ADVERTISEMENT

ಆಳ-ಅಗಲ | ಭಾರತ್‌ನೆಟ್‌ ವ್ಯಾಪ್ತಿ ಪ್ರದೇಶದಿಂದ ದೂರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 4:30 IST
Last Updated 11 ಜೂನ್ 2020, 4:30 IST
   
""
""
""

ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಿ, 6.49 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ವೈಫೈ ಸಂಪರ್ಕ ಕಲ್ಪಿಸುವ ಮಹತ್ವದ ‘ಭಾರತ್‌ನೆಟ್’ ಯೋಜನೆಯ ಪ್ರಗತಿಯು ನಿರಾಸೆ ಮೂಡಿಸುವಂತಿದೆ. ಬ್ರಾಡ್‌ಬ್ಯಾಂಡ್‌ ಸಂಪರ್ಕಕ್ಕೆ ಅಗತ್ಯವಿರುವ ಆಪ್ಟಿಕಲ್ ಫೈಬರ್ ಕೇಬಲ್‌ ಅಳವಡಿಕೆ ಕಾರ್ಯ ಕುಂಟುತ್ತಲೇ ಸಾಗಿದೆ.

ಭಾರತ್‌ನೆಟ್‌ – ದೇಶದ ಗ್ರಾಮಾಂತರ ಭಾಗದ ಬದುಕಿನ ಗತಿಯನ್ನೇ ಬದಲಿಸಬಲ್ಲ ಮಹತ್ವಾಕಾಂಕ್ಷಿ ಯೋಜನೆ ಎಂದೇ ಬಿಂಬಿತವಾಗಿದೆ. ಇ–ಆಡಳಿತದ ಅನುಷ್ಠಾನಕ್ಕೆ ವೇಗ ತುಂಬುವ ಜತೆಗೆ ಅರ್ಥವ್ಯವಸ್ಥೆಯಲ್ಲೂ ಬದಲಾವಣೆಯ ಗಾಳಿ ಬೀಸಲು ನೆರವಾಗಲಿದೆ ಎಂದು ಹೇಳಲಾಗಿದೆ. ಆನ್‌ಲೈನ್‌ ಶಿಕ್ಷಣದ ಚರ್ಚೆ ತೀವ್ರ ಸ್ವರೂಪ ಪಡೆದಿರುವ ಈ ಸಂದರ್ಭದಲ್ಲಿ, ಶಿಕ್ಷಣ ವಲಯದ ನೆರವಿಗೂ ಭಾರತ್‌ ನೆಟ್‌ ಯೋಜನೆ ಬರಲಿದೆ ಎಂದು ಆಶಿಸಲಾಗಿದೆ. ಆದರೆ, ಮೂರು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ, ಇನ್ನೂ ಕುಂಟುತ್ತಾ, ತೆವಳುತ್ತಾ ಸಾಗಿದ್ದು, ನಿರೀಕ್ಷಿತ ಗುರಿ ತಲುಪಿಲ್ಲ ಎನ್ನುವುದನ್ನು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತವೆ...

* ಏನಿದು ಭಾರತ್‌ನೆಟ್‌ ಯೋಜನೆ?
ದೇಶದ ಪ್ರತಿಯೊಂದು ಗ್ರಾಮ ಹಾಗೂ ಗ್ರಾಮದ ಪ್ರತಿಯೊಂದು ಮನೆಗೂ ಆಪ್ಟಿಕಲ್‌ ಫೈಬರ್‌ ಮೂಲಕ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸಂಪರ್ಕ ಕಲ್ಪಿಸಲು ಮನಮೋಹನ್‌ ಸಿಂಗ್‌ ಅವರ ನೇತೃತ್ವದ ಯುಪಿಎ ಸರ್ಕಾರ 2011ರಲ್ಲಿ ಆರಂಭಿಸಿದ್ದ ಯೋಜನೆ ಇದು. ಆಗ ಇದಕ್ಕೆ ರಾಷ್ಟ್ರೀಯ ಆಪ್ಟಿಕಲ್‌ ಫೈಬರ್‌ ಸಂಪರ್ಕ ಯೋಜನೆ ಎಂದು ಹೆಸರಿಸಲಾಗಿತ್ತು. ಎನ್‌ಡಿಎ ಸರ್ಕಾರ, ‘ಭಾರತ್‌ ನೆಟ್‌’ ಯೋಜನೆ ಎಂದು ಮರುನಾಮಕರಣ ಮಾಡಿದೆ. ಆದರೆ, ಹೆಸರು ಮರುನಾಮಕರಣ→ಮಾಡಿದಷ್ಟು ವೇಗದಲ್ಲಿ ಯೋಜನೆಯೇನೂ→
ಅನುಷ್ಠಾನಗೊಂಡಿಲ್ಲ.

ADVERTISEMENT

ಯೋಜನೆಯನ್ನು ಅನುಷ್ಠಾನಗೊಳಿಸಲು ಭಾರತ್‌ ಬ್ರಾಡ್‌ ಬ್ಯಾಂಡ್‌ ನೆಟ್‌ವರ್ಕ್‌ ಲಿಮಿಟೆಡ್‌ (ಬಿಬಿಎನ್‌ಎಲ್‌) ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಪ್ರತೀ ಗ್ರಾಮ ಪಂಚಾಯಿತಿಗೆ ಕನಿಷ್ಠ 100 ಎಂಬಿಪಿಎಸ್‌ ಬ್ಯಾಂಡ್‌ವಿಡ್ತ್‌ ಸಂಪರ್ಕ ಕಲ್ಪಿಸುವ ಉದ್ದೇಶದ ಈ ಮಹತ್ವಾಕಾಂಕ್ಷಿ ಯೋಜನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ 2020–21ರ ಬಜೆಟ್‌ನಲ್ಲಿ ₹6,000 ಕೋಟಿ ಮೀಸಲಿಟ್ಟಿದ್ದರು. ಆದರೆ, ಕೊರೊನಾ ಬಿಕ್ಕಟ್ಟಿನ ಕಾರಣ ₹500 ಕೋಟಿಗಿಂತ ಅಧಿಕ ಮೊತ್ತದ ಎಲ್ಲ ಯೋಜನೆಗಳನ್ನೂ ತಡೆಹಿಡಿಯಲು ಸರ್ಕಾರ ನಿರ್ಧರಿಸಿರುವ ಕಾರಣ, ಗ್ರಾಮಗಳ ಡಿಜಿಟಲ್‌ ಸಂಪರ್ಕದ ಯೋಜನೆ ಮತ್ತೆ ನನೆಗುದಿಗೆ ಬೀಳಲಿದೆ ಎಂಬ ಭೀತಿ ವ್ಯಕ್ತವಾಗಿದೆ.

*ಯಾವಾಗ ಪೂರ್ಣಗೊಳ್ಳಬೇಕಿತ್ತು ಈ ಯೋಜನೆ?
ಯುಪಿಎ ನೇತೃತ್ವದ ಸರ್ಕಾರ ಈ ಯೋಜನೆಯನ್ನು ರೂಪಿಸಿದಾಗ 2013ರೊಳಗೆ ಎಲ್ಲ ಗ್ರಾಮಗಳಿಗೂ ಇಂಟರ್ನೆಟ್‌ ಸಂಪರ್ಕ ಒದಗಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಆ ಸರ್ಕಾರದ ಅವಧಿ ಕೊನೆಗೊಳ್ಳುವಷ್ಟರಲ್ಲಿ 59 ಗ್ರಾಮ ಪಂಚಾಯಿತಿಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಮುಂದೆ ಮೂರು ಹಂತಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿ, ಮೂರೂ ಹಂತಗಳನ್ನು 2016ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿತ್ತು. ಒಂದು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಸಂಪರ್ಕ ಕಲ್ಪಿಸುವ ಮೊದಲ ಹಂತದ ಯೋಜನೆ 2017ರ ಡಿಸೆಂಬರ್‌ನಲ್ಲಿ ಪೂರ್ಣಗೊಂಡಿತು.

ಇನ್ನೂ 1.31 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಇಂಟರ್ನೆಟ್‌ ಒದಗಿಸುವ ಎರಡನೇ ಹಂತದ ಯೋಜನೆಗೆ 2021ರ ಆಗಸ್ಟ್‌ವರೆಗೆ ಕಾಲಮಿತಿ ನಿಗದಿ ಮಾಡಲಾಗಿದೆ. ಕೆಲವು ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳೇ ಯೋಜನೆಯ ಅನುಷ್ಠಾನದ ಹೊಣೆ ಹೊತ್ತುಕೊಂಡರೆ, ಕೆಲವು ರಾಜ್ಯಗಳಲ್ಲಿ ಖಾಸಗಿ ಕಂಪನಿಗೆ ಆ ಹೊಣೆಯನ್ನು ವಹಿಸಲಾಗಿದೆ. ಮಿಕ್ಕ ಕಡೆ ಕೇಂದ್ರ ಸರ್ಕಾರದ ಸಂಸ್ಥೆಗಳು ಇಂಟರ್ನೆಟ್‌ ಸಂಪರ್ಕದ ಹೊಣೆಯನ್ನು ಹೊತ್ತುಕೊಂಡಿವೆ.

*ಯೋಜನೆಗೆ ಎಷ್ಟು ಹಣ ವ್ಯಯಿಸಲಾಗುತ್ತಿದೆ?
ಯುಪಿಎ ಸರ್ಕಾರ ಈ ಯೋಜನೆ ರೂಪಿಸುವಾಗ ಒಟ್ಟು ₹20 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಎನ್‌ಡಿಎ ಸರ್ಕಾರ ಬಂದಮೇಲೆ ಯೋಜನೆಯ ಗಾತ್ರವನ್ನು ಪರಿಷ್ಕರಿಸಿದ್ದು ₹72,778 ಕೋಟಿಗೆ ಏರಿಕೆ ಮಾಡಲಾಗಿದೆ.

ವೈಫೈ ರೂಟರ್‌ ಅಳವಡಿಕೆ ಕುಂಠಿತ​
ದೇಶದ ಗ್ರಾಮಗಳಿಗೆ ವೈಫೈ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 7 ಲಕ್ಷಕ್ಕೂ ಹೆಚ್ಚು ವೈಫೈ ರೂಟರ್‌ಗಳನ್ನು ಅಳವಡಿಸಬೇಕಿದೆ. ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ (ಗ್ರಾಮಗಳ ಸಂಖ್ಯೆಗೆ ಅನುಗುಣವಾಗಿ) 2ರಿಂದ 5 ರೂಟರ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಪ್ರತಿ ಗ್ರಾಮಕ್ಕೂ ಕನಿಷ್ಠ 1 ವೈಫೈ ರೂಟರ್‌, ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಒಂದಕ್ಕಿಂತ ಹೆಚ್ಚು ರೂಟರ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈ ಕೆಲಸ 2019ರ ಡಿಸೆಂಬರ್ ಅಂತ್ಯಕ್ಕೆ ಶೇ 100ರಷ್ಟು ಪೂರ್ಣಗೊಳ್ಳಬೇಕಿತ್ತು. ಆದರೆ ಈ ಕೆಲಸದ ಪ್ರಗತಿ ಅತ್ಯಂತ ನೀರಸವಾಗಿದ್ದು, ಶೇ 3.32ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ.

ರಾಜ್ಯದಲ್ಲಿರುವ ಗ್ರಾ.ಪಂ.ಗಳೆಷ್ಟು?
ಕರ್ನಾಟಕದ 6,244 ಗ್ರಾಮ ಪಂಚಾಯಿತಿಗಳಲ್ಲಿ ಭಾರತ್‌ನೆಟ್ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿ ಭಾರತ್‌ನೆಟ್ ಸೇವೆ ಲಭ್ಯವಿದೆ ಎಂದು ಕೇಂದ್ರ ಸರ್ಕಾರದ ದಾಖಲೆಗಳು ಹೇಳುತ್ತವೆ. ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ಜಾಲತಾಣದ ಪ್ರಕಾರ ರಾಜ್ಯದಲ್ಲಿ 6,022 ಗ್ರಾಮ ಪಂಚಾಯಿತಿಗಳು ಮಾತ್ರ ಇವೆ. ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 222 ಗ್ರಾಮ ಪಂಚಾಯಿತಿಗಳನ್ನು ಕರ್ನಾಟಕದ ಪಟ್ಟಿಗೆ ಸೇರಿಸಿದೆ. ಅಲ್ಲದೆ, ಈ ಹೆಚ್ಚುವರಿ 222 ಗ್ರಾಮ ಪಂಚಾಯಿತಿಗಳಿಗೆ ಒಎಫ್‌ಸಿ ಕೇಬಲ್ ಅಳವಡಿಸಲಾಗಿದೆ ಮತ್ತು ಭಾರತ್‌ನೆಟ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಭಾರತ್‌ನೆಟ್‌ ದಾಖಲೆಗಳು ಹೇಳುತ್ತವೆ.

ರಾಜ್ಯದಲ್ಲಿ 6,244 ಗ್ರಾಮ ಪಂಚಾಯಿತಿಗಳಿಗೆ ಭಾರತ್‌ನೆಟ್ ಸಂಪರ್ಕ ಕಲ್ಪಿಸಿದ್ದು ನಿಜವೇ ಆಗಿದ್ದರೆ, ಹೆಚ್ಚುವರಿ 222 ಗ್ರಾಮ ಪಂಚಾಯಿತಿಗಳು ಎಲ್ಲಿವೆ. ಅಸ್ತಿತ್ವದಲ್ಲೇ ಇಲ್ಲದ ಗ್ರಾಮ ಪಂಚಾಯಿತಿಗಳಿಗೆ ಒಎಫ್‌ಸಿ ಅಳವಡಿಸಿ, ಇಂಟರ್ನೆಟ್‌ ಸಂಪರ್ಕ ನೀಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಈ ಯೋಜನೆ ಇನ್ನೂ ಪೂರ್ಣವಾಗಿಲ್ಲ. ಪೂರ್ಣವಾದ ನಂತರ ಮಹಾಲೇಖಪಾಲರ ತನಿಖೆ ನಡೆದರೆ, ಹೆಚ್ಚುವರಿ ಗ್ರಾಮ ಪಂಚಾಯಿತಿಗಳು ಎಲ್ಲಿವೆ ಎಂಬುದು ಬಹಿರಂಗವಾಗಬಹುದು ಎನ್ನುವುದು ತಜ್ಞರ ಸಲಹೆ.

ಎಷ್ಟು ಹಳ್ಳಿಗಳಲ್ಲಿದೆ ವೈಫೈ?
ಕರ್ನಾಟಕದ 6,244 ಗ್ರಾಮ ಪಂಚಾಯಿತಿಗಳಿಗೆ ಭಾರತ್‌ನೆಟ್ ಸಂಪರ್ಕ ಕಲ್ಪಿಸಲಾಗಿದೆ. ಈ ಗ್ರಾಮ ಪಂಚಾಯಿತಿಗಳಲ್ಲಿ
ಭಾರತ್‌ನೆಟ್ ಸೇವೆ ಲಭ್ಯವಿದೆ ಎಂದು ಕೇಂದ್ರ ಸರ್ಕಾರದ ದಾಖಲೆಗಳು ಹೇಳುತ್ತವೆ. ಆದರೆ, ರಾಜ್ಯದ ಎಷ್ಟು ಗ್ರಾಮಗಳಿಗೆ ವೈಫೈ ಸಂ‍ಪರ್ಕ ಕಲ್ಪಿಸಲಾಗಿದೆ ಎಂಬುದರ ಬಗ್ಗೆ ಭಾರತ್‌ನೆಟ್ ಅಧಿಕೃತ ಜಾಲತಾಣದಲ್ಲಿ ಮತ್ತು ಭಾರತ್‌ನೆಟ್ ವಾರ್ಷಿಕ ವರದಿಯಲ್ಲಿ ಯಾವುದೇ ಮಾಹಿತಿ ಇಲ್ಲ.

ಈ ಯೋಜನೆ ಅಡಿ ದೇಶದಾದ್ಯಂತ 7 ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ವೈಫೈ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ, ಈವರೆಗೆ ಕೇವಲ 23,231 ಗ್ರಾಮಗಳಿಗಷ್ಟೇ ವೈಫೈ ಸಂಪರ್ಕ ದೊರೆತಿದೆ. ಇದರಲ್ಲಿ ಕರ್ನಾಟಕದ ಗ್ರಾಮಗಳ ಸಂಖ್ಯೆ ಎಷ್ಟು ಮತ್ತು ಅವು ಯಾವುವು ಎಂಬುದರ ಬಗ್ಗೆ ಮಾಹಿತಿ ಇಲ್ಲ. ರಾಜ್ಯದ ಎಲ್ಲಾ ಗ್ರಾಮಗಳಿಗೆ ಎಷ್ಟು ದಿನಗಳಲ್ಲಿ ವೈಫೈ ಸಂಪರ್ಕ ಕಲ್ಪಿಸಲಾಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ.

‘ಸದ್ಯ ಭಾರತ್‌ನೆಟ್ ಸಂಪರ್ಕವು ಗ್ರಾಮ ಪಂಚಾಯಿತಿಯ ಕೆಲಸಕ್ಕಷ್ಟೇ ಸೀಮಿತವಾಗಿದೆ. ಭಾರತ್‌ನೆಟ್‌ ಮೊದಲನೇ ಹಂತದಲ್ಲಿ ಈ ಸಂಪರ್ಕ ನೀಡಲಾಗಿದೆ. ಕೆಲವೊಮ್ಮೆ ನೆಟ್‌ವರ್ಕ್ ಕೈಕೊಡುತ್ತದೆ. ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ವೈಫೈ ಅಳವಡಿಸುವ ಯಾವ ಪ್ರಸ್ತಾವವೂ ಈವರೆಗೆ ಬಂದಿಲ್ಲ’ ಎನ್ನುತ್ತಾರೆರಾಜ್ಯದ ರಾಮನಗರ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದರ ಪಿಡಿಒ.

ಭಾರತ್‌ನೆಟ್ ಮೊದಲನೇ ಹಂತದಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಒಎಫ್‌ಸಿ ಸಂಪರ್ಕ ಕಲ್ಪಿಸಲಾಗಿದೆ. ಈಗ ಎರಡನೇ ಹಂತದ ಯೋಜನೆಯ ಅನುಷ್ಠಾನ ಕಾಮಗಾರಿ ಜಾರಿಯಲ್ಲಿದೆ. ಮೊದಲನೇ ಹಂತದ ಗ್ರಾಮ ಪಂಚಾಯಿತಿಗಳಲ್ಲಿ ವೈಫೈ ಅಳವಡಿಸುವ ಕಾರ್ಯ ಪೂರ್ಣಗೊಂಡಿಲ್ಲ. ವಿಸ್ತರಿಸಲಾದ ಡೆಡ್‌ಲೈನ್‌ ಪ್ರಕಾರ, 2023ರ ಡಿಸೆಂಬರ್ ಅಂತ್ಯಕ್ಕೆ ವೈಫೈ ಅಳವಡಿಕೆ ಕಾರ್ಯ ಪೂರ್ಣಗೊಳ್ಳಬೇಕು. ಈವರೆಗೆ ಶೇ 7.4ರಷ್ಟು ವೈಫೈ ರೂಟರ್‌ಗಳನ್ನು ಅಳವಡಿಸಲಾಗಿದೆ. ಶೇ 3.32ರಷ್ಟು ವೈಫೈ ರೂಟರ್‌ಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಡೆಡ್‌ಲೈನ್‌ ಒಳಗೆ ವೈಫೈ ಸಂಪರ್ಕ ಎಲ್ಲಾ ಗ್ರಾಮಗಳಿಗೆ ದೊರೆಯಲಿದೆಯೇ ಎಂಬುದು ಅನಿಶ್ಚಿತವಾಗಿದೆ.

ಆಧಾರ: ಭಾರತ್‌ನೆಟ್‌ ಅಧಿಕೃತ ಜಾಲತಾಣ ಮತ್ತು ಯೋಜನಾ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.