ADVERTISEMENT

ಆಳ-ಅಗಲ: ಮೋಸದ ಬಲೆಗೆ ತಳ್ಳುವ ‘ಬಹುಮಾನದ ಆಮಿಷ’

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 5:10 IST
Last Updated 14 ಅಕ್ಟೋಬರ್ 2020, 5:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೈಬರ್‌ ಅಪರಾಧಕ್ಕೆ ಹತ್ತಾರು ಮುಖಗಳು. ಡಿಜಿಟಲೀಕರಣದ ವ್ಯಾಪ್ತಿ ವಿಸ್ತರಿಸಿದಂತೆಲ್ಲ ವಂಚನೆಗೂ ಹೊಸ ಹೊಸ ಆಯಾಮಗಳು ಸೇರ್ಪಡೆಯಾಗುತ್ತಿವೆ. ತಂತ್ರಜ್ಞಾನದ ಬಗೆಗಿನ ಅಜ್ಞಾನ, ಹಣದ ಬಗ್ಗೆ ಇರುವ ಅತಿಯಾಸೆ ಅಮಾಯಕರು ವಂಚನೆಗೆ ಒಳಗಾಗಲು ಮುಖ್ಯ ಕಾರಣಗಳು. ಸೈಬರ್‌ ಅಪರಾಧಗಳಲ್ಲಿ ಇಂತಹ ಮೋಸದ ಪಾಲು ಗರಿಷ್ಠ ಪ್ರಮಾಣದಲ್ಲಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತಿರುವ ಖದೀಮ ಇನ್ನೆಲ್ಲೋ ಇರುವ ಅಮಾಯಕರಿಗೆ ಟೋಪಿ ಹಾಕುವುದು ಹೇಗೆ ಎಂದು ಯೋಚಿಸುತ್ತಲೇ ಇರುತ್ತಾನೆ. ಹಾಗಾಗಿ, ಡಿಜಿಟಲ್‌ ಯುಗದಲ್ಲಿ ಎಲ್ಲರೂ ಗರಿಷ್ಠ ಎಚ್ಚರದಲ್ಲಿ ಇರಬೇಕಾದುದು ಅತ್ಯಂತ ಅಗತ್ಯ

‘ವಿದೇಶದಿಂದ ಭಾರತಕ್ಕೆ ₹10 ಕೋಟಿ ವರ್ಗಾವಣೆ ಮಾಡಬೇಕು. ನಿಮ್ಮ ಬ್ಯಾಂಕ್ ಖಾತೆ ವಿವರ ಕೊಡಿ. ನಿಮಗೆ 10 ಪರ್ಸೆಂಟ್ ಕಮಿಷನ್ ನೀಡುತ್ತೇನೆ’ ಎಂದು ಖದೀಮನೊಬ್ಬ ಇ–ಮೇಲ್ ಕಳುಹಿಸುತ್ತಾನೆ. ‘ವರ್ಗಾವಣೆಗೆ ತಗಲುವ ₹5 ಲಕ್ಷ ತೆರಿಗೆಯನ್ನು ಪಾವತಿಸಿ’ ಎಂದು ಪುಸಲಾಯಿಸುತ್ತಾನೆ. ₹1 ಕೋಟಿ ರೂಪಾಯಿ ಕಮಿಷನ್ ಜತೆಗೆ ಐದು ಲಕ್ಷವನ್ನೂ ಸೇರಿಸಿ ಕೊಡುವ ವಾಗ್ದಾನ ಮಾಡುತ್ತಾನೆ. ಕಮಿಷನ್ ಆಸೆಗೆ ಬಿದ್ದು, ಹಣ ಪಾವತಿ ಮಾಡುವ ವ್ಯಕ್ತಿಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿಯುವಷ್ಟರಲ್ಲಿ ಖದೀಮನ ಸುಳಿವೇ ಇರುವುದಿಲ್ಲ.

‘ಅಂತರರಾಷ್ಟ್ರೀಯ ಲಾಟರಿಯಲ್ಲಿ ನಿಮಗೆ ₹1 ಕೋಟಿ ಬಹುಮಾನ ಬಂದಿದೆ’ ಎಂದು ವಂಚಕನು ಎಸ್‌ಎಂಎಸ್‌ ಕಳಿಸುತ್ತಾನೆ. ‘ವಿದೇಶಿ ತೆರಿಗೆ ವಿಭಾಗದಲ್ಲಿ ಅದು ಸಿಲುಕಿಕೊಂಡಿದ್ದು, ಹಣ ಬಿಡಿಸಿಕೊಳ್ಳಬೇಕಾದರೆ ₹50 ಸಾವಿರ ಪಾವತಿಸಿ, ಬಹುಮಾನ ಪಡೆದುಕೊಳ್ಳಿ’ ಎಂದು ಸೂಚಿಸುತ್ತಾನೆ. ಸ್ವಲ್ಪ ದಿನ ಬಿಟ್ಟು, ಇನ್ನೊಂದಿಷ್ಟು ಹಣದ ಬೇಡಿಕೆ ಇಡುತ್ತಾನೆ. ಕೋಟಿ ಬಹುಮಾನದ ಆಸೆಗೆ ಬೀಳುವ ಅಮಾಯಕ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಾನೆ.

ADVERTISEMENT

ಇದೇ ಸ್ವರೂಪದ ಹತ್ತಾರು ವಂಚನೆಗಳು ನಿತ್ಯ ಘಟಿಸುತ್ತಿವೆ. ಇಂತಹ ಖದೀಮರಲ್ಲಿ ಹೆಚ್ಚಿನವರು ವಿದೇಶದಲ್ಲಿ ಇದ್ದುಕೊಂಡು ಮೋಸದ ಬಲೆ ಬೀಸುತ್ತಾರೆ. ಒಂದು ವೇಳೆ ನೀವು ವಂಚನೆಗೆ ಒಳಗಾಗಿದ್ದರೆ, ತಕ್ಷಣ ಠಾಣೆಗೆ ದೂರು ನೀಡಬೇಕು. ವಂಚನೆಗೆ ಒಳಗಾದಂತೆ ಮುನ್ನೆಚ್ಚರಿಕೆ ವಹಿಸಬೇಕಾದುದು ಅಗತ್ಯ.

ವಂಚನೆಯ ಮುಖಗಳು

*ನಿಮಗೆ ಅಪರಿಚಿತ ಮೂಲದಿಂದ ಇ–ಮೇಲ್ ಅಥವಾ ಎಸ್‌ಎಂಎಸ್ ಬರುತ್ತದೆ

*ಲಾಟರಿ ಬಹುಮಾನ, ಅಕ್ರಮವಾಗಿ ಗಳಿಸಿದ ಹಣ ವರ್ಗಾವಣೆ, ಕಡಿಮೆ ಬೆಲೆಗೆ ವಸ್ತು ನೀಡುವ ಸಬೂಬು ಹೇಳುತ್ತಾರೆ

*‘ಕಷ್ಟದಲ್ಲಿದ್ದೇನೆ ಸಹಾಯ ಮಾಡಿ’ ಎಂದು ನಿಮ್ಮ ಹೆಸರಿನಲ್ಲಿ ಪರಿಚಯಸ್ಥರಿಗೆ ಇ–ಮೇಲ್‌ ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ

ವಂಚನೆ ತಡೆಗೆ ಏನು ಮಾಡಬೇಕು

*ಲಾಟರಿಯಲ್ಲಿ ನಿಮಗೆ ಬಹುಮಾನ ಬಂದಿದೆ ಎಂದು ಎಸ್‌ಎಂಎಸ್ ಇ–ಮೇಲ್ ಅಥವಾ ದೂರವಾಣಿ ಕರೆ ಬಂದರೆ, ಅದು ಮೋಸ ಎಂದು ತಿಳಿಯಿರಿ. ಅವುಗಳಿಗೆ ಉತ್ತರಿಸಬೇಡಿ

*ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಎಸ್‌ಎಂಎಸ್ ಅಥವಾ ಇ–ಮೇಲ್ ಬಂದರೆ ನಂಬಬೇಡಿ. ಅದು ಸಹ ಮೋಸವೇ. ಯಾರೂ ಸುಮ್ಮನೆ ಹಣ ಕಳುಹಿಸುವುದಿಲ್ಲ ಎಂಬುದನ್ನು ಅರಿಯಿರಿ

*ಅಪರಿಚಿತರಿಂದ ಬರುವಇ–ಮೇಲ್‌ನಲ್ಲಿರುವ ಅಟ್ಯಾಚ್‌ಮೆಂಟ್‌ಗಳನ್ನು ಓಪನ್ ಮಾಡಬೇಡಿ. ಅದು ವೈರಸ್‌ನಿಂದ ಕೂಡಿರುವ ಸಾಧ್ಯತೆಯಿದ್ದು, ನಿಮ್ಮ ವೈಯಕ್ತಿಕ ಮಾಹಿತಿ ವಂಚಕರಿಗೆ ಸುಲಭವಾಗಿ ಸಿಕ್ಕಿಬಿಡಬಹುದು

*ನಿಮ್ಮ ಇ–ಮೇಲ್‌ನಲ್ಲಿ ಸ್ಪ್ಯಾಮ್ ಫಿಲ್ಟರ್‌ ಇರಲಿ

*ಅಧಿಕ ಹಣ ಬರುತ್ತದೆ ಎಂಬ ಆಸೆಗೆ ಬಿದ್ದು ಯಾವುದೇ ಅಪರಿಚಿತರ ಖಾತೆಗೆ ಹಣ ಕಳುಹಿಸಬೇಡಿ. ನಿಮ್ಮ ಬ್ಯಾಂಕ್ ಖಾತೆ ಅಥವಾ ವೈಯಕ್ತಿಕ ವಿವರಗಳನ್ನು ಯಾರಿಗೂ ನೀಡಬೇಡಿ. ಒಂದು ವೇಳೆ ಖಾತೆಯ ವಿವರ ನೀಡಿದ್ದರೆ, ತಕ್ಷಣ ನಿಮ್ಮ ಬ್ಯಾಂಕ್‌ಗೆ ಈ ಬಗ್ಗೆ ಮಾಹಿತಿ ನೀಡಿ

ದೂರು ಸಲ್ಲಿಕೆ ವಿಧಾನ

*ನಿಮ್ಮ ಬ್ಯಾಂಕ್‌ ಖಾತೆಯ ಆರು ತಿಂಗಳ ಸ್ಟೇಟ್‌ಮೆಂಟ್ ಪಡೆದುಕೊಳ್ಳಿ

*ನಿಮಗೆ ಬಂದ ಎಸ್‌ಎಂಎಸ್‌ನ ಪ್ರತಿಯನ್ನು ಮಾಡಿಕೊಳ್ಳಿ

*ಬ್ಯಾಂಕ್ ದಾಖಲೆಗಳಲ್ಲಿ ನಮೂದಾಗಿರುವ ನಿಮ್ಮ ಗುರುತಿನ ಪತ್ರ, ವಿಳಾಸದ ದಾಖಲೆ ಇಟ್ಟುಕೊಳ್ಳಿ

*ನಿಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ. ವಂಚನೆಗೆ ಒಳಗಾದ ಸಂಪೂರ್ಣ ಮಾಹಿತಿಯನ್ನು ದಾಖಲಿಸಿ

ಕೋಡ್ ಸ್ಕ್ಯಾನ್ ಇರಲಿ ಎಚ್ಚರ...

ತಂತ್ರಜ್ಞಾನದ ಬಗ್ಗೆ ಅಜ್ಞಾನ, ಸ್ವಲ್ಪ ಮಟ್ಟಿನ ನಿರ್ಲಕ್ಷ್ಯ ಹಾಗೂ ಹಣದ ಮೇಲೆ ಅತಿಯಾದ ಆಸೆ– ಈ ಗುಣಗಳು ನಿಮ್ಮಲ್ಲಿ ಇವೆ ಎಂದಾದರೆ ಸೈಬರ್‌ ಕಳ್ಳರ ಗಾಳಕ್ಕೆ ನೀವೂ ಬೀಳುವ ಅಪಾಯ ಇದೆ ಎಂದರ್ಥ.

ಉದ್ಯೋಗದ ಆಮಿಷ, ನಕಲಿ ಖಾತೆಗಳನ್ನು ಸೃಷ್ಟಿಸಿ ವಂಚಿಸುವುದು, ಭಾವಚಿತ್ರಗಳನ್ನು ದುರ್ಬಳಕೆ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡುವುದು... ಇಂತಹ ಅನೇಕ ಕೃತ್ಯಗಳು ಸೈಬರ್‌ ಅಪರಾಧಗಳ ವ್ಯಾಪ್ತಿಗೆ ಬರುತ್ತವೆ. ಆದರೆ, ಸೈಬರ್‌ಅಪರಾಧ ಕೃತ್ಯಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಹಣದ ವಂಚನೆಯೇ. ಇಂಥ ವಂಚನೆ ನಡೆಸುವುದು ಸುಲಭ ಮತ್ತು ಇದರಲ್ಲಿ ಸಿಕ್ಕಿಬೀಳುವ ಅಪಾಯವೂ ಕಡಿಮೆ ಎನ್ನುತ್ತಾರೆ ತಜ್ಞರು.

ಸುಲಭದ ಹಣದ ಆಮಿಷಕ್ಕೆ ಬಿದ್ದು, ಸಾವಿರಾರು ಜನರು ಕೋಟ್ಯಂತರ ರೂಪಾಯಿ ಗಳನ್ನು ಕಳೆದುಕೊಂಡಿದ್ದಾರೆ. ಸೈಬರ್‌ ಮೂಲಕ ನಡೆಯುವ ‘ಇ–ದಂಧೆ’ಗೆ ಇನ್ನೂ ಹಲವು ರೂಪಗಳಿವೆ. ಮೊಬೈಲ್‌ಗಳಲ್ಲಿ ಪೇಮೆಂಟ್‌ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿ, ಅವುಗಳನ್ನು ಬಳಸುವಾಗ ನಿರ್ಲಕ್ಷ್ಯ ವಹಿಸಿದರೆ ಹಣ ಕಳೆದುಕೊಳ್ಳಬೇಕಾಗಿ ಬರಬಹುದು. ಕ್ಯಆರ್‌ ಕೋಡ್‌ ಸ್ಕ್ಯಾನ್‌ ಪ್ರಕರಣಗಳು ಈಗ ಸಾಕಷ್ಟು ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಮತ್ತು ಅತ್ಯಂತ ಎಚ್ಚರ ಮತ್ತು ಜವಾಬ್ದಾರಿಯಿಂದ ಇಂಟರ್‌ನೆಟ್‌ ಸೌಲಭ್ಯವನ್ನು ಬಳಸುವುದೇ ಸೈಬರ್‌ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗ.

ಎಚ್ಚರ ತಪ್ಪಿದರೆ ಖಾತೆಗೆ ಕನ್ನ

ಬೆಂಗಳೂರಿನ ಐಟಿ ಉದ್ಯೋಗಿ ನಾಗೇಶ್‌ (ಹೆಸರು ಬದಲಿಸಲಾಗಿದೆ) ತಮ್ಮ ಹಳೆಯ ಕ್ಯಾಮೆರಾವನ್ನು ಮಾರಾಟ ಮಾಡಬೇಕಿತ್ತು. ಗ್ರಾಹಕರನ್ನು ಹುಡುಕುತ್ತಾ ಅಲೆಯುವುದೇಕೆ ಎಂದು, ಬಳಸಿದ ವಸ್ತುಗಳ ಮಾರಾಟಕ್ಕಾಗಿಯೇ ಇರುವ ಜಾಲತಾಣವೊಂದರಲ್ಲಿ ಕ್ಯಾಮೆರಾದ ಚಿತ್ರ, ಬೆಲೆ, ತಮ್ಮ ದೂರವಾಣಿ ಸಂಖ್ಯೆ ಎಲ್ಲವುಗಳನ್ನೂ ಅಪ್‌ಲೋಡ್‌ ಮಾಡಿದರು.

ಒಂದೆರಡು ದಿನಗಳಲ್ಲಿ ಸೇನೆಯ ನಿವೃತ್ತ ಅಧಿಕಾರಿ ಎಂದು ಹೇಳಿಕೊಂಡ, ಉತ್ತರ ಭಾರತದ ವ್ಯಕ್ತಿಯೊಬ್ಬರು ದೂರವಾಣಿ ಮೂಲಕ ನಾಗೇಶ್‌ ಅವರನ್ನು ಸಂಪರ್ಕಿಸಿದರು. ‘ಕ್ಯಾಮೆರಾ ನನಗೆ ಇಷ್ಟವಾಗಿದೆ. ನಾನು ಅದನ್ನು ಖರೀದಿಸುತ್ತೇನೆ’ ಎಂದರು.

ಸರಿ ಎಂದ ನಾಗೇಶ್‌, ‘ಉಳಿತಾಯ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್‌ ಕೊಡುತ್ತೇನೆ. ಹಣವನ್ನು ವರ್ಗಾಯಿಸಿ. ಹಣ ಬಂದಕೂಡಲೇ ಕ್ಯಾಮೆರಾ ಕಳುಹಿಸಿಕೊಡುತ್ತೇನೆ’ ಎಂದರು. ಆದರೆ ಆ ವಂಚಕ, ‘ಅಷ್ಟೆಲ್ಲ ಕಷ್ಟ ಯಾಕೆ. ನಾನು ಕ್ಯೂ ಆರ್‌ ಕೋಡ್‌ ಒಂದನ್ನು ನಿಮಗೆ ಕಳುಹಿಸುತ್ತೇನೆ ಅದನ್ನು ಸ್ಕ್ಯಾನ್‌ ಮಾಡಿಬಿಡಿ, ನೇರವಾಗಿ ನಿಮ್ಮ ಖಾತೆಗೆ ಹಣ ಜಮೆ ಮಾಡುತ್ತೇನೆ’ ಎಂದರು.

ಕೆಲಸ ಸುಲಭವಾಯಿತಲ್ಲಾ ಎಂದುಕೊಂಡ ನಾಗೇಶ್‌ ಅದಕ್ಕೆ ಒಪ್ಪಿದರು. ವಂಚಕ ಕೆಲವೇ ನಿಮಿಷಗಳಲ್ಲಿ ಕ್ಯೂ ಆರ್‌ ಕೋಡ್‌ ಕಳುಹಿಸಿದ. ನಾಗೇಶ್‌ ಅದನ್ನು ಸ್ಕ್ಯಾನ್‌ ಮಾಡಿದರು. ಇದಾಗಿ ಒಂದೆರಡು ನಿಮಿಷಕ್ಕೆ ಪುನಃ ಆ ವ್ಯಕ್ತಿ ಕರೆ ಮಾಡಿ, ‘ಟೆಸ್ಟ್‌ ಮಾಡುವ ಸಲುವಾಗಿ ₹ 10ಅನ್ನು ನಿಮ್ಮ ಖಾತೆಗೆ ವರ್ಗಾಯಿಸಿದ್ದೇನೆ. ಬಂದಿದೆಯೇ ಎಂಬುದನ್ನು ಖಚಿತಪಡಿಸಿದರೆ ಉಳಿದ ಮೊತ್ತವನ್ನೂ ಕೊಡುತ್ತೇನೆ’ ಎಂದರು.

ಖಾತೆ ಪರಿಶೀಲಿಸಿದಾಗ ₹10 ಬಂದಿರುವುದು ಖಚಿತವಾಯಿತು. ನಾಗೇಶ್‌ ಪುನಃ ಆ ವ್ಯಕ್ತಿಯನ್ನು ಸಂಪರ್ಕಿಸಿ ‘ಹಣ ಬಂದಿದೆ. ಅದೇ ಖಾತೆಗೆ ಉಳಿದ ಹಣವನ್ನೂ ವರ್ಗಾಯಿಸಿ’ ಎಂದರು. ಅದಾಗಿ ಐದಾರು ನಿಮಿಷಗಳಾಗಿದ್ದವೇನೋ, ಬ್ಯಾಂಕ್‌ನಿಂದ ಎರಡು– ಮೂರು ಮೆಸೇಜ್‌ಗಳು ನಾಗೇಶ್‌ ಅವರ ಮೊಬೈಲ್‌ಗೆ ಬಂದವು. ನೋಡಿದರೆ ನಾಗೇಶ್‌ ಅವರ ಖಾತೆಯಿಂದ ₹ 80,000 ಮಾಯವಾಗಿತ್ತು. ಕ್ಯಾಮೆರಾ ಖರೀದಿಸುವುದಾಗಿ ಹೇಳಿದ್ದ ವ್ಯಕ್ತಿಗೆ ಪುನಃ ಕರೆ ಮಾಡಿದರೆ, ‘ನೀವು ಕರೆಮಾಡಿದ ಚಂದಾದಾರರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದಾರೆ’ ಎಂಬ ಸಂದೇಶ ಬಂದಿತ್ತು. ಹಲವು ದಿನಗಳ ಕಾಲ ಆ ಸಂಖ್ಯೆಗೆ ಕರೆ ಮಾಡಿದರೂ ಅದೇ ಸಂದೇಶ ಬರುತ್ತಿತ್ತು.

ಹೀಗೆ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಕಳೆದುಕೊಂಡವರ ಸಂಖ್ಯೆ ಸಾವಿರಾರು ಇದೆ.

ಗೋಪ್ಯವಾಗಿರಲಿ ಬ್ಯಾಂಕ್ ಖಾತೆ ವಿವರ

*ಅಪರಿಚಿತ ವ್ಯಕ್ತಿಗೆ ಹಣ ವರ್ಗಾಯಿಸುವ ಅಥವಾ ಅವರಿಂದ ಹಣ ಪಡೆಯುವ ಸಂದರ್ಭ ಬಂದರೆ, ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಐಎಫ್‌ಎಸ್‌ ಕೋಡ್‌ಗಳನ್ನು ನೀಡಿ, ಅದನ್ನು ಬಳಸಿಯೇ ಹಣ ಪಾವತಿಸಲು ಹೇಳಿ. ಕೋಡ್‌ ಸ್ಕ್ಯಾನ್‌ ಮಾಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ

*ಸ್ಕ್ಯಾನ್‌ ಮೂಲಕ ಹಣ ಪಾವತಿಸುವುದಾದರೆ, ಸಾಧ್ಯವಾದಷ್ಟು ಮಟ್ಟಿಗೆ ಬ್ಯಾಂಕ್‌ಗಳು ಸಿದ್ಧಪಡಿಸಿರುವ ಆ್ಯಪ್‌ಗಳನ್ನು ಅಥವಾ ಸುರಕ್ಷಿತವಾಗಿರುವಂಥ ಪೇಮೆಂಟ್‌ ಆ್ಯಪ್‌ಗಳನ್ನೇ ಬಳಸಿ

ಮಾಹಿತಿ: http://cyberpolicebangalore.nic.in

ವರದಿ: ಉದಯ ಯು., ಅಮೃತ ಕಿರಣ್ ಬಿ.ಎಂ.

***

‘ಶೇ 80ರಷ್ಟು ಅಪರಾಧಗಳಿಗೆ ಒಟಿಪಿ, ಕ್ಯೂಆರ್‌ ಕೋಡ್‌ ವಂಚನೆ ಕಾರಣ’

‘ಒಟಿಪಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳು ವುದು ಹಾಗೂ ಅಪರಿಚಿತರು ಕಳುಹಿಸುವ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡುವುದು... ರಾಜ್ಯದ ಶೇ 80ರಷ್ಟು ಸೈಬರ್ ಅಪರಾಧಗಳಿಗೆ ಇವುಗಳೇ ಪ್ರಮುಖ ಕಾರಣ’ ಎನ್ನುತ್ತಾರೆ ಸಿಐಡಿ ಸೈಬರ್ ವಿಭಾಗದ ಎಸ್ಪಿ ಶರತ್‌. ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ‘ಪ್ರಜಾವಾಣಿ’ ಜತೆ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸ್ವರೂಪ ಹೇಗಿದೆ? ನಿತ್ಯ ಎಷ್ಟು ಪ್ರಕರಣಗಳು ದಾಖಲಾಗುತ್ತಿವೆ?

ಸೈಬರ್‌ ಅಪರಾಧಗಳು ಎಲ್ಲಾ ರಾಜ್ಯಗಳಲ್ಲಿ ನಡೆಯುತ್ತವೆ. ವಿದೇಶಗಳಲ್ಲೂ ನಡೆಯುತ್ತವೆ. ನಾವು ನಮ್ಮ ನೆರೆ ರಾಜ್ಯಗಳ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡು, ಪ್ರಕರಣಗಳನ್ನು ಭೇದಿಸುತ್ತಿ
ದ್ದೇವೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ ಒಂದು ಪ್ರಕರಣ ದಾಖಲಾಗುತ್ತಿದೆ. ಮಹಾನಗರದಲ್ಲಿ ಈ ಸಂಖ್ಯೆ ಸ್ವಲ್ಪ ಹೆಚ್ಚಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಸೈಬರ್ ಅಪರಾಧಗಳು ಯಾವುವು?

ಕ್ಯೂಆರ್‌ ಕೋಡ್ ಸ್ಕ್ಯಾನ್‌ ಮಾಡುವುದು, ಅಪರಿಚಿತ ಲಿಂಕ್ ಕ್ಲಿಕ್‌ ಹಾಗೂ ಗೂಗಲ್‌ ಜಾಲತಾಣದಲ್ಲಿ ಸಿಗುವ ನಂಬರ್‌ಗೆ ಕರೆ ಮಾಡಿ ಹಣ ಕಳೆದುಕೊಳ್ಳುವುದು ಪ್ರಮುಖ ಪ್ರಕರಣಗಳು. ಜೊತೆಗೆ, ಹುಡುಗಿಯರ ಫೋಟೊ ಹಾಕಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ.

ಸೈಬರ್ ಅಪರಾಧ ಎಸಗುವವರು ಯಾರು?

ಹೆಚ್ಚು ಶಿಕ್ಷಣ ಪಡೆಯದ, ತಂತ್ರಜ್ಞಾನದ ಬಗ್ಗೆ ಮಾತ್ರ ತಿಳಿದುಕೊಂಡವರೇ ಹೆಚ್ಚಾಗಿ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದಾರೆ. ಈವರೆಗೆ ಬಂಧಿತ ಆರೋಪಿಗಳ ಪೈಕಿ ಶೇ 80ರಷ್ಟು ಮಂದಿ ಪ್ರಾಥಮಿಕ ಹಂತದಲ್ಲೇ ಶಾಲೆ ಬಿಟ್ಟವರು. ರಾಜಸ್ಥಾನ, ದೆಹಲಿ, ಜಾರ್ಖಂಡ್‌ ರಾಜ್ಯದವರೇ ಹೆಚ್ಚು.

ಸಿಐಡಿ ಸೈಬರ್ ವಿಭಾಗ ಯಾವ ರೀತಿ ಕೆಲಸ ಮಾಡುತ್ತಿದೆ?

ವೈಯಕ್ತಿಕವಾಗಿ ₹ 1 ಕೋಟಿಗಿಂತಲೂ ಹೆಚ್ಚು ವಂಚನೆ ಆಗಿದ್ದರೆ ಹಾಗೂ ಹ್ಯಾಕ್ ಮೂಲಕ ₹ 50 ಲಕ್ಷ ಕಳೆದುಕೊಂಡಿದ್ದರೆ ಅಂಥ ಪ್ರಕರಣಗಳನ್ನು ಸಿಐಡಿ ಸೈಬರ್ ವಿಭಾಗದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಉಳಿದಂತೆ, ಇತರೆ ಅಪರಾಧಗಳ ಬಗ್ಗೆ ಆಯಾ ಜಿಲ್ಲೆ ಹಾಗೂ ಮಹಾನಗರಗಳಲ್ಲಿರುವ ‘ಸೆನ್’ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಗ್ರಹ) ಠಾಣೆಯಲ್ಲಿ ದೂರು ದಾಖಲಾಗುತ್ತವೆ.

ಹಣ ಕಳೆದುಕೊಂಡವರು ಮೊದಲಿಗೆ ಏನು ಮಾಡಬೇಕು?

ಸಂಬಂಧಪಟ್ಟ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ಹಣದ ವಹಿವಾಟಿನ ವಿವರ ಕೊಡಬೇಕು ಹಾಗೂ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಬೇಕು. ಹತ್ತಿರದ ಸೆನ್ ಠಾಣೆಗೆ ಹೋಗಿ ದೂರು ನೀಡಬೇಕು. ‘ಸೈಬರ್ ಕ್ರೈಂ ಡಾಟ್ ಗೌವ್ ಡಾಟ್ ಇನ್’ (cybercrime.gov.in) ಜಾಲತಾಣದಲ್ಲಿ ಆನ್‌ಲೈನ್‌ ಮೂಲಕವೂ ದೂರು ದಾಖಲಿಸಬಹುದು.

ಬ್ಯಾಂಕ್‌ ಖಾತೆಯಿಂದಲೇ ವಂಚಕರು ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಅಪರಾಧ ತಡೆಯಲ್ಲಿ ಬ್ಯಾಂಕ್‌ಗಳ ಪಾತ್ರವೇನು?

ವಂಚಕರ ಪತ್ತೆಗೆ ಬ್ಯಾಂಕ್ ಸಹಕಾರ ಅತ್ಯಗತ್ಯ. ಬ್ಯಾಂಕಿನ ಕೆಲ ನೀತಿಗಳು ಬದಲಾಗಬೇಕಿದೆ. ಕೆಲ ಪ್ರಕರಣಗಳಲ್ಲಿ ಬ್ಯಾಂಕಿನವರು ಬೇಗನೇ ಮಾಹಿತಿ ನೀಡುವುದಿಲ್ಲ. ನಾವೇ ಹಿಂಬಾಲಿಸಿ ದಾಖಲೆ ಪಡೆದುಕೊಂಡು ತನಿಖೆ ಮಾಡುತ್ತಿದ್ದೇವೆ. ಈ ಸಂಬಂಧ ಮೇಲಿಂದ ಮೇಲೆ ಸಭೆಗಳನ್ನು ಮಾಡುತ್ತಿದ್ದೇವೆ.

ಸೈಬರ್ ಅಪರಾಧ ತಡೆಗೆ ನಿಮ್ಮ ಸಲಹೆ?

ಯಾರಿಗೂ ಒಟಿಪಿ ನೀಡಬೇಡಿ, ವೈಯಕ್ತಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳ ಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಅಪ್‌ಲೋಡ್ ಮಾಡಬೇಡಿ. ಗ್ರಾಹಕರ ಸೇವಾ ಪ್ರತಿನಿಧಿ ಸೋಗಿನಲ್ಲಿ ಮಾಹಿತಿ ಕೇಳಿದರೆ ಕೊಡಬೇಡಿ. ಬಹುಮಾನ, ಉಡುಗೊರೆ, ಕಡಿಮೆ ಬೆಲೆಗೆ ವಾಹನ ಮಾರಾಟ ಆಮಿಷಕ್ಕೆ ಒಳಗಾಗಬೇಡಿ. ಬ್ಯಾಂಕ್‌ ವ್ಯವಹಾರಗಳ ಗೋಪ್ಯ ಸಂಖ್ಯೆಯನ್ನು 15 ದಿನಕ್ಕೊಮ್ಮೆ ಬದಲಾಯಿಸಿ.

ಸೈಬರ್ ಅಪರಾಧಗಳು ಹೆಚ್ಚಾಗಲು ಪ್ರಮುಖ ಕಾರಣಗಳೇನು?

ವಿದ್ಯಾವಂತರ ದಡ್ಡತನ ಹಾಗೂ ನಿರ್ಲಕ್ಷ್ಯವೇ ಬಹುತೇಕ ಸಂದರ್ಭಗಳಲ್ಲಿ ವಂಚಕರ ಬಂಡವಾಳವಾಗಿರುತ್ತದೆ. ವಂಚಕರಿಗೆ ಗೋಪ್ಯ ಮಾಹಿತಿ ಕೊಟ್ಟು ಹಣ ಕಳೆದುಕೊಳ್ಳುವವರೇ ಹೆಚ್ಚು. ಹೆಚ್ಚಿನ ಸೈಬರ್ ವಂಚನೆಗಳಿಗೆ ಒಟಿಪಿಯೇ (ಒನ್ ಟೈಂ ಪಾಸ್‌ವರ್ಡ್) ಮೂಲ. ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮಾತ್ರ ಒಟಿಪಿ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣ ಹಾಗೂ ಇತರೆ ವಲಯದಲ್ಲೂ ವಂಚನೆಗೆ ಬಳಕೆ ಆಗುತ್ತಿದೆ. ಹೀಗಾಗಿ, ಯಾರೊಂದಿಗೂ ಒಟಿಪಿ ಹಂಚಿಕೊಳ್ಳಬಾರದು.

- ಸಂತೋಷ್ ಜಿಗಳಿಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.