ADVERTISEMENT

ಆಳ–ಅಗಲ: ಡ್ರೋನ್‌ ಕಡಿವಾಣ ಸಡಿಲ

ಡ್ರೋನ್ ನಿಯಮಾವಳಿ–2021 ಕರಡು ಅಂತಿಮ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 19:28 IST
Last Updated 15 ಜುಲೈ 2021, 19:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡ್ರೋನ್ ಕರಡು ನಿಯಮ–2021 ಅನ್ನುನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ಬಿಡುಗಡೆ ಮಾಡಿದೆ. ನಿಯಮದ ಕರಡು ಬಿಡುಗಡೆಗೂ ಮುನ್ನ, ಮಾನವರಹಿತ ವಿಮಾನ ವ್ಯವಸ್ಥೆಗಳು (ಯುಎಎಸ್) ಅಥವಾ ಡ್ರೋನ್‌ಗಳ ಸಂಚಾರ ನಿರ್ವಹಣೆಗೆ ನೀತಿ ರೂಪಿಸುವ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರ ಜತೆ ಸಭೆ ನಡೆಸಿದ್ದರು.

ಡ್ರೋನ್‌ ಬಳಕೆಗೆ ಸಂಬಂಧಿಸಿದ ಕರಡು ನಿಯಮಗಳ ಬಗ್ಗೆ ಆಕ್ಷೇಪ ಅಥವಾ ಸಲಹೆಗಳಿದ್ದರೆ ಆಗಸ್ಟ್‌ 5ರ ಮೊದಲು ಸರ್ಕಾರಕ್ಕೆ ಸಲ್ಲಿಸಬೇಕು.

ಮಾನವರಹಿತ ವಿಮಾನ ವ್ಯವಸ್ಥೆ ನಿಯಮಗಳು–2021 ಈ ಮಾರ್ಚ್‌ನಲ್ಲಿ ಜಾರಿಗೆ ಬಂದಿತ್ತು. ಡ್ರೋನ್‌ ಬಳಕೆಯ ಮೇಲೆ ಹತ್ತಾರು ನಿಯಂತ್ರಣಗಳನ್ನು ಈ ನಿಯಮಗಳು ಹೇರಿದ್ದವು. ಸಾಮಾನ್ಯ ಜನರು ಡ್ರೋನ್‌ ಬಳಸಬೇಕಿದ್ದರೆ 25 ಅನುಮತಿ ಪತ್ರಗಳನ್ನು ಪಡೆಯಬೇಕಿತ್ತು. ಹೊಸ ನಿಯಮಗಳು ಜಾರಿಗೆ ಬಂದರೆ ಡ್ರೋನ್‌ ಬಳಕೆಗೆ ಅನುಮತಿ ಪಡೆಯುವುದು ಸುಲಭವಾಗಲಿದೆ.

ADVERTISEMENT

ಹೊಸ ನೀತಿಯಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ‘ಅನುಮತಿ ಇಲ್ಲದೇ ಟೇಕಾಫ್ ಇಲ್ಲ’, ನೇರ ಟ್ರ್ಯಾಕಿಂಗ್ ವ್ಯವಸ್ಥೆ, ಜಿಯೋ-ಫೆನ್ಸಿಂಗ್ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಭವಿಷ್ಯದಲ್ಲಿ ಅಳವಡಿಸುವುದಾಗಿ ಪ್ರಸ್ತಾಪಿಸಿದೆ.ಎಲ್ಲವೂ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಅನುಮತಿ ಹಾಗೂ ಕಾರ್ಯಾಚರಣೆಗೆ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ‘ಡಿಜಿಟಲ್ಸ್ಕೈ ಪ್ಲಾಟ್‌ಫಾರ್ಮ್’ ವೇದಿಕೆಯಲ್ಲಿ ಮಾನವ ಹಸ್ತಕ್ಷೇಪ ಕಡಿಮೆ.

ಉದ್ಯಮಕ್ಕೆ ಉತ್ತೇಜನ

ದೇಶದಲ್ಲಿ ಈಗ ಇರುವ ಡ್ರೋನ್‌ ನಿಯಮಗಳು ಅತ್ಯಂತ ಕಠಿಣವಾದವುಗಳಾಗಿವೆ. ಇದರಿಂದಾಗಿ ಡ್ರೋನ್‌ ನೋಂದಣಿ, ನಿರ್ವಹಣೆ ಮತ್ತು ಕಾರ್ಯಾಚರಣೆ ಉದ್ಯಮವು ನಿರೀಕ್ಷಿತಮಟ್ಟದಲ್ಲಿ ಬೆಳೆಯುತ್ತಿಲ್ಲ. ಈ ಉದ್ಯಮ ವಲಯದ ಬೆಳವಣಿಗೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಡ್ರೋನ್‌ ನಿಯಮಗಳಲ್ಲಿ ಬದಲಾವಣೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.

‘ಡ್ರೋನ್‌ ತಂತ್ರಜ್ಞಾನವು ಜಗತ್ತಿನಾದ್ಯಂತ ಮುಂದೆ ಭಾರಿ ಬದಲಾವಣೆ ತರಲಿರುವ ವಿದ್ಯಮಾನವಾಗಿದೆ. ಡ್ರೋನ್‌ ಬಳಕೆಯಿಂದ ಹಣ, ಸಂಪನ್ಮೂಲ, ಸಮಯ ಉಳಿತಾಯವಾಗುತ್ತದೆ. ಈ ಹೊಸ ಅಲೆಯ ಜೊತೆಯಲ್ಲಿ ತೇಲಿಹೋಗುವ ಆಯ್ಕೆ ನಮ್ಮ ಮುಂದೆ ಇದೆ. ನಮ್ಮ ಡ್ರೋನ್ ನವೋದ್ಯಮಗಳು ಈ ಅಲೆಯ ಜತೆಯಲ್ಲಿ ಸಾಗಲು ಅವಕಾಶಮಾಡಿಕೊಡುವ ಉದ್ದೇಶದಿಂದ ಈ ನಿಯಮಗಳನ್ನು ಬದಲಿಸಲಾಗುತ್ತಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೇಳಿದ್ದಾರೆ.

ಡ್ರೋನ್‌ ಕಾರ್ಯಾಚರಣೆ ನಿಯಮಗಳನ್ನು ಸರಳಗೊಳಿಸುವ ಮೂಲಕ ಈ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಮಾಡಲು, ಹೊಸ ತಂತ್ರಜ್ಞಾನ ಅಭಿವೃದ್ಧಿ ಮಾಡಲು ಮತ್ತು ನವೋದ್ಯಮಗಳು ಆರಂಭವಾಗಲು ಉತ್ತೇಜನ ನೀಡುವ ಸಲುವಾಗಿ ಈಗ ಜಾರಿಯಲ್ಲಿರುವ ಕಠಿಣ ನಿಯಮಗಳನ್ನು ಸರಳಗೊಳಿಸಲಾಗುತ್ತಿದೆ. ಡ್ರೋನ್‌ ಉದ್ಯಮ ಕ್ಷೇತ್ರದಲ್ಲಿ ಇದೊಂದು ಮಹತ್ವದ ಬದಲಾವಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಡಿಜಿಟಲ್‌ ಸ್ಕೈ ಪ್ಲಾಟ್‌ಫಾರ್ಮ್‌

ಡ್ರೋನ್‌ಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಆನ್‌ಲೈನ್‌ ಮೂಲಕ ನಡೆಸಲು ನಾಗರಿಕ ವಿಮಾನಯಾನ ಸಚಿವಾಲಯವು ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಅನ್ನು ಸ್ಥಾಪಿಸಲಿದೆ. ಡ್ರೋನ್‌ ಖರೀದಿ, ಹಾರಾಟ ಅನುಮತಿ, ನೋಂದಣಿ, ಕಾರ್ಯಾಚರಣೆ ಸೇರಿದಂತೆ ಎಲ್ಲಾ ಅನುಮತಿಗಳನ್ನು ನೀಡಲು ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ ಏಕಗವಾಕ್ಷಿಯಂತೆ ಕೆಲಸ ಮಾಡಲಿದೆ ಎಂದು ಕರಡು ಡ್ರೋನ್‌ ನಿಯಮಗಳಲ್ಲಿ ತಿಳಿಸಲಾಗಿದೆ.

ಇದು ಸಂಪೂರ್ಣ ಆನ್‌ಲೈನ್ ವೇದಿಕೆಯಾಗಿದ್ದು, ಎಲ್ಲಾ ಅನುಮತಿ ಮತ್ತು ಪರವಾನಗಿಗಳೂ ಸ್ವಯಂಚಾಲಿತವಾಗಿ ದೊರೆಯಲಿವೆ. ಸಾರ್ವಜನಿಕರು, ಉದ್ಯಮ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳನ್ನು ಸ್ವಯಂಚಾಲಿತ ವ್ಯವಸ್ಥೆಯೇ ಪರಿಶೀಲಿಸಲಿದೆ ಮತ್ತು ಅರ್ಜಿಗಳನ್ನು ಅನುಮತಿಸಲಿದೆ. ಈ ವ್ಯವಸ್ಥೆಯಲ್ಲಿ ಮನುಷ್ಯರ ಹಸ್ತಕ್ಷೇಪ ಇರುವುದಿಲ್ಲ. ಇದ್ದರೂ ಅದು ಅತ್ಯಂತ ಕನಿಷ್ಠಮಟ್ಟದಲ್ಲಿ ಇರಲಿದೆ ಎಂದು ಕರಡುಡ್ರೋನ್‌ ನಿಯಮಗಳಲ್ಲಿ ತಿಳಿಸಲಾಗಿದೆ.

ಡ್ರೋನ್‌ ಖರೀದಿ, ನೋಂದಣಿ ಮತ್ತು ಹಾರಾಟ ಸಂಬಂಧಿ ಅನುಮತಿಗಳನ್ನು ನೀಡಲಷ್ಟೇ ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಬಳಕೆಯಾಗುವುದಿಲ್ಲ. ಬದಲಿಗೆ ಡ್ರೋನ್‌ ಹಾರಾಟಕ್ಕೆ ಸಂಬಂಧಿಸಿದಂತೆ ಗುರುತಿಸಲಾಗುವ ಹಸಿರು, ಹಳದಿ ಮತ್ತು ಕೆಂಪು ವಲಯಗಳ ನಕ್ಷೆಯನ್ನು ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಒಳಗೊಂಡಿರಲಿದೆ. ಡ್ರೋನ್‌ಗಳು ಹಾರಾಟದ ಸಮಯದಲ್ಲೇ ಅದು ಯಾವ ವಲಯದಲ್ಲಿ ಇದೆ ಎಂಬುದರ ಮಾಹಿತಿಯನ್ನು ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ನೀಡಲಿದೆ ಎಂದು ಕರಡು ನಿಯಮಗಳಲ್ಲಿ ವಿವರಿಸಲಾಗಿದೆ.

ಡ್ರೋನ್‌ ಹಾರಾಟಕ್ಕೆ ಸಂಬಂಧಿಸಿದಂತೆ ದೂರು ನೀಡಲು ಸಹ ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು. ಉದ್ದಿಮೆ ಸ್ನೇಹಿ ಏಕಗವಾಕ್ಷಿ ಆನ್‌ಲೈನ್ ವ್ಯವಸ್ಥೆಯಾಗಿಇದನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಸರಳಗೊಂಡ ನಿಯಮಗಳು

ಡ್ರೋನ್ ಹಾರಾಟ ಸಂಬಂಧ 2020ರ ಜೂನ್‌ನಲ್ಲಿ ಕರಡು ನಿಯಮಗಳನ್ನು ಹೊರಡಿಸಿ, 2021ರ ಮಾರ್ಚ್‌ನಲ್ಲಿ ಅವನ್ನು ಅನುಷ್ಠಾನಕ್ಕೆ ತರಲಾಗಿತ್ತು. ಈಗ ಜಾರಿಯಲ್ಲಿರುವ ಡ್ರೋನ್‌ ನಿಯಮಗಳ ಪ್ರಕಾರ ದೇಶದಲ್ಲಿ ಬಳಕೆಯಾಗುವ ಪ್ರತಿಯೊಂದು ಡ್ರೋನ್‌ಗೂ ಪ್ರತ್ಯೇಕ ನೋಂದಣಿ ಸಂಖ್ಯೆ ಪಡೆಯಲೇಬೇಕಿದೆ. ಆದರೆ ನೂತನ ಕರಡು ನಿಯಮಗಳಲ್ಲಿ ಕಡ್ಡಾಯ ನೋಂದಣಿಸಂಖ್ಯೆ ನಿಯಮವನ್ನು ಕೈಬಿಡಲಾಗಿದೆ. ಈಗ ಜಾರಿಯಲ್ಲಿರುವ ಡ್ರೋನ್‌ ನಿಯಮಗಳ ಪ್ರಕಾರ ಹಾರಾಟಕ್ಕೆ ಸಂಬಂಧಿಸಿದಂತೆ 25 ರೀತಿಯ ನೋಂದಣಿ ಮತ್ತು ಅನುಮತಿ ಅರ್ಜಿಗಳನ್ನು ಪಡೆಯಬೇಕಿತ್ತು. ನೂತನ ಕರಡು ನಿಯಮಗಳಲ್ಲಿ ಈ ಅರ್ಜಿಗಳ ಸಂಖ್ಯೆಯನ್ನು ಕೇವಲ 6ಕ್ಕೆ ಇಳಿಸಲಾಗಿದೆ. ನೋಂದಣಿ ಮತ್ತು ಹಾರಾಟಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿದ್ದ ಕಠಿಣ ನಿಯಮಗಳನ್ನು ನೂತನ ಕರಡು ನಿಯಮಗಳಲ್ಲಿ ಸಡಿಲಿಸಿ, ಸರಳಗೊಳಿಸಲಾಗಿದೆ.

lಚಾಲ್ತಿ ನಿಯಮಗಳಲ್ಲಿ ಡ್ರೋನ್‌ಗಳ ಗಾತ್ರ ಮತ್ತು ತೂಕದ ಆಧಾರದಲ್ಲಿ ನೋಂದಣಿ ಶುಲ್ಕ ವಿಧಿಸಲಾಗುತ್ತಿತ್ತು. ನೂತನ ನಿಯಮಗಳಲ್ಲಿ ಎಲ್ಲಾ ಡ್ರೋನ್‌ಗಳಿಗೂ ಏಕಪ್ರಕಾರದ ನೋಂದಣಿ ನಿಯಮ ಮತ್ತು ನೋಂದಣಿ ಶುಲ್ಕ ವಿಧಿಸಲಾಗುತ್ತದೆ. ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ

lಡ್ರೋನ್ ಮಾಲೀಕತ್ವ ಬದಲಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈಗ ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲಾ ಡ್ರೋನ್‌ಗಳನ್ನು ಅಧಿಕೃತಗೊಳಿಸಲಾಗುತ್ತದೆ

lಚಾಲ್ತಿ ನಿಯಮಗಳ ಪ್ರಕಾರ ಡ್ರೋನ್‌ಗಳ ನಿರ್ವಹಣೆ ಮತ್ತು ಕಾರ್ಯಕ್ಷಮತೆ ಪ್ರಮಾಣಪತ್ರವನ್ನು ಪಡೆಯಬೇಕು. ನಿಗದಿತ ಅವಧಿಗೊಮ್ಮೆ ಈ ಪ್ರಮಾಣಪತ್ರವನ್ನು ಪಡೆಯುವುದು ಕಡ್ಡಾಯ. ಆದರೆ ನೂತನ ಕರಡು ನಿಯಮಗಳಲ್ಲಿ ಈ ಪ್ರಮಾಣ ಪತ್ರ ಪಡೆಯಬೇಕಿಲ್ಲ

lಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಡ್ರೋನ್‌ ಕಾರ್ಯನಿರ್ವಹಣೆ ರಹದಾರಿ ಪಡೆಯುವುದು ಕಡ್ಡಾಯವಾಗಿದೆ. ನೂತನ ಕರಡು ನಿಯಮಗಳಲ್ಲಿಈ ಪ್ರಕ್ರಿಯೆಯನ್ನೇ ರದ್ದುಪಡಿಸಲಾಗಿದೆ

lಡ್ರೋನ್ ಅನ್ನು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಮತ್ತು ಡ್ರೋನ್‌ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಮಾನ್ಯತೆ ಪಡೆಯಬೇಕು. ಕರಡು ನಿಯಮಗಳಲ್ಲಿ ಈ ಪ್ರಕ್ರಿಯೆಗಳನ್ನು ರದ್ದುಪಡಿಸಲಾಗಿದೆ

lಈಗ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ, ಡ್ರೋನ್‌ ಹಾರಾಟ ತರಬೇತುದಾರ ಮತ್ತು ವಿದ್ಯಾರ್ಥಿ ಡ್ರೋನ್‌ ಪೈಲಟ್ ಪರವಾನಗಿ ಪಡೆಯವುದು ಕಡ್ಡಾಯ. ನೂತನ ಕರಡು ನಿಯಮಗಳಲ್ಲಿ ಇದನ್ನು ರದ್ದುಪಡಿಸಲಾಗಿದೆ

lಡ್ರೋನ್‌ ಪೋರ್ಟ್‌ ಸ್ಥಾಪನೆಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯ ಎಂಬುದು ಈಗಿನ ನಿಯಮ. ಆದರೆ ನೂತನ ಕರಡು ನಿಯಮಗಳ ಪ್ರಕಾರ, ಡ್ರೋನ್‌ ಪೋರ್ಟ್ ಸ್ಥಾಪನೆಗೆ ಯಾವುದೇ ಮಾನ್ಯತೆ ಪಡೆಯುವ ಅವಶ್ಯಕತೆ ಇಲ್ಲ

ಡ್ರೋನ್: ಎಲ್ಲಿ ಹಾರಾಟ?

ಭಾರತದಲ್ಲಿ ಡ್ರೋನ್ ನಿರ್ವಹಣೆಗೆ ಸಂಬಂಧಿಸಿ ಚಟುವಟಿಕೆಗಳಿಗೆ ‘ಡಿಜಿಟಲ್ ಸ್ಕೈ’ ವೇದಿಕೆಯನ್ನು ಸರ್ಕಾರ ರಚಿಸಲಿದೆ. ಡ್ರೋನ್ ಕಾರ್ಯಾಚರಣೆಗಾಗಿ ವಾಯುಪ್ರದೇಶದ ನಕ್ಷೆಯನ್ನು ಒದಗಿಸುವ ಈ ವೇದಿಕೆಯು ಭಾರತದ ಇಡೀ ವಾಯುಪ್ರದೇಶವನ್ನು ಕೆಂಪು, ಹಳದಿ ಮತ್ತು ಹಸಿರು ವಲಯಗಳಾಗಿ ಬೇರ್ಪಡಿಸಿದೆ.

ಡ್ರೋನ್‌ಗಳನ್ನು ಎಲ್ಲಿ ಹಾರಿಸಬಹುದು, ಎಲ್ಲಿ ಹಾರಿಸಬಾರದು ಎಂಬುದನ್ನು ಕರಡು ನಿಯಮಗಳು ಸ್ಪಷ್ಟಪಡಿಸಿವೆ. ವಿಮಾನ ನಿಲ್ದಾಣದ ಪರಿಧಿಯನ್ನು 45 ಕಿ.ಮೀ.ನಿಂದ 12 ಕಿ.ಮೀ.ಗೆ ಇಳಿಸಲಾಗಿದೆ. ಪೈಲಟ್‌ಗಳು ತಮ್ಮ ಉದ್ದೇಶಿತ ಹಾರಾಟದ ಯೋಜನೆಯನ್ನು ರೂಪಿಸಲು ಮತ್ತು ವಲಯಗಳನ್ನು ಸುಲಭವಾಗಿ ಗುರುತಿಸಲು ಯಾಂತ್ರೀಕೃತ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್‌ (ಎಪಿಐ) ರೂಪಿಸಲಾಗುತ್ತದೆ.

ಕೆಂಪು ವಲಯ:ಭೂಮಿಯ ಮೇಲ್ಮೈ, ನೀರಿನ ಮೇಲ್ಮೈ ಅಥವಾ ಕೇಂದ್ರ ಸರ್ಕಾರದ ಅಧಿಸೂಚಿತ ಬಂದರು ಮಿತಿಗಳನ್ನು ಈ ವಲಯ ಸೂಚಿಸುತ್ತದೆ. ಈ ವ್ಯಾಪ್ತಿಯಲ್ಲಿ ಡ್ರೋನ್ ಕಾರ್ಯಾಚರಣೆಯನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ.

ಹಳದಿ ವಲಯ:ದೇಶದ ಜಲಗಡಿ, ಬಂದರು, ಸೂಚಿತ ಭೂಪ್ರದೇಶದ ಮೇಲ್ಮೈ ಮೇಲೆ ಡ್ರೋನ್‌ ಹಾರಾಟ ನಿರ್ಬಂಧವಿರುವ ಪ್ರದೇಶವನ್ನು ಹಳದಿ ವಲಯ ಎಂದು ಗುರುತಿಸಲಾಗಿದೆ. ಇಲ್ಲಿ ಡ್ರೋನ್ ಹಾರಾಟ ನಡೆಸಲು ಅನುಮತಿ ಪಡೆಯಬೇಕು.

ಹಸಿರು ವಲಯ:ಹಳದಿ ಮತ್ತು ಕೆಂಪು ವಲಯ ಎಂದು ಗುರುತಿಸದೇ ಇರುವ ಪ್ರದೇಶದಲ್ಲಿ, ನೆಲದ ಮೇಲ್ಮೈನಿಂದ 400 ಅಡಿ ಎತ್ತರದವರೆಗಿನ ಪ್ರದೇಶವನ್ನು ಹಸಿರು ವಲಯ ಎನ್ನಲಾಗಿದೆ. ಯಾವುದೇ ವಿಮಾನ ನಿಲ್ದಾಣದ ಪರಿಧಿಯಿಂದ 8-12 ಕಿ.ಮೀ. ಒಳಗೆ, ನೆಲದ ಮೇಲ್ಮೈನಿಂದ 200 ಅಡಿ ಎತ್ತರದವರೆಗಿನ ಪ್ರದೇಶವನ್ನು ಹಸಿರು ವಲಯ ಎಂದು ಗುರುತಿಸಲಾಗುತ್ತದೆ. ಇಲ್ಲಿ ಡ್ರೋನ್ ಹಾರಾಟ ನಡೆಸಲು ಯಾವುದೇ ಅನುಮತಿ ಪಡೆಯಬೇಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.