ADVERTISEMENT

ಒಳನೋಟ| ಬಯಲು ಸೀಮೆಯ ಜೀವಜಲಕ್ಕೆ ನಂಜು

ಡಿ.ಎಂ.ಕುರ್ಕೆ ಪ್ರಶಾಂತ
Published 1 ಜನವರಿ 2022, 19:19 IST
Last Updated 1 ಜನವರಿ 2022, 19:19 IST
ಕೊಳವೆ ಬಾವಿಯ ನೀರು ಕುಡಿಯುತ್ತಿರುವ ಮಕ್ಕಳು
ಕೊಳವೆ ಬಾವಿಯ ನೀರು ಕುಡಿಯುತ್ತಿರುವ ಮಕ್ಕಳು    

ಚಿಕ್ಕಬಳ್ಳಾಪುರ: ಬಯಲುಸೀಮೆಯ ಜನರು ಕೃಷಿ ಮತ್ತು ಕುಡಿಯುವ ನೀರಿಗೆ ಪ್ರಮುಖವಾಗಿ ಕೊಳವೆಬಾವಿಗಳನ್ನೇ ಆಶ್ರಯಿಸಿದ್ದಾರೆ. ಜನರಿಗೆ ಜೀವನಾಧಾರವಾಗಿರುವ ಕೊಳವೆಬಾವಿಗಳ ನೀರು ದಿನದಿಂದ ದಿನಕ್ಕೆ ವಿಷಮಯ ವಾಗುತ್ತಿದೆ. ರಾಜ್ಯ ಅಂತರ್ಜಲ ನಿರ್ದೇಶನಾಲಯ ಮತ್ತು ಸಣ್ಣ ನೀರಾವರಿ ಇಲಾಖೆಯ ಪ್ರಕಾರ 2019ರಿಂದ ರಾಜ್ಯದಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದೆ. ಈ ಆಶಾದಾಯಕ ಬೆಳವ ಣಿಗೆಯ ನಡುವೆಯೇ ಬಹಳಷ್ಟು ತಾಲ್ಲೂಕುಗಳ ನೀರಿನಲ್ಲಿ ಫ್ಲೋರೈಡ್, ಯುರೇನಿಯಂ, ಆರ್ಸೆನಿಕ್ ಅಂಶ ಸುರಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿದೆ.

ಎಷ್ಟೇ ಅಂತರ್ಜಲ ಮರುಪೂರಣ ಯೋಜನೆಗಳು, ಅರಿವಿನ ಕಾರ್ಯಕ್ರಮಗಳು ನಡೆದರೂ ನೀರಿನ ಮಹತ್ವ ಇಂದಿಗೂ ನಾಗರಿಕರಿಗೆ ಅರ್ಥವಾಗಿಲ್ಲ. ನೀರಿನ ಬೇಕಾಬಿಟ್ಟಿ ಬಳಕೆ ಹೆಚ್ಚಿದೆ. ಅಂತರ್ಜಲ ಅತಿಬಳಕೆಯ ತಾಲ್ಲೂಕುಗಳಲ್ಲಿ ಕೊಳವೆಬಾವಿಗಳನ್ನು ಕೊರೆಯ ಬಾರದು ಎನ್ನುವ ಸರ್ಕಾರದ ಆದೇಶ ಕಡತಕ್ಕೆ ಮಾತ್ರ ಸೀಮಿತವಾಗಿದೆ. ನೆಲದ ಆಳದಿಂದ ಮೇಲಕ್ಕೆತ್ತಿ ಕುಡಿಯುತ್ತಿರುವ ನೀರು ಆಪತ್ತನ್ನು ತಂದೊಡ್ಡುತ್ತಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ವಾಯುಗುಣ ಬದಲಾವಣೆ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಕಿರಣಶೀಲತೆಯಲ್ಲಿ ಸುಧಾರಿತ ಸಂಶೋಧನಾ ಕೇಂದ್ರದ ಅಧ್ಯಯನ ತಂಡಗಳು ರಾಜ್ಯದ 13 ಜಿಲ್ಲೆಗಳ 73 ಹಳ್ಳಿಗಳಲ್ಲಿ ಅಂತರ್ಜಲದಲ್ಲಿ ಯುರೇನಿಯಂ ಕುರಿತು ನಡೆಸಿದ ಅಧ್ಯಯನವು ಬಯಲುಸೀಮೆಯ ನೀರು ಕುಡಿಯಲು ಯೋಗ್ಯವಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ. 2019 ಮತ್ತು 2020ರ ನಡುವೆ ಈ ಅಧ್ಯಯನ ನಡೆದಿದೆ.

ADVERTISEMENT

ಕಲಬುರಗಿ, ಯಾದಗಿರಿ, ಬಾಗಲ ಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕ ಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆಯ ಒಟ್ಟು 73 ಹಳ್ಳಿಗಳ ನೀರಿನಲ್ಲಿ ಯುರೇನಿಯಂ ಅಂಶ ಇರುವ ಬಗ್ಗೆ ಅಧ್ಯಯನ ಬೆಳಕು ಚೆಲ್ಲಿದೆ.

ಯಾವ ಪ್ರಮಾಣ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ಲೀಟರ್ ನೀರಿನಲ್ಲಿ 30 ಮೈಕ್ರೊಗ್ರಾಮ್‌ಗಿಂತಲೂ ಕಡಿಮೆ ಮತ್ತು ಅಣುಶಕ್ತಿ ನಿಯಂತ್ರಣ ಮಂಡಳಿ ಪ್ರಕಾರ 60 ಮೈಕ್ರೊಗ್ರಾಮ್‌ಗಿಂತಲೂ ಕಡಿಮೆ ಪ್ರಮಾಣದಲ್ಲಿ ಯುರೇನಿಯಂ ಅಂಶ ಇರಬಹುದು. ಆದರೆ, ಅಧ್ಯಯನಕ್ಕೆ ಒಳಪಟ್ಟ ಬಹಳಷ್ಟು ಗ್ರಾಮಗಳಲ್ಲಿ ಇದಕ್ಕೆ ಮೀರಿದ ಮತ್ತು ಅಪಾಯಕಾರಿ ಮಟ್ಟದಲ್ಲಿ ಯುರೇನಿಯಂ ಪ್ರಮಾಣ ವಿದೆ. ಈ ಹಳ್ಳಿಗಳ ಸುತ್ತ ಕೈಗಾರಿಕೆಗಳೂ ಇಲ್ಲ. ಇಲ್ಲಿನ ಜನರು ಕುಡಿಯುವ ನೀರಿಗೆ ಕೊಳವೆಬಾವಿಗಳನ್ನು ಹೆಚ್ಚಾಗಿ ಆಶ್ರಯಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ‌ನಗರಕ್ಕೆ ನೀರು ಪೂರೈಸುತ್ತಿರುವ ಕೆಲ ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯ ವಾಗಿಲ್ಲ ಎನ್ನುತಿದೆ ವರದಿ. ಈ ಕೊಳವೆಬಾವಿಗಳ ಒಂದು ಲೀಟರ್ ನೀರಿನಲ್ಲಿ ಯುರೇನಿಯಂ ಪ್ರಮಾಣ 1 ಸಾವಿರ ಮೈಕ್ರೊಗ್ರಾಂ ಮೀರಿದೆ.

ಮಿತಿ ಮೀರಿದ ಬಳಕೆ: ಸಣ್ಣ ನೀರಾವರಿ ಇಲಾಖೆಯು 2017ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಅಧಿಕೃತ 1,18,763 ಕೊಳವೆಬಾವಿಗಳಿದ್ದವು. ಕೊಳವೆಬಾವಿಗಳ ಮತ್ತೊಂದು ಸಮಗ್ರ ಸಮೀಕ್ಷೆ 2022ರಲ್ಲಿ ನಡೆಯಬೇಕಿದೆ.

2017ರ ಸಮೀಕ್ಷೆಯ ಒಟ್ಟು ಬೋರ್‌ವೆಲ್‌ಗಳ ಪೈಕಿ ಸುಮಾರು 40,186 ಕೊಳವೆಬಾವಿಗಳ ಆಳ 150 ಮೀಟರ್‌. ರಾಜ್ಯದಲ್ಲಿರುವ ಕೊಳವೆಬಾವಿಗಳ ನಿಖರ ಸಂಖ್ಯೆಗಳ ಮಾಹಿತಿ ಅಂತರ್ಜಲ ಪ್ರಾಧಿಕಾರ ಸೇರಿದಂತೆ ಸಂಬಂಧ ಯಾವುದೇ ಇಲಾಖೆಯಲ್ಲೂ ಲಭ್ಯವಿಲ್ಲ.

ಗ್ರಾಮಾಂತರ ಪ್ರದೇಶಗಳಲ್ಲಿ ಬೋರ್‌ವೆಲ್‌ ಕೊರೆಯುವುದರ ಮೇಲೆ ಯಾವುದೇ ನಿಯಂತ್ರಣವಿಲ್ಲ. ಅದೇ ರೀತಿ ಮಿತಿ ಮೀರಿ ಅಂತರ್ಜಲವನ್ನು ತೆಗೆಯಲಾಗುತ್ತಿದೆ. 2017ರಲ್ಲಿ 365.03 ಟಿಎಂಸಿ ಅಡಿ ಮತ್ತು 2020ರಲ್ಲಿ 375.47 ಟಿಎಂಸಿ ಅಡಿ ಅಂತರ್ಜಲ ತೆಗೆದು ಬಳಸಲಾಗಿದೆ.

ಅದರಲ್ಲೂ ಬಯಲು ಸೀಮೆಯ ಬಹಳಷ್ಟು ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಆಳವಾಗಿ ಕೊಳವೆಬಾವಿ ಕೊರೆದು ನೀರು ಮೇಲೆತ್ತುತ್ತಿರುವುದು, ಸರ್ಕಾರ ಇದಕ್ಕೆ ಕಡಿವಾಣ ಹಾಕದಿರುವುದು ನೀರು ಮತ್ತು ಆರೋಗ್ಯದ ವಿಚಾರದಲ್ಲಿ ಈ ಜಿಲ್ಲೆಗಳ ಜನರು ಮತ್ತಷ್ಟು ಆಪತ್ತಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಭವಿಷ್ಯದ ಹಿತ ಮತ್ತು ವಿಷಮುಕ್ತ ನೀರು ಕುಡಿಯುವ ಉದ್ದೇಶದಿಂದ ಹೆಚ್ಚಿರುವ ಅಂತರ್ಜಲ ಮಟ್ಟವನ್ನು ಸ್ಥಿರವಾಗಿ ಮತ್ತು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಅಧಿಕಾರಿಗಳು, ಜಲತಜ್ಞರ ಬಳಿಯೂ ಉತ್ತರವಿಲ್ಲ!

ಸಾವಿರ ಮೈಕ್ರೊಗ್ರಾಂಗೂ ಹೆಚ್ಚಿನ ಯುರೇನಿಯಂ

ಯುರೇನಿಯಂಗೆ ಸಂಬಂಧಿಸಿ ದಂತೆ 73 ಹಳ್ಳಿಗಳಲ್ಲಿ ನಡೆದ ಅಧ್ಯಯನ ಬಯಲು ಸೀಮೆಯ ಹಲವು ಹಳ್ಳಿಗಳ ಜನರು ವಿಷ ಯುಕ್ತ ನೀರನ್ನು ಕುಡಿಯುತ್ತಿದ್ದಾರೆ ಎನ್ನುವ ಮಾಹಿತಿ ನೀಡುತ್ತದೆ. 57 ಹಳ್ಳಿಗಳ ಕೊಳವೆಬಾವಿಗಳ ನೀರಿನಲ್ಲಿ 30 ಮೈಕ್ರೊಗ್ರಾಂಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಪ್ರಮಾಣವಿದೆ. 48 ಹಳ್ಳಿಗಳಲ್ಲಿ 60 ಮೈಕ್ರೊಗ್ರಾಂ ಮೀರಿದೆ.


ಶೇ 25ರಷ್ಟು ಭಾಗದಲ್ಲಿ ಅಂತರ್ಜಲ ಅತಿ ಬಳಕೆ

ರಾಜ್ಯದ ಒಟ್ಟು ಭೂಭಾಗದಲ್ಲಿ ಶೇ 25ರಷ್ಟು ಭಾಗದಲ್ಲಿ ಅಂತರ್ಜಲ ಅತಿ ಬಳಕೆಯಾಗಿದೆ. ಶೇ 7ರಷ್ಟು ಭೂಭಾಗದಲ್ಲಿ ಅಂತರ್ಜಲ ಮಟ್ಟ ಗಂಭೀರ ಪರಿಸ್ಥಿತಿಯಲ್ಲಿದೆ. ಬಯಲು ಸೀಮೆಯಲ್ಲಿಯೇ ಅಂತರ್ಜಲ ಆಪತ್ತಿನಲ್ಲಿದೆ ಎಂದು ಅಧ್ಯಯನಗಳು ತಿಳಿಸಿವೆ.

***


ನೀರಿನ ಗುಣಮಟ್ಟ ಪರೀಕ್ಷೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿದ್ದೇವೆ. ಪ್ರಯೋಗಾಲಯದ ಮೂಲಕ ಆ ಜಿಲ್ಲೆಯ ನೀರು ಕುಡಿಯಲು ಯೋಗ್ಯವೊ, ಅಲ್ಲವೊ, ನೀರಿನ ಗುಣಮಟ್ಟ ಹೇಗಿದೆ ಎನ್ನುವುದು ತಿಳಿಯಲಿದೆ. ಈಗಾಗಲೇ ಪ್ರಯೋಗಾಲಯ ಸ್ಥಾಪನೆಯ ಪ್ರಕ್ರಿಯೆಗಳು ಆರಂಭವಾಗಿದೆ. ಮುಂದಿನ 3–4 ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಾರಂಭ ಮಾಡಲಿವೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೂ ಇದರಿಂದ ಅನುಕೂಲ ಆಗುತ್ತದೆ.

ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.