ನವದೆಹಲಿ: ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥನ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಜತೆಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವೂ ಚಿರಾಗ್‌ಗೆ ಕೈತಪ್ಪಿದೆ. ಈ ಬೆಳವಣಿಗೆಯಿಂದಾಗಿ ಬಿಹಾರ ರಾಜಕೀಯದಲ್ಲಿ ಹೊಸ ತಿರುವು ಕಂಡು ಬಂದಿದೆ.
ಎಲ್‌ಜೆಪಿಯ ಮುಖಂಡ ಸೂರಜ್‌ಭಾನ್ ಸಿಂಗ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆಗೆ ಚುನಾವಣೆ ನಡೆಸುವ ಹೊಣೆಯನ್ನೂ ಸಹ ಅವರಿಗೆ ನೀಡಲಾಗಿದೆ.
ಲೋಕಸಭೆಯಲ್ಲಿ ಎಲ್‌ಜೆಪಿಯ ಮುಖಂಡರಾಗಿ ಪಶುಪತಿ ಕುಮಾರ್ ಪರಾಸ್ ಅವರನ್ನು ಲೋಕಸಭೆ ಕಾರ್ಯಾಲಯ ಹೆಸರಿಸಿದೆ. ಪಕ್ಷದ ಸಂಸ್ಥಾಪಕ ಮತ್ತು ಚಿರಾಗ್ ಅವರ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ತಮ್ಮ ಪಶುಪತಿ ಕುಮಾರ್.
ಚಿರಾಗ್ ಪಕ್ಷದ ಅಧ್ಯಕ್ಷನಾದಾಗ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಅವರು ಚಿರಾಗ್ ಮೇಲೆ ಕುಪಿತರಾಗಿದ್ದರು. ಅವರ ಕೋಪದಿಂದ ತನ್ನ ತಂದೆಗೆ ಆದ ನೋವಿನ ಬಗ್ಗೆ ಮಾರ್ಚ್‌ನಲ್ಲಿ ಚಿರಾಗ್ ಪತ್ರ ಬರೆದಿದ್ದರು. ಆ ಪತ್ರಗಳನ್ನು ಚಿರಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಚಿರಾಗ್ ಕಳೆದ ವರ್ಷ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಮೈತ್ರಿಕೂಟದಿಂದ ಹೊರನಡೆಯುವ ನಿರ್ಧಾರವನ್ನು ಪ್ರಕಟಿಸಿದ್ದರು. ಆದರೆ, ಇದೀಗ ಎಲ್‌ಜೆಪಿ ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸಲು ಇಂಗಿತ ವ್ಯಕ್ತಪಡಿಸಿದೆ.
ಕಳೆದ ಎರಡು ದಿನಗಳ ನಾಟಕೀಯ ಬೆಳವಣಿಗೆಗಳಿಂದ ಎರಡು ದಶಕಗಳ ಹಿಂದೆ ಚಿರಾಗ್ ಅವರ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರು ಸ್ಥಾಪಿಸಿದ ಪಕ್ಷದ ಮೇಲೆ ನಿಯಂತ್ರಣ ಕಳೆದುಕೊಂಡಿರುವುದನ್ನು ಕಂಡಿದ್ದಾರೆ. ಇದರಿಂದ ಬಿಹಾರದ ರಾಜಕೀಯದಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಪಾಸ್ವಾನ್ ಸ್ಥಾಪಿಸಿದ್ದ ಪಕ್ಷ...
ಬಿಹಾರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರನ್ನೊಳಗೊಂಡ ವರ್ಚಸ್ವಿ ರಾಜಕಾರಣಿಗಳ ಪೈಕಿ ರಾಮ್ ವಿಲಾಸ್ ಪಾಸ್ವಾನ್ ಹಿರಿಯರಾಗಿದ್ದು, 2000ರ ನವೆಂಬರ್‌ನಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಹೊಸ ಪಕ್ಷವನ್ನು ಸ್ಥಾಪಿಸಿದ್ದರು.
ಪಕ್ಷ ಮತ್ತು ರಾಜಕೀಯದಲ್ಲಿ ಚಿರಾಗ್...
ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ 2013ರ ಹೊತ್ತಿಗೆ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಚಿರಾಗ್ ಸಲಹೆ ಮೇರೆಗೆ 2014ರಲ್ಲಿ ಎಲ್‌ಜೆಪಿ, ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸಿತ್ತು. ಎಲ್‌ಜೆಪಿ ಸ್ಪರ್ಧಿಸಿದ್ದ ಏಳು ಸ್ಥಾನಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಚಿರಾಗ್ ಲೋಕಸಭೆ ಪ್ರವೇಶಿಸಿದರು. ಪಕ್ಷದೊಳಗೆ ಚಿರಾಗ್ ಅವರನ್ನು ಸಂಸದೀಯ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸ್ಥಾನವನ್ನು ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ಉತ್ತರಾಧಿಕಾರದ ಬಗ್ಗೆ ಸ್ಪಷ್ಟ ಸಂದೇಶವನ್ನು ರವಾನಿಸಲಾಯಿತು. ಈ ಸಂದರ್ಭದಲ್ಲಿ ಪಾಸ್ವಾನ್ ಅವರ ಇಬ್ಬರು ಕಿರಿಯ ಸಹೋದರರಾದ ಪಶುಪತಿ ಕುಮಾರ್ ಪರಾಸ್ ಮತ್ತು ರಾಮ್ ಚಂದ್ರ ಪಾಸ್ವಾನ್ (ಅವರು 2019 ರ ಲೋಕಸಭಾ ಚುನಾವಣೆಯ ನಂತರ ನಿಧನರಾಗಿದ್ದಾರೆ), ಪಕ್ಷದಲ್ಲಿ ಚಿರಾಗ್ ಅವರ ರಾಜಕೀಯ ಚಟುವಟಿಕೆಗಳನ್ನು ಮೌನವಾಗಿ ವೀಕ್ಷಿಸಿದ್ದರು.
ಬಿಹಾರ ವಿಧಾನಸಭಾ ಚುನಾವಣೆ...
ರಾಮ್ ವಿಲಾಸ್ ಪಾಸ್ವಾನ್ ಅನಾರೋಗ್ಯ ಪೀಡಿತರಾದ ಬೆನ್ನಲ್ಲಿ 2020ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಚಿರಾಗ್ ಪಕ್ಷದ ವ್ಯವಹಾರಗಳ ಮೇಲೆ ನಿಯಂತ್ರಣ ಹೊಂದಿದ್ದರು. ಪಾಸ್ವಾನ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದರು. ಪಾಸ್ವಾನ್ ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರೂ ಮಗನನ್ನು ಬೆಂಬಲಿಸಿದ್ದರು. ಪಾಸ್ವಾನ್ ಅವರು ಚಿರಾಗ್ ರಾಜಕೀಯ ಬೆಳವಣಿಗೆಯನ್ನು ಬಯಸಿದ್ದರು.
ಸದ್ಯದ ಪರಿಸ್ಥಿತಿ...
ಎಲ್‌ಜೆಪಿ ಪಕ್ಷದ ಚಿಹ್ನೆಯ ಹಕ್ಕು ಪಡೆಯಲು ಪ್ಯಾರಾಸ್ ಶೀಘ್ರದಲ್ಲೇ ಚುನಾವಣಾ ಆಯೋಗವನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಚಿರಾಗ್‌ಗೆ ಎರಡು ಆಯ್ಕೆ: ಚಿರಾಗ್ ತನ್ನ ಚಿಕ್ಕಪ್ಪನೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಬಹುದು ಮತ್ತು ತನ್ನದೇ ಪಕ್ಷದಲ್ಲಿ ಸಕ್ರಿಯರಾಗಿರುವುದು. ಅಥವಾ ಪರಾಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾದರೆ ಲೋಕಸಭಾ ಸ್ಪೀಕರ್ ಮತ್ತು ಚುನಾವಣಾ ಆಯೋಗದ ಮುಂದೆ ಹೋರಾಟ ಮಾಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.