
ಮೊದಲ ಹೆಜ್ಜೆ ಮನೆಯನ್ನು ಆಗಾಗ್ಗೆ ಸ್ವಚ್ಚಗೊಳಿಸುವುದು. ಬೆಡ್‌ಶೀಟ್, ಮ್ಯಾಟ್, ಟವೆಲ್‌ಗಳನ್ನು ನಿಯಮಿತವಾಗಿ ಬದಲಾಯಿಸುವುದು ಮನೆಯ ವಾತಾವರಣವನ್ನು ಶುದ್ಧವಾಗಿಡುವಲ್ಲಿ ನೆರವಾಗುತ್ತದೆ.
ಮನೆಯೊಳಗಿನ ಆರ್ದ್ರತೆಯ ಮಟ್ಟವನ್ನು ಕಾಪಾಡುವುದು ಬಹಳ ಮುಖ್ಯ. ಅದಕ್ಕಾಗಿ ಡಿಹ್ಯೂಮಿಡಿಫೈಯರ್‌ಗಳು ಮತ್ತು ಆರ್ದ್ರಕಗಳು ಸಹಾಯಕವಾಗುತ್ತವೆ. ಸಾಮಾನ್ಯವಾಗಿ ಆರ್ದ್ರತೆಯ ಮಟ್ಟವು ಶೇ 40 ರಿಂದ 60ರಷ್ಟು ಇರಬೇಕು. ಮನೆಯ ಆರ್ದ್ರತೆಯ ಮಟ್ಟವನ್ನು ಹೈಗ್ರೋಮೀಟರ್ ಬಳಸಿ ಪರಿಶೀಲಿಸಬಹುದು. ನೋಡಲು ಥರ್ಮಾಮೀಟರ್‌ನಂತೆ ಕಾಣುವ ಹೈಗ್ರೋಮೀಟರ್ ಯಾವುದೇ ಹಾರ್ಡ್‌ವೇರ್ ಅಂಗಡಿಗಳಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುತ್ತದೆ.
ಕೊಠಡಿಯ ಆರ್ದ್ರತೆಯನ್ನು ಹೆಚ್ಚಿಸಿ ಮನೆಯ ವಾತಾವರಣವನ್ನು ಸಹ್ಯವಾಗಿಸಲು ಹ್ಯೂಮಿಡಿಫೈಯರ್‌ಗಳನ್ನು ಬಳಸಬಹುದು. ಇದು ನೀರನ್ನು ಹೀರಿಕೊಳ್ಳುವ ಫಿಲ್ಟರ್ ಮತ್ತು ಫಿಲ್ಟರ್‌ನಿಂದ ತೇವಾಂಶವನ್ನು ಗಾಳಿಯಲ್ಲಿ ಬಿಡುವ ಫ್ಯಾನ್‌ಗಳನ್ನು ಹೊಂದಿರುತ್ತದೆ. ವಿವಿಧ ಪ್ರಕಾರಗಳು ಮತ್ತು ಗಾತ್ರಗಳಲ್ಲಿ ಲಭ್ಯವಿರುವ ಹ್ಯೂಮಿಡಿಫೈಯರ್‌ಗಳಲ್ಲಿ ನಿಮ್ಮ ಆದ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇದನ್ನು ಆಗಾಗ್ಗೆ ಸ್ವಚ್ಚಗೊಳಿಸುವುದು ಮತ್ತು ಅದರ ಫಿಲ್ಟರ್‌ಗಳನ್ನು ನಿಯಮಿತವಾಗಿ ಬದಲಾಯಿಸುವುದು ಬಹಳ ಮುಖ್ಯ.
ಹಾಗೆಯೇ ಗಾಳಿಯಲ್ಲಿರುವ ಹೆಚ್ಚುವರಿ ತೇವಾಂಶವನ್ನು ತೆಗೆದುಹಾಕಲು ಡಿಹ್ಯೂಮಿಡಿಫೈಯರ್ ಸಹಾಯ ಮಾಡುತ್ತದೆ. ಮನೆಯ ಗೋಡೆ, ಕಿಟಕಿ, ಸೀಲಿಂಗ್ ಮೇಲೆ ಒದ್ದೆಯಾದ ಕಲೆಗಳು ಕಂಡುಬಂದಲ್ಲಿ ಡಿಹ್ಯೂಮಿಡಿಫೈಯರ್‌ನ ಅಗತ್ಯವನ್ನು ಮನಗಾಣಬೇಕು. ಮನೆಯ ನೆಲಮಾಳಿಗೆ(ಬೇಸ್‌ಮೆಂಟ್), ಬಾಲ್ಕನಿ, ಸ್ನಾನಗೃಹ ಮತ್ತು ಲಾಂಡ್ರಿ ಪ್ರದೇಶಗಳಲ್ಲಿ ಡಿಹ್ಯೂಮಿಡಿಫೈಯರ್ ಅನ್ನು ಹೊಂದಿಸಬಹುದು.
ಸ್ವಚ್ಚವಾದ, ಆಹ್ಲಾಕರ ವಾತಾವರಣಕ್ಕಾಗಿ ಮನೆಯನ್ನು ಸ್ವಚ್ಚಗೊಳಿಸಲು ರಾಸಾಯನಿಕಮುಕ್ತವಾದ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ. ಇದರಿಂದ ಗಾಳಿಯಲ್ಲಿ ಬಿಡುಗಡೆಯಾಗುವ ಮಾಲಿನ್ಯಕಾರಕಗಳ ಪ್ರಮಾಣ ತಗ್ಗುತ್ತದೆ.
ದೂಳಿನ ಅಲರ್ಜಿ ಹೊಂದಿರುವವರು ಮನೆಯಲ್ಲಿ ಶುದ್ಧವಾದ ವಾತಾವರಣವನ್ನು ಕಾಪಾಡಲು ಏರ್ ಪ್ಯೂರಿಫೈಯರ್‌ಗಳನ್ನು ಬಳಸುವುದು ಸೂಕ್ತ. ಇವು ಫಿಲ್ಟರ್ (ಅಥವಾ ಬಹು ಫಿಲ್ಟರ್‌ಗಳು) ಮತ್ತು ಫ್ಯಾನ್ ಅನ್ನು ಹೊಂದಿದ್ದು, ಗಾಳಿಯಲ್ಲಿನ ಮಾಲಿನ್ಯಕಾರಕಗಳನ್ನು ಮತ್ತು ಇತರ ಕಣಗಳನ್ನು ಹಿಡಿದು, ನಂತರ ಫಿಲ್ಟರ್ ಮಾಡಿದ ಗಾಳಿಯನ್ನು ಮನೆಯಲ್ಲಿ ಬಿಡುಗಡೆ ಮಾಡುತ್ತವೆ.
ಚಳಿಗಾಲದಲ್ಲಿ ತೆರೆದ ಬಾಗಿಲುಗಳು ಮತ್ತು ಕಿಟಕಿಗಳಿಂದ ಶುದ್ಧಗಾಳಿ ಒಳಬರುವುದಿಲ್ಲವಾದ್ದರಿಂದ ಏರ್ ಪ್ಯೂರಿಫೈಯರ್‌ಗಳು ಅನಿವಾರ್ಯ. ಆದರೆ ಮನೆಯಲ್ಲಿ ನೈಸರ್ಗಿಕವಾಗಿ ಹರಿದಾಡುವ ತಾಜಾ ಗಾಳಿಗೆ ಸಮನಾದುದು ಯಾವುದೂ ಇಲ್ಲ. ಹೆಚ್ಚು ವಾಹನದಟ್ಟಣೆಯಿಲ್ಲದ ಪ್ರದೇಶದಲ್ಲಿರುವವರು ಚಳಿಗಾಲದಲ್ಲಿಯೂ ಮಧ್ಯಾಹ್ನದ ಹೊತ್ತು ಕಿಟಕಿಗಳನ್ನು ತೆರೆಯಲು ಮರೆಯಬಾರದು. ಇನ್ನೊಂದು ಮಹತ್ವದ ಸಂಗತಿ ಎಂದರೆ ಮನೆಯ ಒಳಹೊರಗೂ ಹಸಿರು ಬೆಳೆಸುವುದರಿಂದ ಗಾಳಿಯ ಗುಣಮಟ್ಟವನ್ನು ಹೆಚ್ಚಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.