ಭಾರತ, ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಸೇರಿದಂತೆ ಜಗತ್ತಿನ 108 ರಾಷ್ಟ್ರಗಳು ಆರ್ಥಿಕ ಬೆಳವಣಿಗೆಯಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದು, ‘ಮಧ್ಯಮ ಆದಾಯದ ಬಲೆ’ಯಲ್ಲಿ ಸಿಲುಕಿವೆ..
–ಇದು ವಿಶ್ವಬ್ಯಾಂಕ್‌ನ ಹೊಸ ಅಧ್ಯಯನವೊಂದರ ತಿರುಳು. 50 ವರ್ಷಗಳ ಅಂಕಿಸಂಖ್ಯೆ, ಅನುಭವ ಆಧರಿಸಿ, ‘ವಿಶ್ವ ಅಭಿವೃದ್ಧಿ ವರದಿ 2024: ಮಧ್ಯಮ ಆದಾಯದ ಬಲೆ’ ಎನ್ನುವ ಅಧ್ಯಯನ ವರದಿಯನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದೆ. ಅದರಲ್ಲಿ ದೇಶಗಳನ್ನು ಕಡಿಮೆ ಆದಾಯ, ಕೆಳಮಧ್ಯಮ ಆದಾಯ, ಮೇಲುಮಧ್ಯಮ ಆದಾಯ ಮತ್ತು ಉತ್ತಮ ಆದಾಯದ ದೇಶಗಳು ಎಂದು ವಿಂಗಡಿಸಲಾಗಿದೆ. 2023ರ ಕೊನೆಯ ಹೊತ್ತಿಗೆ, ಜಗತ್ತಿನಲ್ಲಿ 108 ಮಧ್ಯಮ ಆದಾಯದ ದೇಶಗಳು ಇದ್ದವು ಎಂದು ವರದಿ ಪಟ್ಟಿ ಮಾಡಿದೆ.
ಈ ದೇಶಗಳು, ತಮ್ಮ ಬೆಳವಣಿಗೆಯ ಹಂತದಲ್ಲಿ, ಅಮೆರಿಕದ ತಲಾ ಆದಾಯದ ಶೇ 10ರಷ್ಟು ತಲುಪುವ ಹೊತ್ತಿಗೆ, ಸ್ಥಗಿತಗೊಳ್ಳುತ್ತವೆ ಅಥವಾ ನಿಧಾನಗತಿಗೆ ಒಳಗಾಗುತ್ತವೆ ಎಂದು ವರದಿ ಹೇಳಿದೆ. ಅಭಿವೃದ್ಧಿ ಹಾಗೆ ಸ್ಥಗಿತಗೊಳ್ಳಲು ಅಥವಾ ಕುಂಠಿತಗೊಳ್ಳಲು ಕಾರಣವಾಗುವ ಅಂಶಗಳನ್ನೂ ವಿಶ್ವಬ್ಯಾಂಕ್ ಗುರುತಿಸಿದೆ. ಅವುಗಳ ಪೈಕಿ ಮುಖ್ಯವಾದವು, ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಭೌಗೋಳಿಕ–ರಾಜಕೀಯ ಸಂಘರ್ಷಗಳು, ವಯಸ್ಸಾದವರ ಸಂಖ್ಯೆಯಲ್ಲಿ ಹೆಚ್ಚಳ, ಮುಂದುವರಿದ ದೇಶಗಳ ರಕ್ಷಣಾತ್ಮಕತೆ, ಸಾಲದ ಹೊರೆ, ಹವಾಮಾನ ಬದಲಾವಣೆ ಮತ್ತು ಇಂಧನ ಪರಿವರ್ತನೆಯಲ್ಲಿ ವಿಳಂಬ. ಬದಲಾಗುತ್ತಿರುವ ಆರ್ಥಿಕ ಮತ್ತು ಸಾಂಸ್ಥಿಕ ಅಗತ್ಯಗಳಿಗೆ ತಕ್ಕಂತೆ ನೀತಿಗಳನ್ನು ಅಳವಡಿಸಿ
ಕೊಳ್ಳುವುದರಲ್ಲಿ ಈ ರಾಷ್ಟ್ರಗಳು ವಿಫಲವಾಗಿವೆ ಎಂದೂ ವರದಿ ತಿಳಿಸಿದೆ.
ವಿಶ್ವಬ್ಯಾಂಕ್ 2007ರಿಂದ ‘ಮಧ್ಯಮ ಆದಾಯದ ಬಲೆ’ಯ ಪರಿಕಲ್ಪನೆಯನ್ನು ಬಳಸುತ್ತಿದೆ. 34 ವರ್ಷಗಳಲ್ಲಿ ಕೇವಲ 34 ರಾಷ್ಟ್ರಗಳಿಗೆ ಮಾತ್ರ ಈ ಬಲೆಯನ್ನು ದಾಟಲು ಸಾಧ್ಯವಾಗಿದೆ. ಅಂದರೆ, ಆ ದೇಶಗಳು ನಿರೀಕ್ಷಿತ ರೀತಿಯಲ್ಲಿ ಬೆಳವಣಿಗೆ ಸಾಧಿಸಿ, ಉತ್ತಮ ಆದಾಯದ ರಾಷ್ಟ್ರಗಳಾಗಿ ಪರಿವರ್ತನೆಗೊಂಡಿವೆ. ಅವುಗಳ ಪೈಕಿ ಹೆಚ್ಚಿನ ದೇಶಗಳು, ಐರೋಪ್ಯ ಒಕ್ಕೂಟಕ್ಕೆ ಸೇರಿದ ಇಲ್ಲವೇ ಹೊಸದಾಗಿ ತೈಲ ನಿಕ್ಷೇಪಗಳು ಪತ್ತೆಯಾದ ರಾಷ್ಟ್ರಗಳಾಗಿವೆ.
108 ದೇಶಗಳು ಮಧ್ಯಮ ಆದಾಯದ ಬಲೆಯಲ್ಲಿ ಏಕೆ ಸಿಲುಕಿವೆ ಎನ್ನುವುದನ್ನು ವಿಶ್ವಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಇಂದರ್‌ಮಿತ್ ಗಿಲ್ ವಿವರಿಸಿದ್ದಾರೆ.
‘ಈ ದೇಶಗಳು ಆರ್ಥಿಕತೆಯಲ್ಲಿ ಮುಂದುವರಿಯಲು ಅತ್ಯಂತ ಹಳೆಯ ತಂತ್ರಗಳ ಮೊರೆ ಹೋಗಿವೆ. ಅವು ದೀರ್ಘಕಾಲದವರೆಗೆ ಹೂಡಿಕೆಯನ್ನು ಅವಲಂಬಿಸಿ, ತಂತ್ರಜ್ಞಾನಗಳ ಅಳವಡಿಕೆ, ಸಂಶೋಧನೆಗಳನ್ನು ನಿರ್ಲಕ್ಷಿಸಿವೆ, ಅಂಥ ರಾಷ್ಟ್ರಗಳಿಗೆ ಹೊಸ ದೃಷ್ಟಿಕೋನ ಬೇಕಿದೆ’ ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ಅಮೆರಿಕದ ಇಂದಿನ ತಲಾ ಆದಾಯದ (₹67.42 ಲಕ್ಷ) ಕಾಲು ಭಾಗವನ್ನು ಮುಟ್ಟಲು ಭಾರತಕ್ಕೆ ಇನ್ನೂ 75 ವರ್ಷ ಬೇಕು. ಅದೇ ಪರಿಸ್ಥಿತಿ ಮುಟ್ಟಲು ಚೀನಾಗೆ ಇನ್ನೂ 10 ವರ್ಷಗಳ ಅಗತ್ಯವಿದ್ದರೆ, ಇಂಡೊನೇಷ್ಯಾಗೆ 70 ವರ್ಷ ಬೇಕು.
ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಸರ್ಕಾರದ ನಿಯಮಾವಳಿಗಳು ಸಂಪನ್ಮೂಲದ ಅಪವ್ಯಯಕ್ಕೆ
ಕಾರಣವಾಗುವುದಲ್ಲದೇ, ಉತ್ಪಾದನೆ ಮತ್ತು ಸಂಶೋಧನೆಗೆ ತೊಡಕಾಗುತ್ತವೆ ಎಂದು ವಿಶ್ಲೇಷಿಸಲಾಗಿದೆ. ಇಷ್ಟಾಗಿಯೂ, ಭಾರತದ ಇನ್ಫೊಸಿಸ್ ಮತ್ತು ಚೀನಾದ ಅಲಿಬಾಬಾ ಕಂಪನಿಗಳ ಯಶಸ್ಸಿನ ಬಗ್ಗೆ ವರದಿಯಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಮಧ್ಯಮ ಆದಾಯದ ದೇಶಗಳು ವಿದೇಶಿ ತಂತ್ರಜ್ಞಾನ-ಕೌಶಲದ ಅಳವಡಿಕೆ, ಹಣಕಾಸು, ಮಾನವ ಸಂಪನ್ಮೂಲಗಳ ಸಮರ್ಥ ಬಳಕೆ ಮುಂತಾದ ಕ್ರಮಗಳ ಮೂಲಕ ತಲಾ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ವರದಿ ಸಲಹೆ ನೀಡಿದೆ.
ತೆರಿಗೆ ಪದ್ಧತಿ ಹೇಗಿರಬೇಕು ಎನ್ನುವ ಬಗ್ಗೆಯೂ ವರದಿಯಲ್ಲಿ ಗಮನ ಸೆಳೆಯಲಾಗಿದೆ. ಪ್ರಗತಿಪರ ತೆರಿಗೆ ವ್ಯವಸ್ಥೆಯಿಂದ ಅಸಮಾನತೆಯನ್ನು ಹೋಗಲಾಡಿಸಬಹುದು. ಆದರೆ, ಹೆಚ್ಚು ತೆರಿಗೆ ವಿಧಿಸುವುದರಿಂದ ಉದ್ಯಮಿಗಳು ತಮ್ಮ ದುಡಿಮೆಯನ್ನು ಕಡಿಮೆ ಮಾಡಬಹುದು, ತೆರಿಗೆ ಕಟ್ಟದೇ ತಪ್ಪಿಸಿಕೊಳ್ಳಬಹುದು ಇಲ್ಲವೇ ತೆರಿಗೆ ಕಡಿಮೆ ಇರುವ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬಹುದು ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.
ಆಧಾರ: ‘ವಿಶ್ವ ಅಭಿವೃದ್ಧಿ ವರದಿ–2024 ಮಧ್ಯಮ ಆದಾಯದ ಬಲೆ’ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.