ADVERTISEMENT

Explainer | ಬೆಂಕಿ ಬಿದ್ದ ಲಂಕೆ; ಅಂಕೆ ಮೀರಿದ ನಾಯಕರು

ಉಮಾಪತಿ
Published 24 ಜುಲೈ 2022, 0:30 IST
Last Updated 24 ಜುಲೈ 2022, 0:30 IST
ಪರಸ್ಪರ ಸಮಾಧಾನವಷ್ಟೇ... ಪ್ರತಿಭಟನಾ ಶಿಬಿರದಲ್ಲಿ ಕಂಡ ನೋಟ
ಪರಸ್ಪರ ಸಮಾಧಾನವಷ್ಟೇ... ಪ್ರತಿಭಟನಾ ಶಿಬಿರದಲ್ಲಿ ಕಂಡ ನೋಟ   

ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಪ್ರಪಾತಕ್ಕೆ ಕುಸಿದು ಬಿದ್ದಿದೆ ಶ್ರೀಲಂಕಾ. ತಲೆಯೆತ್ತುವ ಸೂಚನೆಗಳು ಸದ್ಯಭವಿಷ್ಯದಲ್ಲಿ ಕಾಣುತ್ತಿಲ್ಲ. ಬಿಕ್ಕಟ್ಟು ಬಾಣಲೆಯಿಂದ ಬೆಂಕಿಗೆ ಜಾರುವ ಸೂಚನೆಗಳು ಮೂಡತೊಡಗಿವೆ.

ರಾಷ್ಟ್ರಾಧ್ಯಕ್ಷರಾಗಿದ್ದ ಗೊಟಬಯ ಪರಾರಿಯಾದರೆ, ಪ್ರಧಾನಿಯಾಗಿದ್ದ ಮಹಿಂದ ರಾಜಪಕ್ಸ ತಲೆ ಮರೆಸಿಕೊಂಡಿದ್ದಾರೆ. ಸಂಸತ್ತು ಆರಿಸಿದ ಹೊಸ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಹಳೆಯ ಮಂತ್ರಿಮಂಡಲವನ್ನೇ ಉಳಿಸಿಕೊಂಡಿದ್ದಾರೆ. ದಮನದ ಹತಾರುಗಳನ್ನು ಹೊಸದಾಗಿ ಮಸೆದು ತ್ರಸ್ತ ಜನತೆಯ ಮೇಲೆ ಬೀಸತೊಡಗಿದ್ದಾರೆ. ಹಳೆಯ ಸರ್ವಾಧಿಕಾರಿಯ ಜಾಗಕ್ಕೆ ಹೊಸ ಸರ್ವಾಧಿಕಾರಿ ಬಂದಂತಾಗಿದೆ. ಎಲ್ಲ 25 ಜಿಲ್ಲೆಗಳ ‘ಶಾಂತಿ ಸುವ್ಯವಸ್ಥೆ’ಯ ನಿರ್ವಹಣೆಯನ್ನು ಮಿಲಿಟರಿಗೆ ಒಪ್ಪಿಸಲಾಗಿದೆ. ತುರ್ತುಪರಿಸ್ಥಿತಿ ಘೋಷಣೆಯಾಗಿದೆ. ಶಾಂತಿಯುತ ಜನಾಂದೋಲನವನ್ನು ನಿರ್ದಯವಾಗಿ ಬಗ್ಗುಬಡಿಯಲಾಗುತ್ತಿದೆ. ಪತ್ರಕರ್ತರು-ವಕೀಲರು ‘ಕಾಣೆ’ಯಾಗುತ್ತಿದ್ದಾರೆ.

ಆಳಿದ ರಾಜಪಕ್ಸ ಕುಟುಂಬದೆಡೆ ಸಿಡಿದಿದ್ದ ಜನಾಕ್ರೋಶ ಕಡೆಗೆ ತಿರುಗಿದ್ದು ಎಲ್ಲ 225 ಸಂಸದರ ವಿರುದ್ಧ. ಎಲ್ಲ ರಾಜಕೀಯ ಪಕ್ಷಗಳೂ ಈ ಝಳಕ್ಕೆ ಸಿಕ್ಕಿವೆ. ರಾಜಕಾರಣದಲ್ಲಿ ಇರಿಸಿದ್ದ ಜನರ ವಿಶ್ವಾಸ ಹಾರಿ ಹೋಗಿದೆ. ಸಹನೆ ಕಟ್ಟೆಯೊಡೆದಿದೆ. ವರ್ಷಗಳ ಕಾಲ ಅದುಮಿಟ್ಟಿದ್ದ ಹತಾಶೆ ತಾನಾಗಿ ಸ್ಫೋಟಿಸಿದೆ. ಮುಂದಾಳುಗಳಿಲ್ಲದ ಈ ಜನಾಂದೋಲನಕ್ಕೆ ಜನರೇ ನಾಯಕರು! ಸಾಮಾಜಿಕ ಜಾಲತಾಣಗಳು, ಸಂದೇಶ ವಿನಿಮಯ ಆ್ಯಪ್‌ಗಳೇ ಜನಸಂಪರ್ಕ- ಸಂಘಟನೆಯ ನರನಾಡಿಗಳು.

ADVERTISEMENT

ಜೀವನಾವಶ್ಯಕ ವಸ್ತುಗಳು-ಸೌಕರ್ಯಗಳ ವ್ಯವಸ್ಥೆ ನೆಲಕಚ್ಚಿದೆ. ಲಕ್ಷಾಂತರ ಮಂದಿ ಹಸಿವಿನಿಂದ ಕಂಗಾಲಾಗಿದ್ದಾರೆ. ಜನಸಾಮಾನ್ಯರ ಅನುದಿನದ ಬದುಕು ನರಕವಾಗಿ ಹೋಗಿದೆ. ದೇಶದ ಖರೀದಿ ಶಕ್ತಿ ಬಸಿದು ಹೋಗಿದೆ. ವಿದೇಶಿ ವಿನಿಮಯ ಸಂಗ್ರಹ ಪಾತಾಳ ಕಂಡಿದೆ. ಇತ್ತ ದೈನಂದಿನ ಬವಣೆಗಳು ಜನತೆಯನ್ನು ಕಿತ್ತು ಕಾಡಿದ್ದರೆ, ಅತ್ತ ರಾಜಪಕ್ಸ ಕುಟುಂಬ ಭೋಗವಿಲಾಸಗಳಲ್ಲಿ ಮುಳುಗೇಳುತ್ತಿತ್ತು.

ಜೀವನೋಪಾಯಗಳನ್ನು ಕಟ್ಟಿ ಕೊಡುವ ದೂರನೋಟವಿಲ್ಲದ ರಾಜಕೀಯ ದಿವಾಳಿಯೆದ್ದು ಬಹುಕಾಲವೇ ಆಗಿತ್ತು. ಪ್ರವಾಸೋದ್ಯೋಮ ಮತ್ತು ಆಮದನ್ನೇ ಅವಲಂಬಿಸಿದ್ದ ಆರ್ಥಸ್ಥಿತಿ ಅಲ್ಲಿಯದಾಗಿತ್ತು. ಮಿತಿಮೀರಿ ಸಾಲ ಎತ್ತಿದ ರಾಜಪಕ್ಸ ನೇತೃತ್ವದ ಸರ್ಕಾರಗಳು ದೇಶವನ್ನು ಋಣಭಾರದ ಬಲೆಗೆ ಕೆಡದವು. ಚೀನೀ ಸಾಲ ಪಡೆದು ರಾಜಪಕ್ಸಗಳು ನಿರ್ಮಿಸಿದ ಹತ್ತಾರು ಯೋಜನೆಗಳು ಬಿಳಿಯಾನೆಗಳಾಗಿ ಪರಿಣಮಿಸಿದವು. ಆಳುವ ಕುಟುಂಬದ ಖಾಸಗಿ ಬೊಕ್ಕಸ ಭರ್ತಿ ಮಾಡಿದವು. ಹಣದುಬ್ಬರದ ಅಬ್ಬರ ಲಕ್ಷ ಲಕ್ಷ ಬದುಕುಗಳನ್ನು ನುಂಗಿತು. ಲಂಕೆಯ ರೂಪಾಯಿ ಇದೀಗ ಜಗತ್ತಿನಲ್ಲೇ ಅತಿ ಅಗ್ಗದ ಕರೆನ್ಸಿ!

ರಾಸಾಯನಿಕ ಗೊಬ್ಬರಗಳು- ಕೀಟನಾಶಕಗಳನ್ನು ನಿಷೇಧಿಸಿ ಹಠಾತ್ತನೆ ಹೇರಲಾದ ಸಾವಯವ ಕೃಷಿ ಪದ್ಧತಿಯಿಂದಾಗಿ ಭತ್ತದ ಉತ್ಪಾದನೆ ತೀವ್ರವಾಗಿ ಕುಸಿಯಿತು. ಸ್ವಾವಲಂಬನೆ ಧ್ವಸ್ತವಾಗಿ ಭಾರೀ ಪ್ರಮಾಣದ ಅಕ್ಕಿಯನ್ನು ಆಮದು ಮಾಡಿಕೊಳ್ಳಬೇಕಾಯಿತು. ಅಕ್ಕಿಯ ದರಗಳು ಆಗಸಕ್ಕೆ ಜಿಗಿದವು. ಈ ಹಠಾತ್ ಹೇರಿಕೆಯು ವಿದೇಶಿ ವಿನಿಮಯ ಗಳಿಸಿಕೊಡುತ್ತಿದ್ದ ಚಹಾ ಉತ್ಪಾದನೆಯನ್ನೂ ನೆಲಕಚ್ಚಿಸಿತು. ಶತಕೋಟಿ ಡಾಲರುಗಳನ್ನು ಗಳಿಸುತ್ತಿದ್ದ ಈ ಉದ್ಯಮ ತಪ್ಪು ನೀತಿಗಳ ಕಾರಣ ದಿಕ್ಕೆಟ್ಟಿತು. ತೀವ್ರ ತೆರಿಗೆ ಕಡಿತ ಮಾಡಿದ ರಾಜಪಕ್ಸಗಳು ಐ.ಎಂ.ಎಫ್., ಚೀನಾ, ಬಾಂಗ್ಲಾದೇಶ ಮತ್ತು ಭಾರತದಿಂದ ಯದ್ವಾತದ್ವಾ ಸಾಲ ಪಡೆದರು. ಬೇಕಿಲ್ಲದ ಮೂಲಸೌಕರ್ಯಗಳ ಮೇಲೆ ಹಣ ಸುರಿದು ತಾವೂ ಬಾಚಿಕೊಂಡರು. ದೇಶವನ್ನು ದಿವಾಳಿಯೆಬ್ಬಿಸಿದರು. ಕೊರೊನಾ ಕಾರಣ ಪ್ರವಾಸೋದ್ಯಮದ ಆದಾಯ ಕುಸಿಯಿತು. ಆಹಾರ ಸಾಮಗ್ರಿಗಳ ಬೆಲೆ ಯದ್ವಾತದ್ವಾ ಏರಿದವು. ಪೆಟ್ರೋಲ್ ಖರೀದಿಗೆ ಡಾಲರುಗಳು ಉಳಿದಿಲ್ಲ. ಇಂಧನ ಉಳಿಸಲು ಶಾಲೆಗಳನ್ನು ಮುಚ್ಚಲಾಯಿತು. ಆಸ್ಪತ್ರೆಗಳಲ್ಲಿ ಈಗಲೂ ಔಷಧಗಳಿಲ್ಲ.

ಗೋಟಬಯ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿ ಅಧ್ಯಕ್ಷರ ನಿವಾಸದ ಮುಂದೆ ನಡೆದ ಪ್ರತಿಭಟನೆ ವೇಳೆ ಪೊಲೀಸರತ್ತ ಟಿಯರ್‌ಗ್ಯಾಸ್‌ ಶೆಲ್‌ ಎಸೆಯುತ್ತಿರುವ ಪ್ರತಿಭಟನಕಾರ

ಕಳೆದ 20 ವರ್ಷಗಳ ಕಾಲ ರಾಜಪಕ್ಸಗಳೇ ರಾಜ್ಯವಾಳಿದರು. ಸ್ವಜನಪಕ್ಷಪಾತದ ಪರಮಾವಧಿ ಅವಧಿಯಿದು. ಗೊಟಬಯ ರಾಜಪಕ್ಸ ರಾಷ್ಟ್ರಾಧ್ಯಕ್ಷರಾಗಿದ್ದರೆ, ಅವರ ಅಣ್ಣ ಮಹಿಂದ ರಾಜಪಕ್ಸ ಪ್ರಧಾನಮಂತ್ರಿ. ಮತ್ತೊಬ್ಬ ಅಣ್ಣ ಚಾಮಲ್ ರಾಜಪಕ್ಸ ನೀರಾವರಿ, ರಕ್ಷಣೆ ಹಾಗೂ ಗೃಹಮಂತ್ರಿ. ಇನ್ನೊಬ್ಬ ಅಣ್ಣ ಬಾಸಿಲ್ ರಾಜಪಕ್ಸ ಹಣಕಾಸು ಮಂತ್ರಿ. ಈ ಕುಟುಂಬಕ್ಕೆ ಸೇರಿದ ಹಲವರು ಸಂಸತ್ ಸದಸ್ಯರು, ಸರ್ಕಾರದ ಇಲ್ಲವೇ ಇತರೆ ಪ್ರಮುಖ ಹುದ್ದೆಗಳನ್ನು ಅನುಭವಿಸಿದರು. ದೇಶದ ಬಜೆಟ್ಟಿನ ಶೇ 70ರಷ್ಟು ಅಂಶ ರಾಜಪಕ್ಸ ಕುಟುಂಬದ ಸದಸ್ಯರ ನಿಯಂತ್ರಣದಲ್ಲಿತ್ತು. ದುರಾಡಳಿತ ಮತ್ತು ಲಂಚಗುಳಿತನ ತಾಂಡವ ಆಡಿತು. ದೇಶ ತಳಮಳಕ್ಕೆ ಸಿಲುಕಿದ್ದರೂ ಲೆಕ್ಕಿಸದೆ ಮಾಲ್ದೀವ್ಸ್‌ನಲ್ಲಿ ಜಲಕ್ರೀಡೆಯಲ್ಲಿ ನಿರತನಾಗಿದ್ದ ನಮಲ್ ರಾಜಪಕ್ಸ. ಈತ ಪ್ರಧಾನಮಂತ್ರಿಯ ಮಗ ಮತ್ತು ಸಚಿವನಾಗಿದ್ದಾತ.

ಪ್ರತ್ಯೇಕ ರಾಜ್ಯದ ಬೇಡಿಕೆಯಿಟ್ಟು ಹೋರಾಡಿದ ಲಕ್ಷಕ್ಕೂ ಹೆಚ್ಚು ತಮಿಳರ ನರಮೇಧ ನಡೆಸಿದ್ದು ರಾಜಪಕ್ಸಗಳ ಆಡಳಿತ. ನಂಬರ್ ಪ್ಲೇಟುಗಳೇ ಇಲ್ಲದ ಬಿಳಿಯ ವಾಹನಗಳು ಭಿನ್ನಮತೀಯರು ಮತ್ತು ಪತ್ರಕರ್ತರನ್ನು ಬೇಟೆಯಾಡಿ ಸುಳಿವಿಲ್ಲದಂತೆ ಮುಗಿಸಿದವು. ತಮ್ಮನ್ನು ಅಪ್ರತಿಮ ದೇಶಭಕ್ತರು ಮತ್ತು ಶ್ರೀಲಂಕೆಯನ್ನು ಕಾಪಾಡಲು ಧರೆಗಿಳಿದ ದೇವತೆಗಳೆಂದು ಕರೆಯಿಸಿಕೊಂಡರು ರಾಜಪಕ್ಸಗಳು. ಇವರ ಭ್ರಷ್ಟಾಚಾರವನ್ನು, ಜನಾಂಗೀಯ ದ್ವೇಷವನ್ನು, ತಮಿಳರ ನರಮೇಧ ಕೃತ್ಯವನ್ನು ಪ್ರಶ್ನಿಸಿದವರಿಗೆ ಭಯೋತ್ಪಾದಕರು, ದೇಶದ್ರೋಹಿಗಳೆಂಬ ಹಣೆಪಟ್ಟಿ ಹಚ್ಚಲಾಯಿತು. ದೇಶದ ಬಹುಸಂಖ್ಯಾತರಾದ ಬೌದ್ಧ ಸಿಂಹಳೀಯರನ್ನು ಎತ್ತಿಕಟ್ಟಿ ರಾಷ್ಟ್ರವಾದವನ್ನು ಬಡಿದೆಬ್ಬಿಸಿ ಚುನಾವಣೆಗಳನ್ನು ದೈತ್ಯ ಬಹುಮತದಿಂದ ಗೆದ್ದ ಕುಟುಂಬವಿದು. ಅಲ್ಪಸಂಖ್ಯಾತ ತಮಿಳರ ವಿರುದ್ಧ ಬಹುಸಂಖ್ಯಾತ ಬೌದ್ಧರನ್ನು ಹೂಡಿ ಜನಾಂಗೀಯ ದ್ವೇಷದ ನೀರು, ಗೊಬ್ಬರ ಹರಿಸಿ ರಾಜ್ಯಾಧಿಕಾರದ ಬಂಪರ್ ಬೆಳೆ ತೆಗೆದವರು. ರಾಜಪಕ್ಸಗಳು ಬಿತ್ತಿದ ತಮಿಳು ಮತ್ತು ಮುಸ್ಲಿಂ ದ್ವೇಷದ ನಶೆಯಲ್ಲಿ ಮೈಮರೆತರು ಬಹುಸಂಖ್ಯಾತ ಸಿಂಹಳೀಯರು. ಅವರನ್ನು ತಲೆಯ ಮೇಲೆ ಹೊತ್ತು ಮೆರೆಸಿದರು. ಅಲ್ಪಸಂಖ್ಯಾತರ ಮತಗಳನ್ನು ಧಿಕ್ಕರಿಸಿ ಗೆದ್ದ ಮೊದಲ ರಾಷ್ಟ್ರಪತಿಯೆಂದು ಕೊಂಡಾಡಿದರು. ಅವತಾರಪುರುಷನೆಂದೂ ಭಾವಿಸಿದರು. ತಮಿಳರು, ಮುಸ್ಲಿಮರು, ಕ್ರೈಸ್ತರ ದಮನವನ್ನು ಮೆಚ್ಚಿದರು. ಬಹುಸಂಖ್ಯಾತ ಬೌದ್ಧರ ವಿನಾ ಉಳಿದೆಲ್ಲರನ್ನೂ ಭಯೋತ್ಪಾದಕರೆಂದು ಕರೆಯಲಾಯಿತು. ತಮಿಳರ ನರಮೇಧದ ನಂತರ ಮುಸಲ್ಮಾನರ ಸರದಿ ಬಂದಿತು. ಅಲ್ಲಿಯೂ ಅಲ್ಪಸಂಖ್ಯಾತರಿಂದಾಗಿ ಬಹುಸಂಖ್ಯಾತ ಬೌದ್ಧ ಧರ್ಮ ಅಪಾಯದಲ್ಲಿದೆ ಎಂಬ ಭಯವನ್ನು ಬಿತ್ತಲಾಯಿತು.

ಅಲ್ಪಸಂಖ್ಯಾತರ ಆಹಾರ, ಆಚರಣೆ, ಉಡುಪುಗಳನ್ನು ಆಡಿಕೊಂಡು ಹಂಗಿಸಲಾಯಿತು. ಬೌದ್ಧ ಭಿಕ್ಷುಗಳು ಈ ದ್ವೇಷ ಪ್ರಸಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಒಬ್ಬನೇ ಒಬ್ಬ ಮುಸಲ್ಮಾನ ಬೌದ್ಧರ ವಿರುದ್ಧ ಕೈ ಮಾಡಿದರೆ, ಮುಸಲ್ಮಾನರ ಸಂತತಿಯನ್ನೇ ನಾಶ ಮಾಡುವುದಾಗಿ ಸಾರ್ವಜನಿಕ ಭಾಷಣಗಳನ್ನು ಮಾಡಿದರು. ಚುನಾವಣೆಗಳಲ್ಲಿ ಗೊಟಬಯ ಅವರಿಗೆ ಶೇ 57ರಷ್ಟು ಭಾರೀ ಮತ ನೀಡಿ ಗೆಲ್ಲಿಸಲಾಯಿತು. ಬಹುಸಂಖ್ಯಾತ ಬಾಹುಳ್ಯ ಜಿಲ್ಲೆಗಳಲ್ಲಿ ಪ್ರತಿಪಕ್ಷಗಳಿಗೆ ಒಂದು ಸೀಟೂ ದಕ್ಕಲಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಪರವಾಗಿಲ್ಲ, ದೇಶ ಸುರಕ್ಷಿತವಾಗಿರಬೇಕು. ಸರ್ಕಾರ ಬಲಿಷ್ಠವಾಗಿರಬೇಕು, ಪ್ರಚಂಡ ನಾಯಕ ಬೇಕೆಂಬ ಘೋಷಣೆಗಳು ಮೊಳಗಿದ್ದವು. ತಮಿಳರ ನರಮೇಧವನ್ನು, ಅವರ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರಗಳನ್ನು ಸಂಭ್ರಮಿಸಿದ್ದರು ಬಹುಸಂಖ್ಯಾತ ಬೌದ್ಧರು. ಗೊಟಬಯ ಅವರಿಗೆ ‘ಟರ್ಮಿನೇಟರ್’, ‘ಹಿಟ್ಲರ್’ ಎಂಬ ಬಿರುದುಗಳ ನೀಡಿ ಬೀಗಿದರು. ಒಂದು ದೇಶ- ಒಂದು ಕಾನೂನು ಎಂಬ ಗೊಟಬಯ ಘೋಷಣೆ ಬಹುಸಂಖ್ಯಾತರ ಚಪ್ಪಾಳೆ ಗಳಿಸಿತು. ಸಿಂಹಳ ಶ್ರೇಷ್ಠತೆಯ ಗರ್ವದ ರಾಜಕಾರಣ ಮೆರೆದಾಡಿತು. ಶ್ರೀಲಂಕಾದ ಮೀಡಿಯಾ ಕೂಡ ಆಳುವವರ ಮಡಿಲಲ್ಲಿ ಆಡುವ ಮುದ್ದಿನ ನಾಯಿ ಆಯಿತು. ಕಾವಲು ನಾಯಿಯ ಪಾತ್ರವನ್ನು ಅರಿತೂ ಮರೆತಿತು. ಈಗ ಹಸಿವಿನ ಬೆಂಕಿ ಒಡಲುಗಳ ಸುಡುತ್ತಿರುವಾಗ ಪ್ರಚಂಡ ನಾಯಕ ದೇಶ ತೊರೆದು ಓಡಿ ಹೋಗಬೇಕಾಯಿತು. ಧರ್ಮ ಮತ್ತು ದ್ವೇಷಗಳು ಹೊಟ್ಟೆ ತುಂಬಿಸದಾಗಿವೆ. ಅಂಧರಾಷ್ಟ್ರವಾದದ ಅನುಸರಣೆಯು ಸಂಪನ್ನ ದೇಶವೊಂದರ ಕೈಗೆ ಭಿಕ್ಷಾಪಾತ್ರೆ ಹಿಡಿಸಿ ನಿಲ್ಲಿಸಿದೆ.

ದ್ವೇಷ ಮತ್ತು ಹುಸಿ ರಾಷ್ಟ್ರವಾದದ ಅರಿವಳಿಕೆಯ ಸ್ಥಿತಿ. ರಾಜಪಕ್ಸ ಕುಟುಂಬ ಲಂಕೆಯನ್ನು ಲೂಟಿ ಹೊಡೆಯಿತು. ಹಗಲು ದರೋಡೆಯಲ್ಲಿ ದೋಚಿತು.ಮುಗಿಲು ಮುಟ್ಟಿದ ಹಣದುಬ್ಬರ ಶೇ 54ರ ದರ ದಾಟಿತು. ಶ್ರೀಲಂಕಾ ಕರೆನ್ಸಿಯ ಡಾಲರ್ ವಿನಿಮಯ ದರ 350 ರೂಪಾಯಿ ಮುಟ್ಟಿತು. ಅಮಲು ಇಳಿದು ‘ಮೈಮೇಲೆ ಉಳಿದದ್ದು ಲಂಗೋಟಿ’ಯೊಂದೇ ಎಂದು ತಿಳಿಯುವ ಹೊತ್ತಿಗೆ ಬಹಳ ತಡವಾಗಿತ್ತು. ಲಂಕೆಯ ಎರಡು ಕೋಟಿ ಇಪ್ಪತ್ತು ಲಕ್ಷ ನಾಗರಿಕರನ್ನು ಇದೀಗ ಕ್ರೋಧ ಹತಾಶೆಗಳು ಕವಿದಿವೆ. ಅರಿವಳಿಕೆ ನೀಡಿ ಅಂಗಾಂಗಳ ಕೊಯ್ದು ಹಾಕಿದವರನ್ನು ಹೊತ್ತು ಮೆರೆಸಿದ್ದು ತಪ್ಪೆಂದು ಈಗಲಾದರೂ ಅರ್ಥವಾಗಿದೆಯೇ ಎಂಬ ಖಾತರಿ ಇಲ್ಲ.

ಹಾಲಿ ದುಸ್ಥಿತಿಗೆ ತಮ್ಮ ಆಡಳಿತ ಕಾರಣ ಅಲ್ಲ ಎಂಬುದಾಗಿ ದೇಶವನ್ನು ಉದ್ದೇಶಿಸಿ ಗೊಟಬಯ ಮಾಡಿದ ಭಾಷಣದಿಂದ ಜನ ಕುದ್ದು ಹೋದರು. ಸುಪ್ತವಾಗಿ ಮಲಗಿದ್ದ ಪ್ರತಿಭಟನೆಯ ಮದ್ದಿನ ಗೋಳಗಳಿಗೆ ಇಟ್ಟ ಬೆಂಕಿಯಾಗಿ ಪರಿಣಮಿಸಿದ್ದು ಇದೇ ಭಾಷಣ.

ಶ್ರೀಲಂಕಾದ ಜನಪ್ರಿಯ ಕ್ರಿಕೆಟ್ ತಾರೆ ಜಯಸೂರ್ಯ ತಮ್ಮ ನಾಡನ್ನು ಕವಿದಿರುವ ಕತ್ತಲೆಗೆ ಮರುಗಿದ್ದಾರೆ. ಮನಕಲಕುವ ಅವರ ಮಾತುಗಳು ಹೀಗಿವೆ.
‘ಕವಿದು ಮುತ್ತಿರುವ ಬಿಕ್ಕಟ್ಟು ಬೃಹದಾಕಾರದ್ದು. ಬ್ರೆಡ್ಡಿಗೆಂದು, ಪೆಟ್ರೋಲಿಗಾಗಿ 24 ತಾಸುಗಳ ಕಾಲ ಉಷ್ಣೋಗ್ರತೆಯಲ್ಲಿ ಸರದಿ ನಿಲ್ಲಬೇಕಿರುವ ದುಸ್ಥಿತಿಯನ್ನು ಕಣ್ಣ ಮುಂದೆ ತಂದುಕೊಳ್ಳಿರಿ. ದೇಶ ಮುರಿದು ಬಿದ್ದಿದೆ. ಜನರ ಬವಣೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಅಸಹನೀಯ ಆಗುತ್ತಿದೆ. ವಿದ್ಯುತ್‌ ತಾಸುಗಟ್ಟಲೆ, ದಿನಗಟ್ಟಲೆ ಮಟಾಮಾಯ. ಗಂಜಿ ಬೇಯಿಸಲು ಅಡುಗೆ ಅನಿಲ ಇಲ್ಲ. ಹೊಟ್ಟೆಗೆ ಗತಿಯಿಲ್ಲ. ಪೌಂಡು ಬ್ರೆಡ್ಡಿನ ದರ 500-600 ರೂಪಾಯಿ. ಸಾರಿಗೆ ವ್ಯವಸ್ಥೆ ಕುಸಿದಿದೆ. ರೈಲುಗಾಡಿಗಳು ಸಂಚರಿಸುತ್ತಿಲ್ಲ. ಬಸ್ಸುಗಳ ಸುಳಿವಿಲ್ಲ. ಆದರೂ ಜನ ಅದೆಂತೋ ಕೊಲಂಬೊ ತಲುಪಿ ಪ್ರತಿಭಟಿಸುತ್ತಿದ್ದಾರೆ. ಪೆಟ್ರೋಲ್ ಸರದಿ ಸಾಲುಗಳಲ್ಲಿ ಈವರೆಗೆ 20 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಸಂಖ್ಯೆ ಇನ್ನಷ್ಟು ಏರಲಿದೆಯೇ ವಿನಾ ಇಳಿಯುವುದಿಲ್ಲ. ಈ ಸಂಕಟದಿಂದ ಹೊರಬೀಳಬೇಕಿದೆ ನಾವು. ಬದುಕು ಈ ಹಿಂದಿನ ಸಾಮಾನ್ಯಸ್ಥಿತಿಗೆ ಸಹಜಗತಿಗೆ ಮರಳಬೇಕಿದೆ. ನನ್ನ ಜನರೊಂದಿಗೆ ನಿಲ್ಲುವುದು ನನ್ನ ಈ ಗಳಿಗೆಯ ಕರ್ತವ್ಯ. ಅವರ ಕಷ್ಟ ಕಣ್ಣೀರುಗಳನ್ನು ಭರಿಸಲಾರೆ. ಬೀದಿಗೆ ಇಳಿದರೆ ಕರುಳನ್ನು ಇರಿಯುವ ಜನರೋದನ. ತಾಯಂದಿರು, ಮಕ್ಕಳು, ಹೆಣ್ಣುಮಕ್ಕಳ ಆಕ್ರಂದನ. ಆಶಾಕಿರಣವನ್ನು ಅರಸುವ ಸೋತು ಸೊರಗಿದ ಜನಸಮುದಾಯ. ಇದನ್ನೆಲ್ಲ ನೋಡಿಯೂ ನೋಡದಂತೆ ಇರಲಾರೆ. ಇಂತಹ ಸನ್ನಿವೇಶದಲ್ಲಿ ಹಿಂಸಾಚಾರ ಸರ್ವಥಾ ಸಲ್ಲದು. ಯಾಕೆಂದರೆ ಹಿಂಸೆಯೆಂಬುದು ಯಾವ್ಯಾವುದಕ್ಕೂ ಪರಿಹಾರ ಅಲ್ಲ. ಪ್ರತಿಭಟನೆಗಳು ಅಹಿಂಸೆಯ ದಾರಿಯಲ್ಲೇ ಪರಿವರ್ತನೆಯನ್ನು ಅರಸಬೇಕಿದೆ. ಈ ಅಂಶವನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ನನ್ನದು. ಇರುಳು ಕಳೆದು ಬೆಳಗಾಗುವುದರ ಒಳಗಾಗಿ ಇದೆಲ್ಲ ಸಾಧ್ಯವಾಗುವುದಿಲ್ಲ. ಅಂತಹ ಭ್ರಮೆ ನನಗಿಲ್ಲ. ಸಂಘರ್ಷದ ಹಾದಿಯೇ ಹಾಗೆ, ದೀರ್ಘ ಸುದೀರ್ಘ. ಜನತೆಗೆ ನೆರವಾಗುವುದು ಜನಪ್ರತಿನಿಧಿಗಳ ಪರಮ ಕರ್ತವ್ಯ. ತಮ್ಮ ಕೈಲಾಗದೆ ಹೋದರೆ ಕುರ್ಚಿ ಖಾಲಿ ಮಾಡಿ ತೊಲಗಬೇಕು’.

ಕೊಲಂಬೊದಲ್ಲಿ ಶಾಂತಿಯುತ ಪ್ರತಿಭಟನಾ ಪ್ರದರ್ಶನದ ಮೇಲೆ ಮಿಲಿಟರಿ ದಾಳಿ-ದೌರ್ಜನ್ಯ ನಡೆದಿದೆ. ಪತ್ರಕರ್ತರು ಮತ್ತು ವಕೀಲರನ್ನು ಮಿಲಿಟರಿ ವಶಕ್ಕೆ ಪಡೆಯಲಾಗಿದೆ. ಈ ಪುಟ್ಟ ದ್ವೀಪ ರಾಷ್ಟ್ರದ ಹಣಕಾಸು ಮತ್ತು ರಾಜಕೀಯ ಬಿಕ್ಕಟ್ಟನ್ನು ಬಲಪ್ರಯೋಗದಿಂದ ಬಗೆಹರಿಸಲು ಬರುವುದಿಲ್ಲ. ಸಮಾಲೋಚನೆ ಸಂವಾದಗಳೇ ದಾರಿದೀವಿಗೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.