ADVERTISEMENT

ಆಳ-ಅಗಲ | ಚೀನಾದಿಂದ ಮತ್ತೆ ಉಪಟಳ: ಗಡಿ ಸನಿಹ ಅಣೆಕಟ್ಟೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 19:32 IST
Last Updated 12 ಮಾರ್ಚ್ 2021, 19:32 IST
   

ಯರ್ಲುಂಗ್‌ ಜಂಗ್ಬೊ ಎಂಬ ಹೆಸರಿನಿಂದ ಕರೆಸಿಕೊಳ್ಳುವ ನಮ್ಮ ಬ್ರಹ್ಮಪುತ್ರ ನದಿಗೆ ಭಾರತದ ಗಡಿ ಸಮೀಪದಲ್ಲಿ ಬೃಹತ್‌ ಅಣೆಕಟ್ಟೆ ನಿರ್ಮಿಸಲು ಮತ್ತು ಜಲವಿದ್ಯುತ್‌ ಯೋಜನೆ ರೂಪಿಸಲು ಚೀನಾ ಮುಂದಾಗಿದೆ. ಚೀನಾ ಸಂಸತ್ತು– ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ 14ನೇ ಪಂಚವಾರ್ಷಿಕ ಯೋಜನೆಗೆ ಒಪ್ಪಿಗೆ ನೀಡಿದೆ. ಈ ಯೋಜನೆಯಲ್ಲಿ ಬ್ರಹ್ಮಪುತ್ರ ನದಿಗೆ ಅರುಣಾಚಲ ಪ್ರದೇಶದ ಸಮೀಪ ಅಣೆಕಟ್ಟು ಕಟ್ಟುವ ಪ್ರಸ್ತಾವ ಇದೆ. ಹಾಗಾಗಿ, ಭಾರತಕ್ಕೆ ಇದು ಕಳವಳಕಾರಿಯಾದ ವಿಚಾರ.

ನದಿ ನೀರು ಹಂಚಿಕೆಯು ಒಂದು ದೇಶದ ವಿವಿಧ ರಾಜ್ಯಗಳ ನಡುವೆಯೇ ಸಂಘರ್ಷ ಸೃಷ್ಟಿಸುವಷ್ಟು ಸ್ಫೋಟಕವಾದ ವಿಚಾರ. ಎರಡು ದೇಶಗಳ ನಡುವೆ ನೀರು ಹಂಚಿಕೆಯು ಬಿಕ್ಕಟ್ಟಾಗಿ ಪರಿಣಮಿಸಬಹುದು. ಚೀನಾದಂತಹ ದೇಶದ ಜತೆಗೆ ಇಂತಹ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವುದು ದೊಡ್ಡ ಕಷ್ಟ.

ಬ್ರಹ್ಮಪುತ್ರ ನದಿಗೆ ಒಟ್ಟು ಐದು ಅಣೆಕಟ್ಟೆಗಳನ್ನು ನಿರ್ಮಿಸುವ ಯೋಜನೆಯನ್ನು ಚೀನಾ ತಯಾರಿಸಿದೆ; ಅದರಲ್ಲಿ ಕೆಲವು ಅಣೆಕಟ್ಟೆಗಳು ಈಗಾಗಲೇ ನಿರ್ಮಾಣ ಆಗಿವೆ. ಭಾರತದ ಗಡಿಗೆ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟೆಗಳಲ್ಲಿ ಒಂದಾಗಬಹುದು ಎಂಬ ಅಂದಾಜು ಇದೆ. ಈ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸುವ ಉದ್ದೇಶ ಇಲ್ಲ, ವಿದ್ಯುತ್‌ ಉತ್ಪಾದನೆಗೆ ಬಳಸಿಕೊಂಡ ಬಳಿಕ ನೀರನ್ನು ನದಿಗೆ ಹರಿಸಲಾಗುವುದು. ಹಾಗಾಗಿ, ಈ ಯೋಜನೆಯಿಂದ ಬೇರೆ ದೇಶಗಳಿಗೆ ತೊಂದರೆ ಆಗದು ಎಂದು ಚೀನಾ ಹೇಳುತ್ತಿದೆ.

ADVERTISEMENT

ಆದರೆ, ವಾಸ್ತವ ಹಾಗೆ ಇಲ್ಲ. ಅಣೆಕಟ್ಟೆ ನಿರ್ಮಾಣದ ವಿಚಾರದಲ್ಲಿ ಚೀನಾ ಪಾರದರ್ಶಕವಾಗಿ ವರ್ತಿಸುತ್ತಿಲ್ಲ ಎಂಬ ಅನುಮಾನ ಭಾರತಕ್ಕೆ ಸದಾ ಇದೆ. ಬ್ರಹ್ಮಪುತ್ರ ನದಿಗೆ ಭಾರತ–ಭೂತಾನ್‌ ಗಡಿಯಿಂದ ಕೆಲವೇ ಕಿ.ಮೀ. ದೂರದ ಝಂಗ್ಮು ಎಂಬಲ್ಲಿ ಚೀನಾ ಅಣೆಕಟ್ಟೆ ನಿರ್ಮಿಸಿದೆ. ಆದರೆ, ಈ ಅಣೆಕಟ್ಟೆ ನಿರ್ಮಾಣದ ವಿಚಾರವನ್ನು ಚೀನಾ ನಿರಾಕರಿಸುತ್ತಲೇ ಬಂದಿತ್ತು. ಅಣೆಕಟ್ಟೆ ನಿರ್ಮಾಣ ಬಹುತೇಕ ಪೂರ್ಣಗೊಂಡ ಬಳಿಕ 2010ರಲ್ಲಿ ಒಪ್ಪಿಕೊಂಡಿತ್ತು. ಹಾಗಾಗಿಯೇ, ಬ್ರಹ್ಮಪುತ್ರ ನದಿಗೆ ಚೀನಾ ಕಟ್ಟುತ್ತಿರುವ ಅಣೆಕಟ್ಟೆಗಳ ನಿಜವಾದ ಉದ್ದೇಶ ವಿದ್ಯುತ್‌ ಉತ್ಪಾದನೆ ಮಾತ್ರವೇ ಎಂಬುದನ್ನು ಕಂಡುಕೊಳ್ಳುವಂತೆ ಯುಪಿಎ ಸರ್ಕಾರವು ಜಲ ಸಂಪನ್ಮೂಲ ಸಚಿವಾಲಯಕ್ಕೆ 2014ರಲ್ಲಿ ಸೂಚಿಸಿತ್ತು.ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ಜಲಾಶಯಗಳಾಗಿ ಪರಿವರ್ತಿಸುವ ರೀತಿಯಲ್ಲಿಯೇ ಈ ಬೃಹತ್‌ ಅಣೆಕಟ್ಟೆಗಳನ್ನು ಕಟ್ಟಲಾಗಿದೆ ಎಂದು ಜಲಸಂಪನ್ಮೂಲ ಸಚಿವಾಲಯದ ವರದಿಯು ಹೇಳಿತ್ತು.

ಭಾರತ–ಚೀನಾ ನಡುವೆ ನೀರಿನ ವಿಚಾರದಲ್ಲಿ ಸಹಕಾರ ಅಥವಾ ಹಂಚಿಕೆಯ ಒಪ್ಪಂದ ಇಲ್ಲ. ಆದರೆ, ನೀರು ಹರಿಸುವಿಕೆಯ ಮಾಹಿತಿ ಹಂಚಿಕೆ ಒಪ್ಪಂದ ಇದೆ. ಅಂದರೆ, ಎಷ್ಟು ನೀರು, ಯಾವಾಗ ಹರಿಸಲಾಗುತ್ತಿದೆ ಎಂಬುದನ್ನು ಚೀನಾವು ಭಾರತಕ್ಕೆ ತಿಳಿಸಬೇಕು. ಆದರೆ, 2017 ದೋಕಲಾ ಮುಖಾಮುಖಿಯ ಸಂದರ್ಭದಲ್ಲಿ ಈ ಮಾಹಿತಿ ನೀಡಲು ಚೀನಾ ನಿರಾಕರಿಸಿತ್ತು. ಚೀನಾದ ಇಂತಹ ವರ್ತನೆಯಿಂದಾಗಿಯೇ ಗಡಿಯಲ್ಲಿ ಆ ದೇಶವು ಕೈಗೆತ್ತಿಕೊಳ್ಳುವ ಯಾವುದೇ ಯೋಜನೆ ಅಪಾಯಕಾರಿಯಾಗಿಯೇ ಕಾಣಿಸುತ್ತದೆ.

ನದಿಯ ನೀರೂ ಆಯುಧ
ತನ್ನ ನೆಲದಲ್ಲಿ ಹುಟ್ಟಿ, ಬೇರೆ ದೇಶಗಳಿಗೆ ಹರಿಯುವ ನದಿಗಳ ನೀರನ್ನು ಕೂಡ ಆಯುಧವನ್ನಾಗಿ ಚೀನಾ ಬಳಸಿಕೊಂಡ ಉದಾಹರಣೆ ಇದೆ. ಚೀನಾದ ಈ ಜಲ ರಾಜಕಾರಣಕ್ಕೆ ಈವರೆಗೆ ಮ್ಯಾನ್ಮಾರ್ ಮಾತ್ರ ಸಂತ್ರಸ್ತ ದೇಶವಾಗಿತ್ತು. ಆದರೆ ಈಗ ಬ್ರಹ್ಮಪುತ್ರ ನದಿಗೆ ಮೆಡೋಗ್‌ನಲ್ಲಿ ನಿರ್ಮಿಸಲು ಹೊರಟಿರುವ ಅಣೆಕಟ್ಟೆಯಿಂದಾಗಿ ಭಾರತ ಮತ್ತು ಬಾಂಗ್ಲಾದೇಶವೂ ಸಂತ್ರಸ್ತವಾಗುವ ಅಪಾಯವಿದೆ.

ತನ್ನ ನೆಲದಲ್ಲಿ ಹುಟ್ಟಿ ಮ್ಯಾನ್ಮಾರ್‌ನತ್ತ ಹರಿಯುವ ಮೆಕೋಂಗ್ ನದಿಗೆಚೀನಾವು ಈಗಾಗಲೇ ಅಣೆಕಟ್ಟೆ ನಿರ್ಮಿಸಿದೆ. ಈ ನದಿಯು ಮ್ಯಾನ್ಮಾರ್‌, ಲಾವೋಸ್, ಕಾಂಬೋಡಿಯಾ, ಥಾಯ್ಲೆಂಡ್ ಮತ್ತು ವಿಯೆಟ್ನಾಂಗಳಿಗೆ ಹರಿಯುತ್ತದೆ. ಈ ನದಿಗೆ ಈಗ ಕಟ್ಟಿರುವ ಅಣೆಕಟ್ಟೆಯು, ಮ್ಯಾನ್ಮಾರ್ ಗಡಿಯಿಂದ ಕೆಲವೇ ನೂರು ಕಿ.ಮೀ. ದೂರದಲ್ಲಿದೆ. ಈ ಅಣೆಕಟ್ಟೆಯ ನಿರ್ಮಾಣದ ನಂತರ ಮ್ಯಾನ್ಮಾರ್‌ಗೆ ಮೆಕೋಂಗ್ ನದಿಯ ಹರಿವು ಕಡಿಮೆಯಾಗಿದೆ. ಈ ಕಾರಣದಿಂದ ಈ ಎಲ್ಲಾ ದೇಶಗಳಿಗೂ ನದಿ ನೀರಿನ ಹರಿವು ಕಡಿಮೆಯಾಗಿದೆ. ಕುಡಿಯುವ ನೀರಿನ ಯೋಜನೆಗಳಿಗೆ ನೀರಿನ ಕೊರತೆ ಉಂಟಾಗಿದೆ. 2020ರಲ್ಲಿ ಮೆಕೋಂಗ್ ಅಣೆಕಟ್ಟೆಯಿಂದ ಸೂಚನೆ ನೀಡದೆಯೇ ನೀರು ಹೊರಬಿಟ್ಟಿದ್ದ ಕಾರಣ, ಮ್ಯಾನ್ಮಾರ್‌ನಲ್ಲಿ ಪ್ರವಾಹ ಉಂಟಾಗಿತ್ತು. ಈಗ ಈ ನದಿಗೆ ಇನ್ನೂ ಮೂರು ಅಣೆಕಟ್ಟೆಗಳನ್ನು ನಿರ್ಮಿಸಲು ಚೀನಾ ಸಿದ್ಧತೆ ನಡೆಸಿದೆ. ಈ ನದಿಯ ಅಚ್ಚುಕಟ್ಟು ರಾಷ್ಟ್ರಗಳು, ನದಿ ನೀರಿನ ಹರಿವು ಅಪಾಯಕಾರಿಮಟ್ಟದಲ್ಲಿ ಕಡಿಮೆಯಾಗುವ ಆತಂಕ ಎದುರಿಸುತ್ತಿವೆ. ದಕ್ಷಿಣ ಚೀನಾ ಸಮುದ್ರದ ಸಂಘರ್ಷದಲ್ಲಿ ವಿಯೆಟ್ನಾಂ ಜತೆಗೆ ಚೌಕಾಶಿ ನಡೆಸಲು ಚೀನಾ ಈ ಅಣೆಕಟ್ಟೆಯನ್ನು ಬಳಸಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಚೀನಾದ ವಶದಲ್ಲಿರುವ ಭಾರತದ ಅಕ್ಸಾಯಿಚಿನ್ ಪ್ರದೇಶದಲ್ಲಿ ಗಾಲ್ವಾನ್ ಮತ್ತು ಶೋಕ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಈ ಅಣೆಕಟ್ಟೆಯಲ್ಲಿ ಇರುವ ನೀರಿನ ಸಂಗ್ರಹದ ವಿವರವನ್ನು ಭಾರತದೊಂದಿಗೆ ಚೀನಾ ಹಂಚಿಕೊಳ್ಳುತ್ತಿಲ್ಲ. 2020ರ ಆಗಸ್ಟ್‌ನಲ್ಲಿ ಗಾಲ್ವನ್‌ನಲ್ಲಿ ಭಾರತ-ಚೀನಾ ಸಂಘರ್ಷದ ವೇಳೆ ನದಿಯಲ್ಲಿ ದಿಢೀರ್ ಪ್ರವಾಹ ಸೃಷ್ಟಿಸಲು ಈ ನೀರನ್ನು ಚೀನಾ ಬಳಸಿಕೊಂಡಿತ್ತು ಎಂಬ ಆರೋಪವೂ ಇದೆ.

ಮೆಡೋಗ್‌ನಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟೆ ನಿರ್ಮಿಸಿದರೆ, ಭಾರತಕ್ಕೆ ಮತ್ತು ಆ ಮೂಲಕ ಬಾಂಗ್ಲಾದೇಶಕ್ಕೆ ನದಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಬ್ರಹ್ಮಪುತ್ರ ನದಿಯ ಪಾತ್ರದಲ್ಲಿ ಬಾಂಗ್ಲಾದೇಶವು ಜಲಮಾರ್ಗವನ್ನು ಅಭಿವೃದ್ಧಿಪಡಿಸಿದೆ. ನೀರಿನ ಹರಿವು ಕಡಿಮೆಯಾದರೆ ಜಲಮಾರ್ಗವು ಸ್ಥಗಿತಗೊಳ್ಳುತ್ತದೆ. ಜತೆಗೆ ಕುಡಿಯುವ ನೀರಿನ ಯೋಜನೆಗಳಿಗೆ ನೀರಿನ ಕೊರತೆಯಾಗುವ ಅಪಾಯವಿದೆ.

ಅರುಣಾಚಲದಲ್ಲಿ ಅಣೆಕಟ್ಟೆಗೆ ಭಾರತ ಸಿದ್ಧತೆ
ಚೀನಾ ನಿರ್ಮಿಸುತ್ತಿರುವ ಅಣೆಕಟ್ಟೆಯು ದೊಡ್ಡ ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ ಎಂದು ವರದಿಯೊಂದು ಹೇಳಿದೆ. ಆದ್ದರಿಂದ ಭಾರತಕ್ಕೆ ನೀರು ಬೇಕಾದ ಸಂದರ್ಭದಲ್ಲಿ ನೀರನ್ನು ಕೊಡದೆ, ಬೇಡವಾದ ಸಂದರ್ಭದಲ್ಲಿ ಅತಿಯಾದ ನೀರನ್ನು ಬಿಟ್ಟು ಪ್ರವಾಹ ಸೃಷ್ಟಿಸುವ ಅಪಾಯವಿದೆ. ಇದು ಭಾರತದ ಚಿಂತೆಗೆ ಕಾರಣವಾಗಿದೆ.

ಚೀನಾದ ಈ ತಂತ್ರಕ್ಕೆ ಪ್ರತಿಯಾಗಿ ಭಾರತವೂ ಅರುಣಾಚಲಪ್ರದೇಶದಲ್ಲಿ 10,000 ಮೆಗಾವಾಟ್‌ ಜಲವಿದ್ಯುತ್‌ ಉತ್ಪಾದಿಸುವ ಯೋಜನೆಯೊಂದರ ರೂಪುರೇಷೆ ಸಿದ್ಧಪಡಿಸಿದೆ. ‘ಚೀನಾದ ಯೋಜನೆಯಿಂದ ಆಗಬಹುದಾದ ಹಾನಿಯನ್ನು ಸರಿಪಡಿಸುವಲ್ಲಿ ಈ ಯೋಜನೆ ಸಹಾಯಕವಾಗಬಹುದು’ ಎಂದು ಜಲಶಕ್ತಿ ಸಚಿವಾಲಯದ ಆಯುಕ್ತ ಟಿ.ಎಸ್‌. ಮೆಹರಾ ಹೇಳಿದ್ದಾರೆ. ಬ್ರಹ್ಮಪುತ್ರಾ ನದಿಯಲ್ಲಿ ಬರುವ ಹೆಚ್ಚುವರಿ ನೀರನ್ನು ಸಂಗ್ರಹಿಸಿಡಲು ಹಾಗೂ ನೀರಿನ ಕೊರತೆ ಆದಾಗ ಅಗತ್ಯವಿರುವಷ್ಟು ನೀರನ್ನು ಬಿಡಲು ಈ ಯೋಜನೆ ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.

‘ನಿಮ್ಮ ಯೋಜನೆಗಳು ಭಾರತಕ್ಕೆ ಹಾನಿ ಉಂಟುಮಾಡುವ ರೀತಿಯಲ್ಲಿ ಇರಬಾರದು ಎಂದು ನಾವು ಚೀನಾಗೆ ಅಧಿಕೃತವಾಗಿ ತಿಳಿಸಿದ್ದೇವೆ. ‘ಆ ಬಗ್ಗೆ ಎಚ್ಚರವಹಿಸುತ್ತೇವೆ’ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ. ಆದರೆ, ಕೊಟ್ಟ ಮಾತನ್ನು ಅವರು ಎಷ್ಟು ದಿನಗಳವರೆಗೆ ಉಳಿಸಿಕೊಳ್ಳುತ್ತಾರೆ ಎಂಬುದನ್ನು ಹೇಳಲಾಗದು’ ಎಂದು ಮೆಹರಾ ಹೇಳುತ್ತಾರೆ.

ಆದರೆ, ಭಾರತ– ಚೀನಾ ನಡುವಿನ ಈ ಸ್ಪರ್ಧೆಯು ಈ ಭಾಗದ ಪರಿಸರಕ್ಕೆ ಬಹುದೊಡ್ಡ ಅಪಾಯವನ್ನು ತಂದೊಡ್ಡುತ್ತಿದೆ ಎಂದು ಪರಿಸರ ವಿಜ್ಞಾನಿಗಳು ವಾದಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.