ಎಫ್‌ಎಟಿಎಫ್‌ನ ‘ಹಣ ಅಕ್ರಮ ವರ್ಗಾವಣೆ ತಡೆ ಅಥವಾ ಭಯೋತ್ಪಾದನೆಗೆ ಹಣಕಾಸು ನೆರವಿನ ವಿರುದ್ಧದ ಹೋರಾಟ (ಎಎಂಎಲ್/ಸಿಎಫ್‌ಟಿ)’ ಒಪ್ಪಂದಕ್ಕೆ ಪಾಕಿಸ್ತಾನವೂ ಸಹಿ ಮಾಡಿದೆ. ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಬದ್ಧತೆ ತೋರದಿದ್ದರೆ, ಎಫ್‌ಎಟಿಎಫ್‌ನ ಉಳಿದ ಸದಸ್ಯ ರಾಷ್ಟ್ರಗಳು ಪಾಕಿಸ್ತಾನದ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಲು ಅವಕಾಶವಿದೆ. ಇದಕ್ಕೂ ಮುನ್ನ ಪಾಕಿಸ್ತಾನವನ್ನು 2018ರ ಜೂನ್‌ನಲ್ಲಿ ಬೂದು ಪಟ್ಟಿಗೆ ಸೇರಿಸಿ, ಕೆಲವಾರು ಬದ್ಧತೆಗಳನ್ನು ಪ್ರದರ್ಶಿಸುವಂತೆ ನಿರ್ದೇಶನ ನೀಡಲಾಗಿತ್ತು. ಇದರ ಭಾಗವಾಗಿಯೇ ದಾವೂದ್ ಇಬ್ರಾಹಿಂ ಮತ್ತು ಇತರ ಕೆಲವು ಉಗ್ರರಿಗೆ ಸೇರಿದ ಮಾಹಿತಿಯನ್ನು ಪಾಕಿಸ್ತಾನವು ಬಹಿರಂಗಪಡಿಸಿದೆ.
27 ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಫ್‌ಟಿಎಎಫ್ ಪಾಕಿಸ್ತಾನಕ್ಕೆ ಸೂಚಿಸಿತ್ತು. 2019ರ ಅಕ್ಟೋಬರ್ ಅಂತ್ಯದವರೆಗೆ ಗಡುವು ನೀಡಲಾಗಿತ್ತು. ಈ ಗಡುವಿನ ಒಳಗೆ ಪಾಕಿಸ್ತಾನವು 14 ಅಂಶಗಳನ್ನಷ್ಟೇ ಪಾಕಿಸ್ತಾನವು ಪೂರೈಸಿತು. ಎಲ್ಲಾ ಕ್ರಮಗಳನ್ನು ಪೂರೈಸಲು ಮತ್ತೆ ಅವಕಾಶ ನೀಡಿ, 2020ರ ಫೆಬ್ರುವರಿವರೆಗೆ ಗಡುವು ವಿಸ್ತರಿಸಲಾಯಿತು. ಕೋವಿಡ್ ಪಿಡುಗಿನ ಕಾರಣದಿಂದ ಈ ಗಡುವನ್ನು 2020ರ ಜೂನ್ ಅಂತ್ಯದವರೆಗೆ ವಿಸ್ತರಿಸಲಾಯಿತು. ಅಲ್ಲದೆ, ಇವುಗಳನ್ನು ಪೂರೈಸದಿದ್ದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
2020ರ ಆಗಸ್ಟ್ ಬಂದರೂ ಪಾಕಿಸ್ತಾನವು ಈ ಎಲ್ಲಾ ಕ್ರಮಗಳನ್ನು ಪೂರೈಸಿಲ್ಲ. ಹೀಗಾಗಿ ಪಾಕಿಸ್ತಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರುವಂತೆ ಸದಸ್ಯ ರಾಷ್ಟ್ರಗಳಿಗೆ ಎಫ್‌ಟಿಎಎಫ್ ಸೂಚನೆ ನೀಡುವ ಸಾಧ್ಯತೆ ಇದೆ. 2020ರ ಫೆಬ್ರುವರಿಯಲ್ಲಿ ನಡೆಸಿದ್ದ ಸಭೆಯಲ್ಲೇ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಕೋವಿಡ್‌ನ ಕಾರಣದಿಂದ ನಂತರದ ಸಭೆ ನಡೆದಿಲ್ಲ. ಈಗ ಸಭೆ ನಡೆದರೆ ಸದಸ್ಯ ರಾಷ್ಟ್ರಗಳಿಗೆ ಇಂತಹದ್ದೊಂದು ನಿರ್ದೇಶನವನ್ನು ಎಫ್‌ಟಿಎಎಫ್ ನೀಡಬಹುದು. ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆಯೂ ಇದೆ. ಅಣ್ವಸ್ತ್ರ ಕಾರ್ಯಕ್ರಮದ ಕಾರಣ ಉತ್ತರ ಕೊರಿಯಾ ಮತ್ತು ಇರಾನ್ ಮೇಲೂ ಎಫ್‌ಟಿಎಎಫ್ ಇಂಥಹದ್ದೇ ಆರ್ಥಿಕ ದಿಗ್ಬಂಧನ ಹೇರಿದೆ. ಈ ಎರಡೂ ದೇಶಗಳು ಈಗಾಗಲೇ ಕಪ್ಪುಪಟ್ಟಿಯಲ್ಲಿವೆ. ಆದರೆ ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಹೀಗಾಗಿ ಪಾಕಿಸ್ತಾನದ ಮೇಲೆ ಹೇರುವ ದಿಗ್ಬಂಧನವು ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಸಂದೇಹ ವ್ಯಕ್ತವಾಗಿದೆ.
2018ರಲ್ಲಿ ಬೂದುಪಟ್ಟಿಗೆ ಸೇರಿಸಿದ ನಂತರ ಕೆಲವಾರು ಕ್ರಮಗಳನ್ನು ಪಾಕಿಸ್ತಾನವು ತೆಗೆದುಕೊಂಡಿತ್ತು. ಇದರ ಭಾಗವಾಗಿ, ಮುಂಬೈ ದಾಳಿಯ ಸಂಚುಕೋರ ಉಗ್ರ ಹಫೀಜ್ ಸಯೀದ್‌ನನ್ನು ಉಗ್ರರ ಪಟ್ಟಿಗೆ ಸೇರಿಸಿ, ಅವನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆದರೆ, ಆತನ ಮೇಲೆ ತೆಗೆದುಕೊಂಡ ಇತರ ಕ್ರಮಗಳ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈಗ ಕಪ್ಪುಪಟ್ಟಿಗೆ ಸೇರುವ ಅಪಾಯದಿಂದ ತಪ್ಪಿಸಿಕೊಳ್ಳಲು, ಕೆಲವಾರು ಉಗ್ರರಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನ ಸರ್ಕಾರವು ಬಹಿರಂಗಪಡಿಸಿದೆ. ಆದರೆ, ಭಯೋತ್ಪಾದನೆ ನಿಗ್ರಹಿಸುವಲ್ಲಿ ಇವು ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದೇ ಈಗ ಇರುವ ಪ್ರಶ್ನೆ ಎಂದು ತಜ್ಞರು ಹೇಳಿದ್ದಾರೆ.
ಮುಂಬೈಯಿಂದ ಕರಾಚಿಗೆ
ಮುಂಬೈ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್ ಇಬ್ರಾಹಿಂ ಕಸ್ಕರ್ ಅವರ ಮಗ ದಾವೂದ್ ಇಬ್ರಾಹಿಂ, ತಾನು ನೆಲೆಸಿದ್ದ ಡೊಂಗ್ರಿ ಪ್ರದೇಶದಲ್ಲಿ 19ನೇ ವಯಸ್ಸಿಗೆ ಗ್ಯಾಂಗ್‌ವಾರ್ ಶುರುಮಾಡಿದ್ದ. ಅಲ್ಲಿ ಅವನಿಗೆ ಹಾಜಿ ಮಸ್ತಾನ್ ಹಾಗೂ ಅವನ ತಂಡದ ಪರಿಚಯ ಆಯಿತು. 1980ರಲ್ಲಿ ದರೋಡೆ ಪ್ರಕರಣದಲ್ಲಿ ಮೊದಲ ಬಾರಿಗೆ ದಾವೂದ್ ಬಂಧನಕ್ಕೊಳಗಾದ. ಆ ಬಳಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಹೋದವು.
ಅಫ್ಘಾನಿಸ್ತಾನದಿಂದ ವಲಸೆ ಬಂದ ಹಾಜಿ ಮಸ್ತಾನ್ ಹಾಗೂ ಪಠಾಣ್ ಗುಂಪಿನ ನಡುವಿನ ಗ್ಯಾಂಗ್‌ವಾರ್‌ನಿಂದಾಗಿ ದಾವೂದ್ ಹೆಚ್ಚು ಶಕ್ತಿಶಾಲಿ ಮತ್ತು ಅಪಾಯಕಾರಿಯಾಗಿ ಬೆಳೆಯುತ್ತಾ ಹೋದ. ಗ್ಯಾಂಗ್‌ವಾರ್‌ನಲ್ಲಿ ದಾವೂದ್‌ನ ಒಬ್ಬ ಸಹೋದರನನ್ನು ಕೊಲ್ಲುವಲ್ಲಿ ಪಠಾಣ್ ಗ್ಯಾಂಗ್ ಯಶಸ್ವಿಯಾಯಿತು. ಇದಕ್ಕೆ ಪ್ರತೀಕಾರ ತೆಗೆದುಕೊಳ್ಳಲು ದಾವೂದ್ ನಿರ್ಧರಿಸಿದ. ಹೀಗಾಗಿ ಮುಂಬೈ ಬಹುದೊಡ್ಡ ಗ್ಯಾಂಗ್‌ವಾರ್‌ಗೆ ಸಾಕ್ಷಿಯಾಯಿತು. ಪಠಾಣ್ ಗುಂಪಿನ ಬಹುತೇಕರನ್ನು ದಾವೂದ್ ಮುಗಿಸಿದ. ಹಾಜಿ ಮಸ್ತಾನ್ ರಾಜಕೀಯಕ್ಕೆ ಪ್ರವೇಶ ಪಡೆದ ಕಾರಣ, ಆತನ ತಂಡವನ್ನು ದಾವೂದ್ ಮುನ್ನಡೆಸಿದ. ಭೂಗತಲೋಕದಲ್ಲಿ ಹಾಜಿಗಿಂತ ದೊಡ್ಡದಾಗಿ ಬೆಳೆದ.
‘ಡಿ ಕಂಪನಿ’: ದಾವೂದ್ 1970ರಲ್ಲಿ ‘ಡಿ ಕಂಪನಿ’ ಎಂಬ ಸಂಘಟಿತ ಅಪರಾಧ ಕೂಟವೊಂದನ್ನು ಕಟ್ಟಿ ಅದರ ನೇತೃತ್ವ ವಹಿಸಿದ. ಒಂದು ಅಂದಾಜಿನ ಪ್ರಕಾರ, 5 ಸಾವಿರ ಕ್ರಿಮಿನಲ್‌ಗಳು ಈ ಕಂಪನಿಗಾಗಿ ಕೆಲಸ ಮಾಡುತ್ತಿದ್ದಾರೆ. ಭಾರತ, ಪಾಕಿಸ್ತಾನ, ಯುಎಇಯಲ್ಲಿ ಅವರ ಕಾರ್ಯವ್ಯಾಪ್ತಿ ಇದೆ. ದಾವೂದ್ ತಂಡದ ಮುಖ್ಯ ಕಸುಬು ಮಾದಕವಸ್ತು ಕಳ್ಳಸಾಗಾಣಿಕೆ, ಸುಲಿಗೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳು. ಇವುಗಳಿಂದ ವರ್ಷಕ್ಕೆ 2 ಬಿಲಿಯನ್ ಯುಎಸ್‌ಡಿ (ಸುಮಾರು ₹15 ಸಾವಿರ ಕೋಟಿ) ಗಳಿಸುತ್ತಿದ್ದಾನೆ ಎನ್ನಲಾಗಿದೆ. ಸುಲಿಗೆ ಮತ್ತು ಒಪ್ಪಂದದ ಹತ್ಯೆಗಳಿಗೆ ಕಂಪನಿ ಕುಖ್ಯಾತವಾಗಿದೆ. ಹಡಗು ಸಿಬ್ಬಂದಿ ಜತೆ ಸಖ್ಯ ಸಾಧಿಸುವ ಡಿ ಕಂಪನಿ ಸದಸ್ಯರು ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಸಾಗಿಸಿ ದಡ್ಡು ಮಾಡುತ್ತಾರೆ.
ಬೆಟ್ಟಿಂಗ್: ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದ ದಾವೂದ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ. ಡಿ ಕಂಪನಿ ಅತಿದೊಡ್ಡ ಅಂತರರಾಷ್ಟ್ರೀಯ ಬೆಟ್ಟಿಂಗ್ ಸಿಂಡಿಕೇಟ್ ನಡೆಸುತ್ತಿದೆ ಎಂದು ಅಮೆರಿಕದ ಖಜಾನೆ ಇಲಾಖೆಯ ವರದಿ ಅಭಿಪ್ರಾಯಪಟ್ಟಿದೆ. ದುಬೈ ಮೂಲದ ಹವಾಲಾ ವ್ಯವಹಾರವೇ ಕ್ರಿಕೆಟ್ ಬೆಟ್ಟಿಂಗ್‌ನ ಶಕ್ತಿ. ಬೆಟ್ಟಿಂಗ್ ವ್ಯವಹಾರ ಒಂದು ಕಾಲದಲ್ಲಿ ‘ಡಿ’ ಕಂಪನಿಯ ದೊಡ್ಡ ವ್ಯವಹಾರಗಳಲ್ಲಿ ಒಂದಾಗಿತ್ತು. ದುಬೈ ಸೇರಿ ಹಲವು ಕಡೆ ಕ್ರಿಕೆಟ್ ಪಂದ್ಯಗಳನ್ನು ದಾವೂದ್ ಖುದ್ದಾಗಿ ವೀಕ್ಷಿಸಿದ್ದ.
ಬಾಲಿವುಡ್: ಬಾಲಿವುಡ್ ಜತೆ ನಿಕಟ ನಂಟು ಹೊಂದಿದ್ದ ದಾವೂದ್, ಬಹುತೇಕ ಕಲಾವಿದರ ಜತೆ ಸಂಪರ್ಕ ಸಾಧಿಸಿದ್ದ. ದಾವೂದ್ ಆಯೋಜಿಸಿದ್ದ ಪಾರ್ಟಿಗಳಿಗೆ ಎಲ್ಲರೂ ಹಾಜರಾಗುತ್ತಿದ್ದರು. 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದವರೆಗೂ ದಾವೂದ್ ಹೇಳಿದ್ದಕ್ಕೆ ಇಲ್ಲ ಎನ್ನುವ ಧೈರ್ಯ ಯಾರಿಗೂ ಇರಲಿಲ್ಲ. ಬೇರೆಯವರ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡಿ, ಲಾಭದ ಪಾಲು ಪಡೆದುಕೊಳ್ಳುತ್ತಿದ್ದ. ಹಲವು ನಟಿಯರ ಜತೆ ಡೇಟಿಂಗ್ ನಡೆಸಿದ್ದಾನೆ ಎಂಬ ಮಾತೂ ಇದೆ. ನಿರ್ಮಾಪಕರ ಸುಲಿಗೆ, ನಿರ್ದೇಶಕರ ಹತ್ಯೆ ಮತ್ತು ಚಲನಚಿತ್ರಗಳನ್ನು ನಕಲು (ಪೈರಸಿ) ಮಾಡುವ ದಂಧೆಯನ್ನೂ ಕಂಪನಿ ನಡೆಸುತ್ತಿತ್ತು.
ಗ್ಯಾಂಗ್‌ಸ್ಟರ್‌ನಿಂದ ಟೆರರಿಸ್ಟ್‌ವರೆಗೆ...
80ರ ದಶಕದಲ್ಲಿ ದಾವೂದ್ ತಂಡದಲ್ಲಿ ಹಿಂದೂ–ಮುಸ್ಲಿಮರು ಸಮಾನ ಸಂಖ್ಯೆಯಲ್ಲಿದ್ದರು. ದೇಶದಲ್ಲಿ ಹಿಂದೂ–ಮುಸ್ಲಿಂ ಘರ್ಷಣೆಗಳು ಹೆಚ್ಚಾಗತೊಡಗಿದ್ದರಿಂದ ದಾವೂದ್ ತಂಡ ಮೂಲಭೂತವಾದಿ ಗ್ಯಾಂಗ್ ಆಗಿ ಪರಿವರ್ತನೆಯಾಯಿತು. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಲಷ್ಕರ್, ಅಲ್ ಕೈದಾ ರೀತಿಯ ಭಯೋತ್ಪಾದಕ ಗುಂಪುಗಳೊಂದಿಗೆ ಸಂಬಂಧ ಬೆಳೆಸಿತು.
ಕೇವಲ ಗ್ಯಾಂಗ್‌ಸ್ಟರ್ ಆಗಿದ್ದ ದಾವೂದ್ ಭಯೋತ್ಪಾದಕನಾಗಿ ಬದಲಾದ. 1992ರ ಡಿಸೆಂಬರ್‌ನಲ್ಲಿ ಬಾಬರಿ ಮಸೀದಿ ಧ್ವಂಸ ಹಾಗೂ ಆ ಬಳಿಕ ನಡೆದ ಕೋಮುಗಲಭೆಗಳಲ್ಲಿ ನೂರಾರು ಮುಸ್ಲಿಮರು ಮೃತಪಟ್ಟರು. ಇದಕ್ಕೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಪಾಕಿಸ್ತಾನದ ಐಎಸ್‌ಐನಿಂದ ದಾವೂದ್ ಮೇಲೆ ಒತ್ತಡ ಶುರುವಾಯಿತು. ಅಕ್ರಮ ಸ್ಫೋಟಕಗಳು ಕೈಸೇರಿದವು. ಡಿ ಕಂಪನಿಯ ಹಣಕಾಸು ನೆರವಿನೊಂದಿಗೆ ಮಾರ್ಚ್ 12, 1993ರಲ್ಲಿ ಮುಂಬೈನಲ್ಲಿ ಸರಣಿ ಸ್ಫೋಟ ನಡೆಯಿತು. 257 ಜನರು ಮೃತಪಟ್ಟು, 700ಕ್ಕೂ ಅಧಿಕ ಮಂದಿ ಗಾಯಗೊಂಡರು.
ಈ ಘಟನೆ ಬಳಿಕ ಹಿಂದೂ ಸದಸ್ಯರಲ್ಲಿ ಹಲವರು ತಂಡದಿಂದ ಹೊರಬಂದರು. ಛೋಟಾ ರಾಜನ್ ಹೊಸ ತಂಡ ಕಟ್ಟಿಕೊಂಡ. ಪಾಕಿಸ್ತಾನಕ್ಕೆ ಪರಾರಿಯಾದ ದಾವೂದ್ ಎಂದೂ ಭಾರತಕ್ಕೆ ಬರಲಿಲ್ಲ. ಅಂದಿನಿಂದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಹಣೆಪಟ್ಟಿ ಕಟ್ಟಿಕೊಂಡು ಕರಾಚಿಯಲ್ಲಿ ನೆಲೆಸಿದ್ದಾನೆ.
ಮಿತ್ರರು.. ಶತ್ರುಗಳು..
ಡಿ ಕಂಪನಿ ಜತೆ ಛೋಟಾ ಶಕೀಲ್, ಟೈಗರ್ ಮೆಮನ್, ಯಾಕೂಬ್ ಮೆಮನ್ ಹಾಗೂ ಅಬು ಸಲೇಂ ಗುರುತಿಸಿಕೊಂಡಿದ್ದು ಮುಂಬೈ ಸರಣಿ ಸ್ಫೋಟದ ಆಪಾದನೆ ಹೊತ್ತಿದ್ದಾರೆ. ಇಡೀ ಮುಂಬೈ ಪೊಲೀಸ್ ಇವರ ಬೆನ್ನು ಬಿದ್ದಿತ್ತು. ಜತೆಗೆ ಛೋಟಾ ರಾಜನ್, ಅರುಣ್ ಗೌಳಿ ಗ್ಯಾಂಗ್ ಡಿ ಕಂಪನಿಯ ವಿರೋಧಿಗಳ ಪಟ್ಟಿಯಲ್ಲಿದ್ದಾರೆ.
ಪಾಕಿಸ್ತಾನಕ್ಕೆ ನೀಡಿದ್ದ ನಿರ್ದೇಶನಗಳು
1. ಎಎಂಎಲ್/ಸಿಎಫ್‌ಟಿ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಪರಿಹಾರಾತ್ಮಕ ಮತ್ತು ಶಿಕ್ಷಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು
2. ಕಾನೂನುಬಾಹಿರವಾಗಿ ಹಣ ಸಾಗಣೆ ಮತ್ತು ಹಣಕ್ಕೆ ಪರ್ಯಾಯವಾಗಿ ಇತರ ವಸ್ತುಗಳ ಸಾಗಣೆ ಪ್ರಕರಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಾಧಿಕಾರವನ್ನು ಗುರುತಿಸಬೇಕು. ಆ ಪ್ರಾಧಿಕಾರಕ್ಕೆ ಇತರ ಏಜೆನ್ಸಿಗಳು ಪೂರ್ಣ ಸಹಕಾರ ನೀಡುವಂತಿರಬೇಕು
3. ಗಡಿಯಾಚೆಯಿಂದ ಹಣ ಸಾಗಣೆಯನ್ನು ತಡೆಯಲು ಎಲ್ಲಾ ಬಂದರುಗಳಲ್ಲಿ, ಗಡಿಗಳಲ್ಲಿ ಪರಿಣಾಮಕಾರಿಯಾದ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿ. ಕಠಿಣ ನಿರ್ಬಂಧಗಳನ್ನು ಹೇರಿ
4. ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ಚಟುವಟಿಕೆಗಳನ್ನು ಕಾನೂನು ಜಾರಿ ಏಜೆನ್ಸಿಗಳು ಗುರುತಿಸಿರುವುದಕ್ಕೆ ಮತ್ತು ತನಿಖೆ ನಡೆಸುತ್ತಿರುವುದಕ್ಕೆ ಪುರಾವೆ ಒದಗಿಸಿ. ಉಗ್ರರ ಪಟ್ಟಿಯಲ್ಲಿ ಇರುವ ವ್ಯಕ್ತಿಗಳು, ಸಂಸ್ಥೆಗಳು, ಗುಂಪುಗಳ ವಿರುದ್ಧ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡಬೇಕು
5. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಗಳಲ್ಲಿ ತೆಗೆದುಕೊಂಡ ಕ್ರಮದಿಂದ ಆಗಿರುವ ಪರಿಣಾಮಗಳ ಬಗ್ಗೆ ಪುರಾವೆ ನೀಡಿ
6. ಉಗ್ರರ ಪಟ್ಟಿಯಲ್ಲಿರುವ 1,267 ಮತ್ತು ಜಾಗತಿಕ ಉಗ್ರರ ಪಟ್ಟಿಯಲ್ಲಿರುವ 1,373 ಉಗ್ರರ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಬೇಕು. ಈ ಉಗ್ರರಿಗೆ ಸಂಬಂಧಿಸಿದ ಮತ್ತು ಇವರ ಪರವಾಗಿ ಕೆಲಸ ಮಾಡುತ್ತಿರುವವರು ಹಣ ಸಂಗ್ರಹಿಸದಂತೆ ತಡೆಯಬೇಕು. ಅವರ ಆಸ್ತಿಗಳನ್ನು ಪತ್ತೆ ಮಾಡಿ, ಮುಟ್ಟುಗೋಲು ಹಾಕಿಕೊಳ್ಳಬೇಕು. ಬ್ಯಾಂಕಿಂಗ್ ಸೇರಿದಂತೆ ಯಾವುದೇ ರೀತಿಯ ಆರ್ಥಿಕ ಸೇವೆ ದೊರೆಯದಂತೆ ತಡೆಯಬೇಕು
7. ಉಗ್ರರ ಪಟ್ಟಿಯಲ್ಲಿ ಇರುವ ಉಗ್ರರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಕ್ಕೆ ಮತ್ತು ಆ ಸ್ವತ್ತುಗಳನ್ನು ಅವರು ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಮಾಡಬೇಕು
8. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಪ್ರಕರಣಗಳ ತನಿಖೆಯಲ್ಲಿ ಮತ್ತು ಶಿಕ್ಷೆ ಜಾರಿಯಲ್ಲಿ ಆಗುವ ಲೋಪಗಳ ವಿರುದ್ಧ ಕ್ರಮ ತೆಗದುಕೊಳ್ಳಬೇಕು
‘ಮೋಸ್ಟ್ ವಾಂಟೆಡ್’ ಉಗ್ರರಿಗೆ ಅಂಕುಶ
ಜಮಾತ್ ಉದ್ ದವಾ ಮತ್ತು ಲಷ್ಕರ್ ಎ ತಯಬಾ ಉಗ್ರ ಸಂಘಟನೆಗೆ ಸೇರಿದ ಹಫೀಜ್ ಅಬ್ದುಲ್ ಸಲಾಮ್ ಬಿನ್ ಮೊಹಮ್ಮದ್, ಮೊಹಮ್ಮದ್ ಅಶ್ರಫ್, ಜಾಫರ್ ಇಕ್ಬಾಲ್, ಅಬ್ದುಲ್ ಸಲಾಂ ಭುಟ್ಟಾವಿ, ಹಾಜಿ ಎಂ ಅಶ್ರಫ್, ಯಾಹ್ಯಾ ಮುಜಾಹಿದ್, ಜಾಫರ್ ಇಕ್ಬಾಲ್, ಮುಲ್ಲಾ ಫಜಲುಲ್ಲಾ ಅಲಿಯಾಸ್ ಮುಲ್ಲಾ ರೇಡಿಯೊ, ಅಬ್ದುಲ್ ಮುರಾದ್ (ಇಂಟರ್‌ಪೋಲ್‌ಗೆ ಬೇಕಾದ ಉಗ್ರ), ನೂರ್ ವಾಲಿ ಮಸೂದ್, ಉಜ್ಬೆಕಿಸ್ತಾನ ವಿಮೋಚನಾ ಚಳವಳಿಯ ಫಜಲ್ ರಹೀಮ್ ಶಾ, ತಾಲಿಬಾನ್ ಮುಖಂಡರಾದ ಜಲಾಲುದ್ದೀನ್ ಹಕ್ಕಾನಿ, ಖಲೀಲ್ ಅಹಮ್ಮದ್ ಹಕ್ಕಾನಿ, ಯಾಹ್ಯಾ ಹಕ್ಕಾನಿ ಮುಂತಾದವರು ನಿರ್ಬಂಧಿತರ ಪಟ್ಟಿಯಲ್ಲಿದ್ದಾರೆ.
ಮಸೂದ್ ಅಜರ್
ಮಸೂದ್ ಅಜರ್ ಅಲಿಯಾಸ್ ಮೊಹಮ್ಮದ್ ಮಸೂದ್ ಅಜರ್ ಅಲ್ವಿಯು ಜೈಷ್–ಎ– ಮೊಹಮ್ಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ ಮುಖ್ಯಸ್ಥ. ಸಂಸತ್ ದಾಳಿ, ಮುಂಬೈ ದಾಳಿ ಮತ್ತು ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರ. ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ ಸೇರಿದಂತೆ ಐದು ಭಯೋತ್ಪಾದನಾ ಕೃತ್ಯಗಳಲ್ಲಿ ಭಾರತಕ್ಕೆ ಬೇಕಾಗಿರುವ ‘ಮೋಸ್ಟ್ ವಾಟೆಂಡ್’ ಉಗ್ರ. 2019 ಮೇ 1ರಂದು ವಿಶ್ವಸಂಸ್ಥೆಯು ಆತನನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸಿದೆ.
1994ರಲ್ಲಿ ಕಾಶ್ಮೀರದ ಅನಂತನಾಗ್‌ನಲ್ಲಿ ಅಜರ್‌ನನ್ನು ಬಂಧಿಸಲಾಗಿತ್ತು. 1999 ಡಿಸೆಂಬರ್‌ನಲ್ಲಿ ಭಾರತದ ವಿಮಾನ ಅಪಹರಿಸಿದ ಉಗ್ರರು, ಪ್ರಯಾಣಿಕರನ್ನು ಒತ್ತೆ ಇರಿಸಿಕೊಂಡು, ಅಜರ್‌ನನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಒತ್ತಾಯಕ್ಕೆ ಮಣಿದ ಸರ್ಕಾರ ಅಜರ್‌ನನ್ನು ಬಿಡುಗಡೆ ಮಾಡಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.
ಹಫೀಜ್ ಸಯೀದ್
ಹಫೀಜ್ ಮೊಹಮ್ಮದ್ ಸಯೀದ್, ಲಷ್ಕರ್–ಎ– ತಯಬಾ (ಎಲ್ಇಟಿ) ಮತ್ತು ಜಮಾತ್ ಉದ್ ದವಾ (ಜೆಯುಡಿ) ನಿಷೇಧಿತ ಸಂಘಟನೆಗಳ ಸಂಸ್ಥಾಪಕ. 2008ರ ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬ. ವಿಶ್ವಸಂಸ್ಥೆ ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ಒದಗಿಸುತ್ತಿರುವ ಆರೋಪದಲ್ಲಿ ಕಳೆದ ವರ್ಷ ಜುಲೈ 17ರಂದು 69 ವರ್ಷದ ಹಫೀಜ್‌ನನ್ನು ಬಂಧಿಸಲಾಗಿತ್ತು. ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಇದೇ ವರ್ಷ ಫೆಬ್ರುವರಿಯಲ್ಲಿ ಆತನಿಗೆ 11 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಬಳಿಕ ಆತನನ್ನು ಲಾಹೋರ್‌ನ ಕೋಟ್ ಲಖಪತ್ ಜೈಲಿನಲ್ಲಿರಿಸಲಾಗಿದೆ. 20 ಭಯೋತ್ಪಾದನಾ ಕೃತ್ಯಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ.
ಝಕಿ ಉರ್ ರೆಹಮಾನ್ ಲಖ್ವಿ
ಝಕಿ ಉರ್ ರೆಹಮಾನ್ ಲಖ್ವಿಯು ಲಷ್ಕರ್–ಎ– ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯ ಎರಡನೇ ಮುಖ್ಯಸ್ಥ. 26/11 ಮುಂಬೈ ದಾಳಿಯ ಸಂಚಿನ ಮೇಲೆ ಉಗ್ರರ ಪಟ್ಟಿಗೆ ಸೇರಿಸಲಾಗಿದೆ.
ಆಧಾರ: ಎಫ್‌ಟಿಎಎಫ್, ಗಾರ್ಡಿಯನ್, ಬಿಬಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.