ADVERTISEMENT

ಆಳ–ಅಗಲ: ಚುನಾವಣಾ ಬಾಂಡ್‌ ಮುಚ್ಚಿದ ಲಕೋಟೆಯ ಮಿಥ್ಯೆ

ರಿಪೋರ್ಟರ್ಸ್ ಕಲೆಕ್ಟಿವ್‌ ವರದಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:31 IST
Last Updated 9 ಜೂನ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಂಪನಿಗಳು ಮತ್ತು ವ್ಯಕ್ತಿಗಳು ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳಿಗೆ ಗೋಪ್ಯವಾಗಿ ನೀಡುವ ದೇಣಿಗೆ 19 ರಾಜಕೀಯ ಪಕ್ಷಗಳಿಗೆ ಮಾತ್ರ ಸಿಕ್ಕಿದೆ. ಭಾರತದಲ್ಲಿ 2,800ಕ್ಕೂ ಹೆಚ್ಚು ಪಕ್ಷಗಳಿವೆ. ಮೂರು ವರ್ಷಗಳಲ್ಲಿ ಬಾಂಡ್‌ ಮೂಲಕ ಸಂಗ್ರಹವಾದ ₹6,201 ಕೋಟಿಯಲ್ಲಿ ಶೇ 68ರಷ್ಟು ಆಡಳಿತಾರೂಢ ಬಿಜೆಪಿಗೆ ಸಿಕ್ಕಿದೆ ಎಂಬುದನ್ನು ಸರಣಿ ಸಂದರ್ಶನಗಳು ಮತ್ತು ವಾರ್ಷಿಕ ಲೆಕ್ಕ ಪರಿಶೋಧನಾ ವರದಿಗಳ ಮೂಲಕ ರಿಪೋರ್ಟರ್ಸ್‌ ಕಲೆಕ್ಟಿವ್‌ ಕಂಡುಕೊಂಡಿದೆ.

ದೇಶದ 105 ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ನ ದೇಣಿಗೆಗಳನ್ನು ನಗದೀಕರಿಸಿಕೊಂಡಿವೆ ಎಂಬ ಭಾವನೆಗೆ ಇದು ವಿರುದ್ಧವಾಗಿದೆ. ಹಾಗೆಯೇ, ಬಾಂಡ್‌ ವಿಧಾನವು ಅತ್ಯಂತ ದಕ್ಷ ಎಂಬ ಬಿಜೆಪಿಯ ಪ್ರತಿಪಾದನೆಯನ್ನೂ ಇದು ಸುಳ್ಳಾಗಿಸಿದೆ.

ಕಂಪನಿಗಳು ಮತ್ತು ವ್ಯಕ್ತಿಗಳು ಅನಾಮಧೇಯವಾಗಿ ಯಾವುದೇ ಮೊತ್ತವನ್ನು ‌ರಾಜಕೀಯ ಪಕ್ಷಗಳಿಗೆ ಬಾಂಡ್‌ ಮೂಲಕ ನೀಡಬಹುದು. ಮೊತ್ತಕ್ಕೆ ಮಿತಿ ಎಂಬುದೇ ಇಲ್ಲ. ಚುನಾವಣಾ ಬಾಂಡ್‌ನ ಸಿಂಧುತ್ವವನ್ನು ಪ್ರಶ್ನಿಸಿ 2017 ಮತ್ತು 2018ರಲ್ಲಿ ಸು‍ಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಯಾವ ಪಕ್ಷಕ್ಕೆ ಚುನಾವಣಾ ಬಾಂಡ್‌ ಮೂಲಕ ಎಷ್ಟು ದೇಣಿಗೆ ಸಿಕ್ಕಿದೆ ಎಂಬ ಮಾಹಿತಿಯನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ 2019ರ ಏಪ್ರಿಲ್‌ 12ರಂದು ಸೂಚಿಸಿತ್ತು.ಮುಚ್ಚಿದ ಲಕೋಟೆಯಲ್ಲಿ ಈ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ADVERTISEMENT

ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸುವಂತೆ ಆಯೋಗವು ರಾಜಕೀಯ ಪಕ್ಷಗಳನ್ನು ಕೇಳಿಕೊಂಡಿತ್ತು. ಆಯೋಗದಲ್ಲಿ ನೋಂದಣಿ ಆಗಿರುವ 2,800ಕ್ಕೂ ಹೆಚ್ಚು ಪಕ್ಷಗಳ ಪೈಕಿ 105 ಪಕ್ಷಗಳು ಪ್ರತಿಕ್ರಿಯೆ ನೀಡಿದ್ದವು. ಬಾಂಡ್‌ ಮೂಲಕ ದೇಣಿಗೆ ಪಡೆದಿದೆಯೇ ಇಲ್ಲವೇ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳದೆಯೇ ಎಲ್ಲ ಪಕ್ಷಗಳಿಂದಲೂ ಮಾಹಿತಿ ಕೇಳಿದ್ದನ್ನು ಕೆಲವು ಪಕ್ಷಗಳು ಪ್ರಶ್ನಿಸಿದ್ದವು ಕೂಡ.

ರಾಜಕೀಯ ಪಕ್ಷಗಳು ನೀಡಿದ ಪ್ರತಿಕ್ರಿಯೆಯನ್ನು ಆಯೋಗವು ಸುಪ್ರೀಂ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ 2020ರ ಫೆಬ್ರುವರಿಯಲ್ಲಿ ಸಲ್ಲಿಸಿದೆ. ಈ ಪಟ್ಟಿಯಲ್ಲಿ ಏಳು ರಾಷ್ಟ್ರೀಯ ಪಕ್ಷಗಳು, ರಾಷ್ಟ್ರೀಯ ಪಕ್ಷಗಳ ಮೂರು ರಾಜ್ಯ ಘಟಕಗಳು, ರಾಜ್ಯ ಮಟ್ಟದ 20 ಪಕ್ಷಗಳು, 70 ನೋಂದಾಯಿತ, ಮಾನ್ಯತೆ ಇಲ್ಲದ ಪಕ್ಷಗಳು (ನಿಶ್ಚಿತ ಚುನಾವಣಾ ಚಿಹ್ನೆ ಇಲ್ಲದ ಆದರೆ ಸ್ಪರ್ಧೆಗೆ ಅರ್ಹತೆ ಇರುವ ಪಕ್ಷಗಳು) ಮತ್ತು ಐದು ಗುರುತಿಸಿಲ್ಲದ ಪಕ್ಷಗಳು ಮಾಹಿತಿ ನೀಡಿವೆ.

ದೂರುದಾರರು ಪದೇ ಪದೇ ನೆನಪು ಮಾಡಿದ್ದರೂ ಸುಪ್ರೀಂ ಕೋರ್ಟ್‌ ಈ ಪ್ರಕರಣದ ವಿಚಾರಣೆ ನಡೆಸಿ ಎರಡು ವರ್ಷಗಳಾಗಿವೆ. ನ್ಯಾಯಾಲಯವು ಮುಚ್ಚಿದ ಲಕೋಟೆಯನ್ನು ತೆರೆದೇ ಇಲ್ಲ.

17 ಪಕ್ಷಗಳಿಗೆ ಮಾತ್ರ ಬಾಂಡ್‌ ದೇಣಿಗೆ
ಆಯೋಗಕ್ಕೆ ಮಾಹಿತಿ ನೀಡಿದ ನೋಂದಿತ ಮತ್ತು ಮಾನ್ಯತೆ ಇಲ್ಲದ 70 ಪಕ್ಷಗಳ ಪೈಕಿ 54 ಪಕ್ಷಗಳ ಮುಖ್ಯಸ್ಥರ ಜತೆಗೆ ಸಂದರ್ಶನ, ಪಕ್ಷಗಳು ಬರೆದ ಪತ್ರಗಳ ವಿಶ್ಲೇಷಣೆ ಮತ್ತು ರಾಜಕೀಯ ಪಕ್ಷಗಳ ವಾರ್ಷಿಕ ಲೆಕ್ಕ ಪರಿಶೋಧನೆ ವರದಿಯ ದತ್ತಾಂಶಗಳನ್ನು ಪಡೆದುಕೊಂಡು ರಿಪೋರ್ಟರ್ಸ್‌ ಕಲೆಕ್ಟಿವ್ ವಿಶ್ಲೇಷಣೆ ನಡೆಸಿದೆ.

ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಕೊಟ್ಟ 105 ಪಕ್ಷಗಳ ಪೈಕಿ 17 ಪಕ್ಷಗಳು ಮಾತ್ರ ಬಾಂಡ್‌ ಮೂಲಕ ದೇಣಿಗೆ ಪಡೆದಿವೆ.

2017–18ರಿಂದ 2019–20ರ ನಡುವಣ ಅವಧಿಯಲ್ಲಿ, ಈ 17 ಪಕ್ಷಗಳು ಪಡೆದ ದೇಣಿಗೆಯ ಪೈಕಿ ಬಿಜೆಪಿಯ ಪಾಲು ಶೇ 67.9ರಷ್ಟು ಅಥವಾ ₹4,215.89 ಕೋಟಿ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದರೂ ಪಡೆದ ದೇಣಿಗೆ ಪ್ರಮಾಣ ಮಾತ್ರ ಅತ್ಯಲ್ಪ. ಈ ಪಕ್ಷಕ್ಕೆ ₹706.12 ಕೋಟಿ ಅಥವಾ ಒಟ್ಟು ದೇಣಿಗೆಯ ಶೇ 11.3ರಷ್ಟು ಸಿಕ್ಕಿದೆ.

ಮೂರನೇ ಸ್ಥಾನದಲ್ಲಿರುವ ಬಿಜು ಜನತಾ ದಳಕ್ಕೆ ಶೇ 4.2ರಷ್ಟು ಅಥವಾ ₹264 ಕೋಟಿ ದೊರೆತಿದೆ. ಇತರ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪಕ್ಷಗಳು ಉಳಿದ ಶೇ 16.6ರಷ್ಟು ಅಥವಾ ₹1,106 ಕೋಟಿಯನ್ನು ಪಡೆದುಕೊಂಡಿವೆ. ಬಿಜೆಪಿ, ಕಾಂಗ್ರೆಸ್‌, ಬಿಜೆಡಿಗೆ ಒಟ್ಟು ದೇಣಿಗೆಯ ಶೇ 83.4ರಷ್ಟು ದೊರೆತಿದೆ.

ಡಿಎಂಕೆ ಮತ್ತು ಜಾರ್ಖಂಡ್‌ ಮುಕ್ತಿ ಮೋರ್ಚಾ ಬಾಂಡ್‌ ಮೂಲಕ ದೇಣಿಗೆ ಪಡೆದಿವೆ. ಆದರೆ, ಸುಪ್ರೀಂ ಕೋರ್ಟ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಕ್ಷಗಳ ಪಟ್ಟಿಯಲ್ಲಿ ಈ ಪಕ್ಷಗಳನ್ನು ಆಯೋಗವು ಸೇರಿಸಿಲ್ಲ.

ಚುನಾವಣಾ ಬಾಂಡ್‌ಗಳ ಮೂಲಕ ಹಣ ಪಡೆಯಲು ಅರ್ಹತೆ ಇರುವ 23 ಪಕ್ಷಗಳು ಯಾವುವು ಎಂದು ಕೇಳಿದ ಪ್ರಶ್ನೆಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಉತ್ತರಿಸಿಲ್ಲ. ಚುನಾವಣಾ ಬಾಂಡ್ ನೀಡಲು ಅರ್ಹತೆ ಇರುವ ಏಕೈಕ ಬ್ಯಾಂಕ್‌ ಇದು. ಮಾಹಿತಿ ಹಕ್ಕು ಕಾಯ್ದೆ ಅಡಿ ಬ್ಯಾಂಕ್‌ಗೆ ಪ್ರಶ್ನೆ ಕೇಳಲಾಗಿತ್ತು.

‘ಸುಪ್ರೀಂ’ ಅಂಗಳದಲ್ಲಿದೆ ಚುನಾವಣಾ ಬಾಂಡ್
ಚುನಾವಣಾ ಬಾಂಡ್ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017ರಲ್ಲಿ ಪ್ರಕಟಿಸಿದ್ದರು. ಕಂಪನಿಗಳು, ವ್ಯಕ್ತಿಗಳು, ಟ್ರಸ್ಟ್‌ಗಳು ಅಥವಾ ಎನ್‌ಜಿಒಗಳು ತಮಗೆ ಬೇಕಾದಷ್ಟು ಮೊತ್ತದ ಬಾಂಡ್‌ಗಳನ್ನು ಖರೀದಿಸಬಹುದು. ₹1000, ₹10,000, ಒಂದು ಲಕ್ಷ ರೂಪಾಯಿ, ಹತ್ತು ಲಕ್ಷ ರೂಪಾಯಿ ಮತ್ತು ಒಂದು ಕೋಟಿ ಮೊತ್ತದ ಬಾಂಡ್‌ಗಳನ್ನು ಖರೀದಿಸಿ, ಎಸ್‌ಬಿಐನಲ್ಲಿ ಖಾತೆ ತೆರೆದಿರುವ ರಾಜಕೀಯ ಪಕ್ಷಕ್ಕೆ ಜಮಾ ಮಾಡಬಹುದು ಎಂದು ಯೋಜನೆ ಹೇಳುತ್ತದೆ.

ಶ್ರೀಮಂತರು ಹಾಗೂ ಪ್ರಭಾವಿಗಳು ನೀಡುವ ದೇಣಿಗೆಯನ್ನುಮರೆಮಾಚಲು ಚುನಾವಣಾ ಬಾಂಡ್‌ಗಳು ಸಹಾಯ ಮಾಡುತ್ತವೆ ಹಾಗೂ ಬಿಜೆಪಿಯಂತಹ ರಾಜಕೀಯ ಪಕ್ಷಗಳಿಗೆ ಹಣದ ಹರಿವನ್ನು ಹೆಚ್ಚಿಸುತ್ತವೆ ಎಂಬ ಆರೋಪಗಳು ಕೇಳಿಬಂದಿದ್ದವು.

ಚುನಾವಣಾ ಬಾಂಡ್‌ಗಳಿಗೆ ಅವಕಾಶ ನೀಡಿರುವ ಹಣಕಾಸು ಕಾಯ್ದೆ–2017ರ ತಿದ್ದುಪಡಿಗಳನ್ನು ತೆಗೆದುಹಾಕುವಂತೆ ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 2017ರ ಸೆ.4ರಂದು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಚುನಾವಣಾ ಬಾಂಡ್ ಯೋಜನೆ ರದ್ದಾಗಬೇಕು ಎಂದು ಬಯಸಿದ್ದ ಚುನಾವಣಾ ಆಯೋಗ ಸಹ, 2019ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರತಿ– ಪ್ರಮಾಣಪತ್ರವನ್ನು ಸಲ್ಲಿಸಿತ್ತು. ‘ಪಾರದರ್ಶಕ ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಬಾಂಡ್‌ಗಳದ್ದು ಹಿಮ್ಮುಖ ಹೆಜ್ಜೆ. ರಾಜಕೀಯ ದೇಣಿಗೆ ಹೆಸರಿನಲ್ಲಿ ಷೆಲ್‌ ಕಂಪನಿಗಳಿಂದ ಕಪ್ಪುಹಣ ಹರಿದುಬರುವ ಸಾಧ್ಯತೆಯಿದೆ. ಭಾರತದ ರಾಜಕೀಯ ಪಕ್ಷಗಳಿಗೆ ರವಾನೆಯಾಗುವ, ಪರಿಶೀಲನೆಗೊಳಪಡದ ವಿದೇಶಿ ಹಣವು ದೇಶದ ರಾಜಕೀಯದ ಮೇಲೆ ಪರಿಣಾಮ ಬೀರಬಹುದು. ವಿದೇಶಿ ಕಂಪನಿಗಳು ಭಾರತದ ರಾಜಕೀಯವನ್ನು ಪ್ರಭಾವಿಸಬಹುದು’ ಎಂದು ಆಯೋಗ ಕಳವಳ ವ್ಯಕ್ತಪಡಿಸಿತ್ತು.

ಆಯೋಗದ ಕಳವಳಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ಚುನಾವಣಾ ಬಾಂಡ್ ಅಪರೂಪದಯೋಜನೆಯಾಗಿದ್ದು, ರಾಜಕೀಯ ವ್ಯವಸ್ಥೆಯ ಕೊಳೆಯನ್ನು ತೊಳೆದು ಸ್ವಚ್ಛ ಹಣದ ಹರಿವಿಗೆ ಅವಕಾಶ ನೀಡುತ್ತದೆ ಎಂದು ಪ್ರತಿಪಾದಿಸಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್‌ನ ಆಕ್ಷೇಪಗಳು, ಚುನಾವಣಾ ಆಯೋಗದ ಕಳವಳಗಳನ್ನು ಬದಿಗಿರಿಸಿದ್ದ ಕೇಂದ್ರ ಸರ್ಕಾರವು ಕಾನೂನುಗಳನ್ನು ಮೀರಿ, ವಿಶೇಷ ಅವಕಾಶಗಳನ್ನು ಸೃಷ್ಟಿಸಿ ಕರ್ನಾಟಕದ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಬಾಂಡ್‌ ಯೋಜನೆ ಜಾರಿಗೊಳಿಸಿದ್ದರ ಮೇಲೆ ‘ರಿಪೋರ್ಟರ್ಸ್ ಕಲೆಕ್ಟಿವ್‌’ ತನಿಖಾ ವರದಿಯು 2019ರಲ್ಲಿ ಬೆಳಕು ಚೆಲ್ಲಿತ್ತು. ಚುನಾವಣಾ ಆಯೋಗದ ಹೇಳಿಕೆಯ ಬಗ್ಗೆ ಸರ್ಕಾರವು ಸಂಸತ್ತಿಗೆ ಸುಳ್ಳು ಹೇಳಿತ್ತು.

ಚುನಾವಣಾ ಬಾಂಡ್‌ ಕುರಿತಂತೆ ಆರ್‌ಟಿಐನಡಿ ಮಾಹಿತಿ ಕೋರಿರುವ ಅರ್ಜಿಗಳಿಗೆ ಉತ್ತರ ನೀಡಲು ಅನುಮತಿ ನೀಡುವಂತೆ ಹಣಕಾಸು ಸಚಿವಾಲಯವನ್ನು ಎಸ್‌ಬಿಐ ಕೇಳಿತ್ತು. ಈ ವಿಚಾರದಲ್ಲಿ ಬ್ಯಾಂಕ್ ಸುಳ್ಳು ನುಡಿದಿತ್ತು. 2018 ಮತ್ತು 2019ರಲ್ಲಿ ಎಷ್ಟು ಮೊತ್ತದ ಚುನಾವಣಾ ಬಾಂಡ್‌ ಮಾರಾಟವಾಗಿವೆ ಎಂಬ ದತ್ತಾಂಶ ಇಲ್ಲ ಎಂದು ಬ್ಯಾಂಕ್ ಪ್ರತಿಕ್ರಿಯೆ ನೀಡಿತ್ತು. 105ರ ಪೈಕಿ 23 ಪಕ್ಷಗಳು ಮಾತ್ರ ಬಾಂಡ್‌ ಸ್ವೀಕರಿಸಲು ಅರ್ಹ ಎಂದು ಲೋಕೇಶ್ ಬಾತ್ರಾ ಎಂಬುವರು ಇತ್ತೀಚೆಗೆ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಲಾಗಿತ್ತು. ಆದರೆ, ಆರ್‌ಟಿಐ ಕಾಯ್ದೆ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಆ 23 ಪಕ್ಷಗಳ ಹೆಸರುಗಳನ್ನು ಉಲ್ಲೇಖಿಸಲು ಆಗುವುದಿಲ್ಲ ಎಂದು ಬ್ಯಾಂಕ್ ಹೇಳಿತ್ತು.

‘ಕಂಡ–ಕಂಡ ಪಕ್ಷಕ್ಕೆಲ್ಲಾ ನೋಟಿಸ್‌’
ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆಯಲು ಹಲವು ನಿಯಮಗಳನ್ನು ರೂಪಿಸಲಾಗಿದೆ. ಪಕ್ಷಗಳು ನೋಂದಣಿಯಾಗಿರಬೇಕು ಮತ್ತು ಅವುಗಳಿಗೆ ಪ್ರತ್ಯೇಕ ಚಿಹ್ನೆ ಇರಬೇಕು ಎಂಬುದು ಅಂತಹ ನಿಯಮಗಳಲ್ಲಿ ಒಂದು. ಜತೆಗೆ ಎಸ್‌ಬಿಐನಲ್ಲಿ ಖಾತೆ ಇರಬೇಕು ಎಂಬುದು ಇನ್ನೊಂದು ಷರತ್ತು. ಇವುಗಳನ್ನು ಪೂರೈಸದ ಪಕ್ಷಗಳು, ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆಯಲು ಅರ್ಹವಾಗುವುದಿಲ್ಲ. ಆದರೆ ಈ ರೀತಿಯ ಅರ್ಹತೆ ಇಲ್ಲದೇ ಇರುವ ಪಕ್ಷಗಳಿಗೂ ಚುನಾವಣಾ ಆಯೋಗವು, ‘ಚುನಾವಣಾ ಬಾಂಡ್‌ಗಳ ಮೂಲಕ ಪಡೆದಿರುವ ದೇಣಿಗೆ ಬಗ್ಗೆ ಮಾಹಿತಿ ನೀಡಿ’ ಎಂದು ನೋಟಿಸ್‌ ನೀಡಿದೆ.

ಆಯೋಗವು ನೋಟಿಸ್‌ ನೀಡಿದ 105 ಪಕ್ಷಗಳಲ್ಲಿ, ಒಂದು ಪಕ್ಷದ ಬ್ಯಾಂಕ್‌ ಖಾತೆಯಲ್ಲಿ ಇರುವುದು ಕೇವಲ ₹700. ಬ್ಯಾಂಕ್ ಖಾತೆಯಲ್ಲಿ ಅತ್ಯಂತ ಕಡಿಮೆ ಠೇವಣಿ ಹೊಂದಿರುವ ಉತ್ತರ ಪ್ರದೇಶದ ಲೇಬರ್ ಸಮಾಜ ಪಾರ್ಟಿಗೂ, ಈ ಬಗ್ಗೆ ಮಾಹಿತಿ ನೀಡುವಂತೆ ಆಯೋಗವು ನೋಟಿಸ್ ನೀಡಿದೆ. ಆದರೆ, ಆಯೋಗದ ನಿಯಮಗಳ ಪ್ರಕಾರ, ಈ ಪಕ್ಷವು ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಪಡೆಯುವ ಅರ್ಹತೆಯನ್ನೇ ಹೊಂದಿಲ್ಲ.

ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿವೆ ಎಂದು ಆಯೋಗವು ಪಟ್ಟಿ ಮಾಡಿದ 105 ಪಕ್ಷಗಳಲ್ಲಿ, ಬಹುತೇಕ ಪಕ್ಷಗಳು ದೇಶದ ಯಾವುದೋ ಗ್ರಾಮೀಣ ಪ್ರದೇಶದಲ್ಲಿ ನೋಂದಣಿಯಾದಂಥವು. ಸಣ್ಣ–ಪುಟ್ಟ ಕಚೇರಿ ಹೊಂದಿರುವ, ಮಾಧ್ಯಮಗಳ ಕಣ್ಣಿಗೆ ಬೀಳದ, ವಿಚಿತ್ರ ಹೆಸರು (ನಮ್ಮ ಮತ್ತು ನಿಮ್ಮ ಪಕ್ಷ, ಎಲ್ಲರಿಗಿಂತ ದೊಡ್ಡ ಪಕ್ಷ...) ಹೊಂದಿರುವ ಇಂತಹ ಪಕ್ಷಗಳು ಅದು ಹೇಗೆ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಿದವು ಎಂಬುದು ಕುತೂಹಲಕಾರಿ ವಿಷಯವಾಗಿತ್ತು.

ರಿಪೋರ್ಟರ್ಸ್‌ ಕಲೆಕ್ಟಿವ್‌ ಇಂತಹ ಪಕ್ಷಗಳನ್ನು ಹುಡುಕಿತು. ಬಹಳ ಪ್ರಯತ್ನದ ನಂತರ ಇಂತಹ 54 ಪಕ್ಷಗಳನ್ನಷ್ಟೇ ಸಂಪರ್ಕಿಸಲು ಸಾಧ್ಯವಾಯಿತು.ನಾವು ಸಂಪರ್ಕಿಸಿದ 54 ಪಕ್ಷಗಳೂ, ತಾವು ಚುನಾವಣಾ ಬಾಂಡ್‌ ಮೂಲಕ ಒಂದು ಪೈಸೆಯಷ್ಟು ದೇಣಿಗೆಯನ್ನೂ ಪಡೆದಿಲ್ಲ ಎಂದು ಪ್ರತಿಕ್ರಿಯೆ ನೀಡಿದವು. ಜತೆಗೆ ಚುನಾವಣಾ ಆಯೋಗದ ನೋಟಿಸ್‌ಗೆ ನೀಡಿದ ಉತ್ತರದ ಪ್ರತಿಯನ್ನು ಹಂಚಿಕೊಂಡವು.

ಗುಜರಾತ್‌ನ ರೈಟ್‌ ಟು ರಿಕಾಲ್‌ ಪಾರ್ಟಿಯು 2019ರ ಮೇ 30ರಂದು ನೋಟಿಸ್‌ಗೆ ಉತ್ತರ ನೀಡಿದೆ. ಅದರ ಬೆನ್ನಲ್ಲೇ, ಆಯೋಗವು ಆ ಪಕ್ಷದ ಹೆಸರನ್ನೂ ಸುಪ್ರೀಂ ಕೋರ್ಟ್‌ಗೆ ನೀಡಿದ ಪಟ್ಟಿಯಲ್ಲಿ ಸೇರಿಸಿದೆ.

ನಾವು ಫೋನ್‌ ಮೂಲಕ ಸಂಪರ್ಕಿಸಿದ ಪಟ್ನಾದ ಭಾರತೀಯ ಹಿಂದುಳಿದವರ ಪಕ್ಷದ ವಿನೋದ್ ಕುಮಾರ್ ಸಿನ್ಹಾ ಅವರು, ‘ನಮ್ಮಂತಹ ಪಕ್ಷಗಳಿಗೆ ಯಾರು ದೇಣಿಗೆ ನೀಡುತ್ತಾರೆ’ ಎಂದು ಮರುಪ್ರಶ್ನಿಸಿದರು.

* ಈ ವರದಿಯ ಇಂಗ್ಲಿಷ್‌ ಆವೃತ್ತಿಯು ‘ಆರ್ಟಿಕಲ್‌ 14’ ಪೋರ್ಟಲ್‌ನಲ್ಲಿ ಪ್ರಕಟವಾಗಿದೆ.

* ಶ್ರೀಗಿರೀಶ್‌ ಜಾಲಿಹಾಳ್‌ ಅವರು ರಿಪೋರ್ಟರ್ಸ್‌ ಕಲೆಕ್ಟಿವ್‌ನ ಸದಸ್ಯ, ಪೂನಂ ಅಗರ್‌ವಾಲ್‌ ಅವರು ಸ್ವತಂತ್ರ ತನಿಖಾ ಪತ್ರಕರ್ತೆ, ಸೋಮೇಶ್‌ ಝಾ ಅವರು ಲಾಸ್‌ ಏಂಜಲೀಸ್ ಟೈಮ್ಸ್‌ನಲ್ಲಿ ಆಲ್ಫ್ರೆಡ್‌ ಫ್ರೆಂಡ್ಲಿ ಒಸಿಸಿಆರ್‌ಪಿ ತನಿಖಾ ವರದಿಗಾರಿಕೆ ಫೆಲೋ ಆಗಿದ್ದಾರೆ.

-ಶ್ರೀಗಿರೀಶ್‌ ಜಾಲಿಹಾಳ್‌, ಪೂನಂ ಅಗರ್‌ವಾಲ್‌, ಸೋಮೇಶ್‌ ಝಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.