ADVERTISEMENT

Explainer: ಆಳ-ಅಗಲ; ಕಾಂಗ್ರೆಸ್‌ ಒಳಜಗಳದ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 19:31 IST
Last Updated 3 ಮಾರ್ಚ್ 2021, 19:31 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಸೋತು ಸೊರಗಿರುವ ಕಾಂಗ್ರೆಸ್‌ ಪಕ್ಷವು ಹಿರಿಯ ಮುಖಂಡರ ಒಳಜಗಳದಿಂದಾಗಿ ಇನ್ನಷ್ಟು ದುರ್ಬಲವಾಗಿದೆ. ಸೆಡ್ಡು ಹೊಡೆದು ನಿಂತಿರುವ ಹಲವು ಮುಖಂಡರನ್ನು ನಿಯಂತ್ರಿಸಲು ನಾಯಕತ್ವಕ್ಕೆ ಸಾಧ್ಯವಾಗುತ್ತಿಲ್ಲ. ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭದಲ್ಲಿಯೂ ಪಕ್ಷದಲ್ಲಿ ಒಗ್ಗಟ್ಟು ಕಾಣಿಸುತ್ತಿಲ್ಲ. ಈ ಕಿತ್ತಾಟವು ಫಲಿತಾಂಶದ ಮೇಲೆಪರಿಣಾಮ ಬೀರುವ ಸಾಧ್ಯತೆಯೂ ಇದೆ

‘ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ’ ಎಂಬ ಮಾತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಈಗ ಅದೇ ಸ್ಥಿತಿ ಎದುರಾಗಿದೆ. 2014ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ಪಕ್ಷವು ಒಂದು ಶತಮಾನಕ್ಕೂ ಹೆಚ್ಚಿನ ತನ್ನ ಇತಿಹಾಸದಲ್ಲೇ ಕುಸಿದಿರದಷ್ಟು ಆಳಕ್ಕೆ ಕುಸಿದಿದೆ.

2014ರ ಲೋಕಸಭಾ ಚುನಾವಣೆಯ ಸೋಲು ಒಂದೆಡೆಯಾದರೆ, ಆ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲೂ ಪಕ್ಷ ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳ
ಬೇಕಾಯಿತು. ಗೆದ್ದಿದ್ದ ರಾಜ್ಯಗಳೂ ‘ಪಕ್ಷಾಂತರ’ ರಾಜಕಾರಣದಿಂದಾಗಿ ಕೈಜಾರಿದವು. ಫೆಬ್ರುವರಿ ತಿಂಗಳಲ್ಲಿ ಪುದುಚೇರಿ ಸರ್ಕಾರ ಪತನವಾದ ನಂತರ, ದಕ್ಷಿಣ ಭಾರತದ ಒಂದೇ ಒಂದು ರಾಜ್ಯದಲ್ಲೂ ಕಾಂಗ್ರೆಸ್‌ ಸರ್ಕಾರ ಇಲ್ಲದಂತಾಗಿದೆ. ಈಗ ಮಿತ್ರಪಕ್ಷಗಳೂ ಕಾಂಗ್ರೆಸ್‌ನಿಂದ ವಿಮುಖವಾಗುವಂಥ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಭರವಸೆಯ ಹಲವು ನಾಯಕರು ಕಾಂಗ್ರೆಸ್‌ತೊರೆದು ಆಗಲೇ ಬಿಜೆಪಿ ಸೇರಿದ್ದಾರೆ. ಜತೆಗೆ, ‌ಪಕ್ಷದ ಹಲವು ಹಿರಿಯ ಮುಖಂಡರು ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ಕಾಂಗ್ರೆಸ್‌ನ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದೆ.

‘ಜಿ–23’ ಹುಟ್ಟು

ಪಕ್ಷದ ನಾಯಕತ್ವ ಬದಲಾಗಬೇಕು, ರಚನಾತ್ಮಕವಾಗಿಯೂ ಪಕ್ಷದಲ್ಲಿ ಕೆಲವು ಬದಲಾವಣೆಗಳು ಆಗಬೇಕು ಎಂದು ಒತ್ತಾಯಿಸಿ 2020ರ ಆಗಸ್ಟ್‌ ತಿಂಗಳಲ್ಲಿ ಪಕ್ಷದ 23 ನಾಯಕರ ಗುಂಪು (ಜಿ–23) ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯಿತು. ನಾಯಕತ್ವ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳಲು ಇದು ಕಾರಣವಾಯಿತು ಎನ್ನಲಾಗಿದೆ.

‘ಪತ್ರ ಪ್ರಸಂಗ’ ನಡೆದ ಕೆಲವೇ ದಿನಗಳಲ್ಲಿ ವಿವಿಧ ಸಮಿತಿಗಳ ಪುನಾರಚನೆ ಮಾಡಿದ ಸೋನಿಯಾ, ಕೆಲವು ಹಿರಿಯ ನಾಯಕರನ್ನು ಪಕ್ಷದ ಹೊಣೆಯಿಂದ ದೂರವಿಟ್ಟು, ಅವರಿಗೆ ಸಂದೇಶ ರವಾನಿಸಿದರು. ಅದಾಗಿ ಸ್ವಲ್ಪ ಕಾಲ ಎಲ್ಲವೂ ಶಾಂತವಾದಂತೆ ಕಂಡುಬಂದರೂ ಐದು ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಾಯಕತ್ವ ಬಿಕ್ಕಟ್ಟಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಜಿ–23 ನಾಯಕರು ಜಮ್ಮುವಿನಲ್ಲಿ ಸಭೆಸೇರಿ ‘ಕಾಂಗ್ರೆಸ್‌ ದುರ್ಬಲವಾಗಿದೆ’ ಎಂದಿದ್ದಾರೆ.

‘ಜಿ–23 ನಾಯಕರಿಗೆ ರಾಹುಲ್‌, ಪ್ರಿಯಾಂಕಾ, ಅಧಿರ್‌ರಂಜನ್‌ ಚೌಧರಿ ಮುಂತಾದ ನಾಯಕರು ಪ್ರತ್ಯುತ್ತರ ನೀಡಲು ಆರಂಭಿಸಿದ್ದಾರೆ. ಸಮಸ್ಯೆ ಬಗೆಹರಿಯುವ ಲಕ್ಷಣ ಇಲ್ಲ ಎಂಬುದನ್ನು ಈ ಬೆಳವಣಿಗೆಗಳು ತೋರಿಸುತ್ತವೆ. ಇದರ ಪರಿಣಾಮ ಮುಂಬರುವ ಚುನಾವಣೆಗಳ ಮೇಲೆ ಆಗಲಿದೆ’ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಜಮ್ಮು ರ್‍ಯಾಲಿಯ ಏಟು, ತಿರುಗೇಟು

ರಾಜ್ಯಸಭೆಯಿಂದ ನಿವೃತ್ತರಾಗಿರುವ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಭೇಟಿ ಮಾಡಲು ಕಾಂಗ್ರೆಸ್‌ನ‌ ಕೆಲವು ಮುಖಂಡರು ಫೆಬ್ರುವರಿ 27ರ ಶನಿವಾರ ಜಮ್ಮುವಿನಲ್ಲಿ ರ್‍ಯಾಲಿ ನಡೆಸಿದ್ದರು. 2020ರ ಆಗಸ್ಟ್‌ನಲ್ಲಿ ಕಾಂಗ್ರೆಸ್‌ನ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿದ್ದ 23 ನಾಯಕರಲ್ಲಿ, 8 ಮಂದಿ ಈ ರ್‍ಯಾಲಿಯಲ್ಲಿ ಹಾಜರಿದ್ದರು. ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಭೂಪಿಂದರ್ ಸಿಂಗ್ ಹೂಡಾ, ಮನೀಶ್ ತಿವಾರಿ, ರಾಜ್ ಬಬ್ಬರ್ ಮತ್ತು ವಿವೇಕ್ ತಂಖಾ ಅವರು ಈ ರ್‍ಯಾಲಿಯಲ್ಲಿ ಭಾಗಿಯಾಗಿದ್ದರು.

ರ್‍ಯಾಲಿಯಲ್ಲಿ ಮಾತನಾಡಿದ್ದ ಮುಖಂಡರು, ಆಜಾದ್ ಅವರನ್ನು ರಾಜ್ಯಸಭೆಯ ಸದಸ್ಯರಾಗಿ ಮುಂದುವರಿಸಬೇಕಿತ್ತು. ಆದರೆ, ಅವರನ್ನು ಪಕ್ಷವು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಭೆಯಲ್ಲಿ ಆನಂದ್ ಶರ್ಮಾ ಸಹ ಮಾತನಾಡಿದ್ದರು. ನಾವೆಲ್ಲರೂ ಕಾಂಗ್ರೆಸ್‌ ಪಕ್ಷದ ಬಾಡಿಗೆದಾರರಲ್ಲ. ಬದಲಿಗೆ ಕಾಂಗ್ರೆಸ್‌ನ ಸಹ-ಮಾಲೀಕರು. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಪಕ್ಷವು ಕೋಮುವಾದಿ ಪಕ್ಷಗಳ ಜತೆ ಮೈತ್ರಿಮಾಡಿಕೊಂಡಿದೆ. ಇದು ಪಕ್ಷದ ಸಿದ್ಧಾಂತ, ಗಾಂಧಿವಾದ ಮತ್ತು ನೆಹರೂ ಧ್ಯೇಯಗಳಿಗೆ ವಿರುದ್ಧವಾದುದು. ಈ ಮೈತ್ರಿಗೂ ಮುನ್ನ ಪಕ್ಷದ ಕಾರ್ಯಕಾರಿಣಿಯಲ್ಲಿ ಒಪ್ಪಿಗೆ ಪಡೆಯಬೇಕಿತ್ತು ಎಂದ್ದಿದ್ದರು.

ಕಾಂಗ್ರೆಸ್‌ನ ಹಲವು ನಾಯಕರು ಈ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆಯಾ ರಾಜ್ಯಗಳಲ್ಲಿ ಮಾಡಿಕೊಂಡಿರುವ ಮೈತ್ರಿ ಅಲ್ಲಿಗೆ ಸೀಮಿತವಾದುದು. ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಈ ಪಕ್ಷಗಳ ಸಿದ್ಧಾಂತಗಳ ನಡುವೆ ಅಂತರವಿದೆ. ಈ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿರುವ ಕಾರಣಕ್ಕೆ, ಅವರ ಸಿದ್ಧಾಂತಗಳನ್ನು ಶೇ 100ರಷ್ಟೂ ಒಪ್ಪಿಕೊಂಡಿದ್ದೇವೆ ಎಂದರ್ಥವಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ ನೀಡಿದ್ದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್ ರಂಜನ್ ಚೌಧರಿ ಸಹ ಇದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಸಹ ಇದೆ. ಎಡಪಕ್ಷಗಳ ನಿರ್ಧಾರವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಇದು ಕೋಮುವಾದವಲ್ಲ. ಪಕ್ಷದ ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಾ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ತಾಕೀತು ಮಾಡಿದ್ದರು.

ನಬಿಗೆ ಪ್ರಧಾನಿ ಹೊಗಳಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಬಗ್ಗೆ ಇತ್ತೀಚೆಗೆ ರಾಜ್ಯಸಭೆ ಕಲಾಪದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆಜಾದ್ ನಿವೃತ್ತಿಯ ದಿನ ಮಾತನಾಡಿದ ಅವರು, ‘ಪ್ರತಿಪಕ್ಷ ನಾಯಕ ಗುಲಾಂ ನಬಿ ಜೀ ಅವರ ಸ್ಥಾನವನ್ನು ತುಂಬುವುದು ಕಷ್ಟ. ಅವರು ಪಕ್ಷಕ್ಕಿಂತ ಮಿಗಿಲಾಗಿ ಇಡೀ ದೇಶದ ಬಗ್ಗೆ ಕಾಳಜಿ ಉಳ್ಳವರಾಗಿದ್ದರು’ ಎಂದು ಹೇಳುತ್ತಾ ಮೋದಿ ಕೆಲಕಾಲ ಗದ್ಗದಿತರಾಗಿದ್ದರು. ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಸಿಲುಕಿಕೊಂಡಿದ್ದ ಗುಜರಾತಿ ನಾಗರಿಕರ ರಕ್ಷಣೆಗೆ ಆಜಾದ್ ನೆರವಾಗಿದ್ದ ಕ್ಷಣವನ್ನು ಸ್ಮರಿಸಿದ್ದರು.

ಪ್ರಧಾನಿಗೆ ನಬಿ ಶ್ಲಾಘನೆ

ಇದಾದ ಕೆಲವೇ ದಿನಗಳಲ್ಲಿ ಪ್ರಧಾನಿಯನ್ನು ಗುಲಾಂ ನಬಿ ಹೊಗಳಿದರು. ಬೆಳೆದು ಬಂದ ಹಾದಿಯನ್ನು ಮರೆಯದ ಪ್ರಧಾನಿಯ ಮುಕ್ತ ಮಾತುಗಳನ್ನು ಪ್ರಶಂಸಿಸಿದರು. ‘ಹಳ್ಳಿಯಿಂದ ಬಂದಿದ್ದಾಗಿ ಮೋದಿ ಹೇಳಿಕೊಂಡಿದ್ದಾರೆ. ಚಹಾ ಮಾರಾಟ ಮಾಡುತ್ತಿದ್ದು
ದಾಗಿಯೂ ಹೇಳಿದ್ದಾರೆ. ನನಗೆ ಮೋದಿ ಅವರ ಜತೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ಅವರ ಮುಕ್ತ ಮಾತು ಇಷ್ಟವಾಯಿತು’ಎಂದು ಹೇಳಿದ್ದರು.

ಕಾಂಗ್ರೆಸ್ ಆಕ್ರೋಶ

ಮೋದಿ ಅವರನ್ನು ಹಾಡಿಹೊಗಳಿದ ನಬಿ ವಿರುದ್ಧ ಕಾಂಗ್ರೆಸ್ ನಿರೀಕ್ಷೆಯಂತೆಯೇ ಆಕ್ರೋಶ ವ್ಯಕ್ತಪಡಿಸಿತು. ಮೋದಿಯನ್ನು ಹೊಗಳುತ್ತಾ ಸಮಯ ವ್ಯರ್ಥಮಾಡು
ವುದನ್ನು ನಿಲ್ಲಿಸಿ ಎಂದು ಪಕ್ಷ ಸೂಚನೆ ನೀಡಿತು.ಅತ್ತ, ಜಮ್ಮು-ಕಾಶ್ಮೀರ ಕಾಂಗ್ರೆಸ್‌ ಘಟಕವು ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಆಗ್ರಹಿಸಿದ ವಿದ್ಯಮಾನವೂ ನಡೆಯಿತು. ಕಾರ್ಯಕರ್ತರು ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿದರು.

ಬಿಜೆಪಿ ಟೀಕೆ

ನಬಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ನಡೆಗೂ ಬಿಜೆಪಿ ಟೀಕೆ ಮಾಡಿದೆ. ‘ಪ್ರಧಾನಿ ಮೋದಿ ಅವರನ್ನು ದ್ವೇಷಿಸುವುದು ಮಾತ್ರ ಕಾಂಗ್ರೆಸ್‌ನ ಕಾರ್ಯಸೂಚಿಯಾಗಿದೆ. ಮೋದಿಯನ್ನು ಹೊಗಳುವವರನ್ನು ಶಿಕ್ಷಿಸುವುದು ಕಾಂಗ್ರೆಸ್‌ನ ರಕ್ತದಲ್ಲಿಯೇ ಇದೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದರು.

ಜಾತ್ಯತೀತತೆ ದ್ವಂದ್ವದ ಬಂದಿ

ಒಳಗಿನ ಒಡಕು, ನಾಯಕತ್ವದ ಬಿಕ್ಕಟ್ಟಿನ ಜತೆಗೆ ಕಾಂಗ್ರೆಸ್‌ ಪಕ್ಷವನ್ನು ಕಾಡುತ್ತಿರುವ ಇನ್ನೊಂದು ದೊಡ್ಡ ಸಮಸ್ಯೆ ಜಾತ್ಯತೀತತೆಯ ದ್ವಂದ್ವ. ಒಂದೆಡೆ, ಹಿಂದುತ್ವವನ್ನೇ ಗಟ್ಟಿಯಾಗಿ ಹಿಡಿದುಕೊಂಡು ದಿನದಿಂದ ದಿನಕ್ಕೆ ಪ್ರಬಲವಾಗುತ್ತಿರುವ ಬಿಜೆಪಿ ಇದೆ; ಇನ್ನೊಂದೆಡೆ, ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮತಬ್ಯಾಂಕ್‌ ಬಹುತೇಕ ಕರಗಿ ಹೋಗಿದೆ. ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರಗಳನ್ನು ಗೆದ್ದಿದೆ. ಗುಜರಾತ್‌ನ ನಗರಪಾಲಿಕೆ ಚುನಾವಣೆಯಲ್ಲಿಯೂ ಈ ಪಕ್ಷ 17 ವಾರ್ಡ್‌ಗಳಲ್ಲಿ ಗೆದ್ದಿದೆ. ಅಲ್ಪಸಂಖ್ಯಾತ ಮತಬ್ಯಾಂಕ್‌ ಅನ್ನು ಕಾಂಗ್ರೆಸ್‌ ನೆಚ್ಚಿಕೊಳ್ಳಲು ಸಾಧ್ಯವಿಲ್ಲ ಎಂಬುದರ ಸ್ಪಷ್ಟ ಸೂಚನೆ ಇದು.

ಪಶ್ಚಿಮ ಬಂಗಾಳದಲ್ಲಿ ಅಬ್ಬಾಸ್‌ ಸಿದ್ದಿಕಿ ನೇತೃತ್ವದ ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ (ಐಎಸ್‌ಎಫ್‌) ಜತೆಗಿನ ಮೈತ್ರಿಯನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಜತೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ಕಳೆದ ವರ್ಷ ಹಿಂದೇಟು ಹಾಕಿತ್ತು. ರಾಷ್ಟ್ರ ರಾಜಕಾರಣದಲ್ಲಿನ ಅಸ್ತಿತ್ವ ಕಿರಿದಾಗುತ್ತಾ ಸಾಗಿದಂತೆ ಪಕ್ಷವು ಒಂದಕ್ಕೊಂದು ವ್ಯತಿರಿಕ್ತವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಅನಿವಾರ್ಯದಲ್ಲಿದೆ.

ಐಎಸ್‌ಎಫ್‌ ಜತೆಗಿನ ಮೈತ್ರಿಯ ಬಗ್ಗೆ ಹಿರಿಯ ಮುಖಂಡ ಆನಂದ್‌ ಶರ್ಮಾ ಅವರ ವಿಮರ್ಶೆಯ ಬಗ್ಗೆ ರಾಜಕೀಯ ವಿಶ್ಲೇಷಕ ರಶೀದ್‌ ಕಿದ್ವಾಯಿ ಹೀಗೆ ಹೇಳುತ್ತಾರೆ: ‘ಕಾಂಗ್ರೆಸ್‌ ಪಕ್ಷವು ತನ್ನ ದೀರ್ಘಾವಧಿ ಹಿತಾಸಕ್ತಿಗಳ ಬಗ್ಗೆ ಗಮನ ಹರಿಸಬೇಕು. ಜತೆಗೆ, ಈಗ, ಚುನಾವಣೆಯಲ್ಲಿಯೂ ಗೆಲ್ಲಬೇಕು. ಈ ಎರಡರ ನಡುವೆ ಒಂದು ರೀತಿಯ ಸಮತೋಲನ ಸಾಧಿಸಲೇಬೇಕು. ಕುಸಿದು ಹೋಗಿರುವ ಪಕ್ಷವು ಚುನಾವಣೆ ಗೆದ್ದು ಪ್ರಸ್ತುತತೆ ಉಳಿಸಿಕೊಳ್ಳಲು ವಾಸ್ತವಿಕ ನೆಲೆಗಟ್ಟಿನ ಮೈತ್ರಿಯನ್ನೂ ಮಾಡಿಕೊಳ್ಳಬೇಕು’.

ಜಾತ್ಯತೀತತೆಯ ದ್ವಂದ್ವದಲ್ಲಿ ಬಂದಿಯಾಗಿರುವ ಕಾಂಗ್ರೆಸ್‌ ಪಕ್ಷವು ಒಂದಕ್ಕೊಂದು ವಿರೋಧಾಭಾಸಕರವಾದ ಎರಡು ಅಥವಾ ಅದಕ್ಕಿಂತ ಹೆಚ್ಚು ದನಿಗಳಲ್ಲಿ ಮಾತಾಡುತ್ತಿದೆ. ಮಧ್ಯಮ ಮಾರ್ಗದ ಈ ಪಕ್ಷಕ್ಕೆ ವೈವಿಧ್ಯಮಯ ವರ್ಗಗಳನ್ನು ತಲು‍ಪಲು ಇಂತಹ ಇಬ್ಬಂದಿತನವೇ ನೆರವಾಗುತ್ತದೆ. ಹಾಗಾಗಿ ಕಾಂಗ್ರೆಸ್‌ ಹಿಂದಿನಿಂದಲೂ ಹೀಗೆಯೇ ಇತ್ತು ಎನ್ನುವವರೂ ಇದ್ದಾರೆ. ಹಾಗಾಗಿಯೇ, ಜಾತ್ಯತೀತವಾದ ಗಟ್ಟಿ ನಿಲುವು ತಳೆಯಬೇಕು ಎಂದು ದಿಗ್ವಿಜಯ್‌ ಸಿಂಗ್‌ ಅವರಂತಹ ಮುಖಂಡರ ಒತ್ತಾಯವನ್ನು ಪಕ್ಷವು ಗಂಭೀರವಾಗಿ ಪರಿಗಣಿಸುವುದೇ ಇಲ್ಲ.

2014ರ ಲೋಕಸಭಾ ಚುನಾವಣೆ ಸೋಲಿನ ಬಳಿಕ, ಸೋಲಿಗೆ ಕಾರಣ ಹುಡುಕಲು ಎ.ಕೆ. ಆ್ಯಂಟನಿ ನೇತೃತ್ವದ ಸಮಿತಿಯನ್ನು ಕಾಂಗ್ರೆಸ್ ನೇಮಿಸಿತ್ತು. ‘ಮುಸ್ಲಿಂ ಓಲೈಕೆ’ಯ ಹಣೆಪಟ್ಟಿಯೇ ಸೋಲಿನ ಮುಖ್ಯ ಕಾರಣಗಳಲ್ಲಿ ಒಂದು ಎಂದು ಈ ಸಮಿತಿಯ ವರದಿಯಲ್ಲಿ ಹೇಳಲಾಗಿತ್ತು. ನಂತರದ ವರ್ಷಗಳಲ್ಲಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ‘ಜನಿವಾರಧಾರಿ ಬ್ರಾಹ್ಮಣ’, ‘ಶಿವಭಕ್ತ’ ಎಂದು ಬಿಂಬಿಸುವ ಯತ್ನಗಳೂ ನಡೆದವು. ಪಕ್ಷದ ಕೆಲವು ಮುಖಂಡರು ಉಲ್ಲೇಖಿಸಿದ್ದ ‘ಹಿಂದೂ ಭಯೋತ್ಪಾದನೆ’, ‘ಕೇಸರಿ ಭಯೋತ್ಪಾದನೆ’ ವಿಚಾರಗಳಿಂದ ಪಕ್ಷವು ದೂರ ಸರಿಯಿತು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಎಐಎಂಐಎಂ ಪಕ್ಷವು ಕೆಲವು ಸ್ಥಾನಗಳನ್ನು ಗೆದ್ದಿರುವುದು ಮುಸ್ಲಿಮರು ಕಾಂಗ್ರೆಸ್‌ ಅನ್ನು ಬಿಟ್ಟು ಬೇರೆ ಆಯ್ಕೆಗಳ ಬಗ್ಗೆ ಯೋಚಿಸುತ್ತಿದ್ದಾರೆ ಎಂಬುದರ ಸೂಚನೆ. ಜತೆಗೆ, ಬಿಜೆಪಿಯನ್ನು ಸೋಲಿಸುವುದೇ ಮುಸ್ಲಿಮರ ಏಕೈಕ ಕಾರ್ಯಸೂಚಿ ಅಲ್ಲ ಎಂಬುದನ್ನೂ ಇದು ಹೇಳುತ್ತಿದೆ. ಉತ್ತರ ಪ್ರದೇಶ, ಬಿಹಾರದಂತಹ ದೊಡ್ಡ ರಾಜ್ಯಗಳಲ್ಲಿ ಮುಸ್ಲಿಂ ಮತಗಳು ಎಸ್‌ಪಿ, ಬಿಎಸ್‌ಪಿ, ಆರ್‌ಜೆಡಿ, ಜೆಡಿಯು ಪಾಲಾಗಿವೆ. ಇದು ಕಾಂಗ್ರೆಸ್‌ನ ಜಾತ್ಯತೀತತೆಯ ದ್ವಂದ್ವವನ್ನು ಇನ್ನಷ್ಟು ಹೆಚ್ಚಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.