ಸಿಂಗಪುರ: ಸಮುದ್ರವನ್ನು ಸೇರುವ ಪ್ಲಾಸ್ಟಿಕ್ ತ್ಯಾಜ್ಯ 2040ರ ವೇಳೆಗೆ ಈಗಿನ ಪ್ರಮಾಣಕ್ಕಿಂತ ಮೂರು ಪಟ್ಟಾಗಲಿದೆ. ಈ ಮಾಲಿನ್ಯವು 2005ರಿಂದ ಊಹಿಸಲಾರದಷ್ಟು ಹೆಚ್ಚಾಗಿದ್ದು ಸಮುದ್ರಕ್ಕೆ ಪ್ಲಾಸ್ಟಿಕ್ ಪ್ರವೇಶಿಸದಂತೆ ನಿಯಂತ್ರಿಸಲೇಬೇಕಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
2019ರಲ್ಲಿ ಸಮುದ್ರದಲ್ಲಿ ಅಂದಾಜು 171 ಟ್ರಿಲಿಯನ್ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ವಸ್ತುಗಳು ತೇಲುತ್ತಿದ್ದವೆಂದು ಪ್ಲಾಸ್ಟಿಕ್ ಮಾಲಿನ್ಯ ಕುರಿತು ಜಾಗೃತಿ ಮೂಡಿಸುತ್ತಿರುವ ಅಮೆರಿಕದ 5 ಗೈರ್ಸ್ ವಿಶ್ವವಿದ್ಯಾಲಯದ ಜಾಗತಿಕ ಸಂಶೋಧನೆ ಉಲ್ಲೇಖಿಸಿದೆ.
1979 ರಿಂದ 2019 ತನಕ 11,777 ಸಮುದ್ರಗಳ ಮೇಲ್ಮೈ ಪರೀಕ್ಷಿಸಿ ಅಂಕಿ ಅಂಶಗಳನ್ನು ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಪ್ರಪಂಚದಾದ್ಯಂತ ಸಮುದ್ರ ಪ್ರವೇಶಿಸುವ ಪ್ಲಾಸ್ಟಿಕ್ ನಿಯಂತ್ರಿಸಲು ವಿಶ್ವ ಮಟ್ಟದಲ್ಲಿ ಕಾನೂನು ತರುವ ಅವಶ್ಯಕತೆಯನ್ನು ಸಂಶೋಧನೆಗಳು ಒತ್ತಿ ತಿಳಿಸುತ್ತಿವೆ.
ಶತಶತಮಾನಗಳಿಂದ ಸಮುದ್ರಗಳಲ್ಲಿ ಜಮೆಯಾಗುತ್ತಿರುವ ಪ್ಲಾಸ್ಟಿಕ್ ಅಂಕಿಅಂಶ ಏರುತ್ತಲೇ ಸಾಗುತ್ತಿರುವುದು ಗಂಡಾಂತರದ ಕರೆಯೆಂದು 5 ಗೈರ್ಸ್ ವಿಶ್ವವಿದ್ಯಾಲಯದ ಮುಖ್ಯಸ್ಥ ಮರ್ಕಸ್ ಎರಿಕ್ಸನ್ ಆತಂಕಿಸುತ್ತಾರೆ. ‘ಸಮುದ್ರ ವಿಲೀನ ಮೈಕ್ರೋ ಪ್ಲಾಸ್ಟಿಕ್‌ನ ತಹಬಂದಿ ಬಗ್ಗೆ ಅಮೆರಿಕದಂಥ ದೇಶಗಳೊಂದಿಗೆ ಜಾಗತಿಕ ಒಪ್ಪಂದದ ಅವಶ್ಯಕತೆಯಿದೆ‘ ಎಂಬುದು ಅವರ ಅಭಿಪ್ರಾಯ.
ಪ್ಲಾಸ್ಟಿಕ್ ಮುಖ್ಯವಾಗಿ ಸಮುದ್ರ ಜಲವನ್ನು ಮಾತ್ರವಲ್ಲದೇ ಅದರಲ್ಲಿನ ಜೀವಿಗಳ ಅಂಗಾಂಗಕ್ಕೂ ಸಂಚಕಾರ ತರುತ್ತದೆ. ಸಮುದ್ರದ ಪ್ಲಾಸ್ಟಿಕ್ ಮಾಲಿನ್ಯವು ಜನರಿಂದ ಅತ್ಯಂತ ಕಡೆಗಣಿಸಲಾದ ಮಾಲಿನ್ಯ ಎಂದು ಜಲ ತಜ್ಞರು ತಿಳಿ ಹೇಳಿದ್ದಾರೆ.
ಈ ಕುರಿತಾಗಿ ಇತ್ತೀಚೆಗಿನ ಹೊಸಹೊಸ ಸಂಶೋಧನೆಗಳ ಸಮಗ್ರ ಅಂಕಿಅಂಶಗಳು ಬೆಚ್ಚಿಬೀಳಿಸುತ್ತಿವೆ ಎಂದಿದ್ದಾರೆ, ಆಸ್ಟ್ರೇಲಿಯಾ ಪರಿಸರ ವಿಜ್ಞಾನಿ ಪೌಲ್ ಹಾರ್ವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.