‘ಮಾರುಕಟ್ಟೆಯಲ್ಲಿ ಆ್ಯಸಿಡ್ ಸುಲಭವಾಗಿ ದೊರೆಯುವುದಕ್ಕೆ ಕಡಿವಾಣ ಹಾಕಬೇಕು. ಮಹಿಳೆಯರ ಮೇಲೆ ಆ್ಯಸಿಡ್ ದಾಳಿಯನ್ನು ಈ ಮೂಲಕ ತಡೆಯಬಹುದು’ ಎಂದು ಸುಪ್ರೀಂ ಕೋರ್ಟ್, ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಹೇಳಿತ್ತು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿರುವ ‘ಛಪಾಕ್’ ಸಿನಿಮಾವು ಲಕ್ಷ್ಮೀ ಅಗರ್ವಾಲ್....
ಬೆಂಗಳೂರು: ಮಾನವನ ಚರ್ಮವನ್ನು ಸುಡುವ ಮತ್ತು ದೇಹಕ್ಕೆ ಹಾನಿ ಮಾಡುವ ಆ್ಯಸಿಡ್‌ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ನಿರ್ಬಂಧವಿದೆ. ಆದರೆ, ಬೆಂಗಳೂರಿನ ಹಲವು ವಸತಿ ಪ್ರದೇಶಗಳ ಕಿರಾಣಿ ಅಂಗಡಿಗಳಲ್ಲಿ ಆ್ಯಸಿಡ್ ಸುಲಭವಾಗಿ ದೊರೆಯುತ್ತದೆ.
ಆ್ಯಸಿಡ್ ಕೊಳ್ಳುವವರ ವಿವರವನ್ನು ದಾಖಲಿಸಿಕೊಂಡು, ನಂತರ ಆ್ಯಸಿಡ್ ಮಾರಾಟ ಮಾಡಬೇಕು ಎಂದು 2013ರಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಸಂಬಂಧ ಅದೇ ವರ್ಷದಲ್ಲಿ ಕೇಂದ್ರ ಗೃಹ ಸಚಿವಾಲಯವೂ ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳು ಬೆಂಗಳೂರಿನ ಹಲವೆಡೆ ಪಾಲನೆಯಾಗುತ್ತಿಲ್ಲ.
ಮುಕ್ತ ಮಾರುಕಟ್ಟೆಯಲ್ಲಿ ಆ್ಯಸಿಡ್ ಲಭ್ಯತೆ ಪರಿಶೀಲಿಸುವ ಉದ್ದೇಶದಿಂದ ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆ, ನಂದಿನಿ ಬಡಾವಣೆ, ಲಗ್ಗೆರೆ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದ ಹಲವು ಕಿರಾಣಿ ಅಂಗಡಿಗಳಲ್ಲಿ ವಿಚಾರಿಸಲಾಯಿತು. ಹೀಗೆ ವಿಚಾರಿಸಲಾದ ಎಲ್ಲಾ ಅಂಗಡಿಗಳಲ್ಲೂ ಆ್ಯಸಿಡ್ ಮುಕ್ತವಾಗಿ ಲಭ್ಯವಿದೆ.
ಈ ಎಲ್ಲಾ ಅಂಗಡಿಗಳಲ್ಲೂ, ‘ಆ್ಯಸಿಡ್ ಇದೆಯಾ?’ ಎಂದು ಕೇಳಲಾಯಿತು. ಅಂಗಡಿಯವರು ತಕ್ಷಣವೇ, ‘ಅರ್ಧ ಲೀಟರ್ ಬೇಕಾ? ಒಂದು ಲೀಟರ್ ಬೇಕಾ’ ಎಂದು ಪ್ರತಿಕ್ರಿಯಿಸಿದರು.
ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಪ್ರಕಾರ ಅಂಗಡಿಯವರು, ಕೊಳ್ಳುವವರ ವಿವರ, ವಿಳಾಸ, ಗುರುತಿನ ಚೀಟಿ ಮತ್ತು ಆ್ಯಸಿಡ್ ಖರೀದಿಸುವ ಉದ್ದೇಶವನ್ನು ವಿಚಾರಿಸಿ, ದಾಖಲಿಸಿಕೊಳ್ಳಬೇಕಿತ್ತು. ಆದರೆ, ಯಾವ ಅಂಗಡಿಗಳಲ್ಲೂ ಈ ವಿವರ ಕೇಳಲಿಲ್ಲ.
ಬಗೆ–ಬಗೆ ಆ್ಯಸಿಡ್‌ಗಳು: ಈ ಅಂಗಡಿಗಳಲ್ಲಿ ಹಲವು ಬಗೆಯ ಆ್ಯಸಿಡ್‌ಗಳು ಲಭ್ಯವಿವೆ.
ಬಳಸಿ ಬಿಸಾಡಲಾದ ನೀರಿನ ಬಾಟಲಿಗಳಲ್ಲಿ ತುಂಬಿ, ಆ್ಯಸಿಡ್ ಮಾರಾಟ ಮಾಡಲಾಗುತ್ತದೆ. ಈ ಬಾಟಲಿಗಳ ಮೇಲೆ ಯಾವುದೇ ಲೇಬಲ್ ಇರುವುದಿಲ್ಲ. ಬಾಟಲಿಗಳ ಮುಚ್ಚಳಗಳೂ ಸೀಲ್ ಆಗಿರುವುದಿಲ್ಲ. ಇವುಗಳಲ್ಲಿ ಹಳದಿ ಬಣ್ಣದ ಅರೆ ಪಾರದರ್ಶಕ ಆ್ಯಸಿಡ್ ದ್ರಾವಣ ತುಂಬಲಾಗಿತ್ತು. ಅರ್ಧ ಲೀಟರ್ ಆ್ಯಸಿಡ್‌ನ ಬೆಲೆ₹ 10ರಿಂದ ₹ 14ರಷ್ಟಿದೆ.
ಈ ಅಂಗಡಿಗಳಲ್ಲಿ ಬ್ರ್ಯಾಂಡೆಡ್ ಆ್ಯಸಿಡ್ ಸಹ ಲಭ್ಯವಿದೆ. ‘ಒಳ್ಳೆಯ ಆ್ಯಸಿಡ್ ಇದೆಯಾ’ ಎಂದು ಕೇಳಿದರೆ, ಅಂಗಡಿ
ಯವರು ಬ್ರ್ಯಾಂಡೆಡ್ ಆ್ಯಸಿಡ್ ಇರುವ ಬಾಟಲಿಯನ್ನು ನೀಡುತ್ತಾರೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಲಾಗಿರುವ ಆ್ಯಸಿಡ್ ಅನ್ನು ಬ್ರ್ಯಾಂಡ್ ಅಡಿ ಮಾರಾಟ ಮಾಡಲಾಗುತ್ತಿದೆ. ಬಾಟಲಿಯ ಮುಚ್ಚಳವು ಸೀಲ್ ಆಗಿರುತ್ತದೆ. ಈ ಬಾಟಲಿಗಳ ಮೇಲೆ ಬ್ರ್ಯಾಂಡ್‌ನ ಹೆಸರು ಮತ್ತು ತಯಾರಿಕಾ ಘಟಕದ ವಿಳಾಸ ಇರುವ ಲೇಬಲ್ ಅಂಟಿಸಲಾಗಿರುತ್ತದೆ. ಈ ತಯಾರಿಕಾ ಘಟಕಗಳು ಬೆಂಗಳೂರಿನ ಲಗ್ಗೆರೆ, ಪೀಣ್ಯ ಎರಡನೇ ಹಂತ, ದೊಡ್ಡಣ್ಣ ಕೈಗಾರಿಕಾ ಪ್ರದೇಶ ಮತ್ತು ಹೆಗ್ಗನಹಳ್ಳಿಯಲ್ಲಿ ಇವೆ. ಅರ್ಧ ಲೀಟರ್ ಆ್ಯಸಿಡ್‌ನ ಬೆಲೆ ₹ 12ರಿಂದ₹ 25ರಷ್ಟಿದೆ.
ಇನ್ನು ಪಿವಿಸಿ ಬಾಟಲಿಗಳಲ್ಲಿ ತುಂಬಿಸಲಾಗಿರುವ ಬ್ರ್ಯಾಂಡೆಡ್ ಆ್ಯಸಿಡ್ ಸಹ ಇಲ್ಲಿ ಮಾರಾಟವಾಗುತ್ತದೆ. ಈ ಬಾಟಲಿಗಳ ಮೇಲೆಯೇ ಬ್ರ್ಯಾಂಡ್‌ನ ಹೆಸರು, ತಯಾರಕರ ಹೆಸರು ಮತ್ತು ವಿಳಾಸವನ್ನು ಮುದ್ರಿಸಲಾಗಿರುತ್ತದೆ. ‘ಅಪಾಯಕಾರಿ ಆ್ಯಸಿಡ್. ಬಳಕೆ ವೇಳೆ ಎಚ್ಚರಿಕೆ’ ಎಂಬ ಸೂಚನೆಯನ್ನೂ ಮುದ್ರಿಸಲಾಗಿರುತ್ತದೆ. ಈ ಎಲ್ಲಾ ಪ್ರದೇಶಗಳಲ್ಲಿ ಎರಡು ಬ್ರ್ಯಾಂಡ್‌ನ ಇಂತಹ ಆ್ಯಸಿಡ್ ಲಭ್ಯವಿದೆ. ಒಂದು ಬ್ರ್ಯಾಂಡ್‌ನ ತಯಾರಿಕಾ ಘಟಕ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಇದೆ. ಮತ್ತೊಂದು ಬ್ರ್ಯಾಂಡ್‌ನ ತಯಾರಿಕಾ ಘಟಕ ಪೀಣ್ಯ ಎರಡನೇ ಹಂತದ ಬಳಿಯ ಹೆಗ್ಗನಹಳ್ಳಿಯಲ್ಲಿ ಇದೆ. ಈ ಸ್ವರೂಪದ ಅರ್ಧ ಲೀಟರ್ ಆ್ಯಸಿಡ್ ಬಾಟಲಿಯ ಬೆಲೆ ₹ 40ರಿಂದ ₹ 60ರವರೆಗೂ ಇದೆ.
ಮೇಲೆ ಹೆಸರಿಸಲಾದ ಎಲ್ಲಾ ಬಡಾವಣೆಗಳ ಅಂಗಡಿಗಳಲ್ಲಿ ಈ ಮೂರೂ ಸ್ವರೂಪದ ಆ್ಯಸಿಡ್ ಅನ್ನು, ಯಾವುದೇ ಅಡೆತಡೆ ಇಲ್ಲದೆ ಖರೀದಿಸಬಹುದು.
‘ಗೊತ್ತಿಲ್ಲ...’
ಕೇಳಿದ ತಕ್ಷಣ ಆ್ಯಸಿಡ್ ಬಾಟಲಿ ನೀಡಿದ ಅಂಗಡಿಯವರನ್ನು, ‘ಆ್ಯಸಿಡ್ ಖರೀದಿಸುವವರ ವಿವರ ದಾಖಲಿಸಿಕೊಳ್ಳಬೇಕು. ನೀವು ಹಾಗೇ ನೀಡುತ್ತಿದ್ದೀರಲ್ಲ’ ಎಂದು ಪ್ರಶ್ನಿಸಲಾಯಿತು. ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಅವರಿಗೆ ವಿವರಿಸಲಾಯಿತು.
ಅದಕ್ಕೆ ಅಂಗಡಿಯವರು, ‘ಇಷ್ಟೆಲ್ಲಾ ನಿಯಮಗಳು ಇರುವುದರ ಬಗ್ಗೆ ನಮಗೆ ಗೊತ್ತೇ ಇಲ್ಲ’ ಎಂದು ಹೇಳಿದರು. ಬಹುತೇಕ ಅಂಗಡಿಯವರ ಉತ್ತರ ಇದೇ ಆಗಿತ್ತು.
ಇದನ್ನೂ ಓದಿ...ಛಪಾಕ್ ವಿಮರ್ಶೆ: ಮನಕಲಕುವ ‘ಸಿನಿಶಬ್ದ'
ಸುಪ್ರೀಂ ಕೋರ್ಟ್ ಮಾರ್ಗಸೂಚಿ
*ಯಾವುದೇ ರೀತಿಯ ಆ್ಯಸಿಡ್ ಅನ್ನು ಮುಕ್ತವಾಗಿ ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡುವ ವ್ಯಕ್ತಿಯು, ಖರೀದಿಸುವವರ ವಿವರವನ್ನು ದಾಖಲಿಸಿಕೊಳ್ಳಬೇಕು
* ಗುರುತಿನ ಚೀಟಿ ತೋರಿಸುವ ಗ್ರಾಹಕರಿಗೆ ಮಾತ್ರ ಆ್ಯಸಿಡ್ ಮಾರಾಟ ಮಾಡಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆ್ಯಸಿಡ್ ಮಾರಾಟ ಮಾಡಬಾರದು
* ಆ್ಯಸಿಡ್ ಅನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದರ ವಿವರವನ್ನು ಮಾರಾಟ ದಾಖಲಾತಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು
* ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ತಮ್ಮಲ್ಲಿರುವ ವಿವಿಧ ಆ್ಯಸಿಡ್ ಸಂಗ್ರಹದ ಮೇಲ್ವಿಚಾರಣೆಗೆ ವ್ಯಕ್ತಿಯನ್ನು ನಿಯೋಜಿಸಬೇಕು
* ಮಾನವನ ಚರ್ಮವನ್ನು ಸುಡುವ ಮತ್ತು ದೇಹಕ್ಕೆ ಹಾನಿ ಮಾಡುವ ಎಲ್ಲಾ ಸ್ವರೂಪದ ಆ್ಯಸಿಡ್‌ಗಳನ್ನು ರಾಜ್ಯ ಸರ್ಕಾರಗಳೇ ಗುರುತಿಸಿ, ನಿರ್ಬಂಧಿತ ಆ್ಯಸಿಡ್‌ಗಳ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿತ್ತು.
ಸಂತ್ರಸ್ತೆ ರಕ್ಷಣೆಗೆ ಸೂಚನೆ
*ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಯಾವ ಆಸ್ಪತ್ರೆಯೂ ನಿರಾಕರಿಸಬಾರದು
*ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು
*ಆ್ಯಸಿಡ್ ದಾಳಿ ಸಂತ್ರಸ್ತರಿಗೆ ರಾಜ್ಯ ಸರ್ಕಾರವು ಕನಿಷ್ಠ ₹ 3 ಲಕ್ಷ ಪರಿಹಾರ ನೀಡಬೇಕು
1919ರ ವಿಷ ಕಾಯ್ದೆ
ಅಪಾಯಕಾರಿ ರಾಸಾಯನಿಕ ವಸ್ತುಗಳ ಸಂಗ್ರಹ, ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸಲು ಬ್ರಿಟಿಷ್ ಸರ್ಕಾರವು 1919ರಲ್ಲೇ ‘ವಿಷ ಕಾಯ್ದೆ’ ಜಾರಿಗೆ ತಂದಿತ್ತು. ಈ ಕಾಯ್ದೆಗೆ ಹಲವು ತಿದ್ದುಪಡಿಗಳನ್ನು ತರಲಾಗಿದೆ. ಅಪಾಯಕಾರಿಯಾದ ಆ್ಯಸಿಡ್‌ಗಳನ್ನು ಈ ಕಾಯ್ದೆಯ 1ನೇ ಷೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾಗಿದೆ.
ಆ್ಯಸಿಡ್ ದ್ರಾವಣದಲ್ಲಿ ಇರುವ ಶುದ್ಧ ಆ್ಯಸಿಡ್‌ನ ಪ್ರಮಾಣ ಮತ್ತು ನೀರಿನ ಪ್ರಮಾಣವನ್ನು ಆಧರಿಸಿ ಅವುಗಳು ಒಡ್ಡುವ ಅಪಾಯವನ್ನು ನಿರ್ಧರಿಸಲಾಗಿದೆ. ಇದರ ಅಧಾರದ ಮೇಲೆ ಅವುಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿ ಪಟ್ಟಿ ಮಾಡಲಾದ ಆ್ಯಸಿಡ್‌ಗಳ ಮಾರಾಟಕ್ಕೆ ಪರವಾನಗಿ ಪಡೆಯುವುದು ಕಡ್ಡಾಯ. ಈ ಪಟ್ಟಿಯಲ್ಲಿ ಇರದ ಆ್ಯಸಿಡ್‌ಗಳ ಮಾರಾಟ ಮತ್ತು ಖರೀದಿಗೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಈ ಪಟ್ಟಿಯಲ್ಲಿ ಇಲ್ಲದ ಆ್ಯಸಿಡ್‌ಗಳೂ ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ.
ಶುದ್ಧರೂಪದಹೈಡ್ರೊಕ್ಲೋರಿಕ್ ಆ್ಯಸಿಡ್ ಮತ್ತು ಗಂಧಕದ ಆ್ಯಸಿಡ್ ತೀರಾ ಅಪಾಯಕಾರಿ. ಆ್ಯಸಿಡ್ ದ್ರಾವಣದಲ್ಲಿ ಇವುಗಳ ಪ್ರಮಾಣ ಶೇ 5ಕ್ಕಿಂತಲೂ ಹೆಚ್ಚು ಇದ್ದರೆ, ಅವನ್ನು ಮುಕ್ತವಾಗಿ ಮಾರಾಟ ಮಾಡುವಂತಿಲ್ಲ ಎಂದು ಈ ಕಾಯ್ದೆ ಹೇಳುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ‘ಶೌಚಾಲಯ ಶುಚಿ ದ್ರಾವಣ’ದಲ್ಲಿ ಈ ಎರಡೂ ಆ್ಯಸಿಡ್‌ಗಳನ್ನು ಬಳಸಲಾಗಿರುತ್ತದೆ. ಕೆಲವು ಬ್ರ್ಯಾಂಡ್‌ನ‘ಶೌಚಾಲಯ ಶುಚಿ ದ್ರಾವಣ’ದಲ್ಲಿ ಹೈಡ್ರೊಕ್ಲೋರಿಕ್ ಆ್ಯಸಿಡ್‌ನ ಪ್ರಮಾಣ ಶೇ 10ಕ್ಕಿಂತಲೂ ಹೆಚ್ಚು ಇದೆ.
‘ಇದು ಅಪಾಯಕಾರಿ. ಬಳಕೆ ವೇಳೆ ಮುನ್ನೆಚ್ಚರಿಕೆ ಅಗತ್ಯ. ಕೈಗವಸುಗಳನ್ನು ಬಳಸಬೇಕು. ಚರ್ಮವನ್ನು ಸುಡುತ್ತದೆ ಮತ್ತು ಕಣ್ಣಿಗೆ ಹಾನಿ ಮಾಡುತ್ತದೆ’ ಎಂದೂ ಕೆಲವು ಬ್ರ್ಯಾಂಡ್‌ನ ಶೌಚಾಲಯ ಶುಚಿ ದ್ರಾವಣದ ಮೇಲೆ ಮುದ್ರಿಸಲಾಗಿದೆ. ಇ–ವಾಣಿಜ್ಯ (ಇ–ಕಾಮರ್ಸ್) ಜಾಲತಾಣಗಳಲ್ಲಿ ಶುದ್ಧರೂಪದ ಸಲ್ಫ್ಯೂರಿಕ್ ಆ್ಯಸಿಡ್ (ಗಂಧಕಾಮ್ಲ) ಮುಕ್ತವಾಗಿ ಲಭ್ಯವಿದೆ. ಈ ಜಾಲತಾಣಗಳಲ್ಲಿ ಕೊಳ್ಳುಗ ತನ್ನ ವಿವರವನ್ನು ಸಲ್ಲಿಸಬೇಕು. ಆದರೆ, ಖರೀದಿಯ ಉದ್ದೇಶವನ್ನು ದಾಖಲಿಸಲು ಇಲ್ಲಿ ಅವಕಾಶ ಇಲ್ಲ. ಈಜುಕೊಳಗಳನ್ನು ಶುಚಿ ಮಾಡಲು ಬಳಸುವ ಕಿಟ್‌ಗಳಲ್ಲಿ ಶುದ್ಧ ಸಲ್ಫ್ಯೂರಿಕ್ ಆ್ಯಸಿಡ್ ಲಭ್ಯವಿದೆ. ಆದರೆ, ಇವುಗಳ ಮಾರಾಟಕ್ಕೆ ಯಾವುದೇ ನಿಯಂತ್ರಣ ಇಲ್ಲ.
ಆಧಾರ: ಲಕ್ಷ್ಮೀ ಅಗರ್ವಾಲ್ ಮತ್ತು ಭಾರತ ಸರ್ಕಾರದ ನಡುವಣ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪು, ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.