2001ರ ಸೆಪ್ಟೆಂಬರ್ 11ರಂದು ವರ್ಲ್ಡ್ ಟ್ರೇಡ್ ಸೆಂಟರ್‌ನ ಅವಳಿ ಕಟ್ಟಡಗಳನ್ನು ಅಲ್ ಕೈದಾ ಉಗ್ರರು ಧ್ವಂಸಗೊಳಿಸಿದರು. ಆ ಬಳಿಕ ಅಮೆರಿಕವು ನೇರವಾಗಿ ಅಫ್ಗಾನಿಸ್ತಾನಕ್ಕೆ ತೆರಳಿ ರಾಜಧಾನಿ ಕಾಬೂಲ್ ಮೇಲೆ ದಾಳಿ ನಡೆಸಿತು. ಅಮೆರಿಕದ ದಾಳಿಯನ್ನು ಎದುರಿಸಲಾಗದ ತಾಲಿಬಾನ್‌ಗೆ ಅಧಿಕಾರವನ್ನು ತ್ಯಜಿಸುವುದು ಅನಿವಾರ್ಯವಾಯಿತು. ಅಲ್ಲಿಂದ 20 ವರ್ಷಗಳ ಕಾಲ ಅಫ್ಗಾನಿಸ್ತಾನದಲ್ಲಿ ಅಮೆರಿಕದ ಸೇನಾ ನಿಯೋಜನೆ ಶುರುವಾಯಿತು.
ಈ ಅವಧಿ ಇದೇ ಆಗಸ್ಟ್ 31ರಂದು ಕೊನೆಯಾಗಲಿದ್ದು, ಅಮೆರಿಕವು ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ. ಅಮೆರಿಕದ ಸೇನೆ ಅಫ್ಗಾನಿಸ್ತಾನವನ್ನು ತೊರೆಯುವ ನಿರ್ಧಾರ ತೆಗೆದುಕೊಂಡ ಬಳಿಕ ತಾಲಿಬಾನ್ ಸಂಘಟನೆ ಮತ್ತೆ ಸಂಘರ್ಷವನ್ನು ಆರಂಭಿಸಿ, ಕಾಬೂಲ್ ಅನ್ನು ವಶಪಡಿಸಿಕೊಂಡಿದೆ. ಆ ಮೂಲಕ 20 ವರ್ಷಗಳ ಬಳಿಕ ಅಫ್ಗಾನಿಸ್ತಾನದ ಅಧಿಕಾರವನ್ನು ತಾಲಿಬಾನ್ ಮತ್ತೆ ತನ್ನದಾಗಿಸಿಕೊಂಡಿದೆ.
ಕಳೆದ ಎರಡು ದಶಕಗಳಲ್ಲಿ ಅಫ್ಗಾನಿಸ್ತಾನದಲ್ಲಿ ನಡೆದ ಪ್ರಮುಖ ಘಟನೆಗಳ ಕುರಿತ ವಿವರ ಇಲ್ಲಿದೆ.
***
ಸೆಪ್ಟೆಂಬರ್ 11, 2001
ಅಮೆರಿಕದ ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ (ವರ್ಲ್ಡ್ ಟ್ರೇಡ್ ಸೆಂಟರ್) ಅವಳಿ ಕಟ್ಟಡಗಳ ಮೇಲೆ ದಾಳಿ ನಡೆಯಿತು. ಅಲ್ ಕೈದಾ ಉಗ್ರರು ಅವಳಿ ಕಟ್ಟಡಗಳಿಗೆ ವಿಮಾನ ನುಗ್ಗಿಸಿದ್ದರು. ಘಟನೆಯಲ್ಲಿ ಸುಮಾರು 3 ಸಾವಿರ ಮಂದಿ ಮೃತಪಟ್ಟು, 6 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನಾಲ್ಕು ವಿಮಾನಗಳನ್ನು ಅಪಹರಿಸಿದ್ದ 19 ಮಂದಿ ಅಲ್ ಕೈದಾ ಉಗ್ರರು ವಿಮಾನಗಳನ್ನು 110 ಮಹಡಿಗಳ ಅವಳಿ ಗೋಪುರಗಳಿಗೆ ನುಗ್ಗಿಸಿ ಧ್ವಂಸಗೊಳಿಸಿದ್ದರು. ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಭಯೋತ್ಪಾದಕ ಕೃತ್ಯ ಇದಾಗಿತ್ತು.
ಸೆಪ್ಟೆಂಬರ್ 18, 2001
ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿಗೆ ಕಾರಣರಾದವರ ವಿರುದ್ಧದ ಸಂಘರ್ಷಕ್ಕೆ ಆಗಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರ ಆಡಳಿತ ತೀರ್ಮಾನಿಸಿತು. ಭಯೋತ್ಪಾನೆಯನ್ನು ಎದುರಿಸುವ ನಿಟ್ಟಿನಲ್ಲಿ ಜಂಟಿ ನಿರ್ಣಯದ ಕಾನೂನಿಗೆ ಬುಷ್ ಸಹಿ ಹಾಕಿದರು. ಆ ನಿರ್ಣಯದ ಮೂಲಕ ಬುಷ್ ಆಡಳಿತವು ಭಯೋತ್ಪಾದನೆಯನ್ನು ಎದುರಿಸಲು ಮತ್ತು ಅಫ್ಗಾನಿಸ್ತಾನವನ್ನು ಆಕ್ರಮಿಸಲು ಮುಂದಾಯಿತು.
ಅಕ್ಟೋಬರ್ 7, 2001
ಬ್ರಿಟಿಷ್ ಸೇನೆಯ ಬೆಂಬಲದೊಂದಿಗೆ ಅಮೆರಿಕದ ಸೇನೆಯು ತಾಲಿಬಾನ್ ಪಡೆಗಳ ವಿರುದ್ಧ ಅಫ್ಗಾನಿಸ್ತಾನದಲ್ಲಿ ಬಾಂಬ್ ದಾಳಿ ಆರಂಭಿಸಿತು. ಅಮೆರಿಕದ ಈ ಕಾರ್ಯಾಚರಣೆಯನ್ನು 'ಆಪರೇಷನ್ ಎಂಡ್ಯೂರಿಂಗ್ ಫ್ರೀಡಮ್' ಎಂದು ಕರೆಯಲಾಯಿತು. ಈ ಕಾರ್ಯಾಚರಣೆಗೆ ಕೆನಡಾ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳೂ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದವು.
ನವೆಂಬರ್ 9, 2001
ತಾಲಿಬಾನ್ ಆಡಳಿತವು ಮಜರ್-ಇ-ಷರೀಫ್‌ನಲ್ಲಿ ಅಮೆರಿಕದ ಪಡೆಗಳಿಗೆ ಶರಣಾಯಿತು. ಬಾಮಿಯಾನ್ (ನ.11), ಹೆರಾತ್ (ನ.12), ಕಾಬೂಲ್ (ನ.13) ಮತ್ತು ಜಲಾಲಾಬಾದ್ (ನ.14) ನಗರಗಳ ಮೇಲಿನ ತಾಲಿಬಾನ್ ಹಿಡಿತವು ಕೊನೆಗೊಂಡಿತು.
ಡಿಸೆಂಬರ್ 3, 2001
ಅಲ್ ಕೈದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್‌ನ ಅಡಗುದಾಣಗಳ ಮೇಲೆ ದಾಳಿಗಳನ್ನು ಆರಂಭಿಸಲಾಯಿತು. ಎರಡು ವಾರಗಳ ಕಾಲ ನಡೆದ ಭೀಕರ ಯುದ್ದದಲ್ಲಿ ಸಾವಿರಾರು ಜನ ಅಸುನೀಗಿದರು. ದಾಳಿ ಆರಂಭಗೊಂಡು ಎರಡು ವಾರಗಳ ನಂತರವೂ ಅಮೆರಿಕದ ಸೇನೆಯ ಕೈಗೆ ಸಿಗದ ಬಿನ್ ಲಾಡೆನ್ ತಪ್ಪಿಸಿಕೊಂಡು ಪಾಕಿಸ್ತಾನಕ್ಕೆ ಓಡಿಹೋದನೆಂಬ ವರದಿಗಳು ಪ್ರಕಟಗೊಂಡವು.
ಡಿಸೆಂಬರ್ 5, 2001
ವಿಶ್ವಸಂಸ್ಥೆಯು ನಾರ್ದರ್ನ್ ಅಲಯನ್ಸ್ ಸೇರಿದಂತೆ ಅಫ್ಗಾನಿಸ್ತಾನದ ರಾಜಕೀಯ ಬಣಗಳನ್ನು ಜರ್ಮನಿಯ ಬೊನ್‌ಗೆ ಆಹ್ವಾನಿಸಿತು. ಈ ಸಭೆಯಲ್ಲಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ ರೆಸಲ್ಯೂಶನ್- 1383 ನಿಂದ ಅನುಮೋದಿಸಲ್ಪಟ್ಟ 'ಬೊನ್ ಒಪ್ಪಂದ'ಕ್ಕೆ ಎರಡೂ ಬಣಗಳು ಸಹಿ ಹಾಕಿದವು. ಹಮೀದ್ ಕರ್ಜೈ ಅವರನ್ನು ಅಫ್ಗಾನಿಸ್ತಾನದ ಮಧ್ಯಂತರ ಆಡಳಿತದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.
ಡಿಸೆಂಬರ್ 9, 2001
ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಕೊನೆಗೊಂಡಿತು. ತಾಲಿಬಾನ್ ನಾಯಕ ಮುಲ್ಲಾ ಒಮರ್ ನಗರದಿಂದ ಪಲಾಯನ ಮಾಡಿದನೆಂದು ವರದಿಗಳಾದವು. ತಾಲಿಬಾನ್‌ನ ಅಧಿಕೃತ ಪತನದ ಹೊರತಾಗಿಯೂ, ಅಲ್ ಕೈದಾ ನಾಯಕರು ಅಫ್ಗಾನ್ ಪರ್ವತಗಳಲ್ಲಿ ಅಡಗಿಕೊಳ್ಳುವುದನ್ನು ಮುಂದುವರಿಸಿದರು.
ಮಾರ್ಚ್, 2002
ಅಪರೇಷನ್ ಅನಕೊಂಡ ಮೂಲಕ ಗಾರ್ದೆಜ್ ಪಟ್ಟಣ ಸಮೀಪದ ಕಣಿವೆ ಮೇಲೆ ಅಲ್ ಕೈದಾ ಬಂಡುಕೋರರನ್ನು ಗುರಿಯಾಗಿಸಿ ಅಮೆರಿಕ ಹಾಗೂ ಅಫ್ಗಾನ್ ಸೇನೆಯಿಂದ ಕಾರ್ಯಾಚರಣೆ ನಡೆಯಿತು. ಈ ಜಂಟಿ ದಾಳಿಯಲ್ಲಿ ಅಲ್ ಕೈದಾ ಉಗ್ರ ಸಂಘಟನೆಗೆ ಸೇರಿದ ಸಾವಿರಾರು ಮಂದಿ ಹತರಾದರು.
ಏಪ್ರಿಲ್ 17, 2002
ವರ್ಜೀನಿಯಾ ಮಿಲಿಟರಿ ಇನ್‌ಸ್ಟಿಟ್ಯೂಟ್‌ನಲ್ಲಿ ಮಾಡಿದ ಭಾಷಣದಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರು ಅಫ್ಗಾನಿಸ್ತಾನದ ಮರುನಿರ್ಮಾಣಕ್ಕೆ ಕರೆ ನೀಡಿದರು.
ಆಗಸ್ಟ್ 8, 2003
ಅಫ್ಗಾನಿಸ್ತಾನದಲ್ಲಿ ಭದ್ರತೆಗೆ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (ನ್ಯಾಟೊ) ಅನ್ನು ನಿಯೋಜನೆ ಮಾಡಲಾಯಿತು.
ಸೆಪ್ಟೆಂಬರ್, 2002
ಅಫ್ಗಾನಿಸ್ತಾನದ ಮರುನಿರ್ಮಾಣಕ್ಕೆ 38 ಬಿಲಿಯನ್ ಡಾಲರ್ ನೆರವನ್ನು ಅಮೆರಿಕದ ಸಂಸತ್ತು ಘೋಷಿಸಿತು.
ಜನವರಿ, 2004
ಪ್ರಬಲ ಅಧ್ಯಕ್ಷೀಯ ಆಡಳಿತವನ್ನು ಪ್ರಸ್ತಾಪಿಸುವ ಅಫ್ಗಾನ್ ಸಂವಿಧಾನಕ್ಕೆ ಒಪ್ಪಿಗೆ ಸೂಚಿಲಾಯಿತು.
ಅಕ್ಟೋಬರ್ 9, 2004
ಐತಿಹಾಸಿಕ ಚುನಾವಣೆಯಲ್ಲಿ ಕರ್ಜೈ ಅವರು ಮೊದಲ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾದರು.
ಅಕ್ಟೋಬರ್ 29, 2004
ಬುಷ್ ಮರು ಆಯ್ಕೆಗೆ ಕೆಲವೇ ದಿನಗಳ ಮೊದಲು ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನಿಂದ ವಿಡಿಯೊ ಬಿಡುಗಡೆಗೊಂಡಿತು. ಅಮೆರಿಕದ ಮೇಲಿನ ದಾಳಿಯ ಹೊಣೆಯನ್ನು ಲಾಡೆನ್ ಒಪ್ಪಿಕೊಂಡನು.
ಮೇ 23, 2005
ಅಫ್ಗಾನಿಸ್ತಾನದ ಸೇನಾ ನೆಲೆ ಬಳಸಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಕರ್ಜೈ–ಬುಷ್ ಒಪ್ಪಂದ ಮಾಡಿಕೊಂಡರು. ಅಲ್ ಕೈದಾ ಮತ್ತು ತಾಲಿಬಾನ್ ಉಗ್ರರ ನೆಲೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿಗಳಾದವು. ಈ ಸಂಘರ್ಷದಲ್ಲಿ ಸಾವಿರಾರು ಮೂಲಭೂತವಾದಿ ಭಯೋತ್ಪಾದಕರು ಹತರಾದರು.
ಫೆಬ್ರುವರಿ 17, 2009
ಯುದ್ಧಪೀಡಿತ ಅಫ್ಗನಿಸ್ತಾನಕ್ಕೆ ಮತ್ತೆ 17 ಸಾವಿರ ಹೆಚ್ಚುವರಿ ಸೇನಾ ಸಿಬ್ಬಂದಿ ಕಳುಹಿಸಲು ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮ ನಿರ್ಧಾರಿಸಿದರು. ಅಲ್ ಕೈದಾ ಹಾಗೂ ತಾಲಿಬಾನ್ ಉಗ್ರರ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಹೆಚ್ಚಿನ ನೆರವು ನೀಡಲು ನಿರ್ಧಾರಿಸಲಾಯಿತು.
ನವೆಂಬರ್ 2010
2014ರೊಳಗೆ ಅಫ್ಗಾನಿಸ್ತಾನ ಸೇನೆಗೆ ಜವಾಬ್ದಾರಿಯನ್ನು ಹಸ್ತಾಂತರಿಸುವ ಒಪ್ಪಂದಕ್ಕೆ ನ್ಯಾಟೊ ಸದಸ್ಯ ರಾಷ್ಟ್ರಗಳಿಂದ ಲಿಸ್ಬನ್‌ನಲ್ಲಿ ಸಹಿ ಸಂಗ್ರಹಿಸಲಾಯಿತು.
ಮೇ 1, 2011
10 ವರ್ಷಗಳಿಂದ ಅಮೆರಿಕಕ್ಕೆ ಬೇಕಾಗಿದ್ದ ಉಗ್ರ ಒಸಾಬಾ ಬಿನ್ ಲಾಡೆನ್‌ನನ್ನು ಪಾಕಿಸ್ತಾನದಲ್ಲಿ ಹತ್ಯೆಮಾಡಲಾಯಿತು. ಲಾಡೆನ್ ಹತ್ಯೆಯ ನಂತರ ಅಮೆರಿಕದ ಸೇನೆಯನ್ನು ಹಿಂತೆಗೆಯುವುದಾಗಿ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಘೋಷಿಸಿದರು.
ಮಾರ್ಚ್, 2012
ಶಾಂತಿ ಮಾತುಕತೆಗೆ ಅನುಕೂಲವಾಗುವಂತೆ ಕತಾರ್‌ನಲ್ಲಿ ರಾಜಕೀಯ ಕಚೇರಿ ತಾಲಿಬಾನ್ ಆರಂಭಿಸಿತು. ಅಮೆರಿಕದೊಂದಿಗೆ ನಡೆಯಬೇಕಿದ್ದ ಶಾಂತಿ ಮಾತುಕತೆಯ ಪ್ರಕ್ರಿಯೆಯನ್ನು ತಾಲಿಬಾನ್ ಮೊದಲ ಹಂತದಲ್ಲಿಯೇ ಮೊಟಕುಗೊಳಿಸಿತು. ಅಫ್ಗಾನಿಸ್ತಾನದಲ್ಲಿ ಮತ್ತೆ ಅಶಾಂತಿಯ ವಾತಾವರಣ ನಿರ್ಮಾಣವಾಯಿತು.
ಆಗಸ್ಟ್ 21, 2017
ತಾಲಿಬಾನ್ ನಿಗ್ರಹಕ್ಕೆ ಹೊಸ ನೀತಿ ಘೋಷಿಸಿದ ಟ್ರಂಪ್ ಕ್ರಮಕ್ಕೆ ಪ್ರತಿಯಾಗಿ ತಾಲಿಬಾನಿಗಳು ಕಾಬೂಲ್‌ನಲ್ಲಿ ಭಾರಿ ದಾಳಿಗಳನ್ನು ನಡೆಸಿದರು. ಈ ದಾಳಿಗಳಲ್ಲಿ 115 ಕ್ಕೂ ಹೆಚ್ಚು ಜನರು ಹತರಾದರು.
ಜನವರಿ, 2019
ತಾಲಿಬಾನ್ ಬಂಡುಕೋರರ ಕಚೇರಿ ಇದ್ದ ಕತಾರ್‌ನಲ್ಲಿ ಅಫ್ಗಾನಿಸ್ತಾನ ಸರ್ಕಾರದ ವಿಶೇಷ ಪ್ರತಿನಿಧಿ ಖಲೀಲ್‌ಜಾದ್ ಅವರು ಶಾಂತಿ ಮಾತುಕತೆ ನಡೆಸಿದರು.
ಸೆಪ್ಟೆಂಬರ್, 2019
ಕಾಬೂಲ್‌ನಲ್ಲಿ ಅಮೆರಿಕ ಸೈನಿಕನ ಹತ್ಯೆ ಸೇರಿದಂತೆ ತಾಲಿಬಾನ್ ದಾಳಿ ಹೆಚ್ಚಳವಾಯಿತು. ಆ ಹಿನ್ನೆಲೆಯಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾಲಿಬಾನ್‌ನೊಂದಿಗಿನ ಶಾಂತಿ ಮಾತುಕತೆಗೆ ತಡೆ ನೀಡಿದರು. ಈ ಸಂದರ್ಭದಲ್ಲಿ ಅಫ್ಗಾನಿಸ್ತಾನ ಅಧ್ಯಕ್ಷೀಯ ಚುನಾವಣೆ ನಡೆಯಿತು. ತಿಂಗಳಾದರೂ ಫಲಿತಾಂಶಗಳು ಹೊರಬರಲಿಲ್ಲ.
ನವೆಂಬರ್, 2019
ಅಫ್ಗಾನಿಸ್ತಾನದಲ್ಲಿ ಅಮೆರಿಕ ಪಡೆಗಳನ್ನು ಟ್ರಂಪ್ ಭೇಟಿ ಮಾಡಿದರು. ಒಪ್ಪಂದಕ್ಕೆ ತಾಲಿಬಾನ್ ಸಿದ್ಧವಿದೆ ಎಂದು ಟ್ರಂಪ್ ಹೇಳಿಕೆ ನೀಡಿದ ನಂತರ ಕತಾರ್ ಮಾತುಕತೆಗೆ ಮರುಜೀವ ಬಂದಿತು.
ಫೆಬ್ರುವರಿ 15, 2020
ಅಂತಿಮ ಶಾಂತಿ ಒಪ್ಪಂದಕ್ಕೆ ಪೂರಕವಾಗಿ ಹಿಂಸಾಚಾರವನ್ನು ಕಡಿತಗೊಳಿಸುವಂತೆ ತಾಲಿಬಾನ್‌ಗೆ ಅಮೆರಿಕ ಸೂಚನೆ ನೀಡಿತು.
ಫೆಬ್ರುವರಿ 18, 2020
ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಶ್ರಫ್ ಘನಿ ಗೆದ್ದಿದ್ದಾರೆ ಎಂದು ಅಲ್ಲಿನ ಚುನಾವಣಾ ಆಯೋಗ ಘೋಷಿಸಿತು. ತಾಲಿಬಾನ್ ಸೇರಿದಂತೆ ಅಲ್ಲಿನ ವಿರೋಧ ಪಕ್ಷಗಳು ಈ ಫಲಿತಾಂಶವನ್ನು ತಿರಸ್ಕರಿಸಿದವು.
ಫೆಬ್ರುವರಿ 29, 2020
ದೋಹಾದಲ್ಲಿ ಅಮೆರಿಕ ಮತ್ತು ತಾಲಿಬಾನ್ ಒಪ್ಪಂದಕ್ಕೆ ಸಹಿ ಹಾಕಿದ್ದು, 14 ತಿಂಗಳಲ್ಲಿ ಅಫ್ಗಾನಿಸ್ತಾನದಿಂದ ಅಮೆರಿಕದ ಎಲ್ಲ ಯೋಧರನ್ನು ಕರೆಸಿಕೊಳ್ಳಲು ಒಪ್ಪಿಗೆ ಸೂಚಿಸಲಾಗಿತು.
ಏಪ್ರಿಲ್, 2021
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಸೆಪ್ಟೆಂಬರ್ 11ರೊಳಗೆ ಅಮೆರಿಕ ಎಲ್ಲ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸಿದರು. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಅಮೆರಿಕ ಸೈನ್ಯವನ್ನು ವಾಪಸ್ ಕರೆಸಿಕೊಳ್ಳುತ್ತಿದೆ.
ಅಫ್ಗಾನಿಸ್ತಾನದಲ್ಲಿ ಕಳೆದ ಎರಡು ದಶಕಗಳಲ್ಲಿ ನಡೆದ ಸುದೀರ್ಘ ಸಂಘರ್ಷದಲ್ಲಿ ಸುಮಾರು 2,400 ಅಮೆರಿಕದ ಯೋಧರು ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಅಫ್ಗಾನಿಸ್ತಾನ ಸೇನೆಯ ಸಿಬ್ಬಂದಿ, ನಾಗರಿಕರು ಹಾಗೂ ತಾಲಿಬಾನ್ ಬಂಡುಕೋರರು ಹತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.