ADVERTISEMENT

ಗಾಣಕ್ಕೆ ಸಿಕ್ಕ ಗಬಾಳಿಗರು

ವೀರಣ್ಣ ಮಡಿವಾಳ
Published 7 ಡಿಸೆಂಬರ್ 2020, 4:18 IST
Last Updated 7 ಡಿಸೆಂಬರ್ 2020, 4:18 IST

ಇಲ್ಲಿ ತಂದೆಯೊಬ್ಬ ಎಳೆಯ ಹೆಣ್ಣು ಮಕ್ಕಳನ್ನು ನೇಗಿಲಿಗೆ ಹೂಡಿ ಹೊಲ ಹಸನು ಮಾಡುತ್ತಾನೆ. ಇಲ್ಲಿ ಜಮೀನ್ದಾರರು ಸಾಹುಕಾರರೇ ಬ್ಯಾಂಕುಗಳಾಗಿದ್ದಾರೆ. ಇಲ್ಲಿ ಉಳ್ಳವರ ಮೋಸಕ್ಕೆ ಬಲಿಯಾಗಿ ಜಮೀನು ಮಾರಿ ಅದೇ ಜಮೀನಿನಲ್ಲಿ ಪರರಿಗೆ ಜೀತ ಇರುವವರು ಹಲವರಿದ್ದಾರೆ. ಇದು ಉತ್ತರ ಕರ್ನಾಟಕ.

ಕೃಷಿ ಕಾರ್ಮಿಕರ ಕಷ್ಟಗಳಿಗೆ ಬಗೆ ಬಗೆಯ ರೂಪ. ಕೂಲಿಗೆ ನಿರ್ದಿಷ್ಟ ಸ್ವರೂಪವಿಲ್ಲ, ಕಾಲಮಿತಿಯಿಲ್ಲ, ಇಷ್ಟೇ ದುಡ್ಡು ಎಂತಲೂ ಇಲ್ಲ. ಅನುಭವಿಸಲಾಗದ, ಹಂಚಿಕೊಳ್ಳಲಾಗದ ನೋವುಗಳು ಅವರಿಗೆ. ನಮ್ಮ ಕಾನೂನುಗಳು ಆರಕ್ಷಕ ಠಾಣೆಗಳಲ್ಲಿ, ಅಧಿಕಾರಿಗಳ ಫೈಲುಗಳಲ್ಲಿ ಮಲಗಿವೆ. ಹಳ್ಳಿಗಳಲ್ಲಿ ಉಳ್ಳವರೇ ನ್ಯಾಯಾಧೀಶರು, ಮಾತನಾಡಿದ್ದೇ ಕಾನೂನು.

ಇನ್ನೂ ಸಂಕಷ್ಟದ ಸ್ಥಿತಿ ಉತ್ತರ ಕರ್ನಾಟಕದ ಗಬಾಳಿಗರದು. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಇಪ್ಪತ್ತಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಇದರಲ್ಲಿ ಅರ್ಧ ಖಾಸಗಿ ಒಡೆತನದವು. ಎರಡು ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚು ಜಮೀನಿನಲ್ಲಿ ಕಬ್ಬು ಬೆಳೆಯಲಾಗುತ್ತದೆ. ಕಬ್ಬನ್ನು ಕಟಾವು ಮಾಡಿ ಕಾರ್ಖಾನೆಯ ಹೊಟ್ಟೆ ತುಂಬಿಸಿ ದೇಶಕ್ಕೆಲ್ಲಾ ಸಕ್ಕರೆ ತಿನ್ನಿಸುವವರು ಇದೇ ಗಬಾಳಿಗರು.

ಹಳ್ಳಿಗರ ಪ್ರಕಾರ `ಗಬಾಳ~ ಎನ್ನುವುದು ಜಾತಿಯಲ್ಲ, ಅದು ಕಬ್ಬು ಕಡಿಯಲು ಬರುವ ಕೂಲಿ ಕಾರ್ಮಿಕರನ್ನು ಸೂಚಿಸುವ ಪದ. ಗಬಾಳಿಗರಲ್ಲಿ ಕೆಲವರು ಬಿಜಾಪುರ, ಬಾಗಲಕೋಟೆ, ಬಳ್ಳಾರಿ ಮುಂತಾದ ಜಿಲ್ಲೆಗಳಿಂದ ಬಂದವರು. ಉಳಿದವರು ಮಹಾರಾಷ್ಟ್ರದ ಬೀಡ, ಜತ್, ಉಸ್ಮಾನಾಬಾದ್ ಇತ್ಯಾದಿ ಜಿಲ್ಲೆಗಳಿಗೆ ಸೇರಿದವರು.

ಕಬ್ಬಿನ ರವುದಿಯ ಗೂಡುಗಳು!

ಬೆಂಕಿಯಲ್ಲಿ ಅರಳಿದ ಹೂಗಳು

ADVERTISEMENT

ಗಾಣಗಳಿಗೆ ಸಿಕ್ಕ ಕಬ್ಬಿನಂತೆ ಕಾಣಿಸುವ ಗಬಾಳಿಗರ ಬದುಕಿನಲ್ಲಿ ಸಿಹಿಯ ಕಥೆಗಳು ಇಲ್ಲದಿಲ್ಲ. ಇದೇ ದುಡಿಮೆಯ ದುಡ್ಡಿನಿಂದ ಇರುವ ಎರಡೂ ಹೆಣ್ಣುಮಕ್ಕಳನ್ನು ಓದಿಸಿ ಡಾಕ್ಟರ್, ಟೀಚರ್ ಮಾಡಿ ಬದುಕನ್ನು ಚಂದಗಾಣಿಸಿಕೊಂಡಿರುವ ಕುಟುಂಬಗಳಿವೆ. ಮಕ್ಕಳ ಮದುವೆಗೆ ನಾಲ್ಕು ಲಕ್ಷದವರೆಗೆ ಖರ್ಚುಮಾಡಿ ದುಡಿಯಲು ಬಂದವರೂ ಇದ್ದಾರೆ. ಜಮೀನಿದ್ದೂ ಕಾಲದ ಅವಕೃಪೆಯಿಂದ ಇಲ್ಲಿ ದುಡಿದು, ಮತ್ತೆ ತಮ್ಮ ಊರುಗಳಲ್ಲಿ ಬದುಕು ಕಟ್ಟಿಕೊಳ್ಳುವ ಕುಟುಂಬಗಳೂ ಬಯಲಿನಲ್ಲಿವೆ.
ಕೂಲಿ ಕಾರ್ಮಿಕರಾಗಿ ಬಂದವರಲ್ಲಿ ಬಹುತೇಕ ಜನ ಗ್ರಾಮೀಣ ತಳಸಮುದಾಯದವರು. ಇರಲು ಮನೆಯಿಲ್ಲದೆ ಜೋಪಡಿಗಳಲ್ಲಿ ವಾಸ ಮಾಡುತ್ತಲೇ ಸಿಕ್ಕ ಕೆಲಸ ಮಾಡುತ್ತಿದ್ದವರಿಗೆ, ಯಾವ ಕೆಲಸಗಳೂ ಸಿಗದೆ ಬದುಕು ದುಸ್ತರವಾದಾಗ ಹೀಗೆ ಗಬಾಳಿಗರಾಗಿ ಇಲ್ಲಿ ಬಂದು ದಿನ ದೂಡುತ್ತಾರೆ. ಊರಿನ ಸಾಮಾಜಿಕ ದೌರ್ಜನ್ಯಗಳು, ಅವಮಾನಗಳು, ಕೊನೆಗೆ ಮನುಷ್ಯರಾಗಿ ನೋಡುವ ಕಣ್ಣಿಲ್ಲದ ಮೇಲ್ಜಾತಿಗಳ ಅಮಾನವೀಯತೆಗೆ ಬೇಸತ್ತು ಊರು ತೊರೆದು ಬಂದವರಿದ್ದಾರೆ.

ಬೆಳಗಾವಿ ಜಿಲ್ಲೆಯ ಊರುಗಳಲ್ಲದ ಬಯಲು ಪ್ರದೇಶಗಳಲ್ಲಿ ಗಬಾಳಿಗರ ವಾಸ. ಆ ಬಯಲು ಪ್ರದೇಶಗಳಲ್ಲಿ ಕಾಣುವುದು ಮನೆಗಳಲ್ಲ, ಗುಡಿಸಲುಗಳೂ ಅಲ್ಲ- ಬದಲಿಗೆ ಗುಡಿಸಲಿನ ಆಕಾರದ ಗೂಡುಗಳು. ಕೆಲವು ಊರುಗಳಲ್ಲೂ ಇಂತಹದ್ದೇ ಗೂಡುಗಳು ಕಂಡು ಬರುತ್ತವೆ. ಆ ಗೂಡುಗಳೆಲ್ಲ ಕಬ್ಬಿನ ರವುದಿಯಿಂದ ಮಾಡಿದವು. ಕುರಿ, ಕೋಳಿ, ಆಕಳುಗಳು, ಮಕ್ಕಳು, ಮರಿ ಎಲ್ಲವೂ ವಾಸಿಸುವುದು ಇಂಥ ಗೂಡುಗಳಲ್ಲೇ.

ಕಾರ್ಖಾನೆಗಳ ಸಮೀಪವಂತೂ ಇಂಥ ಗೂಡುಗಳದೇ ಸಮುದ್ರ. ಅಲ್ಲಿ ಸಾವಿರಾರು ಜನರಿಗೆ ಇರುವುದು ಒಂದೇ ಒಂದು ನೀರಿನ ಟ್ಯಾಂಕು. ಸೂರ್ಯ ಮುಳುಗಿದರೆ ಸಾಕು ಎಲ್ಲಿ ಹುಡುಕಿದರೂ ಬೊಗಸೆ ಬೆಳಕು ಸಿಗದು. ವಿಷ ಜಂತುಗಳ ಕಾಟ. ಉರುವಲಿಗೆ ಎತ್ತಿನ ಸಗಣಿಯಿಂದ ಮಾಡಿದ ಕುಳ್ಳುಗಳೇ ಗತಿ. ಕೊರೆವ ಚಳಿ, ಸುರಿವ ಮಳೆ, ಉರಿವ ಬಿಸಿಲು ಇವರಿಗೆ ಲೆಕ್ಕವೇ ಇಲ್ಲ. ಅವರಿಗೆ ಗೊತ್ತಿರುವುದು ಎರಡೇ. ಮೈ ತುಂಬ ದುಡಿಯುವುದು ಹಾಗೂ ಪುಡಿಗಾಸು ಪಡೆಯುವುದು.

ಕಬ್ಬು ಕಡಿಯಲು ಬಂದವರು ವರ್ಷದಲ್ಲಿ ಏಳೆಂಟು ತಿಂಗಳು ಗೂಡುಗಳಲ್ಲೇ ಉಳಿದು ಬಿಡುತ್ತಾರೆ. ಹೊತ್ತು ಹುಟ್ಟುವ ಮೊದಲೇ ಬಂಡಿ ಹೂಡುತ್ತಾರೆ ಕಬ್ಬಿನ ಗದ್ದೆಗಳಿಗೆ. ಇವರ ಸಮೀಪವೇ ಕಬ್ಬಿನ ಗದ್ದೆಗಳೇನೂ ಇರುವುದಿಲ್ಲ. ಒಮೊಮ್ಮೆ ಹತ್ತಾರು ಕಿ.ಮೀ ದೂರದಿಂದ ಕಬ್ಬು ಕತ್ತರಿಸಿ ತರಬೇಕಾದ ಸ್ಥಿತಿ. ಮುಂಜಾನೆ ಹೋದವರು ಮರಳುವುದು ರಾತ್ರಿಗೇ.

ಕಬ್ಬಿನ ಬೆಳೆಯೂ ಇವರ ಪಾಲಿಗೆ ಕುಡುಗೋಲು! ಕಬ್ಬಿನ ಎಲೆಗಳು ತುಂಬಾ ಹರಿತ. ಇವರ ಕುಡುಗೋಲು ಎಲೆಗಳ ಕೊಯ್ದರೆ, ಎಲೆಗಳು ಕೈಗಳ ಕೊಯ್ಯುತ್ತವೆ. ಅಂಗೈ ಕೈ ಕಾಲು ಮುಖವೆಲ್ಲಾ ತರಚಿ ಹೋಗುತ್ತವೆ.

ಕೂಲಿಗೆ ಬರುವ ಎಲ್ಲರ ಪಾಡೂ ಇದೇ. ಅರೆಬರೆ ತುಂಡಾಗಿ ಜೋತಾಡುವ ಕೈ ಬೆರಳಿನವರು, ಕಣ್ಣಿಗೆ ಗಾಯ ಮಾಡಿಕೊಂಡವರು ಸಾಕಷ್ಟು ಮಂದಿ. ಇದನ್ನೆಲ್ಲಾ ನೋಡುವಾಗ ಈ ಜನ ಕೇವಲ ಬೆವರು ಹರಿಸುವುದಿಲ್ಲ, ರಕ್ತವನ್ನು ಪಣಕ್ಕಿಡುತ್ತಾರೆ ಎಂದು ಅನ್ನಿಸದೇ ಇರದು. ದುಡಿಮೆಯ ಬಗೆಗಿನ ಇವರ ಶ್ರದ್ಧೆ, ತನ್ಮಯತೆ ಹಾಗೂ ಕಠೋರತೆಯನ್ನು ಪದಗಳಲ್ಲಿ ಕಾಣಿಸುವುದು ಹೇಗೆ?

ಕಬ್ಬಿನ ದೊಡ್ಡ ದೊಡ್ಡ ಹೊಲಗಳು ಗಬಾಳಿಗರ ದುಡಿತಕ್ಕೆ ವಿನಯದಿಂದ ಬಾಗಿದಂತೆ ತೋರುತ್ತವೆ. ರಾಜ್ಯ, ಇಲ್ಲಿನ ಜನಪ್ರತಿನಿಧಿಗಳು, ಅವರ ಬಜೆಟ್ಟು ಎಲ್ಲವನ್ನೂ ಸಾರಾಸಗಟಾಗಿ ಧಿಕ್ಕರಿಸಿ ತಮ್ಮ ದುಡಿತದ ಮೂಲಕವೇ, ತಮ್ಮ ಕಷ್ಟಗಳ ಪರಾಕಾಷ್ಠೆಯ ಮೂಲಕವೇ ಈ ಶ್ರಮಿಕ ವರ್ಗ ಈ ಪ್ರಭುತ್ವಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ ಅನ್ನಿಸುತ್ತದೆ.

ಮಧ್ಯವರ್ತಿಗಳ ಕರಾಮತ್ತು
ಗಬಾಳಿಗರಿಗೂ ಮತ್ತು ಕಾರ್ಖಾನೆಗಳಿಗೂ ಯಾವುದೇ ಸಂಬಂಧ ಇಲ್ಲ. ಕಬ್ಬು ತಂದು ಮುಟ್ಟಿಸಿದರೂ ಕಾರ್ಖಾನೆಗಳು ಇವರಿಗೆ ಕೂಲಿ ಕೊಡುವುದಿಲ್ಲ. ಅದಕ್ಕೆಂದೇ ದಲ್ಲಾಳಿಗಳಿರುತ್ತಾರೆ. ಇಲ್ಲಿ ನಡೆಯುವುದು ಎಣಿಕೆಗೆ ನಿಲುಕದ ಸೌಮ್ಯ ಮೋಸ. ಗಬಾಳಿಗರ ಊರುಗಳಿಗೆ ಮೊದಲೇ ದಲ್ಲಾಳಿಗಳು ದೌಡಾಯಿಸುತ್ತಾರೆ. ಅವರಿಗೆ ಇಂತಿಷ್ಟು ಹಣ ನೀಡುತ್ತಾರೆ. ಎಷ್ಟು ಜನ ಬರಬೇಕು, ಎಲ್ಲಿ ಕೆಲಸ ಮಾಡಬೇಕು ಎಂಬುದನ್ನೆಲ್ಲಾ ನಿರ್ಧರಿಸುತ್ತಾರೆ. ಹಾಗಾದರೆ ದಲ್ಲಾಳಿಗಳಿಗೆ ಹಣ ಹೇಗೆ ಬರುತ್ತದೆ?

ತನಗೇನೂ ಸಂಬಂಧವೇ ಇಲ್ಲ ಎಂಬಂತಿರುವ ಕಾರ್ಖಾನೆಗಳೇ ದಲ್ಲಾಳಿಗಳ ಮೂಲಕ ಹಣ ರವಾನಿಸುತ್ತವೆ. ಅಷ್ಟಕ್ಕೆ ಮಾತ್ರ ಅವುಗಳ ಕಾಳಜಿ. ಉಳಿದದ್ದು ದಲ್ಲಾಳಿಗಳಿಗೆ ಬಿಟ್ಟದ್ದು. ಗಬಾಳಿಗರ ಮುಗ್ಧತೆಯೇ ದಲ್ಲಾಳಿಗಳ ಬಂಡವಾಳ. ತಾವು ನೀಡಿದ ಹಣಕ್ಕಿಂತ ದುಪ್ಪಟ್ಟು ದುಡಿಸಿಕೊಳ್ಳುವ ಕಲೆ ಇವರಿಗೆ ಗೊತ್ತು. ತಾವು ಹೂಡುವ ಎತ್ತುಗಳಿಗಿಂತಲೂ ಗಬಾಳಿಗರದು ಹೆಚ್ಚಿನ ದುಡಿಮೆ ಎಂಬುದು ಅವರಿಗೆ ಗೊತ್ತು.

ಇವರು ತಂದು ಮುಟ್ಟಿಸುವ ಟನ್ ಕಬ್ಬಿಗೆ ಇಷ್ಟು ದುಡ್ಡು ಎಂದು ಕಾರ್ಖಾನೆ ನಿಗದಿಪಡಿಸಿರುತ್ತದೆ. ಆದರೆ ಹಣ ಕೊಡುವವನಿಗೆ ಗಬಾಳಿಗರು ಇಂತಿಷ್ಟು ಪರ್ಸೆಂಟ್ ದುಡ್ಡು ಕೊಡಲೇ ಬೇಕು. ದುಡಿಮೆಯ ಕಾಲುಪಾಲು ದಲ್ಲಾಳಿಗಳಿಗೇ ಹೋಗುತ್ತದೆ ಎಂದು ಇಲ್ಲಿನ ಜನ ಅಲವತ್ತುಕೊಳ್ಳುತ್ತಾರೆ. ಕಬ್ಬು ಒಯ್ಯಲು ಬೇಕಾದ ಬಂಡಿಯೂ ಪುಗಸಟ್ಟೆ ಸಿಗದು. ಅದಕ್ಕೆ ದಿನಕ್ಕಿಷ್ಟು ಬಾಡಿಗೆ ಇದೆ.

ಇದೆಲ್ಲಾ ಕಳೆದು ಗಬಾಳಿಗರ ಕುಟುಂಬಕ್ಕೆ ಸಿಗುವ ಫಲ ರವೆಯಷ್ಟು. ಬೇರೆ ಕೃಷಿ ಕೂಲಿಗಳಿಗೆ ಹೋಲಿಸಿದರೆ ಇವರಿಂದ ಆಗುವ ಲಾಭ ಹೆಚ್ಚು. ಅದು ಕೇವಲ ದುಡ್ಡಿದ ರೂಪದಲ್ಲಿ ಮಾತ್ರವಲ್ಲ. ಬೆವರು, ರಕ್ತದ ರೂಪದಲ್ಲೂ.

ಗೋಳಿನ ಕತೆ ಇಷ್ಟಕ್ಕೇ ಮುಗಿಯದು. ದುಡಿಯಲು ಬರುವ ಮುನ್ನವೇ ಇವರ ಪಾಲಿನ ಹಣ ಖರ್ಚಾಗಿ ಹೋಗಿರುತ್ತದೆ. ಕೆಲವರು ಮಕ್ಕಳ ಮದುವೆಗೆ, ಹಬ್ಬ ಹುಣ್ಣಿಮೆಗೆಂದು ಹಣ ಕಳೆದಿರುತ್ತಾರೆ. ಮತ್ತಷ್ಟು ಮಂದಿ ಕುಡಿದು ಜೂಜಾಡಿ ತಮ್ಮಲ್ಲಿರುವುದನ್ನೆಲ್ಲಾ ನೀಗಿಕೊಳ್ಳುತ್ತಾರೆ. ಹೀಗೆ ಬಂದವರನ್ನು ದುಡಿಮೆಗೆ ಅಣಿ ಮಾಡುವ ಗಬಾಳಿಗರ ಹೆಣ್ಣುಮಕ್ಕಳ ಪಾಡು ಹೇಳತೀರದು.

ಆ ತಾಯಂದಿರ ಸ್ಥಿತಿ ಮಹಿಳಾ ಕಲ್ಯಾಣದ ಮಾತನ್ನಾಡುವ ಪ್ರಭುತ್ವವನ್ನು ಅಣಕಿಸುವಂತಿದೆ. ಕತ್ತಲು ತುಂಬಿದ ಬಯಲಿನಲ್ಲಿಯೇ ನೂರಾರು ಹೆಣ್ಣುಮಕ್ಕಳ ಸ್ನಾನ. ಅಡುಗೆ ಮಾಡಿ ಬಂಡಿ ಹತ್ತುವಾಗ ಇನ್ನೂ ಹೊತ್ತು ಮೂಡಿರುವುದಿಲ್ಲ. ಒಂದು ಬಂಡಿ ಕಬ್ಬು ಪೂರೈಸಿದ ನಂತರ ಮತ್ತೊಂದು ಬಂಡಿಯಲ್ಲಿ ಕಬ್ಬು ಪೂರೈಕೆ. ಹೆಣ್ಣುಮಕ್ಕಳೇ ಎತ್ತುಗಳನ್ನು ಪಳಗಿಸಿ ಬಂಡಿ ಹೂಡುವುದು. ಅವರು ಸಾಗುವ ದಾರಿಯೂ ಹಸನಾದುದಲ್ಲ. ಎತ್ತುಗಳು ಹಿಡಿತಕ್ಕೆ ಸಿಗದಾಗ ಎದುರಿಸಿದ ಅನಾಹುತಗಳು ಅಪಾರ.

ಗರ್ಭಿಣಿಯರೂ ದುಡಿಮೆಗೆ ಹೊರತಲ್ಲ. ಆಸ್ಪತ್ರೆಗಳು ಇವರು ಇರುವಲ್ಲಿಂದ ದೂರ. ಬಸ್ಸೇರಿ ವೈದ್ಯರನ್ನು ಕಾಣಬೇಕು. ಬಸ್ಸಿನಲ್ಲೇ ಹೆರಿಗೆಯಾದ ಉದಾಹರಣೆಗಳನ್ನು ಕೇಳಿದರೆ ಎಂಥ ಕಠಿಣ ಹೃದಯಿಗಳೂ ದಿಗಿಲು ಬೀಳಬೇಕು. ಇದಕ್ಕೆಲ್ಲಾ ನವನಾಗರಿಕ ಸಮಾಜದ ಹೊಣೆ ಹೊತ್ತ ನಾಡ ಪ್ರಭುಗಳು ಏನು ಹೇಳುತ್ತಾರೆ? `ಜನನಿ ಸುರಕ್ಷಾ~ ಯೋಜನೆ ಇಲ್ಲಿ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ? ಬದುಕೇ ಒಂದು ಪ್ರಶ್ನೆಯಾಗಿರುವಾಗ ಇಂಥ ಪ್ರಶ್ನೆಗಳಿಗೆಲ್ಲ ಅರ್ಥವೇ ಇಲ್ಲವೇನೊ? ಒಂದಂತೂ ನಿಜ- ಎಲ್ಲ ಕಷ್ಟದೆಲ್ಲೆ ಮೀರಿ ಕಬ್ಬನ್ನು ಕಾರ್ಖಾನೆಗೆ ಮುಟ್ಟಿಸುವ ಕಾಯಕವೇ ಈ ಹೆಣ್ಣು ಮಕ್ಕಳ ಬದುಕಿನ ಚೈತನ್ಯವನ್ನು ಹೇಳುವಂತಿದೆ.

ಅಕ್ಷರ ದೂರ!
ಈಗ ಎಲ್ಲೆಲ್ಲೂ ಶಿಕ್ಷಣ ಹಕ್ಕು ಕಾಯ್ದೆ ಕುರಿತೇ ಮಾತು. ಆದರೆ ಗಬಾಳಿಗರ ಮಕ್ಕಳಿಗೆ ಎಲ್ಲಿಯ ಶಿಕ್ಷಣ? ಮಕ್ಕಳು ಎಳೆಯ ರಟ್ಟೆಗಳಲ್ಲೇ ಕಬ್ಬು ಕಡಿಯುತ್ತಿರುವುದು ಶಿಕ್ಷಣದ ದುರಂತ ವಾಸ್ತವವನ್ನು ಸಾರಿ ಹೇಳುತ್ತಿದೆ. ಶಿಕ್ಷಣ ಯೋಜನೆಯಡಿ ಬಿಡುಗಡೆಯಾದ ಸಾವಿರಾರು ಕೋಟಿ ರೂಪಾಯಿಗಳು ಎಲ್ಲಿ ಹೋಗುತ್ತಿವೆ ಎಂಬ ಪ್ರಶ್ನೆ ಮೂಡುತ್ತದೆ.

ಆಟಪಾಠಗಳಲ್ಲಿ ಮೈ ಮರೆಯಬೇಕಿದ್ದ ಮಕ್ಕಳು ಕಬ್ಬಿನೆಲೆಗಳ ಹರಿತಕ್ಕೆ ಸಿಗುತ್ತಿರುವ, ಬಂಡಿ ನಡೆಸುತ್ತಿರುವ ದೃಶ್ಯಗಳಿಗೆ ಉತ್ತರ ಕೊಡುವವರು ಯಾರು? ಉತ್ತರ ಕರ್ನಾಟಕದ ಇಂಥ ಮಕ್ಕಳ ಎದೆ ಮೇಲೆ ಮಾತ್ರ ಗಾಯಗಳಾಗಿಲ್ಲ. ಅವರ ಎದೆಯೊಳಗೆ ಅಮಾನುಷ ಬರೆಗಳು ಬಿದ್ದಿವೆ.

ಕಬ್ಬು ಕಟಾವು ಪ್ರಕ್ರಿಯೆಯಲ್ಲಿ ಆಕಸ್ಮಿಕವಾಗಿ ಪ್ರಾಣಗಳೂ ಹೋಗಿವೆ. ಪರಿಹಾರ ಧನ ಹುಡುಕಿ ಹೊರಟವರ ದಾರಿ ತುಂಬ ಮುಳ್ಳು ತುಂಬಿವೆ. ಕೂಲಿ ಕಾರ್ಮಿಕರ ದುಡಿಮೆಗೆ ಅವರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಕಾನೂನುಗಳಿವೆ. ಈ ಕಾನೂನುಗಳನ್ನು ಪ್ರಭುತ್ವವೇ ಮುರಿದ ಉದಾಹರಣೆಗಳಿವೆ. ಕಾನೂನಿನ ಪ್ರಕಾರ ದಿನವೊಂದಕ್ಕೆ ನಿಗದಿಪಡಿಸಿದ ಕೂಲಿಯನ್ನು ಪ್ರಭುತ್ವ ಅಂಗನವಾಡಿ ಆಯಾಗಳಿಗೆ, ಬಿಸಿಯೂಟದ ಕಾರ್ಯಕರ್ತೆಯರಿಗೆ ನೀಡಬೇಕು. ಅದು ಸಾಧ್ಯವಾಗಿದೆಯೇ?

ಕೃಷಿಯ ಅವಸಾನಕ್ಕೂ, ಕೂಲಿಕಾರ್ಮಿಕರು ಎದುರಿಸುತ್ತಿರುವ ದುರಂತಗಳಿಗೂ ನೇರ ನಂಟಿದೆ. ಆದರೆ ಪ್ರಭುತ್ವಕ್ಕೆ ಕೃಷಿಯನ್ನು ಕಾರ್ಪೊರೇಟ್ ವಲಯವನ್ನಾಗಿಸುವತ್ತಲೇ ಆಸಕ್ತಿ. ಈ ಕಾರಣದಿಂದ ಸಾವಿರ ಸಾವಿರ ಜನ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಹಾಗೆ ಭೂರಹಿತರಾದವರು ಕೂಲಿಕಾರ್ಮಿಕರಾಗುತ್ತಿದ್ದಾರೆ.

ಹತ್ತಿಬೆಳೆಯ ಬೆಲೆಯಲ್ಲಿ ಆಗದಿರುವ ಏರಿಕೆ ಬಟ್ಟೆಯ ಬೆಲೆಯಲ್ಲಿ ಆಗಿದೆ. ತಾವೇ ಬೆಳೆದ ಹತ್ತಿಯಿಂದ ತಯಾರಿಸಿದ ಬಟ್ಟೆಯನ್ನು ಖರೀದಿಸಲಾಗದೆ ಬೆತ್ತಲೆ ಫಕೀರರಂತೆ ಬದುಕು ಸವೆಸುವ ರೈತರು ಅನೇಕರು.

ಇಂದು ಕೂಲಿಯಿಂದ ನೆಮ್ಮದಿ ಬದುಕು ಸಾಧ್ಯವಾಗುತ್ತಿಲ್ಲ. ಅದು ಜೀವ ಉಳಿಸಿ ಕೊಳ್ಳುವುದಕ್ಕಾಗಿ ನಡೆಸಿದ ಹೋರಾಟದಲ್ಲಿ ಸಿಕ್ಕ ಸಣ್ಣ ಭರವಸೆ ಮಾತ್ರ. ರೈತರ ಬೆಳೆಗೆ ನ್ಯಾಯಯುತ ಬೆಲೆ ಸಿಕ್ಕಿದ್ದರೆ ಕೂಲಿ ಕಾರ್ಮಿಕರೂ ಒಂದಿಷ್ಟು ಅನ್ನ ಪಡೆಯಬಹುದಿತ್ತು. ಈಗಿರುವುದು ಒಬ್ಬರೇ ಶೋಷಕರಲ್ಲ, ದೌರ್ಜನ್ಯಕ್ಕೆ ನಿರ್ದಿಷ್ಟ ರೂಪವೂ ಇಲ್ಲ. ಇನ್ನು ಶೋಷಣೆಯನ್ನು ಗುರುತಿಸುವುದಾದರೂ ಹೇಗೆ? ಶತಶತಮಾನದಿಂದ ನೋವೇ ಬದುಕಾದವರಿಗೆ ಸಮಾನತೆ ಎನ್ನುವುದು ಕನಸೇ? ಕಾಲವೇ ಉತ್ತರಿಸಬೇಕು.

ಚಿತ್ರಗಳು : ಮಲ್ಲಿಕಾರ್ಜುನ ದಾನನ್ನವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.