ADVERTISEMENT

Explainer | ಅತ್ಯಾಚಾರಕ್ಕೆ ಗಲ್ಲು

ಶೆಮಿಜ್‌ ಜಾಯ್‌
Published 20 ಮಾರ್ಚ್ 2020, 19:45 IST
Last Updated 20 ಮಾರ್ಚ್ 2020, 19:45 IST
'ನಿರ್ಭಯಾ' ಪಾಲಕರು ದೆಹಲಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರತ್ತ ಕೈಬೀಸಿ ಕೃತಜ್ಞತೆ ಸಲ್ಲಿಸಿದರು.
'ನಿರ್ಭಯಾ' ಪಾಲಕರು ದೆಹಲಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರತ್ತ ಕೈಬೀಸಿ ಕೃತಜ್ಞತೆ ಸಲ್ಲಿಸಿದರು.   

ನವದೆಹಲಿ: ಜನರು ಅಪರಾಧ ಕೃತ್ಯಗಳಿಂದ ವಿಮುಖರಾಗುವಂತೆ ಮಾಡಬಹುದು ಎಂಬುದುಗಲ್ಲು ಶಿಕ್ಷೆ ವಿಧಿಸುವುದಕ್ಕೆ ಇರುವ ಸಮರ್ಥನೆ. ಆದರೆ, ಕಾನೂನು ಆಯೋಗವು ರಚಿಸಿದ ನ್ಯಾಯಮೂರ್ತಿ ಜೆ.ಎಸ್‌. ವರ್ಮಾ ಸಮಿತಿಯು ಮರಣ ದಂಡನೆಯನ್ನು ವಿರೋಧಿಸಿದೆ. ವಿರಳಾತಿವಿರಳ ಪ್ರಕರಣಗಳಲ್ಲಿ ಕೂಡ ಮರಣ ದಂಡನೆಯು ಪ್ರತಿಗಾಮಿ ನಡೆಯಾಗುತ್ತದೆ. ಶಿಕ್ಷೆಯನ್ನು ಸೇಡಿನ ರೂಪಕ್ಕೆ ಇಳಿಸಲೇಬಾರದು ಎಂದು ಸಮಿತಿಯು ವಾದಿಸಿದೆ.

ದೆಹಲಿಯಲ್ಲಿ 2012ರ ಡಿಸೆಂಬರ್‌ನಲ್ಲಿ ‘ನಿರ್ಭಯಾ’ ಪ್ರಕರಣದ ಬಳಿಕ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಪರಾಧ ಕಾನೂನಿನ ಪರಾಮರ್ಶೆಗಾಗಿ ವರ್ಮಾ ಸಮಿತಿಯನ್ನು ನೇಮಿಸಲಾಗಿತ್ತು. ಶಿಕ್ಷೆಯನ್ನು ಹೆಚ್ಚಿಸಬೇಕು ಎಂಬುದು ಈ ಸಮಿತಿಯ ವಾದವಾಗಿತ್ತು. ಗಂಭೀರ ಪ್ರಕರಣಗಳಲ್ಲಿ ಅಪರಾಧಿಯು ತನ್ನ ಮುಂದಿನ ಜೀವಿತಾವಧಿಯನ್ನು ಜೈಲಿನಲ್ಲಿಯೇ ಕಳೆಯುವಂತೆ ಮಾಡಬೇಕು ಎಂಬ ಸಲಹೆಯನ್ನು ಸಮಿತಿ ನೀಡಿತ್ತು. ಜೀವಾವಧಿ ಶಿಕ್ಷೆ ಎಂದರೆ, ಅಪರಾಧಿಯು ಸಹಜವಾಗಿ ಸಾಯುವವರೆಗೆ ಜೈಲಿನಲ್ಲಿಯೇ ಇರಬೇಕು ಎಂಬುದಕ್ಕೆ ಬೇಕಾದ ಕಾನೂನು ರೂಪಿಸಬೇಕು ಎಂದೂ ಸಮಿತಿ ಹೇಳಿತ್ತು.

ನ್ಯಾಯಮೂರ್ತಿ ಎ.ಪಿ. ಶಾ ನೇತೃತ್ವದ ಸಮಿತಿಯು 2015ರಲ್ಲಿ ‘262ನೇ ವರದಿ: ಮರಣ ದಂಡನೆ’ ಎಂಬ ವರದಿಯನ್ನು ಸಲ್ಲಿಸಿತ್ತು. ಭಯೋತ್ಪಾದನೆ ಕೃತ್ಯಗಳನ್ನು ಬಿಟ್ಟು ಇತರ ಅಪರಾಧಗಳಿಗೆ ಮರಣ ದಂಡನೆಯನ್ನು ರದ್ದು ಮಾಡಬೇಕು ಎಂಬುದು ಈ ಸಮಿತಿಯ ವಾದವಾಗಿತ್ತು. ಸಮಿತಿಯ ಒಂಬತ್ತು ಸದಸ್ಯರ ಪೈಕಿ ಮೂವರು ಈ ಶಿಫಾರಸಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮರಣ ದಂಡನೆಯನ್ನು ರದ್ದು ಮಾಡಿದರೆ ಅದು ಹೆಚ್ಚು ಕ್ರೂರವಾದ ಅಪರಾಧಗಳಿಗೆ ಕಾರಣವಾಗಬಹುದು ಎಂಬ ಅಭಿಪ್ರಾಯವನ್ನು ಈ ಮೂವರು ವ್ಯಕ್ತಪಡಿಸಿದ್ದರು.

ADVERTISEMENT

ಅತ್ಯಾಚಾರವು ನೈತಿಕವಾಗಿ ಅತ್ಯಂತ ಹೇಯ ಕೃತ್ಯ. ಇದು ವ್ಯಕ್ತಿಯ (ಸಂತ್ರಸ್ತೆ) ವೈಯಕ್ತಿಕ ಸ್ವಾತಂತ್ರ್ಯ, ವ್ಯಕ್ತಿ ಗೌರವಕ್ಕೆ ಬೆಲೆಯನ್ನೇ ಕೊಡದೆ ನಡೆಯುವ ಕೃತ್ಯ. ಹಾಗಾಗಿ, ಇಂತಹ ಅಪರಾಧಕ್ಕೆ ಕಠಿಣವಾದ ಶಿಕ್ಷೆಯೇ ಬೇಕು ಎಂದು ನ್ಯಾಯಮೂರ್ತಿ ವರ್ಮಾ ಸಮಿತಿಯು 2013ರಲ್ಲಿ ನೀಡಿದ ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು.

ಆದರೆ, ಅತ್ಯಂತ ವಿರಳ ಎನಿಸುವಂತಹ ಅತ್ಯಾಚಾರ ಪ್ರಕರಣದಲ್ಲಿ ಕೂಡ ಗಲ್ಲು ಶಿಕ್ಷೆ ನೀಡುವುದು ಪ್ರತಿಗಾಮಿಯೇ ಆಗುತ್ತದೆ ಎಂಬ ವಿಚಾರವನ್ನು ಸಮಿತಿಯ ಮುಂದೆ ಅತ್ಯಂತ ಬಲವಾಗಿ ಪ್ರತಿಪಾದಿಸಲಾಗಿತ್ತು. ಗಲ್ಲು ಶಿಕ್ಷೆ ನೀಡುವುದರಿಂದಾಗಿ ಜನರು ಅಪರಾಧದಿಂದ ವಿಮುಖರಾಗುತ್ತಾರೆ ಅಥವಾ ಅವರಲ್ಲಿ ಭಯ ಉಂಟಾಗುತ್ತದೆ ಎಂಬುದು ‘ಮಿಥ್ಯೆ’ ಎಂದು ಹಲವು ಅಧ್ಯಯನಗಳು ಸಾಬೀತುಮಾಡಿವೆ ಎಂಬ ವಿಚಾರವನ್ನು ಸಮಿತಿಯ ಮುಂದೆ ಮಂಡಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ನಿರ್ಭಯಾ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ರಚನೆಯಾದ ಈ ಸಮಿತಿಯಲ್ಲಿ ನ್ಯಾಯಮೂರ್ತಿ ಲೀಲಾ ಸೇಥ್‌ ಮತ್ತು ಹಿರಿಯ ವಕೀಲ ಗೋಪಾಲ ಸುಬ್ರಮಣ್ಯಂ ಅವರೂ ಸದಸ್ಯರಾಗಿದ್ದರು. ಒಂದು ತಿಂಗಳಲ್ಲಿ ವರದಿ ನೀಡಬೇಕು ಎಂದು ಈ ಸಮಿತಿಗೆ ಸೂಚಿಸಲಾಗಿತ್ತು.

ಸಮಾಜದ ಹಿತಾಸಕ್ತಿಯನ್ನು ಮುನ್ನೆಲೆಯಲ್ಲಿ ಇರಿಸಿಕೊಂಡು, ಮರಣದಂಡನೆಯನ್ನು ತೆಗೆದುಹಾಕಬೇಕು ಎಂಬ ಈಗಿನ ಚಿಂತನೆಗೆ ಮನ್ನಣೆ ನೀಡಿರುವ ಕಾರಣ, ಮರಣ ದಂಡನೆಯನ್ನು ನಾವು ಶಿಫಾರಸು ಮಾಡುವುದಿಲ್ಲ ಎಂದು ನ್ಯಾಯಮೂರ್ತಿ ವರ್ಮಾ ಸಮಿತಿಯು ಹೇಳಿತ್ತು.

ಆದರೆ, ಈ ನಿಲುವುಗಳಿಗೆ ಕಾನೂನು ಆಯೋಗವು ಹೆಚ್ಚಿನ ಮನ್ನಣೆ ನೀಡಲಿಲ್ಲ. ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ 2013ರಲ್ಲಿ ಭಾರತೀಯ ದಂಡ ಸಂಹಿತೆಗೆ (ಐಪಿಸಿ) ಹಲವು ಹೊಸ ಅವಕಾಶಗಳನ್ನು ಸೇರಿಸಲಾಯಿತು. ಅತ್ಯಾಚಾರದಿಂದಾಗಿ ಸಾವು ಸಂಭವಿಸಿದರೆ ಅಥವಾ ಸಂತ್ರಸ್ತೆಯು ಅರೆಜೀವಾವಸ್ಥೆ ತಲುಪಿದರೆ ಅಂತಹ ಪ್ರಕರಣಗಳಲ್ಲಿ ಅಪರಾಧಿಗೆ ಮರಣದಂಡನೆ ನೀಡಬೇಕು ಎಂಬುದನ್ನು ಐಪಿಸಿಗೆ ಸೇರಿಸಲಾಯಿತು. ಪದೇ ಪದೇ ತಪ್ಪು ಎಸಗುವವರಿಗೂ ಈ ಶಿಕ್ಷೆ ವಿಧಿಸಬಹುದು ಎಂಬ ತಿದ್ದುಪಡಿಯನ್ನೂ ಮಾಡಲಾಗಿದೆ.

ಸಂತ್ರಸ್ತರ ಕಾಳಜಿಗಳ ಬಗ್ಗೆ ಅಪರಾಧ ನ್ಯಾಯ ವ್ಯವಸ್ಥೆಯು ಹೆಚ್ಚು ಸ್ಪಂದನೆ ಹೊಂದಿರಬೇಕು ಮತ್ತು ನ್ಯಾಯ ಪಡೆಯುವುದು ಎಂದರೆ ಅಪರಾಧಿಯನ್ನು ಗಲ್ಲಿಗೆ ಹಾಕುವುದು ಮಾತ್ರ ಅಲ್ಲ ಎಂದು ಅವರು ಚಿಂತಿಸುವಂತೆ ಮಾಡಬೇಕು ಎಂಬು
ದನ್ನು ಕಾನೂನು ಆಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಭಯೋತ್ಪಾದನೆಯನ್ನು ಭಿನ್ನವಾಗಿ ನೋಡುವುದಕ್ಕೆ ‘ದಂಡನೆ ನ್ಯಾಯ’ದಲ್ಲಿ ಯಾವ ಸಮರ್ಥನೆಯೂ ಇಲ್ಲ. ಹಾಗಿದ್ದರೂ, ಭಯೋತ್ಪಾದನೆ ಸಂಬಂಧಿ ಅಪರಾಧಗಳು ಮತ್ತು ದೇಶದ ವಿರುದ್ಧ ಸಮರ ಸಾರಿದ ಅಪರಾಧಗಳಿಗೆ ಮರಣ ದಂಡನೆಯನ್ನು ತೆಗೆದುಹಾಕಿದರೆ, ಅದು ರಾಷ್ಟ್ರೀಯ ಭದ್ರತೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಆತಂಕವೂ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಜಾರಿಯಾಗಿದ್ದು ಸಾವಿರಾರುಲೆಕ್ಕಕ್ಕೆ 720:ದಾಖಲೆ ನಿರ್ವಹಣೆ ಮಾಡದ ರಾಜ್ಯ ಸರ್ಕಾರಗಳು

ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೆ ಏರಿಸಿದ್ದೂ ಸೇರಿದಂತೆ, ಸ್ವಾತಂತ್ರ್ಯಾನಂತರ ಭಾರತದಲ್ಲಿ 720 ಜನರಿಗೆ ಮರಣದಂಡನೆ ಜಾರಿ ಮಾಡಿರುವುದು ದಾಖಲಾಗಿದೆ. ಆದರೆ ವಾಸ್ತವವಾಗಿ ಸಾವಿರಕ್ಕೂ ಹೆಚ್ಚು ಜನರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಕಾನೂನು ಆಯೋಗದ 1967ರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿ ಕಾನೂನು ವಿಶ್ವವಿದ್ಯಾಲಯದ ‘ಪ್ರಾಜೆಕ್ಟ್‌ 39ಎ’ ಅಡಿ, ಎಲ್ಲಾ ರಾಜ್ಯಗಳಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ವಿವರ ಕೇಳಲಾಗಿತ್ತು. ಕೆಲವು ರಾಜ್ಯಗಳಷ್ಟೇ ಮರಣ ದಂಡನೆ ಜಾರಿ ಮಾಡಿದ ಸಂಬಂಧ ಮಾಹಿತಿ ದಾಖಲಿಸಿವೆ. ಆದರೆ ಕಾನೂನು ಆಯೋಗದ ವರದಿಯು 1,500 ಜನರಿಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ಹೇಳುತ್ತದೆ ಎಂದು ಪ್ರಾಜೆಕ್ಟ್‌ 39ಎ ಕಾರ್ಯನಿರ್ವಾಹಕ ನಿರ್ದೇಶಕ ಅನೂಪ್ ಸುರೇಂದ್ರನಾಥ್ ಹೇಳಿದ್ದಾರೆ.

ರಾಜ್ಯ ಸರ್ಕಾರಗಳು ನೀಡಿರುವ ಮಾಹಿತಿಗೂ, ಕಾನೂನು ಆಯೋಗದ ವರದಿಯಲ್ಲಿರುವ ಮಾಹಿತಿಗೂ ಸಾಕಷ್ಟು ಅಂತರವಿದೆ. ರಾಜ್ಯ ಸರ್ಕಾರಗಳು ಮಾನವ ಜೀವದ ಬಗ್ಗೆ ಎಷ್ಟು ನಿರ್ಲಕ್ಷ್ಯ ವಹಿಸಿವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅನೂಪ್ ವಿಶ್ಲೇಷಿಸಿದ್ದಾರೆ.

‘ಜೀವಾವಧಿ ಶಿಕ್ಷೆಗಿಂತ ಮರಣದಂಡನೆ ಪರಿಣಾಮಕಾರಿಯಲ್ಲ ಎಂದು ಕಾನೂನು ಆಯೋಗವು 2015ನೇ ಸಾಲಿನ ತನ್ನ ವರದಿಯಲ್ಲಿ ಹೇಳಿದೆ. ಪ್ರತೀಕಾರ ಸ್ವರೂಪದ ಶಿಕ್ಷೆಯು, ಶಿಕ್ಷೆಯ ಉದ್ದೇಶ ಈಡೇರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಆದರೆ, ಭಾರತದ ಸಂವಿಧಾನದಲ್ಲಿ ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’ ಎಂಬ ಸ್ವರೂಪದ ಶಿಕ್ಷೆಗೆ ಅವಕಾಶವಿಲ್ಲ. ಶಿಕ್ಷೆ ನೀಡುವುದರ ಉದ್ದೇಶವನ್ನು ಮರಣ ದಂಡನೆ ಮೂಲಕ ಸಾಧಿಸಲು ಸಾಧ್ಯವಿಲ್ಲ. ಭಯೋತ್ಪಾದನಾ ಕೃತ್ಯಗಳಿಗೆ ಮಾತ್ರ ಇಂತಹ ಶಿಕ್ಷೆ ವಿಧಿಸಬೇಕು ಎಂದು ಕಾನೂನು ಆಯೋಗ ತನ್ನ ವರದಿಯಲ್ಲಿ ಹೇಳಿದೆ’ ಎಂದು ಅನೂಪ್ ವಿವರಿಸಿದ್ದಾರೆ.

ಭಯೋತ್ಪಾದನೆ ಹೊರತುಪಡಿಸಿ ಉಳಿದೆಲ್ಲಾ ಅಪರಾಧಗಳಿಗೆ ಮರಣದಂಡನೆ ವಿಧಿಸುವುದನ್ನು ನಿಲ್ಲಿಸಬೇಕು ಎಂದು ಕಾನೂನು ಆಯೋಗ 2015ರಲ್ಲೇ ಹೇಳಿದೆ ಎಂದುಪ್ರಾಜೆಕ್ಟ್‌ 39ಎ ಕಾರ್ಯನಿರ್ವಾಹಕ ನಿರ್ದೇಶಕಅನೂಪ್ ಸುರೇಂದ್ರನಾಥ್ ಹೇಳಿದ್ದಾರೆ.

ದಾಖಲಾಗಿರುವ ಮರಣದಂಡನೆಗಳು: ಯಾವ ರಾಜ್ಯದಲ್ಲಿ ಎಷ್ಟು?

324 ಉತ್ತರ ಪ್ರದೇಶ,90 ಹರಿಯಾಣ,73 ಮಧ್ಯಪ್ರದೇಶ,57 ಮಹಾರಾಷ್ಟ್ರ,36 ಕರ್ನಾಟಕ,30 ಪಶ್ಚಿಮ ಬಂಗಾಳ,27 ಆಂಧ್ರಪ್ರದೇಶ,24 ದೆಹಲಿ,10 ಪಂಜಾಬ್,8 ರಾಜಸ್ಥಾನ,5 ಒಡಿಶಾ,5 ಜಮ್ಮು–ಕಾಶ್ಮೀರ,1 ಗೋವಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.